ದಕ್ಷಿಣ ಭಾರತೀಯ ಚಿತ್ರರಂಗದ ಯಶಸ್ವೀ ನಟಿ ಸಾಯಿಪಲ್ಲವಿ. ಪ್ರೇಮಂ ಚಿತ್ರದ ಮೂಲಕ ಚಿತ್ರಪ್ರೇಮಿಗಳಿಗೆ ಅಕ್ಷರಶಃ ಹುಚ್ಚು ಹಿಡಿಸಿದ್ದ ಮಲರ್ ಅವತಾರ ಇದೇ ಸಾಯಿ ಪಲ್ಲವಿಯದ್ದು. ಯಾವುದೇ ಎಕ್ಸ್ಪೋಸ್ ಮುಂತಾದ ಚೀಪ್ ಗಿಮಿಕ್ಕುಗಳಾಚೆಗೆ ನೈಜ ಪ್ರತಿಭೆಯಿಂದಲೇ ಮುನ್ನೆಲೆಗೆ ಬಂದ ಹೆಗ್ಗಳಿಕೆ ಈ ನಟಿಯದ್ದು. ಮಲೆಯಾಳಂ, ತೆಲುಗು ಮುಂತಾದ ಭಾಷೆಗಳಲ್ಲಿ ಪಸಿದ್ಧಿ ಪಡೆದಿರುವ ಈಕೆ ತಮಿಳುನಾಡಿನ ಪಾಲಿಗೂ ಫೇವರಿಟ್ ನಟಿ. ನಮ್ಮದೇ ಕರ್ನಾಟಕದಲ್ಲಿಯೂ ಈಕೆಯನ್ನು ಮನಸಾರೆ ಮೆಚ್ಚಿಕೊಂಡು ಆರಾಧಿಸುವವರಿದ್ದಾರೆ. ನಿಖರವಾಗಿ ಹೇಳಬೇಕೆಂದರೆ, ಸದಾ ಕಾಲವೂ ಹೊಸಾ ಬಗೆಯ ಪಾತ್ರಗಳಿಗೆ ತುಡಿಯುವ ಮನಃಸ್ಥಿತಿಯ ಸಾಯಿಪಲ್ಲವಿ, ಓರ್ವ ಪರಿಪೂರ್ಣ ಕಲಾವಿದೆ.
ಈ ಥರದ ನಟಿಯರು ಪ್ರತೀ ಹೆಜ್ಜೆಯಲ್ಲಿಯೂ ಮಹತ್ತರವಾದ ಪಾತ್ರಗಳನ್ನು ಧ್ಯಾನಿಸುತ್ತಾ ಸಾಗುತ್ತಾರೆ. ಈ ಕ್ಷಣಕ್ಕೂ ಸಾಯಿಪಲ್ಲವಿ ನಿರ್ವಹಿಸಿದ್ದ ಪಾತ್ರಗಳು ತಮಗೆ ಸಿಗಬಾರದಿತ್ತಾ ಅಂತ ಅದೆಷ್ಟೋ ನಟಿಯರು ಪರಿತಪಿಸುತ್ತಿರಬಹುದು. ಆದರೆ ಖುದ್ದು ಸಾಯಿಪಲ್ಲವಿಗೆ ಮತ್ಯಾರೋ ನಟಿಯರು ನಿಭಾಯಿಸಿದ ಪಾತ್ರಗಳ ಬಗ್ಗೆ ಮೋಹವಿದೆ. ಈ ಬಗ್ಗೆ ಆಕೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತಾಡಿದ್ದಾಳೆ. ಸೂಪರ್ ಹಿಟ್ ಚಿತ್ರಗಳಾದ ಪದ್ಮಾವತ್, ಬಾಜಿರಾವ್ ಮಸ್ತಾನಿಯಂಥಾ ಚಿತ್ರಗಳಲ್ಲಿ, ಅಂಥಾ ಪಾತ್ರಗಳಲ್ಲಿ ನಟಿಸಬೇಕೆಂಬುದು ಸಾಯಿಪಲ್ಲವಿಯ ಆಸೆಯಂತೆ. ಆ ಚಿತ್ರಗಳನ್ನು ನೋಡಿದ ಕ್ಷಣದಿಂದಲೇ ಆಕೆಯೊಳಗೆ ಅಂಥಾದ್ದೊಂದು ಆಸೆ ತೀವ್ರವಾಗಿ ಕಾಡುತ್ತಿದೆಯಂತೆ.
ಇಂಥಾ ಮನದಿಂಗಿತ ಹೊಂದಿರುವ ಸಾಯಿ ಪಲ್ಲವಿಗೆ ಅದಕ್ಕೆ ತಕ್ಕುದಾದಂಥಾ ಅವಕಾಶಗಳೇ ಅರಸಿ ಬರುತ್ತಿವೆ. ಇದೀಗ ಆಕೆ ದಕ್ಷಿಣ ಭಾರತೀಯ ಚಿತ್ರರಂಗದ ಟಾಪ್ನಟಿಯಾಗಿಯೂ ಗುರುತಿಸಿಕೊಂಡಿದ್ದಾಳೆ. ಸಾಮಾನ್ಯವಾಗಿ ಹೀಗೆ ಯಶಸ್ಸಿನ ಉತ್ತುಂಗದಲ್ಲಿರುವ ನಟ ನಟಿಯರು ತಮಗಿರುವ ಸಾಮಾಜಿಕ ಜವಾಬ್ದಾರಿಗಳನ್ನು ಮರೆತೇ ಬಿಟ್ಟಿರುತ್ತಾರೆ. ಆದರೆ ಸಾಯಿ ಪಲ್ಲವಿ ಎಂಥಾ ವಿರೋಧಗಳು ಎದುರಾದರೂ ಜೀವ ಪರವಾದ ನಿಲುವು ಹೊಂದುವ ಮೂಲಕವೂ ಮಹತ್ವದ ನಟಿಯಾಗಿ ದಾಖಲಾಗುತ್ತಾಳೆ. ಜಾತಿ ಧರ್ಮಗಳ ವಿಚಾರದಲ್ಲಿ ಒಬ್ಬರನ್ನೊಬ್ಬರು ಕೊಂದುಕೊಳ್ಳುವುದು ಸರಿಯಲ್ಲ ಅಂತ ಈಕೆ ನೀಡಿದೊಂದು ಹೇಳಿಕೆ ಬಲಪಂಥೀಯ ಮಿದುಳುಗಳಿಗೆ ಜ್ವರ ಹಿಡಿಸಿದೆ. ಅದೇನೇ ತೇಜೋವಧೆ ಮಾಡಲೆತ್ನಿಸಿದರೂ ತನ್ನ ನಿಲುವಿಗೆ ಬದ್ಧಳಾಗಿ ನಿಂತುಕೊಂಡ ಸಾಯಿಪಲ್ಲವಿ ನಿಜಕ್ಕೂ ಭಾರತೀಯ ಚಿತ್ರರಂಗದಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳುವ ಗುಣಲಕ್ಷಣಗಳನ್ನು ಹೊಂದಿದ್ದಾಳೆ.