ಯಾವುದೇ ಆಡಂಬರದ ಹಂಗಿಲ್ಲದೆ ಕೆಲ ಚಿತ್ರಗಳು ಸೈಲೆಂಟಾಗಿ ತಯಾರುಗೊಂಡು ಬಿಡುಗಡೆಗೆ ಸನ್ನದ್ಧವಾಗುತ್ತವೆ. ಆ ಮೂಲಕವೇ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಸೆಳೆದುಕೊಳ್ಳುವಲ್ಲಿಯೂ ಯಶಸ್ವೀಯಾಗುತ್ತವೆ. ಆ ಯಾದಿಯಲ್ಲಿ ರಣವ್ಯೂಹ ಚಿತ್ರವೂ ಸೇರಿಕೊಳ್ಳುತ್ತೆ. ಇದೀಗ ರಣವ್ಯೂಹದ ಟ್ರೈಲರ್ ಮತ್ತು ಹಾಡುಗಳು, ಕಲಾವಿದರ ಸಂಘದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದ ಮೂಲಕ ಬಿಡುಗಡೆಗೊಂಡಿವೆ. ಖ್ಯಾತ ನಿರ್ಮಾಪಕರೂ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರೂ ಆಗಿರುವ ಭಾ.ಮಾ ಹರೀಶ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಟ್ರೈಲರ್ ಮತ್ತು ಹಾಡುಗಳು ಮೂಡಿಬಂದಿರುವ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಲೇ, ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಶ್ರೀ ಶಿರಡಿ ಸಾಯಿಬಾಬಾ ಮೀವೀಸ್ ಬ್ಯಾನರಿನಡಿಯಲ್ಲಿ ವೇಣುಕುಮಾರ್ ಎಂ.ಜಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀಪತಿ ಪೂಜಾರಿ, ಶ್ರುತಿ ಹರೀಶ್ ಮತ್ತು ಮಂಜುಳಾ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಎಸ್.ಎಸ್ ಶಂಕರ್ನಾಗ್ ವಿಭಿನ್ನವಾದ, ಸಂಕೀರ್ಣವಾದ ಕಥಾ ಹಂದರದೊಂದಿಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ. ಮನುಷ್ಯರೆಲ್ಲರಲ್ಲಿ ಅಡಕವಾಗಿರುವಂಥಾ ಅಸಂಗತವಾದ ವ್ಯಕ್ತಿತ್ವ, ಮನಃಸ್ಥಿತಿಗಳ ಗಹನ ವಿಚಾರಗಳೊಂದಿಗೆ ರಣವ್ಯೂಹದ ಕಥೆ ಸುತ್ತಿಕೊಂಡಿದೆ. ಯಾವುದೇ ವ್ಯಕ್ತಿಯನ್ನು ಮುಖ ಚಹರೆಯಿಂದ ಒಳ್ಳೆಯವನು ಅಥವಾ ಕೆಟ್ಟವನೆಂದು ಷರಾ ಬರೆಯಲಾಗೋದಿಲ್ಲ. ಯಾಕೆಂದರೆ, ಇಲ್ಲಿ ಭಾರೀ ಸುಭಗರಂತೆ ಪೋಸು ಕೊಡುತ್ತಾ, ಜೀವಕ್ಕಂಟಿದ ಗೆಳೆಯರಂತೆ ವರ್ತಿಸುವ ಮನಸೊಳಗೇ ವಂಚನೆಯ ತುಪಾಕಿಗಳಿರುತ್ತವೆ. ಒಳ್ಳೆತನದ ಪರದೆಯ ಹಿಂದೆ ದುಷ್ಟಮನಃಸ್ಥಿತಿಗಳಿರುತ್ತವೆ. ಇಂಥಾ ಗಟ್ಟಿ ವಿಚಾರಗಳನ್ನಿಟ್ಟುಕೊಂಡು ನಿರ್ದೇಶಕರು ಈ ಚಿತ್ರವನ್ನು ರೂಪಿಸಿದ್ದಾರಂತೆ.
ಇಂಥಾ ಸಂಕೀರ್ಣ ಕಥೆಯನ್ನು ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ಕಟ್ಟಿಕೊಡಲಾಗಿದೆಯಂತೆ. ನಿಖರವಾಗಿ ಹೇಳಬೇಕೆಂದರೆ, ಇದೊಂದು ಹೊಸತನವನ್ನು ಹೊದ್ದುಕೊಂಡಿರುವ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಚಿತ್ರ. ಮಜಾ ಭಾರತ ರಿಯಾಲಿಟಿ ಶೋ ಮೂಲಕ ಒಂದಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ಅವಿನಾರ್ಶ ಈ ಚಿತ್ರದ ನಾಯಕನಾಗಿ ನಟಿಸಿದ್ದರೆ, ಯಶಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ನಿರ್ಮಾಪಕರ ಪತ್ನಿ ಸ್ಮಿತಾ ತನಿಖಾಧಿಕಾರಿಯಾಗಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಅವೀನ್, ವಿಸ್ಮಿತ್ ರಾಜ್, ಅಕ್ಷತ್, ರಾಜ್ ಮಂಜು, ಕನ್ನಡ ರಾಜು, ರಾಜ್ ಪ್ರತೀಕ್, ಯರ್ರಾಬಿರ್ರಿ ರಂಗನಾಥ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಇನ್ನುಳಿದಂತೆ, ಆರೋನ್ ಕಾರ್ತಿಕ್ ವೆಂಕಟೇಶ್ ಸಂಗೀತ ನಿರ್ದೇಶನ, ಕೃಷ್ಣಾ ನಾಯಕ್ಕರ್ ಛಾಯಾಗ್ರಹಣ, ಸತೀಶ್ ಬಾಬು ಹಿನ್ನೆಲೆ ಸಂಗೀತ, ಪ್ರವೀಣ್ ರಾಜ್ ಸಂಕಲನ, ವಿನಯ್ ಕುಮಾರ್ ಅವರ ಕಥೆಯಿಂದ ಈ ಚಿತ್ರ ಸಮೃದ್ಧಗೊಂಡಿದೆ.