ಮನೆಯೆದುರು ನಿಲ್ಲಿಸಿದ್ದ ಕಾರು, ಬೈಕುಗಳು ರಾತ್ರಿ ಬೆಳಗಾಗೋದರೊಳಗೆ ಮಾಯವಾಗೋದು ಬೆಂಗಳೂರಿನಂಥಾ ಮಹಾ ನಗರಗಳಲ್ಲಿ ಮಾಮೂಲಿ. ಆದರೆ, ಈ ಬಗ್ಗೆ ಪೊಲೀಸ್ ದೂರು ನೀಡಿ, ಪದೇ ಪದೆ ಠಾಣೆಗೆ ಅಂಡಲೆದು ಗೋಗರೆದರೂ ಮಾಯವಾದ ವಾಹನ ಮತ್ತೆ ಸಿಗುತ್ತದೆಂಬ ಖಾತರಿಯೇನಿಲ್ಲ. ಹೀಗೆ ವಾಹನಗಳು ಕಳುವಾದಾಗೆಲ್ಲ ನಮ್ಮೆಲ್ಲರ ಗುಮಾನಿ ಸ್ಥಳೀಯ ಕಾರುಗಳ್ಳರ ಸುತ್ತಲೇ ಗಿರಕಿ ಹೊಡೆಯಲಾರಂಭಿಸುತ್ತೆ. ಇದು ಅಂಥವರ ಕೆಲಸವೇ ಎಂಬ ತೀರ್ಮಾನಕ್ಕೂ ಬಂದು ಬಿಡುತ್ತವೆ. ವಾಸ್ತವವೆಂದರೆ, ನೀವು ಹಾಗೆ ಆಲೋಚಿಸುವ ಹೊತ್ತಿಗೆಲ್ಲಾ ನಿಮ್ಮ ಕಾರು ರಾಜ್ಯದ ಗಡಿ ದಾಟಿ, ನಂಬರ್ ಪ್ಲೇಟ್ ಬದಲಾಯಿಸಿಕೊಂಡು ಮತ್ಯಾರದ್ದೋ ಕೈ ಸೇರಿಬಿಟ್ಟಿರಲೂ ಬಹುದು. ಯಾಕೆಂದರೆ, ಇಂಥಾ ಕಾರುಗಳವಿನ ಹಿಂದೆ ಕುಖ್ಯಾತ ಅಂತಾರಾಜ್ಯ ಕಳ್ಳರ ಕೈಚಳಕ ಇರುವ ಸಾಧ್ಯತೆಗಳೇ ಹೆಚ್ಚಿರುತ್ತವೆ!
ಹೀಗೆ ಬೆಂಗಳೂರೂ ಸೇರಿದಂತೆ, ದೇಶದ ನಾನಾ ಭಾಗಗಳಿಂದ ಕಾರು ಕಳ್ಳತನವಾದಾಗ ಅದರ ಹಿಂದೆ ರಾಷ್ಟ್ರ ಮಟ್ಟದ ಮಾಫಿಯಾ ಇರುವ ಗುಮಾನಿ ಪೊಲೀಸ್ ಇಲಾಖೆಯನ್ನು ಕಾಡುತ್ತಿತ್ತು. ನಾನಾ ರಾಜ್ಯಗಳ ಮಂದಿ ಈ ಬಗ್ಗೆ ತನಿಖೆಗಿಳಿದಾಗ ಎದುರುಗೊಂಡಿದ್ದದ್ದು ಅನಿಲ್ ಚೌವ್ಹಾಣ್ ಎಂಬಾತನ ಹೆಸರು. ಆದರೆ ಅದೇನೇ ಹರಸಾಹಸ ಪಟ್ಟರೂ ಕೂಡಾ ಆತನನ್ನು ಹೆಡೆಮುರಿ ಕಟ್ಟೋದು ಸಾಧ್ಯವಾಗಿರಲಿಲ್ಲ. ಕಡೆಗೂ ಇದೀ ದೆಹಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅವನನ್ನು ವಿಚಾರಣೆಗೊಳಪಡಿಸುತ್ತಾ ಬಯಲಾಗಿರೋ ಕಾರುಗಳವಿನ ವಿರಾಟ್ ರೂಪ ಕಂಡು ಖುದ್ದು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಈ ಸಂಬಂಧವಾಗಿ ಆತನನ್ನು ಇಡೀ ಭಾರತದ ಅತಿ ದೊಡ್ಡ ಕಾರುಗಳ್ಳ ಎಂದೂ ದೆಹಲಿ ಪೊಲೀಸರು ಗುರುತಿಸಿದ್ದಾರೆ.
ಈತನ ಬಗೆಗೀಗ ಕೆಲವೊಂದು ಅಚ್ಚರಿದಾಯಕ ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಅದರನ್ವಯ ಹೇಳೋದಾದರೆ, ಅನಿಲ್ ಚೌಹಾಣ್ ೧೯೯೮ರಿಂದಲೇ ಕಾರು ಕಳ್ಳತನಕ್ಕಿಳಿದಿದ್ದಾನೆ. ನಾನಾ ಭಾಗಗಳಿಂದ ಕಾರುಗಳನ್ನು ಲೀಲಾಜಾಲವಾಗಿ ಎಗರಿಸುವ ಕಲೆ ಹೊಂದಿದ್ದ ಚೌವ್ಹಾಣ್, ಆ ನಂತರ ಇಡೀ ದೇಶಾದ್ಯಂತ ಕಳ್ಳರ ನೆಟ್ವರ್ಕ್ ಒಂದನ್ನು ಅನಾಯಾಸವಾಗಿ ಸೃಷ್ಟಿಸಿಕೊಂಡಿದ್ದ. ಸಲೀಸಾಗಿ ಕದ್ದ ಕಾರುಗಳನ್ನು ಗಡಿ ದಾಟಿಸಿ ಮಾರುತ್ತಿದ್ದ ಈತ, ಈವರೆಗೆ ಏನಿಲ್ಲವೆಂದರೂ ಐದು ಸಾವಿರಕ್ಕಿಂತಲೂ ಹೆಚ್ಚಿನ ಕಾರುಗಳನ್ನು ಕಳ್ಳತನ ಮಾಡಿದ್ದಾನಂತೆ. ಹೀಗೆ ಕಾರುಗಳನ್ನು ಕದಿಯುತ್ತಲೇ ಘೇಂಡಾಮೃಗದ ಕೊಂಬು ಕಳ್ಳ ಸಾಗಣೆಯನ್ನು ಮಾಡುತ್ತಿದ್ದ. ಅನೇಕ ಕೊಲೆಗಳೂ ಅವನ ಲಿಸ್ಟಿನಲ್ಲಿದ್ದವು. ಒಟ್ಟಾರೆಯಾಗಿ, ಪ್ರಾಥಮಿಕ ಅಂದಾಜಿನ ಪ್ರಕಾರ ನೂರಾ ಎಂಬತ್ತು ಕ್ರಿಮಿನಲ್ ಕೇಸುಗಳು ಅನಿಲ್ ಚೌವ್ಹಾಣ್ ಮೇಲೆ ಜಡಿದುಕೊಂಡಿವೆಯಂತೆ!