ಇದ್ದು ಭಿನ್ನ ಜಾಡಿನ ಕ್ರೈಂ ಥ್ರಿಲ್ಲರ್!
ರಗಡ್ ಕಥಾನಕದ ಚಿತ್ರವೊಂದು ಸದ್ದೇ ಇಲ್ಲದೆ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ರೆಡಿಯಾಗಿ ನಿಂತಿದೆ. ಈ ಚಿತ್ರ ಪ್ರೇಕ್ಷಕರ ಗಮನ ಸೆಳೆದಿದ್ದು, ಭಾರೀ ಸದ್ದು ಮಾಡಿದ್ದು ಒಂದು ಪೋಸ್ಟರ್ ಮೂಲಕ. ಹೀಗೆ ಅಚ್ಚರಿದಾಯಕವಾಗಿ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಚಿತ್ರ ಯೆಲ್ಲೋ ಗ್ಯಾಂಗ್. ಶೀರ್ಷಿಕೆಯಲ್ಲಿಯೇ ನಿಗೂಢವೇನನ್ನೋ ಬಚ್ಚಿಟ್ಟುಕೊಂಡಂತಿರುವ ಯೆಲ್ಲೋ ಗ್ಯಾಂಗ್ಸ್ ಮೂಲಕ ರವೀಂದ್ರ ಪರಮೇಶ್ವರಪ್ಪ ಸ್ವತಂತ್ರ ನಿರ್ದೇಶಕರಾಗಿ ಅಡಿಯಿರಿಸುತ್ತಿದ್ದಾರೆ.
ಯೆಲ್ಲೋ ಗ್ಯಾಂಗ್ ಎಂಬ ಶೀರ್ಷಿಕೆಯೇ ಕಥೆಯ ಸುತ್ತಾ ಒಂದಷ್ಟು ಕುತೂಹಲ ಮೂಡಿಸುವಂತಿದೆ. ಈ ಬಗ್ಗೆ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಒಂದು ಡ್ರಗ್ ಡೀಲ್ ಸುತ್ತಾ ತೆರೆದುಕೊಂಡು, ಆ ನಂತರ ಕಾಸಿನ ಕೇಂದ್ರಿತವಾಗಿ ಬಿಚ್ಚಿಕೊಳ್ಳುವ ರಗಡ್ ಕಥೆಯನ್ನು ಯೆಲ್ಲೋ ಗ್ಯಾಂಗ್ಸ್ ಹೊಂದಿದೆಯಂತೆ. ಇತ್ತೀಚೆಗಷ್ಟೇ ಇದರ ಟೀಸರ್ ಒಂದು ಬಿಡುಗಡೆಗೊಂಡಿತ್ತು. ಈವತ್ತಿಗೆ ಯೆಲ್ಲೋ ಗ್ಯಾಂಗ್ ಬಿಡುಗಡೆಯ ಹೊಸ್ತಿಲಲ್ಲಿ ಈ ಪರಿಯಾಗಿ ನಿರೀಕ್ಷೆ ಮೂಡಿಸಿದೆಯೆಂದರೆ, ಅದರಲ್ಲಿ ಟೀಸರ್ ಪಾಲು ಬೆಟ್ಟದಷ್ಟಿದೆ. ಇದರೊಂದಿಗೆ ಹಬ್ಬಿಕೊಂಡಿರುವ ಕಥೆಯೆಡೆಗಿನ ಕುತೂಹಲವಿದೆಯಲ್ಲಾ? ಅದನ್ನು ಅಕ್ಷರಶಃ ತಣಿಸುವ ರೀತಿಯಲ್ಲಿ, ಪ್ರಯೋಗಾತ್ಮಕ ಗುಣಗಳೊಂದಿಗೆ ಈ ಚಿತ್ರ ಮೂಡಿ ಬಂದಿದೆಯಂತೆ. ಹಾಗೊಂದು ಗಾಢ ನಂಬಿಕೆ ಚಿತ್ರತಂಡದಲ್ಲಿದೆ.
ಹಾಗಾದರೆ, ಈ ಸಿನಿಮಾದ ಕಥೆ ಯಾವ ಬಗೆಯದ್ದು? ಅದರಲ್ಲಿ ಅಡಕವಾಗಿರುವ ವಿಶೇಷತೆಗಳೇನು? ಎಂಬಿತ್ಯಾದಿ ಪ್ರಶ್ನೆಗಳು ಕಾಡೋದು ಸಹಜ. ಈ ನಿಟ್ಟಿನಲ್ಲಿ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಬಿಟ್ಟುಕೊಟ್ಟಿದ್ದಾರೆ. ಅದರನ್ವಯ ಹೇಳೋದಾದರೆ, ಇದೊಂದು ಕ್ರೈಂ ಥ್ರಿಲ್ಲರ್ ಜಾನರಿನ ಚಿತ್ರ. ಹಾಗಂತ ಸಿದ್ಧ ಸೂತ್ರದ ಚೌಕಟ್ಟಿನಲ್ಲಿ ಒಟ್ಟಾರೆ ಕಥೆಯನ್ನು ಕಲ್ಪಿಸಿಕೊಳ್ಳುವಂತಿಲ್ಲ. ಯಾಕೆಂದರೆ, ಯಾವ ಸೂತ್ರಗಳ ನಿಲುಕಿಗೂ ಸಿಗದಂತೆ, ಹಲವಾರು ಹೊಸತನ ಮತ್ತು ಪ್ರಯೋಗಗಳೊಂದಿಗೆ ಯೆಲ್ಲೋ ಗ್ಯಾಂಗ್ಸ್ ಅನ್ನು ಕಟ್ಟಿ ಕೊಡಲಾಗಿದೆ. ಇದರ ಪ್ರಧಾನ ಕಥೆ ಡ್ರಗ್ಸ್ ಮಾಫಿಯಾ ಮತ್ತು ದುಡ್ಡಿನ ಸುತ್ತ ಕದಲುತ್ತದೆ. ಅದರ ಕೇಂದ್ರಕ್ಕೆ ಸಂಬಂಧವಿಲ್ಲದವರನ್ನೂ ಸೆಳೆದುಕೊಂಡು ಸಾಗುವ ಈ ಕಥನ, ಪ್ರತೀ ಹೆಜ್ಜೆಯಲ್ಲಿಯೂ ಪ್ರೇಕ್ಷಕರನ್ನು ಚಕಿತಗೊಳಿಸಲಿದೆ.
ಟೀಸರ್ನ ಮೂಲಕವೇ ಒಟ್ಟಾರೆ ಚಿತ್ರದ ರಾ ಲುಕ್ ಎಂಥಾದ್ದೆಂಬುದರ ಅಂದಾಜು ಸಿಕ್ಕಿದೆ. ಇಲ್ಲಿನ ಪಾತ್ರಗಳಿಗೆ ವಿನಾ ಕಾರಣ ಮೇಕಪ್ಪು ಮಾಡಿಲ್ಲ. ಅದಕ್ಕೆ ತಕ್ಕುದಾದಂಥಾ ನೈಜ ಸನ್ನಿವೇಶಗಳಲ್ಲಿಯೇ ಇಡೀ ಚಿತ್ರವನ್ನು ಅತ್ಯಂತ ಪರಿಣಾಮಕಾರಿಯಾಗಿ ಸೆರೆ ಹಿಡಿಯಲಾಗಿದೆಯಂತೆ. ದೊಡ್ಡ ಬಯಲುಗಳು ಮತ್ತು ಭಿನ್ನವಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವಿಶೇಷವೆಂದರೆ, ತುಂಬಾ ಸವಾಲಿನದ್ದಾಗಿರುವ ಹ್ಯಾಂಡ್ ಹೆಲ್ಡ್ ಮಾದರಿಯಲ್ಲಿ, ಕ್ಯಾಮೆರಾವನ್ನು ಕೈಲಿ ಹಿಡಿದುಕೊಂಡೇ ಬಹುತೇಕ ಭಾಗಗಳ ಚಿತ್ರೀಕರಣ ನಡೆಸಲಾಗಿದೆಯಂತೆ. ನೋಡುಗರನ್ನು ದೃಷ್ಯದೊಳಗೇ ಇಳಿಸಿ, ಕಥೆ ಮತ್ತು ಪಾತ್ರಗಳೊಂದಿಗೆ ತಾವೂ ಸಂಚಾರ ನಡೆಸುವಂಥಾ ದಿವ್ಯಾನುಭೂತಿಯೊಂದನ್ನು ಪ್ರೇಕ್ಷಕರಿಗೆ ಯೆಲ್ಲೋ ಗ್ಯಾಂಗ್ಸ್ ಕೊಡಮಾಡಲಿದೆ.
ದೇವ್ ದೇವಯ್ಯ, ಅರ್ಚನಾ ಕೊಟ್ಟಿಗೆ, ಬಲ ರಾಜವಾಡಿ, ಪ್ರದೀಪ್ ಪೂಜಾರಿ, ಅರುಣ್, ಸತ್ಯ, ನಾಟ್ಯರಂಗ, ವಿಠಲ್ ಪರೀಟ, ಸತ್ಯ ಉಮ್ಮತ್ತಾಲ್, ಮಲ್ಲಿಕಾರ್ಜುನ ಮುಂತಾದವರು ಮುಖ್ಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ ಮತ್ತು ರೋಹಿತ್ ಸೋವರ್ ಸಂಗೀತ ನಿರ್ದೇಶನವಿರುವ ಈ ಚಿತ್ರವನ್ನು ವಿಭಿನ್ನ ಸ್ಟುಡಿಯೋಸ್, ಕೀ ಲೈಟ್ಸ್ ಮತ್ತು ವಾಟ್ ನೆಕ್ಸ್ಟ್ ಮೂವೀಸ್ ಸಂಸ್ಥೆಗಳು ಜೊತೆಯಾಗಿ ನಿರ್ಮಾಣ ಮಾಡಿವೆ. ಮನೋಜ್ ಪಿ, ಜಿಎಂಆರ್ ಕುಮಾರ್, ಪ್ರವೀಣ್ ಡಿ.ಎಸ್ ಮತ್ತು ಜೆಎನ್ವಿ ಶಿವಮೊಗ್ಗ ಶಾಲೆಯ ಹಳೇ ವಿದ್ಯಾರ್ಥಿಗಳು ಕೂಡಾ ಈ ಚಿತ್ರ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಲೋಕೇಶ್ ಹಿತ್ತಲಕೊಪ್ಪ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಈಗಾಗಲೇ ಯೆಲ್ಲೋ ಗ್ಯಾಂಗ್ಸ್ಗೆ ಸೆನ್ಸಾರ್ ಮಂಡಳಿಯಿಂದ ಎ ಸರ್ಟಿಫಿಕೆಟ್ ಸಿಕ್ಕಿದೆ. ಅಕ್ಟೋಬರ್ನಲ್ಲಿ ಟ್ರೈಲರ್ ಲಾಂಚ್ ಮಾಡಿ, ನವೆಂಬರ್ ಹನ್ನೊಂದರಂದು ಚಿತ್ರವನ್ನು ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ.