ತನ್ನ ಸಮ್ಮೋಹಕ ಗಾಯನದಿಂದ ದೇಶ ವಿದೇಶಗಳಲ್ಲಿಯೂ ಹೆಸರುವಾಸಿಯಾಗಿರುವವರು ಅರಿಜಿತ್ ಸಿಂಗ್. ಪ್ರೇಮ, ವಿರಹ ಸೇರಿದಂತೆ ಎಲ್ಲ ಭಾವಗಳಿಗೂ ಸಾಥ್ ಕೊಡುವಂಥಾ ಹಾಡುಗಳ ಮೂಲಕವೇ ಮಿಲಿಯಾಂತರ ಅಭಿಮಾನಿಗಳನ್ನೂ ಅರಿಜಿತ್ ಸಿಂಗ್ ಪಡೆದುಕೊಂಡಿದ್ದಾರೆ. ಈವತ್ತಿಗೂ ವಿದೇಶಗಳಲ್ಲಿಯೂ ಭಾರೀ ಬೇಡಿಕೆ ಹೊಂದಿರುವ ಈ ಗಾಯಕನ ಹೊಸಾ ಹಾಡೊಂದಕ್ಕಾಗಿ ಹಾತೊರೆಯುವ ಮನಸುಗಳಿದ್ದಾವೆ. ಆತ ಹಾಡಿರುವ ಹಾಡುಗಳಲ್ಲಿ ಕಳೆದು ಹೋಗಿ ಮೈಮರೆಯುವ ಸಂಗೀತ ಪ್ರೇಮಿಗಳಿದ್ದಾರೆ. ಹೀಗೆ ಜನಪ್ರಿಯತೆಯ ಅಲೆಯಲ್ಲಿ ಮಿಂದೇಳುತ್ತಿರುವ ಅರಿಜಿತ್ ಸಿಂಗ್ ಇದೀಗ ಸಮಾಜಮುಖಿ ಕಾರ್ಯವೊಂದಕ್ಕೆ ಮುಂದಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅರಿಜಿತ್ ಸಿಂಗ್ ಇಂಗ್ಲಿಶ್ ಕಲಿಕಾ ಕ್ಲಾಸ್ಗಳನ್ನು ಆರಂಭಿಸಿ, ಆ ಮೂಲಕ ಅವಶ್ಯಕತೆ ಇರುವ ಯುವಕ ಯುವತಿಯರಿಗೆಲ್ಲ ದಾರಿ ದೀಪವಾಗುವಂಥಾ ನಿರ್ಧಾರವನ್ನು ಕೈಗೊಂಡಿದ್ದಾರೆ. ಇದಕ್ಕಾಗಿ ಮುರ್ಶಿದಾಬಾದ್ನ ಪ್ರಸಿದ್ಧ ನರ್ಸಿಂಗ್ ಕಾಲೇಜೊಂದನ್ನು ಸಂಪರ್ಕಿಸಿದ್ದಾರೆ. ಅರಿಜಿತ್ ಸಿಂಗ್ ಅವರ ಒಳ್ಳೆ ಉದ್ದೇಶವನ್ನು ಮನಗಂಡಿರುವ ಆ ಕಾಲೇಜಿನ ಆಡಳಿತ ಮಂಡಳಿಯವರು, ತಮ್ಮ ಕಾಲೇಜಿನ ಒಂದಷ್ಟು ಕೊಠಡಿಗಳನ್ನು ಬಿಟ್ಟುಕೊಡಲು ಒಪ್ಪಿಗೆ ಕೊಟ್ಟಿದ್ದಾರಂತೆ. ಅಂದಹಾಗೆ ಈ ಕೊಠಡಿಗಳಲ್ಲಿ ಸಂಜೆ ಆರರಿಂದ, ರಾತ್ರಿ ಒಂಬತ್ತರವರೆಗೆ ಇಂಗ್ಲಿಷ್ ಕ್ಲಾಸ್ಗಳನ್ನು ನಡೆಸಲು ಅರಿಜಿತ್ ಯೋಜನೆ ಹಾಕಿಕೊಂಡಿದ್ದಾರಂತೆ.
ಈವತ್ತಿಗೆ ಇಂಗ್ಲಿಶ್ ಎಂಬುದು ಸಮರ್ಥವಾದ ಸಂವಹನ ಮಾಧ್ಯಮವಾಗಿದೆ. ಆ ಭಾಷೆ ಲೀಲಾಜಾಲವಾಗಿ ಬರೋದಿಲ್ಲ ಎಂಬ ಕಾರಣದಿಂದಲೇ ಅದೆಷ್ಟೋ ಹಳ್ಳಿ ಹುಡುಗ ಹುಡುಗಿಯರು ಅವಕಾಶ ವಂಚಿತರಾಗಿದ್ದಾರೆ. ಪ್ರಾದೇಶಿಕ ಮಾಧ್ಯಮದಲ್ಲಿ ಓದಿ, ಇಂಗ್ಲಿಶ್ ಮಾತಾಡಲು ಪ್ರಯಾಸ ಪಡುವು ಯುವಕ ಯುವತಿಯರಿಗೆ ಈ ಕ್ಲಾಸುಗಳು ವರದಾನವಾಗಲಿವೆ. ಒಂದು ವೇಳೆ ಕೆಲಸ ಮಾಡುತ್ತಿದ್ದರೂ ಅಂಥವರಿಗೆ ಕೆಲಸ ಮುಗಿಸಿಕೊಂಡು ತರಗತಿಗೆ ಹಾಜರಾಗಲು ಅರಿಜಿತ್ ಅವಕಾಶ ಕಲ್ಪಿಸಿದ್ದಾರೆ. ತನ್ನ ಬ್ಯುಸಿ ಕೆಲಸ ಕಾರ್ಯಗಳ ನಡುವೆಯೂ ಇಂಥಾದ್ದೊಂದು ಸಮಾಜಮುಖಿ ಕೆಲಸದಲ್ಲಿ ಭಾಗಿಯಾದ ಅರಿಜಿತ್ ನಿಜಕ್ಕೂ ಅಭಿನಂದನಾರ್ಹರು.