ಬಿಹಾರವೆಂಬುದು ಭಾರತದ ಅತ್ಯಂತ ಬಡ ರಾಷ್ಟ್ರ. ಆಳುವ ಮಂದಿಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇತ್ತೀಚಿನವರೆಗೂ ಅದೊಂದು ಶಾಪಗ್ರಸ್ತ ರಾಜ್ಯವಾಗಿಯೇ ಗುರುತಿಸಿಕೊಳ್ಳುತ್ತಾ ಬಂದಿದೆ. ನಮ್ಮ ರಾಜ್ಯವೂ ಸೇರಿದಂತೆ ಬೇರೆ ಬೇರೆಡೆಗಳಲ್ಲಿ ಅಲ್ಲಿನ ಮಂದಿ ಕಾರ್ಮಿಕರಾಗಿ ಹಂಚಿ ಹೋಗಿದ್ದಾರೆಂದರೆ ಅದಕ್ಕೆ ಕಾರಣ ಬಡತನವಲ್ಲದೇ ಬೇರೇನೂ ಅಲ್ಲ. ಅಂಥಾ ಬಡತನದ ಮೂಲವ್ಯಾವುದು ಅಂತ ಹುಡುಕಿ ಹೊರಟರೆ ಸಾಕಷ್ಟು ಕಾರಣಗಳು ಸಿಗುತ್ತವೆ. ರಕ್ಕಸ ರಾಜಕಾರಣಿಗಳೇ ವಿಲನ್ನುಗಳ ಸ್ಥಾನದಲ್ಲಿ ನಿಲ್ಲುತ್ತಾರೆ. ಇಂಥವರೆಲ್ಲರ ದೆಸೆಯಿಂದ ದರಿದ್ರ ಸ್ಥಿತಿಗೆ ಜಾರಿದ್ದ ಬಿಹಾರದಲ್ಲಿ ಸಹಜವಾಗಿಯೇ ಕಳ್ಳತನ, ದರೋಡೆ, ಕೊಲೆ ಸುಲಿಗೆಯಂಥಾದ್ದೂ ಮೇರೆ ಮೀರಿತ್ತು. ಇದೆಲ್ಲದರ ಮೂಲವಿದ್ದದ್ದು ಎಣ್ಣೆಯಲ್ಲಿ!
ಕುಡಿತದ ಚಟವೆಂಬುದು ಆ ಭಾಗದಲ್ಲಿ ಬಡತನದ ಬೆಂಕಿ ಮತ್ತಷ್ಟು ಧಗಧಗಿಸುವಂತೆ ಮಾಡಿತ್ತು. ಈ ಕುಡಿತದ ಚಟದಿಂದಲೇ ಅಲ್ಲಿನ ಎಷ್ಟೋ ಮಂದಿ ಬೀದಿಗೆ ಬಂದರು. ಇನ್ನೊಂದಷ್ಟು ಜನ ಮನೆಯ ಯಜಮಾನನೇ ಕುಡಿತದ ದಾಸನಾಗಿದ್ದರಿಂದ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದೆ, ಸಂಸಾರವನ್ನು ಸಂಭಾಳಿಸಲಾಗದೆ ನೇಣಿಗೆ ಶರಣಾದರು. ಈ ಕಾರಣದಿಂದಲೇ ವರ್ಷಗಳ ಹಿಂದೆ ಬಿಹಾರದಲ್ಲಿ ಮಧ್ಯಪಾನ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಯಾವಾಗ ಎಣ್ಣೆ ಬ್ಯಾನ್ ಆಯಿತೋ, ಆವಾಗಲೇ ಬಿಹಾರದ ತುಂಬೆಲ್ಲ ಕಳ್ಳಭಟ್ಟಿ ಮತ್ತು ಕದ್ದು ಲಿಕ್ಕರ್ ಮಾರಾಟ ಮಾಡೋ ಮಾಫಿಯ ವ್ಯವಸ್ಥಿತವಾಗಿಯೇ ಅಸ್ತಿತ್ವಕ್ಕೆ ಬಂದಿತ್ತು. ಇದನ್ನು ಹತ್ತಿಕ್ಕುವ ಸಲುವಾಗಿ ಬಿಹಾರ ಸರ್ಕಾರ ಕ್ರಮ ಕೈಗೊಂಡ ಪರಿಣಾಮವಾಗಿ ವರ್ಷದೊಪ್ಪತ್ತಿನಲ್ಲಿಯೇ ಈ ಕಾನೂನು ಉಲ್ಲಂಘಿಸಿದ ಸಲುವಾಗಿ ಅರವತ್ತು ಸಾವಿರ ಮಂದಿ ಅರೆಸ್ಟಾಗಿದ್ದಾರೆ.
ಹಾಗೆ ನೋಡಿದರೆ, ಈ ಅರವತ್ತು ಸಾವಿರ ಮಂದಿ ಈ ವರ್ಷದ ಜನವರಿ ತಿಂಗಳಿಂದ ಜೂನ್ ವರೆಗಿನ ಅವಧಿಯಲ್ಲಿ ಅರೆಸ್ಟಾಗಿದ್ದಾರೆ. ಈ ಸಂಖ್ಯೆ ಇನ್ನೂ ಏರುಗತಿ ಕಾಣುತ್ತಲೇ ಸಾಗುತ್ತಿದೆ. ಯಾಕೆಂದರೆ ಕಲಿತ ಚಟ ಬಿಡಲಾಗದೆ ವಿಲಗುಡುತ್ತಿರುವ ಜನರಿಗೆ ಮಾಫಿಯಾ ಮಂದಿ ಮದ್ಯವನ್ನು ಅದು ಹೇಗೋ ಸರಬರಾಜು ಮಾಡುತ್ತಿದ್ದಾರೆ. ಇಂಥವರೂ ಸೇರಿ, ಕುಡುಕರನ್ನೂ ಒಳಗೊಂಡಂತೆ ಅರವತ್ತು ಸಾವಿರ ಮಂದಿಯೀಗ ಅಂದರ್ ಆಗಿದ್ದಾರೆ. ಬಿಹಾರ ಸರ್ಕಾರ ಇಂಥಾ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಹೇಗಾದರೂ ಮಾಡಿ ಮದ್ಯಪಾನ ಚಟದಿಂದ ಜನರನ್ನು ಹೊರತರೋದಕ್ಕೆ ಹರಸಾಹಸ ಮಾಡುತ್ತಿದೆ.