ಕನ್ನಡ ಚಿತ್ರರಂಗದ ಪಾಲಿಗಿದು ಹೊಸತನದ ಶಖೆಯೊಂದು ತೆರೆದುಕೊಂಡಿರುವ ಪರ್ವಕಾಲ. ಅದೇನೇನೋ ಸರ್ಕಸ್ಸು ನಡೆಸುತ್ತಾ, ಯುವ ಮನಸುಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿವೆ. ಹಾಗೆ ಬಂದವರು ಎಲ್ಲರೂ ತಿರುಗಿ ನೋಡುವಂತೆ ಸದ್ದನ್ನೂ ಮಾಡುತ್ತಿದ್ದಾರೆ. ಸದ್ಯ ಆ ರೀತಿಯದ್ದೊಂದು ಪಾಸಿಟಿವ್ ಟಾಕ್ ಕ್ರಿಯೇಟ್ ಮಾಡಿರುವ ಚಿತ್ರ ವಿಕಿಪೀಡಿಯಾ. ಈ ಚಿತ್ರದ ಮೂಲಕ ಯಶ್ವಂತ್ ನಾಯಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸಿನಿಮಾ ಮಾಯೆಯನ್ನು ತೀವ್ರವಾಗಿ ಹಚ್ಚಿಕೊಂಡು, ಬದುಕು ಬೇರೆಡೆಗೆ ವಗಾಯಿಸಿದಾಗಲೂ ಮತ್ತೆ ಗುರಿಯ ನೇರಕ್ಕೆ ಬಂದು ನಿಂತವರು ಯಶ್ವಂತ್. ಅವರ ಕನಸೆಲ್ಲವೂ ವಿಕಿಪೀಡಿಯಾ ಚಿತ್ರದ ಮೂಲಕ ನನಸಾಗುವ ಹಂತದಲ್ಲಿದೆ.
ಯಾವುದೇ ಕನಸಾದರೂ ವಾಸ್ತವಿಕವಾಗಿ ಅದನ್ನು ಎದುರುಗೊಳ್ಳಲು ಸಾಕಷ್ಟು ಸರ್ಕಸ್ಸು ನಡೆಸಬೇಕಾಗುತ್ತೆ. ತೀರಾ ಜಿದ್ದಿಗೆ ಬಿದ್ದಂತೆ ಬಂದ ಕಷ್ಟಗಳನ್ನೆಲ್ಲ ಎದೆಯೊಡ್ಡಿ ಹಿಮ್ಮೆಟ್ಟಿಸದಿದ್ದರೆ ಬದುಕು ಬೇರೆಲ್ಲೋ ಕಳೆದು ಹೋಗಿ ಬಿಡುವ ಅಪಾಯಗಳಿರುತ್ತವೆ. ಕನಸಿನ ಹಾದಿಯಲ್ಲಿ ಘಟಿಸುವ ಎಲ್ಲ ಅನಿರೀಕ್ಷಿತ ಘಟನಾವಳಿಗಳನ್ನೂ ಕೂಡಾ ಗುರಿಯ ನೇರಕ್ಕೆ ಪಳಗಿಸಿಕೊಳ್ಳುವ ವಿದ್ಯೆ ಕರಗತ ಮಾಡಿಕೊಳ್ಳದೇ ಹೋದರೆ ಗೆಲುವು ಅಕ್ಷರಶಃ ಮರೀಚಿಕೆಯಾಗಿ ಬಿಡುತ್ತದೆ. ಇದೆಲ್ಲವನ್ನೂ ಹಂತ ಹಂತವಾಗಿ ಅರ್ಥ ಮಾಡಿಕೊಂಡು ಒಂದೊಂದೇ ಮೆಟ್ಟಿಲುಗಳನ್ನು ಹತ್ತುತ್ತಾ ಬಂದಿರುವ ಯಶ್ವಂತ್ ಈಗಾಗಲೇ ಕಿರುತೆರೆ ಪ್ರೇಕ್ಷಕರ ಪಾಲಿಗೆ ಪರಿಚಿತರಾಗಿದ್ದಾರೆ. ಒಂದಷ್ಟು ಅಭಿಮಾನಿ ಬಳಗವನ್ನೂ ತನ್ನದಾಗಿಸಿಕೊಂಡಿದ್ದಾರೆ.
ಮೂಲತಃ ಹಾಸನದ ಸಿಂಗಾಪಟ್ಟಣದ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದವರು ಯಶ್ವಂತ್. ಆರಂಭದಿಂದಲೂ ತಾಯಿ ಪುಷ್ಪಲತಾರ ಆಸರೆಯಲ್ಲಿಯೇ ಬೆಳೆದು ಬಂದಿದ್ದ ಯಶ್ವಂತ್, ವಿದ್ಯಾಭ್ಯಾಸ ಪೂರೈಸಿಕೊಂಡಿದ್ದೆಲ್ಲವೂ ಆ ಪರಿಸರದಲ್ಲಿಯೇ. ಆ ಕಾಲದಿಂದದಲೇ ಯಶ್ವಂತ್ರೊಳಗೆ ನಾಯಕ ನಟನಾಗಿ ನೆಲೆ ನಿಲ್ಲಬೇಕೆಂಬ ಆಸೆ ಉತ್ಕಟವಾಗಿ ಮೊಳಕೆಯೊಡೆದುಕೊಂಡಿತ್ತು. ಆದರೆ ಅಮ್ಮನ ಪಾಲಿಗೆ ಮಗನ ಬಗ್ಗೆ ಬೇರೆಯದ್ದೇ ಕನಸಿತ್ತು. ಮಗ ಇಂಜಿನಿಯರ್ ಆಗಿ ನೆಲೆಯೂರಬೇಕೆಂಬ ಇರಾದೆ ಅಮ್ಮನದ್ದಾಗಿತ್ತು. ಒಬ್ಬಂಟಿಯಾಗಿ ತನ್ನ ಜೀವನ ರೂಪಿಸಿದ ಅಮ್ಮನ ಆಸೆ ಪೂರೈಸೋದೇ ಪರಮ ಗುರಿ ಎಂಬಂತೆ ಮುಂದುವರೆದಿದ್ದ ಯಶ್ವಂತ್ರನ್ನು ಸಿನಿಮಾ ಮಾಯೆ ಎಂಬುದು ಪ್ರತೀ ಹೆಜ್ಜೆಯಲ್ಲಿಯೂ ಸೆಳೆಯುತ್ತಲೇ ಬಂದಿತ್ತು.
ಹಾಗೆ ಇಂಜಿನಿಯರಿಂಗ್ ಮುಗಿಸಿಕೊಂಡಿದ್ದ ಯಶ್ವಂತ್ ಒಂದೊಳ್ಳೆಯ ಉದ್ಯೋಗವನ್ನು ಪಡೆದುಕೊಂಡಿದ್ದರು. ಅಲ್ಲಿಗೆ ಒಂದು ಹಂತಕ್ಕೆ ಅಮ್ಮನ ಕನಸನ್ನು ನನಸು ಮಾಡಿದಂತಾಗಿತ್ತು. ಆ ಹೊತ್ತಿನಲ್ಲಿ ಕೆಲಸ ಮಾಡುತ್ತಲೇ ತನ್ನಿಷ್ಟದ ನಟನೆಯನ್ನೂ ಸಂಭಾಳಿಸಿಕೊಂಡು ಹೋಗುವ ನಿರ್ಧಾರಕ್ಕೆ ಯಶ್ವಂತ್ ಬಂದಿದ್ದರು. ಹಾಗಂತ ಆ ಹಾದಿ ಅಷ್ಟು ಸಲೀಸಿನದ್ದೇನೂ ಆಗಿರಲಿಲ್ಲ. ಆದರೆ, ಅದೇನೇ ಕಷ್ಟ ಬಂದರೂ ತನ್ನ ಕನಸನ್ನು ನನಸಾಗಿಸಿಕೊಂಡೇ ತೀರುವ ಹಠ ಯಶ್ವಂತ್ರಲ್ಲಿತ್ತು. ೨೦೧೧ರ ಸುಮಾರಿಗೆ ಹೇಗೋ ಸರ್ಕಸ್ಸು ನಡೆಸಿ, ಜ್ಯೂನಿಯರ್ ಆರ್ಟಿಸ್ಟ್ ಅಸೋಸಿಯೇಷನ್ನಿನಲ್ಲಿ ಹೆಸರು ನೋಂದಾಯಿಸಿಕೊಂಡು, ಒಂದಷ್ಟು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದರು.
ಹಾಗೆ ಸಾಗಿ ಬಂದಿದ್ದ ಖುಷ್ವಂತ್ಗೆ ಉದಯ ಟೀವಿಯ ಮಹಾಭಾರತ ಧಾರಾವಾಹಿಯಲ್ಲಿ ಸಣ್ಣದೊಂದು ಪಾತ್ರ ಮಾಡುವ ಅವಕಾಶ ಒದಗಿ ಬಂದಿತ್ತು. ಅದಾಗಲೇ ಒಂದು ವರ್ಷ ಜ್ಯೂನಿಯರ್ ಆರ್ಟಿಸ್ಟ್ ಆಗಿದ್ದರೂ ಯಶ್ವಂತ್ ಪಾಲಿಗೆ ಮೊದಲ ಸಾರಿ ಡೈಲಾಗು ಹೇಳುವ ಸುಯೋಗ ಕೂಡಿ ಬಂದಿದ್ದು ಆ ಧಾರಾವಾಹಿಯ ಮೂಲಕವೇ. ಮನೆ ಕಡೆ ಕಷ್ಟವಿದ್ದುದರಿಂದ, ಸಿಕ್ಕಿದ್ದ ಐಬಿಎಂ ಕಂಪೆನಿಯ ಸಂಬಳ ಸಂಸಾರ ನಿರ್ವಹಣೆಗೆ ಸಾಕಾಗುತ್ತಿತ್ತು. ನಟನೆಯಲ್ಲಿ ಪಳಗಿಕೊಳ್ಳಬೇಕೆಂಬ ಆಸೆ ಇದ್ದರೂ, ತರಬೇತಿ ಶಾಲೆಗಳಲ್ಲಿ ಸಾವಿರಾರು ರೂಪಾಯಿ ಕೇಳೋದರಿಂದ ಅಲ್ಲಿಗೆ ದಾಖಲಾಗುವುದೂ ಸಾಧ್ಯವಿರಲಿಲ್ಲ. ಆದ್ದರಿಂದಲೇ ಸಿಕ್ಕ ಅವಕಾಶಗಳನ್ನು ಬಳಸಿಕೊಂಡೇ ನಟನಾಗಿ ರೂಪುಗೊಳ್ಳಬೇಕೆಂಬಂಥಾ ದೃಢ ನಿರ್ಧಾರಕ್ಕೆ ಯಶ್ವಂತ್ ಬಂದಿದ್ದರು.
ಹೀಗೆ ಸಾಗಿ ಬಂದಿದ್ದ ಖುಷ್ವಂತ್ಗೆ ಏಕಾಏಕಿ ಒಂದೊಳ್ಳೆ ಅವಕಾಶ ಸಿಕ್ಕಿತ್ತು. ಜೀ ಕನ್ನಡ ವಾಹಿನಿಗೆ ಒಂದೂರಲ್ಲಿ ರಾಜಾರಾಣಿ ಎಂಬ ಧಾರಾವಾಹಿ ನಿರ್ದೇಶನ ಮಾಡಲು ಮುಂದಾಗಿದ್ದ ರವಿ ಗರಣಿ ಆಡಿಷನ್ ಕರೆದಿದ್ದರು. ಆದದ್ದಾಗಲಿ ಅಂತ ಅದರಲ್ಲಿ ಪಾಲ್ಗೊಂಡಿದ್ದ ಯಶ್ವಂತ್ಗೆ ಒಂದೊಳ್ಳೆ ಪಾತ್ರವೇ ಸಿಕ್ಕಿತ್ತು. ಈ ಪಾತ್ರದ ಮೂಲಕವೇ ಮನೆ ಮಾತಾದ ಯಶ್ವಂತ್, ಆ ನಂತರ ಶಾಂತಂ ಪಾಪಂ, ಯಾರೇ ನೀ ಮೋಹಿನಿ, ಸತ್ಯಂ ಶಿವಂ ಸುಂದರಂ ಮುಂತಾದ ಧಾರಾವಾಹಿಗಳ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಸತ್ಯಂ ಶಿವಂ ಧರಾವಾಹಿಯ ಮೇಜರ್ ರೋಲಿನಲ್ಲಿ ಕಾಣಿಸಿಕೊಂಡಿದ್ದ ಅವರಿಗೆ ಇನ್ನು ಹೀರೋ ಆಗಬಹುದೆಂಬ ನಂಬಿಕೆ ಹುಟ್ಟಿಕೊಂಡಿತ್ತು. ಅದಾದ ಬಳಿಕೆ ಪರಿಚಿತರು, ಧಾರಾವಾಹಿಯ ಭಾಗವಾಗಿದ್ದವರೇ ನೀನ್ಯಾಕೆ ಪ್ರಯತ್ನಿಸಬಾರದು ಎಂಬಂಥಾ ಉತ್ತೇಜಕ ಮಾತುಗಳನ್ನಾರಂಭಿಸಿದ್ದರಿಂದ ಯಶ್ವಂತ್ ಗಂಭೀರವಾಗಿಯೇ ಅಣಿಗೊಳ್ಳಲಾರಂಭಿಸಿದ್ದರು.
ಈ ನಡುವೆ ಅಮರ್ ಎಂಬ ಕಿರುಚಿತ್ರವೊಂದನ್ನು ಯಶ್ವಂತ್ ರೂಪಿಸಿದ್ದರು. ಅದು ಮುಂಬೈ ಫೆಸ್ಟ್ನಲ್ಲಿ ಪ್ರದರ್ಶನಗೊಂಡು ಮೂರನೇ ಬಹುಮಾನ ಪಡೆದುಕೊಂಡಿತ್ತು. ಅದಾದ ನಂತರ ತಾವೇ ಮುಂದೆ ನಿಂತು ಕ್ರೌಡ್ ಫಂಡಿಂಗ್ ಮೂಲಕ ಸಿನಿಮಾ ನಿರ್ಮಾಣ ಮಾಡಿ ಹೀರೋ ಆಗಿ ಲಾಂಚ್ ಆಗಲು ಯಶ್ವಂತ್ ಶತಪ್ರಯತ್ನ ನಡೆಸಿದ್ದರು. ಅದರ ಫಲವಾಗಿಯೇ ವಿಕಿಪೀಡಿಯಾ ಚಿತ್ರವಿಂದು ಬಿಡುಗಡೆಗೆ ರೆಡಿಯಾಗಿದೆ. ಡ್ಯಾನ್ಸ್, ಫೈಟ್ ಸೇರಿದಂತೆ ಎಲ್ಲದರಲ್ಲಿಯೂ ಪಳಗಿಕೊಂಡಿರುವ ಯಶ್ವಂತ್ ಈ ಮೂಲಕ ಹೀರೋ ಆಗಿ ಆಗಮಿಸುತ್ತಿದ್ದಾರೆ. ಈ ಚಿತ್ರ ತನ್ನನ್ನು ನಾಯಕ ನಟನಾಗಿ ನೆಲೆಗಾಣಿಸುತ್ತದೆಯೆಂಬ ಗಾಢ ನಂಬಿಕೆಯೂ ಅವರಲ್ಲಿದೆ. ಅಂದಹಾಗೆ, ವಿಕಿಪೀಡಿಯಾ ಇದೇ ತಿಂಗಳ ೨೬ರಂದು ರಾಜ್ಯಾದ್ಯಂತ ತೆರೆಗಾಣಲಿದೆ.