ನಮ್ಮ ಸುತ್ತ ಪಾಸಿಟಿವ್ ಎನರ್ಜಿ ಇದೆ ಎಂದ ಮೇಲೆ ನೆಗೆಟಿವ್ ಎನರ್ಜಿಯೂ ಇದ್ದೇ ಇರುತ್ತೆ ಅನ್ನೋದು ಹಲವರ ವಾದ. ಈ ನೆಗೆಟಿವ್ ಎನರ್ಜಿ ಅನ್ನೋದು ನಮ್ಮ ನಡುವೆ ದೆವ್ವ, ಭೂತ ಪ್ರೇತ ಬಾಧೆಗಳಾಗಿ ಹಾಸು ಹೊಕ್ಕಾಗಿವೆ. ಅದು ಮೂಢ ನಂಬಿಕೆಗಳ ಸಾಲಿಗೆ ಸೇರಿರೋದರಿಂದ ಅಂಥಾ ಶಕ್ತಿಯೇ ಈ ಜಗತ್ತಿನಲ್ಲಿಲ್ಲ ಎಂಬುದನ್ನು ಸಾಬೀತ ಪಡಿಸುವ ಪ್ರಯತ್ನಗಳೂ ಅವ್ಯಾಹತವಾಗಿ ನಡೆಯುತ್ತಿವೆ. ಅದೆಲ್ಲವನ್ನೂ ಮೀರಿಕೊಂಡು ಇಂಥಾ ನಂಬಿಕೆಗಳು ಆರ್ಭಟಿಸುತ್ತಲೇ ಇದ್ದಾವೆ. ಈವತ್ತಿಗೆ ಅಂಥಾ ನಂಬಿಕೆಗಳು, ಭೂತ ಚೇಷ್ಟೆಗಳು ಹಿಂದಿನ ಪ್ರಮಾಣದಲ್ಲಿಲ್ಲ ಅಂತ ನಾವೆಲ್ಲ ಅಂದುಕೊಳ್ಳುತ್ತೇವೆ. ಅದನ್ನು ಸುಳ್ಳು ಮಾಡುವಂಥಾ ವಿಚಾರಗಳು ಸಾಕಷ್ಟಿವೆ. ಗುಜರಾತ್ ರಾಜ್ಯದ ಕಡಲ ಕಿನಾರೆಯೊಂದು ಈ ಮಾತನ್ನು ಸಾಕ್ಷೀಕರಿಸುವಂತಿದೆ.
ಅದು ಗುಜರಾತಿನ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿರೋ ಡುಮಾಸ್ ಕಡಲ ತೀರ. ಕಣ್ಣಿಗೆ ತಂಪೆನಿಸುವ, ಮನಸಿಗೆ ಹಾಯೆನಿಸುವ ವಾತಾವರಣದಿಂದಲೇ ಈ ಬೀಚ್ ವೀಕ್ಯಾತಿ ಗಳಿಸಿಕೊಂಡಿದೆ. ಅರೇಬಿಯನ್ ಸಮುದ್ರದ ಈ ಕಿನಾರೆ ಸೂರತ್ ನಗರದಿಂದ ಇಪ್ಪತ್ತೊಂದು ಕಿಲೋಮೀಟರ್ ದೂರದಲ್ಲಿದೆ. ಈ ಬೀಚ್ ಯಾವಾಗಲೂ ಪ್ರವಾಸಿಗರಿಂದ ಗಿಜಿಗುಡುತ್ತಿರುತ್ತೆ. ಆದರೆ ಸಂಜೆಯಾಗಿ ದಿನವೊಂದು ಕತ್ತಲು ಕವುಚಿಕೊಳ್ಳುವ ಮುನ್ನವೇ ಆ ಬೀಚ್ ನಿರ್ಜನವಾಗಿ ಭಣಗುಡಲಾರಂಭಿಸುತ್ತೆ. ಹಾಗೆ ಅಲ್ಲಿ ನೆರದ ಜನರೆಲ್ಲ ಬೇಗನೆ ಹಿಂತಿರುಗೋದಕ್ಕೆ ಕಾರಣವಾಗಿರೋದು ಪ್ರೇತ ಬಾಧೆಯ ಭಯ!
ನಯನಮನೋಹರವಾಗಿರೋ ಈ ಬೀಚ್ಗೆ ಮತ್ತೊಂದು ಭೀಕರ ಮುಖವೂ ಇದೆ. ಈ ಬೀಚ್ನಲ್ಲಿ ಮಧ್ಯರಾತ್ರಿಯ ಹೊತ್ತಿಗೆಲ್ಲ ದೆವ್ವ ಭೂತಗಳ ಕಾಟ ಶುರುವಾಗುತ್ತದೆಯಂತೆ. ಆ ದಿಕ್ಕಿನಿಂದ ರಾತ್ರಿ ಹೊತ್ತಿನಲ್ಲಿ ಬೆಚ್ಚಿ ಬೀಳಿಸುವ ವಿಚಿತ್ರ ಶಬ್ಧ ಕೇಳಿ ಬರುತ್ತದೆ ಅಂತ ಸ್ಥಳೀಯರೇ ಹೇಳುತ್ತಾರೆ. ಆ ಬೀಚಿನ ಆಸುಪಾಸಲ್ಲಿ ವಾಸಿಸುವವರೂ ಕೂಡಾ ರಾತ್ರಿ ಹೊತ್ತಿನಲ್ಲಿ ಅಪ್ಪಿತಪ್ಪಿಯೂ ಆ ಕಡೆ ತಲೆ ಹಾಕಿಯೂ ಮಲಗೋದಿಲ್ಲ. ಹಾಗಾದ್ರೆ ಅಲ್ಲಿ ಪ್ರೇತ, ಆತ್ಮಗಳ ಕಾಟ ಇರೋದು ನಿಉಜವಾ ಅಂತ ನೋಡ ಹೋದರೆ ಸ್ಥಳೀಯರಲ್ಲಿಯೇ ಉತ್ತರವೂ ರೆಡಿ ಇರುತ್ತೆ. ಅದರನ್ವಯ ಹೇಳೋದಾದರೆ, ಆ ಬೀಚ್ನ ಮಧ್ಯ ಭಾಗದಲ್ಲಿ ಈಗ್ಗೆ ಕೆಲ ವರ್ಷಗಳ ಹಿಂದೆ ಶವ ಸಂಸ್ಕಾರ ನಡೆಯುತ್ತಿತ್ತಂತೆ. ಅದರಿಂದಾಗಿಯೇ ಅಲ್ಲಿ ರಾತ್ರಿ ಹೊತ್ತಲ್ಲಿ ಆತ್ಮಗಳ ಓಡಾಟ ಇರುತ್ತೆ ಅಂತ ಸ್ಥಳೀಯ ಜನ ನಂಬಿಕೊಂಡಿದ್ದಾರೆ.
ಇಂಥಾ ನಂಬಿಕೆ ಮತ್ತು ಅಂತೆ ಕಂತೆಗಳೇ ಮೋಹಕವಾದ ಡುಮಾಸ್ ಬೀಚ್ಗೆ ಪ್ರೇತ ಕಳೆ ತಂದುಕೊಟ್ಟಿದೆ. ಈ ಬೀಚ್ನಲ್ಲಿ ನಿಜಕ್ಕೂ ಪ್ರೇತ ಬಾಧೆ ಇರೋದು ಹೌದಾ ಅನ್ನೋ ಪ್ರಶ್ನೆ ಸಹಜವಾಗಿಯೇ ಕಾಡುತ್ತೆ. ಅದು ಭ್ರಮೆಯೇ ಇರಬಹುದೆಂಬ ಗುಮಾನಿಯಿಂದ ಅನೇಕರು ರಾತ್ರಿ ಹೊತ್ತು ಅಲ್ಲಿ ಕಳೆಯಲು ಮುಂದಾಗಿದ್ದಾರಂತೆ. ಅಂಥಾ ಹುಂಬ ಧೈರ್ಯ ಮಾಡಿ ಹೋದವರೆಲ್ಲ ಆ ಬೀಚ್ನಿಂದ ಆದೃಶರಾಗ್ತಾರೆ ಅಂತಲೂ ಸ್ಥಳೀಯರೇ ಹೇಳುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಡುಮಾಸ್ ಬೀಚ್ಗೆ ಖ್ಯಾತಿಯ ಜೊತೆಗೆ ಕುಖ್ಯಾತಿಯೂ ಗಾಢವಾಗಿಯೇ ಅಂಟಿಕೊಂಡಿದೆ.