ಶಂಕರಣ್ಣನ ಅಭಿಮಾನಿ ಪ್ರಭಾಕರ್ ಬದುಕಿನ ಹಾದಿ…
ಶೀರ್ಷಿಕೆಯಲ್ಲಿನ ಸೆಳೆತದಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಚಿತ್ರ ಕೌಟಿಲ್ಯ. ಈಗಾಗಲೇ ಪ್ರೇಕ್ಷಕರನ್ನು ನಾನಾ ದಿಕ್ಕಿನಲ್ಲಿ ಸೆಳೆದಿರುವ ಈ ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಗಾಣುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬಿಡುಗಡೆಯಾಗಿದ್ದ ಈ ಚಿತ್ರದ ಟ್ರೈಲರ್ ನೋಡಿ ಬಹುತೇಕರು ಬೆರಗಾಗಿದ್ದರು. ಯಾವ ಸದ್ದುಗದ್ದಲವೂ ಇಲ್ಲದೆ ಮುಂದುವರೆದು ಬಂದು, ಬಿಡುಗಡೆಯ ಹೊಸ್ತಿಲಿನಲ್ಲಿ ನಿಂತಿದ್ದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಟಾಕ್ ಕ್ರಿಯೇಟು ಮಾಡಿದ್ದೇ ಈ ಟ್ರೈಲರ್ ಮೂಲಕ. ಕೌಟಿಲ್ಯ ಎಂಬ ಹೆಸರೇ ಚಿತ್ರದೊಳಗೆ ಅಡಕವಾಗಿರುವ ವಿಭಿನ್ನ ಕಥೆ ಮತ್ತು ವೈಶಿಷ್ಟ್ಯಗಳಿಗೆ ಕನ್ನಡಿ ಹಿಡಿಯುವಂತಿದೆ. ಒಟ್ಟಾರೆ ಕಥೆಯ ಬಗ್ಗೆ ಯಾವೊಂದು ಸುಳಿವನ್ನೂ ಬಿಟ್ಟುಕೊಡದ ಚಿತ್ರತಂಡ ಈ ಮೂಲಕ ಕುತೂಹಲವನ್ನು ಮತ್ತಷ್ಟು ತೀವ್ರಗೊಳಿಸಿದೆ. ಹೀಗೆ ಜನಮಾನಸವನ್ನು ಸೆಳೆದಿರುವ ಕೌಟಿಲ್ಯ ಚಿತ್ರದ ಮೂಲಕವೇ ಉತ್ತರಕರ್ನಾಟಕ ಸೀಮೆಯ ಅಪ್ಪಟ ಪ್ರತಿಭೆ ಪ್ರಭಾಕರ ಶೇರಖಾನೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ಈ ಚಿತ್ರದಲ್ಲಿ ಅರ್ಜುನ್ ರಮೇಶ್ ಮತ್ತು ಪ್ರಿಯಾಂಕಾ ಚಿಂಚೊಳ್ಳಿ ನಾಯಕ, ನಾಯಕಿಯರಾಗಿ ನಟಿಸಿದ್ದಾರೆ. ಉತ್ತರಕರ್ನಾಟಕದಿಂದ ಬಂದು ಈಗಾಗಲೇ ಒಂದಷ್ಟು ಸದ್ದು ಮಾಡಿರುವ ಪ್ರಿಯಾಂಕಾ ಕೂಡಾ ಈ ಚಿತ್ರದಲ್ಲಿ ವಿಭಿನ್ನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಆಕೆ ಕೈಲಿ ಸಿಗರೇಟು ಹಿಡಿದು ನಿಂತಿರುವ ಪೋಸೇ ಆ ಪಾತ್ರದ ಬಗ್ಗೆ ಜನ ಕಣ್ಣಿಡುವಂತೆ ಮಾಡಿದೆ. ಇನ್ನುಳಿದಂತೆ ಶನಿ ಧಾರಾವಾಹಿಯಲ್ಲಿ ಶಿವನ ಪಾತ್ರದ ಮೂಲಕ ಅಪಾರ ಪ್ರಮಾಣದ ಪ್ರೇಕ್ಷಕರನ್ನು ಸೆಳೆದಿದ್ದ ಅರ್ಜುನ್ ರಮೇಶ್ ಇಲ್ಲಿ ನಾಯಕರಾಗಿ ನಟಿಸಿದ್ದಾರೆ. ಅವರದ್ದೂ ಕೂಡಾ ಭಿನ್ನ ಪಾತ್ರವೇ. ಇದೀಗ ತಾನೇ ಬಿಗ್ಬಾಸ್ ಓಟಿಟಿ ಸ್ಪರ್ಧಿಯಾಗಿ ಹೊರಬಿದ್ದಿರುವ ಅರ್ಜುನ್ರ ಲಕ್ಕು ಕೌಟಿಲ್ಯ ಮೂಲಕ ಕುದುರಿಕೊಳ್ಳುವ ಗಾಢವಾದ ಲಕ್ಷಣಗಳು ಗೋಚರಿಸುತ್ತಿವೆ.
ಹೀಗೆ ಹೂರಣದ ಹೊಳಹಿನ ಮೂಲಕವೇ ಈ ಚಿತ್ರವನ್ನು ಈ ಪರಿಯಾಗಿ ಲಕಲಕಿಸುವಂತೆ ಮಾಡಿರುವಲ್ಲಿ ನಿರ್ದೇಶಕರ ಪಾತ್ರ ದೊಡ್ಡದಿದೆ. ಕೌಟಿಲ್ಯ ನಿರ್ದೇಶಕ ಪ್ರಭಾಕರ ಶೇರಖಾನೆ ನಡೆದು ಬಂದ ಹಾದಿ, ಸಿನಿಮಾ ನಿರ್ದೇಶಕನಾಗಲು ಪಟ್ಟ ಪಡಿಪಾಟಲುಗಳ ಕಥೆ ಇದೆಯಲ್ಲಾ? ಅದು ಎಂಥವರನ್ನೂ ಅರೆಕ್ಷಣ ಹಿಡಿದು ನಿಲ್ಲಿಸುತ್ತದೆ. ಈ ಹೊತ್ತಿನಲ್ಲಿಯೂ ಚಿತ್ರರಂಗದಲ್ಲಿ ಮಹತ್ತರವಾದುದನ್ನು ಸಾಧಿಸಬೇಕೆಂದು ಹೊರಟಿರುವವರ ನಡಿಗೆಗೂ ವೇಗ ತುಂಬುತ್ತದೆ. ಪ್ರಭಾಕರ್ರ ಬದುಕಿನ ಹಾದಿ ನಿಸ್ಸಂದೇಹವಾಗಿ ಎಲ್ಲರಿಗೂ ಸಾರ್ವಕಾಲಿಕ ಸ್ಫೂರ್ತಿಯಂತಿದೆ.
ಸಾಮಾನ್ಯವಾಗಿ, ಪ್ರತೀ ವಾರವೂ ಸಾಕಷ್ಟು ಸಿನಿಮಾಗಳು ತೆರೆಗಾಣುತ್ತವೆ. ಅದರಲ್ಲಿ ಎಷ್ಟೋ ಸಿನಿಮಾಗಳು ಸಣ್ಣ ಕುರುಹೂ ಉಳಿಸದಂತೆ ಮಾಯವಾಗಿ ಬಿಡುತ್ತದೆ. ಅದ್ಯಾವುದೋ ಝಗಮಗಿಸುವ ಬಣ್ಣಗಳತ್ತ ಕಣ್ಣು ನೆಟ್ಟು ಕೂತಿರುವ ನಮಗೆಲ್ಲ, ಹಾಗೆ ಕಾಲ್ತುಳಿತಕ್ಕೊಳಗಾಗಿ ನರಳೋ ಕನಸುಗಳ ಖಬರಿರೋದಿಲ್ಲ. ಹಾಗೆ ಥೇಟರು ಸೇರಿಕೊಂಡ ಚಿತ್ರಗಳ ಹಿಂದೆ ಎಷ್ಟು ಪರಿಶ್ರಮ, ಪಡಿಪಾಟಲುಗಳಿರುತ್ತವೆಂಬ ವಿಚಾರ ನಮ್ಮನ್ನು ತಾಕುವುದೇ ಇಲ್ಲ. ಕೌಟಿಲ್ಯ ಚಿತ್ರದ ನಿರ್ದೇಶಕ ಪ್ರಭಾಕರ ಶೇರಖಾನೆಯ ಬದುಕಿನ ಪುಟಗಳನ್ನೊಮ್ಮೆ ಗಮನಿಸಿದರೆ, ನೀವು ಯಾವ ಸಿನಿಮಾಗಳನ್ನೂ ನಗಣ್ಯವಾಗಿ ಕಾಣಲು ಸಾಧ್ಯವಾಗೋದಿಲ್ಲ. ಖಂಡಿತವಾಗಿಯೂ ಒಂದೊಳ್ಳೆ ಸಿನಿಮಾ ಎಂಬ ಸೂಚನೆ ಸಿಕ್ಕಾಗಲಾದರೂ ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ತೆರಳುತ್ತೀರಿ, ಆ ಸಿನಿಮಾ ಉಳಿದುಕೊಳ್ಳಲು ಅಳಿಲು ಸೇವೆ ಸಲ್ಲಿಸುವ ದೊಡ್ಡ ಮನಸು ಮಾಡುತ್ತೀರಿ…
ಪ್ರಭಾಕರ ಶೇರಖಾನೆ ಉತ್ತರಕರ್ನಾಟಕ ಸೀಮೆಯ ಗೋಕಾಕ್ನ ನಾಗನೂರು ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಅವರದ್ದು ರೈತಾಪಿ ಕುಟುಂಬ. ಸಿನಿಮಾ ಬಗ್ಗೆ ಅಲ್ಲಿಲ್ಲಿ ಕೇಳಿ, ನೋಡಿ ತಿಳಿದುಕೊಂಡಿರಬಹುದೇ ಹೊರತು, ಅದರ ಭಾಗವಾಗಬೇಕೆಂಬ ಕನಸು ಕಾಣುವ ಸ್ಥಿತಿಯೂ ಆ ಕುಟುಂಬಕ್ಕಿರಲಿಲ್ಲ. ಅಂಥಾ ಕುಟುಂಬದ ಕೂಸಾಗಿ ಹುಟ್ಟಿದ್ದ ಪ್ರಭಾಕರ್, ಆಡಿ ಬೆಳೆದದ್ದು, ಓದುವ ಮೂಲಕ ವಿಸ್ತಾರವಾದದ್ದೆಲ್ಲ ಆ ಪುಟ್ಟ ಹಳ್ಳಿಯಲ್ಲಿಯೇ. ಇಂಥಾ ಮನೆಯಲ್ಲಿ ಅದೃಷ್ಟವೆಂಬಂತೆ ಕಲೆಗೆ ಸಂಬಂಧಿಸಿದ ವಾತಾವರಣವಿತ್ತು. ಪ್ರಭಾಕರ್ರ ತಾತಾ ಡ್ರಾಮಾ ಕಲಾವಿದ ಹಾಗೂ ನಾಟಕದ ಮೇಸ್ಟ್ರಾಗಿದ್ದವರು. ಆದರೆ ಅದು ಮುಂದಿನ ತಲೆಮಾರಿನಲ್ಲಿ ಸಿನಿಮಾದತ್ತ ಕೈಚಾಚಿಕೊಳ್ಳುವಂಥಾ ಯಾವ ವಾತಾವರಣವೂ ಇರಲಿಲ್ಲ.
ಇಂಥಾ ಪರಿಸರದಲ್ಲಿ ಹುಟ್ಟಿ ಬೆಳೆದ ಪ್ರಭಾಕರ್ ಪಾಲಿಗೆ ಜಾನಪದ ಹಾಡುಗಳು ರಕ್ತಗತವಾಗಿಯೇ ಒಲಿದು ಬಂದಿದ್ದವು. ತಾತ ಪರಶುರಾಮ್ ನಾಟಕದ ಮೇಸ್ಟ್ರಾಗಿದ್ದುದರಿಂದಲೋ ಏನೋ, ಕಲೆ ಎಂಬುದು ಎಳವೆಯಲ್ಲಿಯೇ ಅವರನ್ನು ಎದೆಗಾನಿಸಿಕೊಂಡಿತ್ತು. ಆ ಕಾಲದಿಂದಲೇ ಅವರ ಪಾಲಿಗೆ ಶಂಕರ್ ನಾಗ್ ಎಂದರೆ ಪ್ರಾಣ. ಸಮಯ ಸಿಕ್ಕಾಗ ಮಿಸ್ ಮಾಡದೇ ಶಂಕರಣ್ಣ ಸಿನಿಮಾಗಳನ್ನು ನೋಡುತ್ತಾ, ಅವರ ಪಾತ್ರಗಳಿಂದ ಪ್ರಭಾವಿತರಾಗುತ್ತಾ ಸಾಗಿದ್ದ ಪ್ರಭಾಕರ್ಗೆ, ಆ ಹೊತ್ತಿನಲ್ಲಿಯೇ ನಿರ್ದೇಶಕನಾಗಬೇಕೆಂಬ ಆಸೆ ಮೊಳೆತುಕೊಂಡಿತ್ತು.
ಆ ಹಳ್ಳಿಯಲ್ಲಿಯೇ ಒಂದಷ್ಟು ಓದಿಕೊಂಡು, ಲೋಕಜ್ಞಾನ ದಕ್ಕುವ ಹೊತ್ತಿಗೆಲ್ಲ ದುಡಿದು ಸಂಸಾರದ ನೊಗ ಹೊರುವ ಜವಾಬ್ದಾರಿ ಅವರನ್ನು ಅರಸಿ ನಿಂತಿತ್ತು. ಇಂಥಾ ಹೊತ್ತಿನಲ್ಲಿ ತನ್ನ ಸಿನಿಮಾ ಕನಸಿನ ಕಥೆ ಹೇಳಿದರೆ ಮನೆಯ ದಿಕ್ಕಿನಿಂದ ಉಗಿತವಲ್ಲದೇ ಬೇರೇನೂ ಸಿಕ್ಕಲು ಸಾಧ್ಯವಿರಲಿಲ್ಲ. ಯಾರ ಬೆಂಬಲವಿಲ್ಲದಿದ್ದರೂ, ಅನಿವಾರ್ಯತೆಗಳು ಸಾವಿರವಿದ್ದರೂ ಅದೊಂದು ಘಳಿಗೆಯಲ್ಲಿ ಪ್ರಭಾಕರ್ ತನ್ನ ಬದುಕೇನಿದ್ದರೂ ಚಿತ್ರರಂಗಕ್ಕೇ ಸೀಮಿತವೆಂಬಂತೆ ದೃಡ ಸಂಕಲ್ಪ ಮಾಡಿಕೊಂಡಿದ್ದರು. ಆದರೆ ತಾನು ನಿರ್ದೇಶಕನಾಗಲೇ ಬೇಕೆಂಬ ಅಚಲ ಸಂಕಲ್ಪ ಮಾಡಿಕೊಂಡಿದ್ದರು. ಅಂಥಾ ಗುರಿಯೊಂದನ್ನು ಗಟ್ಟಿಯಾಗಿಸಿಕೊಂಡು ಉತ್ತರ ಕರ್ನಾಟದಿಂದ ಬೆಂಗಳೂರಿಗೆ ಹೊರಡಲನುವಾದ ಪ್ರಭಾಕರ್ಗೆ ಐಟಿ ಸಿಟಿಯಲ್ಲಿ ಉಳಿಯುವಂಥಾ ಯಾವ ಸೌಕರ್ಯವೂ ಇರಲಿಲ್ಲ.
ಹಾಗೆ ಸಿನಿಮಾ ಕನಸು ಹೊತ್ತು ಬೆಂಗಳೂರಿಗೆ ಬಂದಿಳಿದ ನಂತರದಲ್ಲಿ ಬದುಕೆಂಬುದು ಪ್ರಭಾಕರ್ ಪಾಲಿಗೆ ರೌರವ ನರಕ ತೋರಿಸಿತ್ತು. ಊರ ಕಡೆಯಿಂದ ಅದಾಗಲೇ ಬೆಂಗಳೂರು ಸೇರಿಕೊಂಡಿದ್ದವರನ್ನು ಸಂಪರ್ಕಿಸಿ, ರಿಕ್ವೆಸ್ಟ್ ಮಾಡಿಕೊಂಡು ರೂಮಲ್ಲುಳಿಯುತ್ತಲೇ ಅವರ ಯಾನ ಆರಂಭವಾಗಿತ್ತು. ಅಲ್ಲಿಂದಾಚೆಗೆ ದಿನಂಪ್ರತೀ ಕಂಠೀರವದವರೆಗೆ ನಡೆದುಕೊಂಡೇ ಹೋಗಿ, ಅಲ್ಲಿ ಚಿತ್ರೀಕರಣ ನಡೆಸುತ್ತಿದ್ದವರಲ್ಲಿ ಅವಕಾಶಕ್ಕಾಗಿ ಕೇಳಿಕೊಳ್ಳೋದೇ ಅವರ ಪಾಲಿನ ಕಸುಬಾಗಿತ್ತು. ಅದೆಷ್ಟೋ ಕಾಲ ಅವರಿಗೊಂದು ಅವಕಾಶವೇ ಸಿಗಲಿಲ್ಲ. ಹಾಗೆ ಕಂಠೀರವ ಸ್ಟೇಡಿಯಮ್ಮಿನಿಂದ ವಾಪಾಸು ನಡೆದುಕೊಂಡೇ ರೂಮಿನತ್ತ ಸಾಗುತ್ತಿದ್ದ ಪ್ರಭಾಕರ್ ಕಾಲು ಸೋತಾಗ ಒಂದೆಡೆ ಕುಳಿತು, ಅಲ್ಲಿಯೇ ಕಥೆ ಮತ್ತು ಡೈಲಾಗುಗಳನ್ನು ಬರೆದಿಟ್ಟುಕೊಳ್ಳುತ್ತಿದ್ದರಂತೆ. ಅದು ಸಾಧಿಸಿಯೇ ತೀರುವಂಥಾ ಪ್ರಖರ ಕಿಚ್ಚೊಂದು ಅವರೊಳಗೆ ಹೊತ್ತಿ ಉರಿಯುತ್ತಿದ್ದುದರ ಪರಿಣಾಮ!
ಹಾಗೆ ಅದೆಷ್ಟೋ ಕಾಲ ಅಂಡಲೆದ ಫಲವಾಗಿ ಅದೊಂದು ಘಳಿಗೆಯಲ್ಲಿ ಪ್ರಭಾಕರ್ ಪಾಲಿಗೆ ಅವಕಾಶ ಕೂಡಿ ಬಂದಿತ್ತು. ಹಾಗೆ ಸಿಕ್ಕ ಅವಕಾಶವನ್ನು ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಬಳಸಿಕೊಂಡಿದ್ದವರಿಗೆ ಗಾಳಿಪಟ, ಗೊಂಬೆಗಳ ಲವ್, ದಾದಾ ಈಸ್ ಬ್ಯಾಕ್, ನಾನು ಲವರ್ ಆಫ್ ಜಾನು ಮುಂತಾದ ಚಿತ್ರಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುವ ಅವಕಾಶ ಕೂಡಿ ಬಂದಿತ್ತು. ದಶಕಗಟ್ಟಲೆ ಹಾಗೆ ಪಳಗಿಕೊಂಡಿದ್ದ ಪ್ರಭಾಕರ್ ಪಾಲಿಗೆ, ಅಷ್ಟಾದರೂ ಸ್ವಂತದ್ದೊಂದು ರೂಮು ಮಾಡಿಕೊಳ್ಳುವ ಅವಕಾಶ ಕೂಡಿ ಬಂದಿರಲಿಲ್ಲ. ಗೆಳೆಯರ ರೂಮೇ ಅವರಿಗೆ ಆಸರೆಯಾಗಿತ್ತು. ಈ ನಡುವೆ ಹಣಕಾಸಿಗೆ ಅಡಚಣೆಯಾಗಿ ದಿನಗಟ್ಟಲೆ ಉಪವಾಸವಿರಬೇಕಾದ ಪರಿಸ್ಥಿತಿಯನ್ನೂ ಪ್ರಭಾಕರ್ ಎದುರಿಸಿದ್ದರು. ಅಂಥಾ ಹೊತ್ತಿನಲ್ಲಿ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಾ ಹೊಟ್ಟೆ ಹೊರೆದದ್ದೂ ಇದೆ!
ಗುರಿಯೆಂಬುದು ಸ್ಪಷ್ಟವಾಗಿಲ್ಲದೇ ಹೋಗಿದ್ದರೆ, ನಿರ್ದೇಶಕನಾಗಬೇಕೆಂಬ ಆಸೆ ಅಚಲವಾಗಿಲ್ಲದಿದ್ದರೆ, ಪ್ರಭಾಕರ್ ಅರ್ಧದಾರಿಯಿಂದಲೇ ವಾಪಾಸಾಗಬೇಕಿತ್ತು. ಅವರನ್ನು ಅವುಡುಗಚ್ಚಿ ಅಲ್ಲೇ ಉಳಿಯುವಂತೆ ಮಾಡಿದ್ದು ಒಳಿತಾಗುತ್ತದೆಂಬ ಭರವಸೆ ಮತ್ತು ಅವರ ಪ್ರತಿಭೆಯ ಮೇಲಿದ್ದ ಗಾಢವಾದ ನಂಬಿಕೆ. ಅದರ ಬಲದಿಂದಲೇ ಪ್ರಭಾಕರ್ ನೆಲೆಯೂರಿ ನಿಂತರು. ಒಂದಷ್ಟು ಅನುಭವ ಪಡೆದುಕೊಂಡು, ಪಟಾಗಿ ಕೂತು ಕಥೆಯನ್ನು ಸಿದ್ಧಪಡಿಸಿಕೊಂಡಿದ್ದರು. ಆದರೆ ನಿರ್ಮಾಪಕರನ್ನು ಹುಡುಕೋದೇ ದೊಡ್ಡ ಸವಾಲಾಗಿತ್ತು. ಅಂಥಾ ಹೊತ್ತಿನಲ್ಲಿ ಪ್ರಭಾಕರ್ಗೆ ಎದುರಾದವರು ವಿಜಯೇಂದ್ರ ಬಿ.ಎ. ಒಂದೊಳ್ಳೆ ಸಿನಿಮಾ ಮಾಡಬೇಕೆಂಬ ಕನಸು ಹೊಂದಿದ್ದ ವಿಜಯೇಂದ್ರ ಸಾವಧಾನದಿಂದಲೇ ಕಥೆ ಆಲಿಸಿದ್ದರು. ಅದರ ಗಟ್ಟಿತನ ನೋಡಿ ಮಾರು ಹೋದ ಅವರು, ಭಾರೀ ನಂಬಿಕೆಯಿಂದ ಹೊಸಬರಾದ ಪ್ರಭಾಕರ್ಗೆ ನಿರ್ದೇಶಕನಾಗೋ ಅವಕಾಶ ಕೊಟ್ಟಿದ್ದರು. ಈ ಮೂಲಕ ಪ್ರಭಾಕರ್ ಸ್ವತಂತ್ರ ನಿರ್ದೇಶಕರಾಗುವಂತಾಗಿತ್ತು.
ತನ್ನ ಮೇಲೆ ನಂಬಿಕೆಯಿಟ್ಟು ನಿರ್ಮಾಣ ಮಾಡಿದ ನಿರ್ಮಾಪಕರಿಗೆ ಮಾತ್ರವಲ್ಲ; ನಿರೀಕ್ಷೆಯಿಟ್ಟು ಬರುವ ಪ್ರತೀ ಪ್ರೇಕ್ಷಕರನ್ನು ಅಚ್ಚರಿಗೀಡು ಮಾಡುವಂತೆ, ಆವರಿಸಿಕೊಳ್ಳುವಂತೆ ಕೌಟಿಲ್ಯ ಮೂಡಿ ಬಂದಿದೆ ಎಂಬ ಭರವಸೆ ಪ್ರಭಾಕರ್ ಅವರಲ್ಲಿದೆ. ಗಾಂಧಿನಗರದ ಪಟ್ಟುಗಳಾಚೆಗೆ, ಈ ಕ್ಷಣಕ್ಕೂ ಹಳ್ಳಿಗಾಡಿನ ಮುಗ್ಧತೆಯನ್ನು ಧರಿಸಿಕೊಂಡಿರುವವರು ಪ್ರಭಾಕರ್. ಆ ವಿಧೇಯತೆ ಮತ್ತು ತನ್ನ ಪ್ರತಿಭೆಯ ಮೇಲಿಟ್ಟಿರುವ ಭರವಸೆಯೇ ಅವರನ್ನು ಇಲ್ಲಿತನಕ ಕರೆತಂದಿದೆ. ಅವರ ಪಾಲಿಗೆ ಕೌಟಿಲ್ಯ ಎಂಬುದು ಮಹತ್ವದ ತಿರುವು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶ ಕಾಣಲಿ. ಪ್ರಭಾಕರ್ ಕನ್ನಡ ಚಿತ್ರರಂಗದ ಮುಖ್ಯನಿರ್ದೇಶಕನಾಗಿ ನೆಲೆಕಾಣಲೆಂದು ಸಿನಿಶೋಧ ಹಾರೈಸುತ್ತದೆ!