ಈ ಪ್ರಕೃತಿಯ ಒಡಲಿನಲ್ಲಿ, ನದಿ, ಸಮುದ್ರಗಳ ಗರ್ಭದಲ್ಲಿ ಅದೆಂತೆಂಥಾ ಅಚ್ಚರಿಗಳಿವೆಯೋ ಹೇಳಲು ಬರುವುದಿಲ್ಲ. ಈ ಬಗ್ಗೆ ಒಂದು ದಿಕ್ಕಿನಿಂದ ಸಂಶೋಧನೆ, ಆದ್ಯಯನಗಳು ನಡೆಯುತ್ತಿರುವಾಗಲೇ, ಮತ್ತೊಂದು ಕಡೆಯಿಂದ ಅನಾಯಾಸವಾಗಿ ಚಿತ್ರವಿಚಿತ್ರವಾದ ಜೀವಿಗಳು ಧುತ್ತನೆ ಪ್ರತ್ಯಕ್ಷವಾಗುತ್ತವೆ. ಅದರಲ್ಲಿಯೂ ಕೆಲವೊಂದು ಜೀವಿಗಳ ಚಹರೆಗಳಂತೂ ತೀರಾ ಭಿನ್ನವಾಗಿರುತ್ತವೆ. ಊಹೆಗೂ ನಿಲುಕದಂತೆ ವಿಚಿತ್ರವಾಗಿರುತ್ತವೆ. ಸಾಮಾನ್ಯವಾಗಿ ಇಂಥ ಚಿತ್ರವಿಚಿತ್ರವಾದ ಜೀವರಾಶಿಗಳು ಪ್ರತ್ಯಕ್ಷವಾಗೋದು ಕಡಲ ತೀರಗಳಲ್ಲಿ. ಮೀನುಗಾರಿಕೆಯ ಸಂದರ್ಭದಲ್ಲಿ ಈ ಥದದ ಜೀವಿಗಳು ಆಗಾಗ ಕಾಣ ಸಿಗೋದಿದೆ. ರಷ್ಯಾ ದೇಶದ ಸಮುದ್ರದಲ್ಲಿಯೂ ಇದೀಗ ಅಂಥಾದ್ದೇ ಒಂದು ವಿಚಿತ್ರ ಏಡಿ ಪತ್ತೆಯಾಗಿದೆ.
ಏಡಿ ಅಂದಾಕ್ಷಣ ನಿಮ್ಮ ಮನಸಿನಲ್ಲಿ ಒಂದಷ್ಟು ಚಿತ್ರಗಳು ಮೂಡಿಕೊಳ್ಳುತ್ತವೆ. ಎರಡು ಆಕ್ರಮಣಕಾರಿ ಆಯುಧದಂಥಾ ಕೊಂಬು ಮತ್ತು ಒಂದಷ್ಟು ನೀಳ ಕಾಲುಗಳ ಜೀವಿ ಕಣ್ಣೆದುರು ಬರುತ್ತದೆ. ಆದರೆ ರಷ್ಯಾದ ಮೀನುಗಾರಿಕಾ ಹಡಗೊಂದರಲ್ಲಿ ಕಂಡ ಈ ಏಡಿ ಅಂಥಾ ಚಿತ್ರಣವನ್ನೇ ಅದಲು ಬದಲು ಮಾಡುವಂತಿದೆ. ಯಾಕೆಂದರೆ, ಯಾರಿಗೇ ಆದರೂ ನಂಬಲು ಕಷ್ಟವಾಗುವಂತೆ ಈ ಏಡಿಗೆ ಮನುಷ್ಯರಂತೆಯೇ ಹಲ್ಲುಗಳಿದ್ದಾವೆ!
ಪಶ್ಚಿಮ ರಶ್ಯಾದಲ್ಲಿನ ಮೀನುಗಾರಿಕಾ ಹಡಗೊಂದರಲ್ಲಿ ಇಂಥಾ ವಿಚಿತ್ರ ಏಡಿ ಪತ್ತೆಯಾಗಿದೆ. ಥೇಟು ಮನುಷ್ಯರಂಥಾದ್ದೇ ಹಲ್ಲುಗಳನ್ನು ಹೊಂದಿರುವ ಈ ಏಡಿ ರಷ್ಯಾದ ತುಂಬೆಲ್ಲ ಸಂಚಲನವನ್ನೇ ಸೃಷ್ಟಿಸಿತ್ತು. ಆ ನಂತರದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಈ ಸುದ್ದಿ ಜಾಗತಿಕ ಮಟ್ಟದಲ್ಲಿಯು ಹಬ್ಬಿಕೊಂಡಿತ್ತು. ನಮ್ಮ ಕರಾವಳಿಗಳಲ್ಲಿಯೂ ಕೂಡಾ ಆಗಾಗ ಇಂಥಾ ಜೀವಿಗಳು ಪತ್ತೆಯಾಗೋದಿದೆ. ಹಾಗೆ ಪತ್ತೆಯಾದಾಗ ಜೀವ ವಿಜ್ಞಾನಿಗಳು ಅವುಗಳ ಪೂರ್ವಾಪರಗಳನ್ನು ಸವಿವರವಾಗಿ ವಿವರಿಸುತ್ತಾರೆ. ಆದರೆ ರಷ್ಯಾದಲ್ಲಿ ಸಿಕ್ಕಿರುವ ಈ ವಿಚಿತ್ರ ಏಡಿಯ ಬಗ್ಗೆ ಇದೀಗ ಅಧ್ಯಯನಗಳು ನಡೆಯುತ್ತಿವೆ.