ಈ ನಟನ ಕಥೆ ಕೇಳಿದರೆ ಕಣ್ಣಾಲಿಗಳು ಹನಿಗೂಡುತ್ತವೆ!
ಕೊರೋನಾ ಮಾರಿ ಈ ಮುಂಗಾರಿನಲ್ಲಿ ಮೈಕೈ ತೊಳೆದುಕೊಂಡು ಮಟ್ಟಸವಾಗಿ ಇಡೀ ಜಗತ್ತಿನ ಜನಸಖ್ಯೆಯನ್ನು ಆದಷ್ಟು ಕಡಿಮೆ ಮಾಡಿಯೇ ತೊಲಗಬಹುದಾದ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಎಲ್ಲರೆದೆಯೊಳಗಿನ ಆಶಾವಾದವೆಂಬುದೀಗ ವಾರಗಳ ಗಡಿ ದಾಟಿ ತಿಂಗಳುಗಳಾಚೆಗೆ ಕೈಚಾಚಿಕೊಂಡಿದೆ. ಜನಜೀವನ ಅದ್ಯಾವತ್ತು ಮತ್ತೆ ಸಹಜ ಸ್ಥಿತಿಗೆ ಮರಳಬಹುದೆಂಬ ಆಲೋಚನೆಗಿಳಿದರೆ ಯಾರಿಗೇ ಆದರೂ ಕಿಬ್ಬೊಟ್ಟೆಯಾಳದಿಂದ ಭಯದ ಛಳುಕಲ್ಲದೆ ಬೇರ್ಯಾವ ಭರವಸೆಯ ಬೆಳಕೂ ಗೋಚರಿಸುತ್ತಿಲ್ಲ. ಒಂದು ತಿಂಗಳು ಆರ್ಥಿಕವಾಗಿ ಹಿನ್ನಡೆಯಾದರೆ ವರ್ಷಗಟ್ಟಲೆ ಅದರ ಪರಿಣಾಮ ಅನುಭವಿಸುವ ಮಂದಿ ತಿಂಗಳುಗಟ್ಟಲೆ ಖಾಲಿ ಕೂತರೆ ಏನಾಗಬಹುದೆಂಬುದು ಯಾರಿಗಾದರೂ ಅರ್ಥವಾಗೋ ಸಂಗತಿ. ನಿಖರವಾಗಿ ಹೇಳಬೇಕೆಂದರೆ ಈ ಕೊರೋನಾ ಎಲ್ಲ ರೀತಿಯಲ್ಲಿಯೂ ಮನುಷ್ಯಮಾತ್ರರಿಗೆ ಕೇಡುಗಾಲ ತಂದಿಟ್ಟಿದೆ. ಈವತ್ತಿಗೆ ಕೊರೋನಾ ಮಾರಿ ಕೊಂಚ ಶಾಂತವಾದಂತೆ ಕಾಣುತ್ತಿದ್ದರೂ, ಎರಡು ವರ್ಷಗಳ ಅವ್ಯಾಹರತ ಪ್ರಹಾರದಿಂದ ಜಗತ್ತು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.
ಸದ್ಯ ಪರಿಸ್ಥಿತಿ ಹೇಗಿದೆಯೆಂದರೆ, ಲಾಕ್ಡೌನಿನ ಪ್ರಹಾರದ ಆಘಾತದಿಂದ ಜನ ಇನ್ನೂ ಹೊರ ಬಂದಿಲ್ಲ. ಪ್ರಿಯೊಬ್ಬರ ಬದುಕನ್ನೂ ಕೊರೋನಾ ನೆರಳು ಬಾಧಿಸುತ್ತಿದೆ; ಕ್ಷಣ ಕ್ಷಣವೂ ಕಂಗಾಲು ಮಾಡುತ್ತಿದೆ. ಅದೆಷ್ಟೋ ಮಂದಿ ಮಾಡೋ ಕೆಲಸಕ್ಕೂ ಕತ್ತರಿ ಬಿದ್ದು ತತ್ತರಿಸಿದ್ದಾರೆ. ನಿರುದ್ಯೋಗವೆಂಬುದು ಮುಂದುವರೆದ ರಾಷ್ಟ್ರಗಳನ್ನೇ ಬಾಧಿಸುತ್ತಿರುವಾಗ ವಿಶ್ವಗುರುವೆಂಬೋ ಭ್ರಮೆ ಬಿತ್ತಿರುವ ಭಾರತದ ಬುಡದಲ್ಲಿ ಅದರ ಬಾವುಗಳೆದ್ದು ವ್ರಣವಾಗದಿರಲು ಸಾಧ್ಯವಿಲ್ಲ. ಇಂಥಾ ನಿರುದ್ಯೋಗ ಪರ್ವವೀಗ ಭಾರತದ ತುಂಬೆಲ್ಲ ಕೊರೋನಾ ವೈರಸ್ಸಿಗಿಂತಲೂ ವೇಗವಾಗಿಯೇ ಹಬ್ಬಿಕೊಂಡಿದೆ. ಅದು ಸಿನಿಮಾ ರಂಗವನ್ನೂ ಆವರಿಸಿಕೊಂಡಿದೆ.
ಭಾರತೀಯ ಚಿತ್ರರಂಗದ ನಾನಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವ ಕೋಟ್ಯಂತರ ಮಂದಿಯಿದ್ದಾರೆ. ಸಣ್ಣಪುಟ್ಟ ಪಾತ್ರಗಳನ್ನು ನೆಚ್ಚಿಕೊಂಡಿರುವವರಿಂದ ಮೊದಲ್ಗೊಂಡು, ತಂತ್ರಜ್ಞರು, ಕಾರ್ಮಿಕರು ಸೇರಿದಂತೆ ಎಲ್ಲರೂ ಎರಡು ಕೊರೋನಾ ಕಾಲದಲ್ಲಿ ಕೆಲಸವಿಲ್ಲದೆ ಖಾಲಿ ಕೂತಿದ್ದರು. ಅದರಲ್ಲಿಯೂ ಚಿಕ್ಕಪುಟ್ಟ ಪಾತ್ರಗಳನ್ನು ಮಾಡುವವರು, ಕಾರ್ಮಿಕರ ಪಾಡಂತೂ ತೀರಾ ಶೋಚನೀಯವಾಗಿತ್ತು. ಸದ್ಯ ಯಾವುದಾದರೊಂದು ಕೆಲಸ ಮಾಡದಿದ್ದರೆ ಉಪವಾಸ ಕೂರಬೇಕಾದಂಥಾ ಆತಂಕ ಅಂಥವರನ್ನೆಲ್ಲ ಕಾಡುತ್ತಿತ್ತು. ಅವರೆಲ್ಲರ ಸ್ಥಿತಿ ಹೇಗಿತ್ತೆಂಬುದಕ್ಕೆ ದೆಹಲಿಯ ಬೀದಿಯಲ್ಲಿ ಹಣ್ಣಿನ ವ್ಯಾಪಾರಕ್ಕಿಳಿದಿರುವ ಬಾಲಿವುಡ್ ಸಹನಟ ಸೋಲಂಕಿ ದಿವಾಕರ್ರ ಕಥೆಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ.
ಬಾಲಿವುಡ್ನ ಹವಾ, ಹಲ್ಕಾ, ಕದ್ವಿ, ಟಿಟ್ಟಿ, ಸೊಂಚಿರಿಯಾ, ಡ್ರೀಮ್ಗರ್ಲ್ ಮುಂತಾದ ಸಿನಿಮಾಗಳಲ್ಲಿ ಒಂದಷ್ಟು ನೆನಪಲ್ಲುಳಿಯುವಂಥ ಪಾತ್ರಗಳನ್ನು ಮಾಡಿದ್ದಾತ ಸೋಲಂಕಿ ದಿವಾಕರ್. ಬಡತನದ ಗರ್ಭದಿಂದ ಮೇಲೆದ್ದು ಬಂದು ಬಾಲಿವುಡ್ನಂಥಾ ಸಮುದ್ರದಲ್ಲೊಂದು ಹನಿಯಾಗಿ ಗುರುತಿಸಿಕೊಳ್ಳುವಲ್ಲಿ ದಿವಾಕರ್ ಸಾಕಷ್ಟು ಶ್ರಮ ವಹಿಸಿದ್ದಾರೆ. ಅಲ್ಲಿ ತನ್ನ ಪ್ರತಿಭೆಯಿಂದಲೇ ಅವಕಾಶ ಗಿಟ್ಟಿಸಿಕೊಂಡು ಅದರಿಂದಲೇ ಬದುಕು ಕಂಡುಕೊಂಡಿದ್ದ ಅವರಿಗೆ ನಟನಾಗಿ ಎತ್ತರಕ್ಕೇರುವ, ಮಹತ್ತರವಾದುದನ್ನು ಸಾಧಿಸುವ ಹಂಬಲವಿತ್ತು. ಆದರೆ ಈ ಎರಡು ತಿಂಗಳು ಕೊರೋನಾ ಕಾರಣದಿಂದ ಬಾಧಿಸಿದ ಆಘಾತ ಅವರ ಬದುಕನ್ನೇ ದಿಕ್ಕೆಡುವಂತೆ ಮಾಡಿದೆ. ಬೇರ್ಯಾವ ದಾರಿಯೂ ಕಾಣದೆ ಆತ ಮತ್ತೆ ಹಣ್ಣು ಮಾರುವ ಹಳೇ ವೃತ್ತಿಗೆ ಮರಳಿದ್ದರು.
ಬಾಲಿವುಡ್ ಸಿನಿಮಾ ಪ್ರೇಮಿಗಳಿಗೆ ಸೋಲಂಕಿ ದಿವಾಕರ್ ಪರಿಚಯವಿಲ್ಲದಿರೋದಿಲ್ಲ. ಬಹುಶಃ ಅಂಥಾ ನಟ ಈವತ್ತಿಗೆ ಮುಂಬೈ ಉತ್ತರ ದಿಕ್ಕಿನ ಬೀದಿಯಲ್ಲಿ ನಿಂತು ಹಣ್ಣು ಮಾರುತ್ತಾನೆಂದರೆ ಅದನ್ನು ಅಷ್ಟು ಸಲೀಸಾಗಿ ಅರಗಿಸಿಕೊಳ್ಳಲೂ ಸಾಧ್ಯವಾಗೋದಿಲ್ಲ. ಆದರೆ ಅದು ಕಟು ವಾಸ್ತವ. ತೀರಾ ಕಷ್ಟಪಟ್ಟು ಅವಕಾಶ ಗಿಟ್ಟಿಸಿಕೊಂಡು ಒಂದಷ್ಟು ಪಾತ್ರ ಮಾಡಿ ಅದರಿಂದ ಬಂದ ಸಂಭಾವನೆಯಿಂದಲೇ ಅನ್ನಾಹಾರ ಕಂಡುಕೊಂಡಿದ್ದವರು ದಿವಾಕರ್. ಇದು ಒಂದು ಥರದಲ್ಲಿ ಅಂದಿನ ಅನ್ನವನ್ನು ಅಂದೇ ದುಡಿದುಕೊಳ್ಳುವಂಥಾ ಕಸುಬು. ಆದರೆ ಲಾಕ್ಡೌನ್ ಆ ಸುಖಕ್ಕೂ ಕಲ್ಲು ಹಾಕಿತ್ತು.
ಹೇಗೋ ಕಷ್ಟಪಟ್ಟು ಎರಡು ತಿಂಗಳ ಕಾಲ ಮಡದಿ ಮಕ್ಕಳನ್ನು ನೋಡಿಕೊಳ್ಳೋದರಲ್ಲಿ ಸೋಲಂಕಿ ದಿವಾಕರ್ ಹೈರಾಣಾಗಿ ಹೋಗಿದ್ದರು. ಆದರೆ ಸಿನಿಮಾ ಜಗತ್ತು ಸದ್ಯಕ್ಕೆ ತೆರೆದುಕೊಳ್ಳುವ ಯಾವ ಲಕ್ಷಣವೂ ಕಾಣಿಸದ್ದಿದ್ದರಿಂದ ಒಪ್ಪತ್ತಿನ ಊಟಕ್ಕೇನು ಮಾಡೋದೆಂಬ ಚಿಂತೆ ಅವರನ್ನು ಬಾಧಿಸಲಾರಂಭಿಸಿತ್ತು. ಕಡೆಗೂ ಒಂದು ಕಾಲದಲ್ಲಿ ಹೊಟ್ಟೆಪಾಡು ನೀಗುತ್ತಿದ್ದ ಹಣ್ಣಿನ ವ್ಯಾಪಾರವಲ್ಲದೆ ಬೇರ್ಯಾವ ದಾರಿಯೂ ಅವರಿಗೆ ಕಾಣಿಸಿರಲಿಲ್ಲ. ಕಡೆಗೆ ಈಗೊಂದಷ್ಟು ದಿನಗಳಿಂದ ದಿವಾಕರ್ ಬೀದಿ ಬದಿಯಲ್ಲಿ ಹಣ್ಣು ಮಾರೋದನ್ನೇ ಕಾಯಕವಾಗಿಸಿಕೊಂಡಿದ್ದರು. ಕೊರೋನಾ ಭಯದ ಕಾರಣದಿಂದ ವ್ಯಾಪಾರ ಅಷ್ಟಕ್ಕಷ್ಟೇ ಇದ್ದರೂ ಹೇಗೋ ಸಂಸಾರ ನಿಭಾಯಿಸುತ್ತಿರೋ ಖುಷಿ ಅವರ ಪಾಲಿಗೆ ದಕ್ಕಿತ್ತು.
ಬಹುಪಾಲು ಕಾಲ ಸಿನಿಮಾ ವಾತಾವರಣದಲ್ಲಿಯೇ ಬೆರೆತು ಹೋಗುತ್ತಿದ್ದ ದಿವಾಕರ್ ಪಾಲಿಗಿದು ಸತ್ವಪರೀಕ್ಷೆಯ ಕಾಲ. ಪಾತ್ರ ಎಂಥಾದ್ದೇ ಇರಲಿ, ಅದು ಎಷ್ಟು ಪುಟ್ಟದ್ದಾಗಿದ್ದರೂ ಸರಿಯೇ; ಕ್ಯಾಮೆರಾ ಮುಂದೆ ನಿಲ್ಲೋದು, ಆ ಪಾತ್ರವನ್ನು ಆವಾಹಿಸಿಕೊಳ್ಳೋದೆಂದರೆ ದಿವಾಕರ್ ಪಾಲಿಗೊಂದು ದೈವೀಕ ಅನುಭೂತಿ. ಆದರೆ, ಕೊರೋನಾ ಕಾಲದಲ್ಲಿ ಸಿನಿಮಾ ಜಗತ್ತಿನ ಕ್ಯಾಮೆರಾಗೆ ಅನಿಶ್ಚಿತ್ತತೆಯ ಕ್ಯಾಪು ಕವುಚಿಕೊಂಡಿದೆ. ಆದಷ್ಟು ಬೇಗನೆ ಮತ್ತೆ ಕ್ಯಾಮೆರಾ ಮುಂದೆ ನಿಲ್ಲಬೇಕೆಂಬ ಧ್ಯಾನದೊಂದಿಗೆ ಆತ ಹಣ್ಣಿನ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಹೀಗೆ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡು ಇದೀಗ ಹಣ್ಣಿನ ವ್ಯಾಪಾರಿಯಾಗಿರುವ ಸೋಲಂಕಿ ದಿವಾಕರ್ ಆಗ್ರಾದ ಹಳ್ಳಿಯ ಹೈದ. ತೊಂಭತ್ತರ ದಶಕದಲ್ಲಿ ಸಿನಿಮಾ ನಟನಾಗೋ ಕನಸು ಹೊತ್ತು ದೆಹಲಿಗೆ ಬಂದಿಳಿದಿದ್ದ ಅವರ ಪಾಲಿಗೆ ಎಲ್ಲವೂ ಈಗಿನಂತೆಯೇ ಅಸ್ಪಷ್ಟವಾಗಿತ್ತು. ಒಂದಷ್ಟು ದಿನಗಲ ಕಾಲ ಸಿನಿಮಾ ನಟನೆಯ ಭ್ರಾತನ್ನು ತೀವ್ರವಾಗಿ ಹಚ್ಚಿಕೊಂಡು ಅಂಡಲೆದ ದಿವಾಕರ್ ಪಾಲಿಗೆ ಅವಕಾಶಗಳು ಒಲಿದಿರಲಿಲ್ಲ. ಹಾಗಂತ ದೆಹಲಿಯಂಥಾ ರಾಕ್ಷಸನಗರಿಯಲ್ಲಿ ಕೆಲಸವಿಲ್ಲದೆ ಓಡಾಡಲು ಸಾಧ್ಯವಿಲ್ಲವಲ್ಲಾ? ಆಗ ದಿವಾಕರ್ ಹಣ್ಣಿನ ವ್ಯಾಪಾರ ಶುರುವಿಟ್ಟುಕೊಂಡಿದ್ದರು.
ಹಾಗೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದರೂ ನಟನಾಗೋ ಕನಸನ್ನಾಗಲಿ, ಆ ಬಗೆಗಿನ ಪ್ರಯತ್ನವನ್ನಾಗಲಿ ದಿವಾಕರ್ ನಿಲ್ಲಿಸಿರಲಿಲ್ಲ. ಆ ಹಾದಿಯಲ್ಲಿ ಬಲು ಪ್ರಯಾಸದಿಂದ ಸಾಗಿ ಬಂದ ಅವರು ಕಡೆಗೂ ರಂಗಭೂಮಿಯ ಸಾಹಚರ್ಯ ಪಡೆದುಕೊಂಡಿದ್ದರು. ರಂಗಭೂಮಿಯಲ್ಲಿಯೇ ಹಲವಾರು ವರ್ಷಗಳ ಕಾಲ ಸಕ್ರಿಯರಾಗಿದ್ದುಕೊಂಡು ನಟನಾಗಿ ರೂಪುಗೊಂಡಿದ್ದರು. ಆರಂಭದಲ್ಲಿ ನಾಟಕಗಳಲ್ಲಿಯೂ ಅವರಿಗೆ ಸಿಗುತ್ತಿದ್ದದ್ದು ಸಣ್ಣಪುಟ್ಟ ಪಾತ್ರಗಳೇ. ಅದರಲ್ಲಿಯೇ ಪಳಗಿಕೊಂಡು ನಂತರ ಸಿನಿಮಾಗಳಲ್ಲಿಯೂ ಅವಕಾಶ ಗಿಟ್ಟಿಸಿಕೊಂಡಿದ್ದ ದಿವಾಕರ್ ಪಾಲಿಗೆ ಆ ನಂತರದಲ್ಲಿ ನಟನೆಯೇ ಬದುಕಾಗಿತ್ತು.
ಕಳೆದ ಬಾರಿ ಲಾಕ್ಡೌನ್ ಕಾರಣದಿಂದ ಮತ್ತೆ ಆರಂಭದ ದಿನಗಳಲ್ಲಿ ಆಸರೆಯಾಗಿದ್ದ ಹಣ್ಣಿನ ವ್ಯಾಪಾರವನ್ನೇ ದಿವಾಕರ್ ಮತ್ತೆ ನೆಚ್ಚಿಕೊಂಡಿದ್ದಾರೆ. ಪ್ರತೀ ದಿನ ಬೆಳಗ್ಗೆ ಬೇಗನೆದ್ದು ಓಕ್ಲಾ ಮಂಡಿಗೆ ತೆರಳುವ ದಿವಾಕರ್, ಅಲ್ಲಿ ಚೌಕಾಸಿ ನಡೆಸಿ ಹಣ್ಣುಗಳನ್ನು ಖರೀದಿಸಿ ತರುತ್ತಾರೆ. ನಂತರ ಸಂಜೆಯವರೆಗೂ ಮಾರಾಟ ಮಾಡುತ್ತಾರೆ. ಆದರೂ ಕೂಡಾ ಆತನೇನು ಧೃತಿಗೆಟ್ಟಿಲ್ಲ. ಇಷ್ಟರಲ್ಲಿಯೇ ಮತ್ತೆ ನಟನಾಗಿ ಕ್ಯಾಮೆರಾ ಮುಂದೆ ನಿಲ್ಲುವ ಭರವಸೆಯನ್ನೂ ಕಳೆದುಕೊಂಡಿಲ್ಲ. ಮನೆಯ ಬಾಡಿಗೆ ಕಟ್ಟಿ ಸಂಸಾರ ನಿರ್ವಹಣೆಯೂ ಸಾಧ್ಯವಾಗದ ಸ್ಥಿತಿಯಲ್ಲಿ ಹಣ್ಣಿನ ವ್ಯಾಪಾರ ಆಸರೆಯಾದ ಬಗ್ಗೆ ಅವರಲ್ಲೊಂದು ಹೆಮ್ಮೆಯಿದೆ. ಆದರೆ ಸಿನಿಮಾದ ಕಾರ್ಮಿಕರು ಮತ್ತು ನಟ ನಟಿಯರ ಸ್ಥಿತಿಯನ್ನು ಲಾಕ್ಡೌನ್ ಈ ಸ್ಥಿತಿಗಿಳಿಸಿರೋದು ಮಾತ್ರ ನಿಜಕ್ಕೂ ದುಃಖದ ಸಂಗತಿ. ಸಹನೀಯ ವಿಚಾರವೆಂದರೆ, ಇದೀಗ ಮತ್ತೆ ಸೋಲಂಕಿಗೆ ಒಂದಷ್ಟು ಸಿನಿಮಾ ಅವಕಾಶಗಳು ಸಿಗುತ್ತಿವೆ. ಅದರೊಂದಿಗಾತ ಹಣ್ಣಿನ ವ್ಯಾಪಾರವನ್ನೂ ಮ್ಯಾನೇಜು ಮಾಡುತ್ತಿದ್ದಾರೆ. ಈ ಶ್ರಮ ಜೀವಿಯ ಬದುಕು ಮತ್ತೆ ಹಳಿಗೆ ಮರಳಲೆಂಬುದು ಹಾರೈಕೆ!