ಪ್ರಧಾನಿ ನರೇಂದ್ರ ಮೋದಿ ದರ್ಬಾರಿನಲ್ಲಿ ಪ್ರಜಾಪ್ರಭುತ್ವದ ಅಸಲೀ ಆಶಯಗಳು ಮಣ್ಣುಪಾಲಾಗುತ್ತಿವೆ ಅಂತೊಂದು ಆರೋಪ ದೇಶವ್ಯಾಪಿ ಕೇಳಿ ಬರುತ್ತಿದೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷದಷ್ಟೇ ಪ್ರತಿಪಕ್ಷಗಳ ಅವಶ್ಯಕತೆಯೂ ಇದೆ. ಪ್ರತಿಪಕ್ಷಗಳು ದುರ್ಬಲಗೊಂಡರೆ, ಆಡಳಿತಪಕ್ಷ ಹಗ್ಗ ಕಡಿದ ಗೂಳಿಯಂತಾಗುತ್ತದೆ ಎಂಬುದು ವಾಸ್ತವ. ಸೂಕ್ಷ್ಮವಾಗಿ ಗಮನಿಸಿದರೆ, ಮೋದಿ ಪಟಾಲಮ್ಮು ವಿಪಕ್ಷಗಳನ್ನು ದುರ್ಬಲಗೊಳಿಸೋದನ್ನೇ ಪ್ರಧಾನ ಉದ್ದೇಶವಾಗಿಸಿಕೊಂಡಂತಿದೆ. ಈ ಪ್ರಕ್ರಿಯೆಗೆ ಬಿಜೆಪಿ ಅತ್ಯಂತ ಪರಿಣಾಮಕಾರಿಯಾಗಿ ಐಟಿ ಸೆಲ್ ಅನ್ನು ಬಳಸಿಕೊಳ್ಳುತ್ತಿದೆ. ಅದರ ಫಲವಾಗಿಯೇ ರಾಹುಲ್ ಗಾಂಧಿಯನ್ನು ಅಸಮರ್ಥ, ಪಪ್ಪು ಅಂತೆಲ್ಲ ಮೂದಲಿಸುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದೀಗ ರಾಹುಲ್ ಗಾಂಧಿಗೆ ಅಂಟಿಕೊಂಡಿರುವ ಪಪ್ಪು ಎಂಬ ಮೂದಲಿಕೆಯ ಬಗ್ಗೆ ಬಾಲಿವುಡ್ ನಟಿ ಸ್ವರ ಭಾಸ್ಕರ್ ಬಿಡುಬೀಸಾಗಿ ಮಾತಾಡಿದ್ದಾಳೆ.
ಎಲ್ಲರೂ ಕೂಡಾ ರಾಹುಲ್ ಗಾಂಧಿಯನ್ನು ಪಪ್ಪು ಅಂತ ಕರೆಯಲಾರಂಭಿಸಿದ್ದರು. ಈ ಮೂಲಕವೇ ರಾಜಕೀಯವಾಗಿ, ವ್ಯಕ್ತಿಗತವಾಗಿ ಅವರನ್ನು ಹಣಿಯಲು ಪ್ರಾರಂಭಿಸಿದ್ದರು. ಆದರೀಗ ಜನರಿಗೆ ಮೆಲ್ಲಗೆ ವಾಸ್ತವಾಂಶದ ಅರಿವಾಗುತ್ತಿದೆ. ಪಪ್ಪುವಿನ ಮೇಲೀಗ ಎಲ್ಲರಿಗೂ ನಂಬಿಕೆ ಮೂಡಿಕೊಂಡಿದೆ ಅನ್ನೋದು ಸ್ವರ ಭಾಸ್ಕರ್ ಮಾತಿನ ಸಾರಾಂಶ. ಮುಂದುವರೆದು ಮಾತಾಡಿರುವ ಸ್ವರ, ತಾನು ರಾಹುಲ್ ಗಾಂಧಿಯನ್ನು ಖುದ್ದಾಗಿ ಭೇಟಿಯಾಗಿ ಮಾತಾಡಿದ್ದಾಗಿಯೂ ಹೇಳಿಕೊಂಡಿದ್ದಾಳೆ. ಆ ಹಂತದಲ್ಲಿ ಅವರೊಬ್ಬ ಸಮರ್ಥ ಮತ್ತು ಬುದ್ಧಿವಂತ ಎಂಬುದು ಮನದಟ್ಟಾಯ್ತು ಎಂದೂ ಸ್ವರ ಭಾಸ್ಕರ್ ಹೇಳಿಕೊಂಡಿದ್ದಾಳೆ.
ಸ್ವರ ಭಾಸ್ಕರ್ ತನ್ನ ನೇರವಾದ ಮಾತುಗಳಿಂದ, ರಾಜಕೀಯ ನೆಲೆಗಟ್ಟಿನ ಅಭಿಪ್ರಾಯಗಳಿಂದ ಗಮನ ಸೆಳೆಯುತ್ತಿರುವ ನಟಿ. ಅತ್ತ ಕಂಗನಾ ಬಿಜೆಪಿ ಪರವಾಗಿ ಏಕಮುಖವಾಗಿ ಬ್ಯಾಟಿಂಗು ನಡೆಸುತ್ತಿದ್ದರೆ, ಇತ್ತ ಸ್ವರ ಭಾಸ್ಕರ್ ಸಮಚಿತ್ತದ ವಿಚಾರಗಳಿಂದ ಆಗಾಗ ಸುದ್ದಿಯಾಗುತ್ತಿರುತ್ತಾಳೆ. ಇಂಥಾ ಮಾತಾಡಿದಾಗೆಲ್ಲ ಭಕ್ತಗಣ ಆಕೆಯ ವಿರುದ್ಧ ತಿರುಗಿ ಬೀಳುತ್ತದೆ. ಇದೀಗ ರಾಹುಲ್ ಗಾಂಧಿ ಬಗ್ಗೆ ಆಕೆ ಹೊಮ್ಮಿಸಿರುವ ಅಭಿಪ್ರಾಯ ಕೂಡಾ ಒಂದು ಪಾಳೆಯಕ್ಕೆ ಉರಿ ತರಿಸಿದೆ. ಸಾಮಾಜಿಕ ಜಾಲತಾಣದ ಮೂಲಕ ಸ್ವರ ಭಾಸ್ಕರ್ಳನ್ನು ಗೇಲಿ ಮಾಡುವ ಪ್ರಯತ್ನಗಳೂ ವ್ಯಾಪಕವಾಗಿ ನಡೆಯುತ್ತಿವೆ.