ಎಲ್ಲರನ್ನೂ ಮರುಳಾಗಿಸಲಿದೆ ಮಾಯಾಜಾಲದ ಕಥೆ!
ಕನ್ನಡ ಚಿತ್ರರಂಗದಲ್ಲೀಗ ಹೊಸತನದ ಪರ್ವಕಾಲ ಆರಂಭವಾಗಿದೆ. ಒಂದಷ್ಟು ಅಡಚಣೆಗಳಾಚೆಗೂ ಇದೀಗ ಚಿತ್ರರಂಗ ಕಳೆಗಟ್ಟಿಕೊಂಡಿದೆ. ಕೊರೋನಾ ಕಂಟಕ ಕಾಡಿಸಿದರೂ ದೃತಿಗೆಡದೆ ತಯಾರಾದ ಒಂದಷ್ಟು ಭಿನ್ನ ಚಿತ್ರಗಳೀಗ ಬಿಡುಗಡೆಗೆ ತಯಾರಾಗಿ ನಿಂತಿವೆ. ಇದೇ ಹೊತ್ತಿನಲ್ಲಿ ಮತ್ತೊಂದಷ್ಟು ವಿಶಿಷ್ಟ ಕಥಾನಕದ ಸಿನಿಮಾಗಳು ಆರಂಭವಾಗುತ್ತಿವೆ. ಇತ್ತೀಚೆಗಷ್ಟೇ ಮುಹೂರ್ತ ಕಂಡಿರುವ ‘ಇತ್ಯಾದಿ’ ಎಂಬ ಚಿತ್ರ ಆ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇತ್ಯಾದಿ ಎಂಬುದೇ ಯಾವುದೋ ಹೊಸಾ ಹೊಳಹೊಂದರ ಆದಿಯಂತೆ ಧ್ವನಿಸೋದು ಅಚ್ಚರಿಯೇನಲ್ಲ. ಈ ಟೈಟಲ್ಲು ಕೇಳುತ್ತಲೇ ಪರಿಚಿತ ಭಾವವೊಂದು ಮೂಡಿಕೊಳ್ಳುತ್ತೆ. ಆದರೆ ಅದರಳಗಿನ ಕಥೆ ಮತ್ತು ಅದನ್ನು ನಿರೂಪಿಸ ಹೊರಟಿರುವ ರೀತಿಗಳೆಲ್ಲವೂ ಮಾಮೂಲಿ ಧಾಟಿಯದ್ದಲ್ಲ!
ಇದೇ ತಿಂಗಳ ಹತ್ತೊಂಬತ್ತನೇ ತಾರೀಕಿನಂದಿ ಇತ್ಯಾದಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಇದು ಯುವ ನಿರ್ದೇಶಕ ವಿಕಾಸ್ ನಾಗರಾಜ್ ಬಿ.ಎನ್ ಅವರ ಎರಡನೇ ಹೆಜ್ಜೆ. ಈ ಹಿಂದೆ ‘ಬೆಟ್ಟದಾಸೆ’ ಅಂತೊಂದು ಆರ್ಟ್ ಮೂವಿ ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದ ವಿಕಾಸ್, ಈ ಬಾರಿ ಸಸ್ಪೆನ್ಸ್ ಥ್ರಿಲ್ಲರ್, ಮಿಸ್ಟೀರಿಯಸ್ ಕಥಾನಕದೊಂದಿಗೆ ಇತ್ಯಾದಿಯ ಸಾರಥ್ಯ ವಹಿಸಿಕೊಂಡಿದ್ದಾರೆ. ಖ. ಯೋಗರಾಜ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೀಗ ತಯಾರಿ ಜೋರಾಗಿ ನಡೆಯುತ್ತಿದೆ. ಸದ್ಯಕ್ಕೆ ನವ ಪ್ರತಿಭೆ ಸಚಿನ್ ಹೋರೋ ಆಗಿ ನಿಕ್ಕಿಯಾಗಿದ್ದಾರೆ. ಅವರ ಇರುವಿಕೆ ಇರುವ ಒಂದು ಪೋಸ್ಟರ್ ಕೂಡಾ ಹೊರ ಬಂದಿದೆ. ಇನ್ನುಳಿದಂತೆ, ನಾಯಕಿ, ತಾರಾಗಣ ಮತ್ತು ತಾಂತ್ರಿಕ ವರ್ಗದ ಆಯ್ಕೆ ಕಾರ್ಯ ಭರದಿಂದ ಸಾಗುತ್ತಿದೆ.
ಮೂಲರ್ತ ಮೆಕ್ಯಾನಿಕಲ್ ಡಿಪ್ಲೊಮೋ ಮಾಡಿಕೊಂಡಿರುವ ವಿಕಾಸ್, ಚಿತ್ರದುರ್ಗದ ತುರುವನೂರು ಸೀಮೆಯವರು. ಆರಂಭ ಕಾಲದಿಂದಲೇ ನಟನೆ ಮತ್ತು ನಿರ್ದೇಶನದಲ್ಲಿ ಅತೀವ ಒಲವಿಟ್ಟುಕೊಂಡಿದ್ದ ಅವರು, ಗಟ್ಟಿ ಮನಸು ಮಾಡಿ ಕನಸಿನ ಹಾದಿಯನ್ನೇ ನೆಚ್ಚಿಕೊಂಡಿದ್ದರು. ಅದಕ್ಕಾಗಿ ಬೇಕಾದ ತಾಲೀಮು ನಡೆಸಲೆರಂದೇ ರಂಗಭೂಮಿಗೆ ಪ್ರವೇಶ ಮಾಡಿ, ನಟನಾಗಿ, ನಿರ್ದೇಶಕನಾಗಿ ಪಳಗಿಕೊಂಡಿದ್ದರು. ವಂದೇ ಮಾತರಂ ಲಲಿತಕಲಾ ಅಕ್ಯಾಡೆಮಿ, ರಂಗ ಬದುಕು, ಡ್ರಾಮಾಟ್ರಿಕ್ಸ್ ಮುಂತಾದ ತಂಡಗಳಲ್ಲಿ ಗುರುತಿಸಿಕೊಂಡಿದ್ದ ವಿಕಾಸ್, ಹಲಚವಾರು ತಂಡಗಳ ಭಾಗವಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗೆ ಅನುಬವ ದಕ್ಕಿಸಿಕೊಂಡು ಚಿತ್ರರಂಗದತ್ತ ಹೊರಳಿಕೊಂಡು, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸೇರಿದಂತೆ ಒಂದಷ್ಟು ಸಿನಿಮಾಗಳಿಗೆ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಪಾರ್ಟ್ಟೈಂ ರಾಬರ್ಸ್ ಎಂಬ ವೆಬ್ ಸೀರೀಸ್ನ ಭಾಗವಾಗಿದ್ದರು.
ಇಂಥಾ ಅನುಭವಗಳ ಆಧಾರದಲ್ಲಿ ಬೆಟ್ಟದಾಸೆ ಎಂಬ ಕಲಾತ್ಮಕ ಚಿತ್ರ ನಿರ್ದೇಶಿಸಿ ಮೆಚ್ಚುಗೆ ಪಡೆದುಕೊಂಡಿದ್ದ ವಿಕಾಸ್, ತೀರಾ ಭಿನ್ನವಾದ ಕಥೆಯೊಂದಿಗೆ ಇತ್ಯಾದಿಯ ಸಾರಥ್ಯ ವಹಿಸಿಕೊಂಡಿದ್ದಾರೆ. ಈ ಮೂಲಕ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನಡಿಯಲ್ಲಿ ಮಾಯಾಜಾಲದ ಕಥೆಯೊಂದನ್ನು ಹೇಳ ಹೊರಟಿದ್ದಾರೆ. ಕನ್ನಡದಲ್ಲಿ ಈವರೆಗೂ ಕಾಣಿಸದಂಥಾ ಸ್ವರೂಪದಲ್ಲಿ ಸ್ಕ್ರೀನ್ ಪ್ಲೇ ಅನ್ನು ಸಿದ್ಧಪಡಿಸಿಕೊಂಡೇ ಅಖಾಡಕ್ಕಿಳಿದಿದ್ದಾರೆ. ಆರಂಭದಿಂದ ಕಡೇಯವರೆಗೂ ಒಂದೇ ತೆರನಶಾದ ಓಘ ಹೊಂದಿರುವ, ಪ್ರೇಕ್ಷಕರನ್ನು ಬೇರ್ಯಾವುದೋ ಲೋಕದಲ್ಲಿ ವಿಹರಿಸುವಂತೆ ಫೀಲ ಮೂಡಿಸೀ ಮಹತ್ವಾಕಾಂಕ್ಷೆಯೊಂದಿಗೆ ವಿಕಾಸ್ ತಯಾರಿ ನಡೆಸಿದ್ದಾರೆ.
ಮುಂದಿನ ತಿಂಗಳು ಚಿತ್ರೀಕರಣ ಚಾಲೂ ಆಗಲಿದೆ. ಕಥೆಯ ಆಂತರ್ಯಕ್ಕೆ ತಕ್ಕಂತೆ ಚಿಕ್ಕಮಗಳೂರು ಮತ್ತು ಶೃಂಗೇರಿ ಭಾಗಗಳಲ್ಲಿ ಒಂದಿಡೀ ಚಿತ್ರದ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ. ಅಂದಹಾಗೆ, ಇಲ್ಲಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಘಟಿಸುವ ಕಥಾನಕವಿದೆ. ಅದರಲ್ಲಿ ಯಕ್ಷಗಾನ ಮುಂತಾದವುಗಳೂ ಹಾದು ಹೋಗುತ್ತವಂತೆ. ಮಂಗಳೂರು ಭಾಗದ ಭಾಷಾ ಸೊಗಡು ಹೊಂದಿರೋ ಇತ್ಯಾದಿ ಒಂದು ಭಿನ್ನ ಚಿತ್ರವಾಗಿ ನೆಲೆಗೊಳ್ಳುವ ಲಕ್ಷಣಗಳು ಕಾನಿಸುತ್ತಿವೆ. ಇದೀಗ ರಘು ಪಾಂಡೇಶ್ವರ್, ರಂಗಭೂಮಿ ಕಲಾವಿದ ವೀರೇಶ್ ಮುತ್ತಿನಮಠ, ಹಲವಾದು ಧಾರಾವಾಹಿಗಳಲ್ಲಿ ನಟಿಸಿರುವ ಕಲ್ಯಾಣಿ ಪ್ರದೀಪ್ ಮುಂತಾದವರು ತಾರಾಗಣಕ್ಕೆ ನಿಕ್ಕಿಯಾಗಿದ್ದಾರೆ. ಹೀರೋಯಿನ್ ಸೇರಿದಂತೆ ಉಳಿಕೆ ತಾರಾಗಣದ ಆಯ್ಕೆ ಕಾರ್ಯ ಚಾಲ್ತಿಯಲ್ಲಿದೆ. ಈ ಚಿತ್ರದ ನಿರ್ಮಾಪಕರಾದ ಯೋಗರಾಜ್ ಅವರೇ ಛಾಯಾಗ್ರಹಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ನಿರ್ದೇಶನ ವಿಭಾಗದಲ್ಲಿ ಅಭಿಷೇಕ್ ಗೌಡ, ರಾಘವೇಂದ್ರ ಆರ್ಸಿಬಿ, ಪ್ರದೀಪ್ ಪ್ರಿನ್ಸ್, ವೀರೇಶ್ ಮುತ್ತಿನಮಠ ಸಾಥ್ ಕೊಡಲಿದ್ದಾರೆ. ಇತ್ಯಾದಿಯ ಬಗ್ಗೆ ಇನ್ನೊಂದಷ್ಟು ಮಾಹಿತಿಗಳು ಸದ್ಯದಲ್ಲಿಯೇ ಜಾಹೀರಾಗಲಿದ್ದಾವೆ.