ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ನಿರ್ದೇಶನದ ಚಾರ್ಲಿ ಚಿತ್ರ ಬಿಡುಗಡೆಗೊಂಡಿತ್ತಲ್ಲಾ? ಅದು ಮಾಡಿದ್ದ ಮೋಡಿ ಸಣ್ಣ ಮಟ್ಟದ್ದೇನಲ್ಲ. ಬಹುತೇಕ ಮಂದಿ ಅದನ್ನು ಮತ್ತೆ ಮತ್ತೆ ನೋಡಿ ಮರುಳಾದ ಕಥೆ ಕಣ್ಣಮುಂದಿದೆ. ಚಾರ್ಲಿ ನಂತರದಲ್ಲಿ ಅಂಥಾದ್ದೇ ಮೋಹ ಮೂಡಿಸೋ ಮತ್ತೊಂದು ಚಿತ್ರಕ್ಕಾಗಿ ಪ್ರೇಕ್ಷಕರು ಕಾದು ಕೂತಿದ್ದರು. ಆ ಕ್ಷಣದಲ್ಲಿ ಎಂಟ್ರಿ ಕೊಟ್ಟಿದ್ದು ವಿಲೋಕ್ ಶೆಟ್ಟಿ ನಿರ್ದೇಶನದ ಚೇಸ್. ಅಷ್ಟಕ್ಕೂ ಇದು ವರ್ಷಾಂತರಗಳ ಕಾಲದಿಂದಲೂ ಕುತೂಹಲವನ್ನು ಜತನದಿಂದ ಕಾಪಿಟ್ಟುಕೊಂಡು ಬಂದಿದ್ದ ಚಿತ್ರ. ಅದರ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಪ್ರಮಾಣದ ನಿರೀಕ್ಷೆಗಳಿದ್ದವು. ಒಂದಷ್ಟು ಅಮೋಘವಾದ ಕಲ್ಪನೆಗಳೂ ಇದ್ದವು. ಅಂಥಾ ಎಲ್ಲ ಕಲ್ಪನೆಗಳ ಪರಿಧಿಯಾಚೆಗೆ ಹರಡಿಕೊಂಡಿದ್ದ ಚೇಸ್, ಪ್ರೇಕ್ಷಕರ ಮುಂದೆ ಅವತರಿಸಿ ಅಚ್ಚರಿ ಮೂಡಿಸಿತ್ತು.
ಬಿಡುಗಡೆಗೊಂಡ ಕ್ಷಣದಿಂದಲೇ ಚೇಸ್ ಬಗ್ಗೆ ಒಳ್ಳೆ ಅಭಿಪ್ರಾಯಗಳು ಮೂಡಿಕೊಳ್ಳುತ್ತಾ ಬಂದಿದ್ದವು. ಗಟ್ಟಿಯಾದ ಕಥೆ, ಕ್ಷಣ ಕ್ಷಣವೂ ಕೌತುಕದ ದಿಕ್ಕಿನತ್ತ ಹೊರಳಿಕೊಳ್ಳುತ್ತಾ ಮುಂದುವರೆಯುವ ಚೇತೋಹಾರಿ ನಿರೂಪಣೆಯೊಂದಿಗೆ ಚೇಸ್ ಪ್ರತೀ ನೋಡುಗರಲ್ಲಿಯೂ ಥ್ರಿಲ್ಲಿಂಗ್ ಭಾವ ಮೂಡಿಸುವಲ್ಲಿ ಯಶಸ್ವಿಯಾಗಿತ್ತು. ಹೀಗೆ ನೋಡಿ ಬಂದ ಜನರ ಕಡೆಯಿಂದ ಹೊಮ್ಮಿಕೊಂಡಿದ್ದ ಸದಭಿಪ್ರಾಯಗಳೇ ಹೆಚ್ಚೆಚ್ಚು ಪ್ರೇಕ್ಷಕರು ಸಿನಿಮಾ ಮಂದಿರಗಳತ್ತ ನದೌಡಾಯಿಸುವಂತೆ ಮಾಡಿತ್ತು. ಈ ಕಾರಣದಿಂದಲೇ ಅಪರೂಪದ ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಕಥಾನಕದ ಚೇಸ್ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಾ ಮುಂದುವರೆಯುತ್ತಿದೆ. ಈ ಸಕಾರಾತ್ಮಕ ಪಲ್ಲಟಗಳು ಚಿತ್ರತಂಡವನ್ನೂ ಥ್ರಿಲ್ ಆಗಿಸಿರೋದು ಸತ್ಯ.
ಈ ಚಿತ್ರದಲ್ಲಿ ಈ ಸಮಾಜವನ್ನು ಕ್ಷಣ ಕ್ಷಣವೂ ಕಾಡುತ್ತಿರುವ, ಜನರನ್ನು ಕಿತ್ತು ತಿನ್ನುತ್ತಿರುವ ಜ್ವಲಂತ ಸಮಸ್ಯೆಯೊಂದರ ಸುತ್ತಾ ಕಥೆ ಸಾಗುತ್ತದೆ. ಅದನ್ನು ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ನಿರೂಪಣೆ ಮಾಡುವ ಮೂಲಕ ನಿರ್ದೇಶಕ ವಿಲೋಕ್ ಶೆಟ್ಟಿ ಗೆದ್ದಿದ್ದಾರೆ. ಇದರಲ್ಲಿ ಪ್ರಧಾನ ಪಾತ್ರ ನಿರ್ವಹಿಸಿರುವ ರಾಧಿಕಾ ನಾರಾಯಣ್ ಸೇರಿದಂತೆ ಎಲ್ಲ ಪಾತ್ರಗಳೂ ಕೂಡಾ ಪ್ರೇಕ್ಷಕರನ್ನು ಒಳಗಿಳಿದು ಕಾಡಿವೆ. ಒಟ್ಟಾರೆಯಾಗಿ, ಒಂದು ಅದ್ಭುತವಾದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ನೋಡಿದ ಖುಷಿಯನ್ನು ಚೇಸ್ ಕೊಡಮಾಡಿದೆ. ಈ ಮೂಲಕ ಅತೀವವಾದ ಸಿನಿಮಾ ಪ್ರೇಮದಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದ ಮನೋಹರ್ ಸುವರ್ಣರ ಶ್ರಮವೂ ಸಾರ್ಥಕಗೊಂಡಂತಾಗಿದೆ.
ಚೇಸ್ಗೆ ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ಸಾಥ್ ಕೊಟ್ಟಿದ್ದಾರೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅನಂತ್ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶನ, ಶ್ರೀ ಕ್ರೇಜಿಮೈಂಡ್ಸ್ ಸಂಕಲನ, ಅವಿನಾಶ್ ಎಸ್ ದಿವಾಕರ್ ಕಲಾ ನಿರ್ದೇಶನ, ಸುನೀಲ್ ಕಟಾಬು ಉಪ ನಿರ್ದೇಶನ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಶಿ ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನ, ವಿಜಯ ರಾಣಿ ಮತ್ತು ಸುಶಾಂತ್ ಪೂಜಾರಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಸುಂದರ್, ಸತೀಶ್ ಸಿದ್ಧಾರ್ಥ ಮಾಧ್ಯಮಿಕ, ಪ್ರಿಯಾ ಶಟಮರ್ಶನ್ ಮುಂತಾದವರ ತಾರಾಗಣವಿದೆ.