ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತಾಡುತ್ತಿದ್ದ ರಕುಲ್, ತೆಲುಗು ಚಿತ್ರರಂಗದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ತನ್ನ ವೃತ್ತಿ ಬದುಕಿನ ಬಗ್ಗೆ ಮಾತಾಡಿದ್ದಾಳೆ. ಒಂದು ಕಾಲದಲ್ಲಿ ಬಳುಕುವ ಬಳ್ಳಿಯಂತಿದ್ದ ಈ ಹುಡುಗಿ ತೆಲುಗು ಚಿತ್ರರಂಗದಲ್ಲಿ ಭಾರೀ ಬೇಡಿಕೆ ಹೊಂದಿದ್ದಳು. ವರ್ಷವೊಂದಕ್ಕೆ ಏನಿಲ್ಲವೆಂದರೂ ನಾಲಕೈದು ಚಿತ್ರಗಳಲ್ಲಿಯಾದರೂ ನಟಿಸುತ್ತಿದ್ದಳು. ಹಾಗೆ ನಟಿಸಿದ ಬಹುತೇಕ ಚಿತ್ರಗಳು ಹಿಟ್ ಲಿಸ್ಟಿಗೆ ಸೇರಿಕೊಳ್ಳುತ್ತಿದ್ದವೆಂಬುದು ವಿಶೇಷ. ಹೀಗೆ ವರ್ಷಕ್ಕೆ ಹೆಚ್ಚಿನ ಸಿನಿಮಾಗಳಲ್ಲಿ ನಟಿಸುತ್ತಿದ್ದ ರಕುಲ್ಳನ್ನು ತೆಲುಗು ಚಿತ್ರರಂಗದ ಮಂದಿ ಲೇಡಿ ಅಕ್ಷಯ್ ಕುಮಾರ್ ಅಂತ ತಮಾಶೆ ಮಾಡುತ್ತಿದ್ದರಂತೆ.
ಹೀಗೆ ತೆಲುಗಿನಲ್ಲಿ ಒಂದರ ಹಿಂದೊಂದರಂತೆ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಾ ಸಾಗಿದ್ದ ರಕುಲ್, ಆ ನಂತರದಲ್ಲಿ ತಮಿಳಿನಲ್ಲಿಯೂ ಒಂದಷ್ಟು ಹೆಸರು ಮಾಡಿದ್ದಳು. ಅಲ್ಲಿಯೂ ಒಂದಷ್ಟು ಸಿನಿಮಾಗಳಲ್ಲಿ ನಟಿಸುತ್ತಾ, ಬಾಲಿವುಡ್ನಲ್ಲಿಯೂ ಮಿಂಚಿದ್ದಳು. ಒಟ್ಟಾರೆಯಾಗಿ ದೆಹಲಿಯ ಹುಡುಗಿ ರಕುಲ್ ಪ್ರೀತ್ ಸಿಂಗ್ ದಕ್ಷಿಣ ಭಾರತೀಯ ಚಿತ್ರರಂಗದಲ್ಲೀಗ ಮುಖ್ಯ ನಟಿಯರ ಸಾಲಿನಲ್ಲಿ ತನ್ನ ಹೆಸರು ದಾಖಲಿಸಿಕೊಂಡಿದ್ದಾಳೆ. ಹಾಗೆ ನೋಡಿದರೆ, ಬಾಲಿವುಡ್ಡಿನಲ್ಲಿ ರಕುಲ್ಗೆ ಹೇಳಿಕೊಳ್ಳುವಂತ ಯಶವೇನೂ ಸಿಕ್ಕಿರಲಿಲ್ಲ. ಸದ್ಯಕ್ಕೆ ಆಕೆಯ ವೃತ್ತಿ ಜೂಈವನಕ್ಕೆ ಕೊಂಚ ಮಬ್ಬು ಕವಿದಂತಿದ್ದರೂ, ಮಾಡೆಲಿಂಗ್ ಸೇರಿದಂತೆ ನಾನಾ ಪ್ರಕಾರವಾಗಿ ರಕುಲ್ ಆಕ್ಟೀವ್ ಆಗಿದ್ದಾಳೆ.