ಕೆಲ ನಟ ನಟಿಯರ ಪಾಲಿಗೆ ನಸೀಬೆಂಬುದು ಕೈ ಕೊಡುತ್ತದೋ, ತಪ್ಪು ನಿರ್ಧಾರಗಳೇ ಅಂಥಾದ್ದೊಂದು ಸ್ಥಿತಿ ತಂದಿಡುತ್ತವೋ ಗೊತ್ತಿಲ್ಲ; ಅಂಥವರು ಬೆಳೆದು ನಿಲ್ಲುತ್ತಾರೆಂಬಂಥಾ ನಂಬಿಕೆ ಹುಟ್ಟಿಸಿ ಹೇಳ ಹೆಸರಿಲ್ಲದಂತೆ ಮರೆಯಾಗಿ ಬಿಡುತ್ತಾರೆ. ಅಂಥವರ ಸಾಲಿನಲ್ಲಿ ನಿಧಿ ಸುಬ್ಬಯ್ಯ ಕೂಡಾ ಸೇರಿಕೊಳ್ಳುತ್ತಾಳೆ. ಮೂಲತಃ ಮಾಡೆಲಿಂಗ್ ಕ್ಷೇತ್ರದಿಂದ ಆಗಮಿಸಿ, ಫೇರ್ ಆಂಡ್ ಲವ್ಲಿ ಜಾಹೀರಾತಿನ ಮೂಲಕ ಪರಿಚಯಗೊಂಡಿದ್ದ ಈಕೆಗೆ ಆರಂಭ ಕಾಲದಿಂದಲೂ ನಸೀಬು ಕೈಕೊಡುತ್ತಾ ಬಂದಿತ್ತು. ನಟಿಯಾಗಿ ನೆಲೆ ನಿಲ್ಲಲು ತಿಣುಕಾಡುತ್ತಲೇ ಮರೆಯಾಗಿದ್ದ ಈಕೆಯನ್ನು ಬಿಗ್ ಬಾಸ್ ಶೋ ಅಲ್ಲದೇ ಹೋಗಿದ್ದರೆ ಜನ ಮರೆತೇ ಬಿಡುತ್ತಿದ್ದರೇನೋ. ಅಂತೂ ಆ ಶೋನ ಪರಿಣಾಮವಾಗಿಯೇ ನಿಧಿಯ ವೃತ್ತಿ ಬದುಕು ಸೆಕೆಂಡ್ ಇನ್ನಿಂಗ್ಸ್ನತ್ತ ಹೊರಳಿಕೊಂಡಂತಿದೆ!
ಬಿಗ್ ಬಾಸ್ ಶೋನ ನಂತರ ನಿಧಿ ಒಂದಷ್ಟು ಸಿನಿಮಾಗಳಲ್ಲಿ ಅವಕಾಶಗಳನ್ನು ಪಡೆಯಬಹುದೆಂಬ ನಿರೀಕ್ಷೆಯಿತ್ತು. ಆದರೆ ಅತ್ತಲಿಂದ ಅದಕ್ಕೆ ಪೂರಕವಾದ ಯಾವ ಸುದ್ದಿಯೂ ಬಂದಿರಲಿಲ್ಲ. ಕಡೆಗೂ ಬಿಗ್ಬಾಸ್ ಶೋನ ಮತ್ತೊಂದು ಸೀಜನ್ನು ಶುರುವಾಗುತ್ತಿರುವ ಈ ಹೊತ್ತಿನಲ್ಲಿ ನಿಧಿ ಕಡೆಯಿಂದ ಶುಭ ಸುದ್ದಿಯೊಂದು ಹೊರಬಿದ್ದಿದೆ. ಅದರನ್ವಯ ಹೇಳೋದಾದರೆ, ಆಕೆ ಉಪೇಂದ್ರ ನಿರ್ದೇಶನ ಮಾಡಿ ನಾಯಕನಾಗಿ ನಟಿಸುತ್ತಿರುವ ಚಿತ್ರದ ಪ್ರಧಾನ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾಳಂತೆ. ಖುದ್ದು ಉಪ್ಪಿಯೇ ಆ ಪಾತ್ರಕ್ಕೆ ನಿಧಿಯನ್ನು ಆಯ್ಕೆ ಮಾಡಿ ಆಕೆಗೆ ಫೋನಾಯಿಸಿದ್ದರಂತೆ. ಗೋವಾ ಪ್ರವಾಸಕ್ಕೆ ಹೊರಟು ನಿಂತಿದ್ದ ನಿಧಿ, ಇಂಥಾದ್ದೊಂದು ಸರ್ಪ್ರೈಸಿಂಗ್ ಆಫರ್ ಸಿಕ್ಕಿದ್ದನ್ನು ಕಂಡು ಥ್ರಿಲ್ ಆಗಿ ಅರ್ಧದಿಂದಲೇ ವಾಪಾಸಾಗಿದ್ದಾಳಂತೆ.
ಈಗಾಗಲೇ ನಿಧಿ ಒಂದಷ್ಟು ಚಿತ್ರೀಕರಣದಲ್ಲಿಯೂ ಪಾಲ್ಗೊಂಡಿದ್ದಾಳಂತೆ. ನಿಧಿ ಪಾಲಿಗೆ ರಿಯಲ್ ಸ್ಟಾರ್ ಉಪೇಂದ್ರರೊಂದಿಗೆ ತೆರೆ ಹಂಚಿಕೊಳ್ಳಬೇಕೆಂಬುದು ಬಹುಕಾಲದ ಕನಸಾಗಿತ್ತು. ಈ ಬಗ್ಗೆ ಸದಾ ಒಂದು ನಿರೀಕ್ಷೆಯನ್ನು ಚಾಲ್ತಿಯಲ್ಲಿಟ್ಟುಕೊಂಡು ಬಂದಿದ್ದ ಆಕೆಗೀಗ ತಾನೇ ತಾನಾಗಿ ಆ ಅವಕಾಶ ಕೂಡಿ ಬಂದಿದೆ. ಬಹುಮುಖ್ಯವಾದ ಆ ಪಾತ್ರ ತನ್ನ ನಸೀಬು ಬದಲಿಸಬಹುದೆಂಬ ನಿರೀಕ್ಷೆಯೂ ನಿಧಿಯೊಳಗಿದೆ. ಹೇಳಿ ಕೇಳಿ ಈ ಚಿತ್ರದ ಮೂಲಕ ಹಲವಾರು ವರ್ಷಗಳ ನಂತರ ಉಪ್ಪಿ ನಿರ್ದೇಶಕನಾಗಿ ಮರಳುತ್ತಿದ್ದಾರೆ. ಆ ಚಿತ್ರ ಹಿಟ್ ಆಗೇ ಆಗುತ್ತದೆಂಬ ನಂಬಿಕೆ ಅಭಿಮಾನಿ ವಲಯದಲ್ಲಿದೆ. ಆ ಗೆಲುವಿನ ಮೂಲಕ ನಿಧಿ ಪಾಲಿಗೆ ಅವಕಾಶಗಳ ಹೆಬ್ಬಾಗಿಲು ತೆರೆದುಕೊಂಡರೂ ಅಚ್ಚರಿಯೇನಿಲ್ಲ!
ಕೊಡಗಿನ ಈ ಹುಡುಗಿ ಆರಂಭ ಕಾಲದಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದ್ದಳು. ಆ ನಂತರದಲ್ಲಿ ಅಭಿಮಾನಿ ಎಂಬ ಚಿತ್ರದ ಮೂಲಕ ೨೦೦೯ರಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಳು. ಆದರೆ ಆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗೋತಾ ಹೊಡೆದಿತ್ತು. ಹಾಗೆ ಸಾಗಿ ಬಂದ ಈಕೆ ಆ ನಂತರವೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಳು. ಅಣ್ಣಾಬಾಂಡ್ ಚಿತ್ರದಲ್ಲಿಯೂ ಪಾತ್ರವೊಂದನ್ನು ನಿರ್ವಹಿಸಿದ್ದಳು. ಯೋಗರಾಜ್ ಭಟ್ಟರ ಪಂಚರಂಗಿ ಚಿತ್ರ ಈಕೆಗೆ ಒಂದಷ್ಟು ಮೈಲೇಜು ತಂದು ಕೊಟ್ಟಿದ್ದು ನಿಜ. ಈ ನಡುವೆ ಹಿಂದಿಗೂ ಹಾರಿ ಅಜಬ್ ಗಜಬ್ ಲವ್ ಸ್ಟೋರಿ ಎಂಬ ಚಿತ್ರದಲ್ಲಿ ನಟಿಸಿದ್ದ ನಿಧಿಗೆ ಅಲ್ಲಿಯೂ ಹೆಚ್ಚೇನೂ ಅವಕಾಶಗಳು ಸಿಕಲ್ಕಿರಲಿಲ್ಲ. ಆ ನಂತರ ಖಾಲಿ ಕೂತಿದ್ದ ನಿಧಿ ಕನ್ನಡ ಚಿತ್ರಪ್ರೇಮಿಗಳಿಂದ ಮರೆಯಾಗಿ ಪುರಾತನ ನಟಿ ಅನ್ನಿಸಿಕೊಂಡಿದ್ದಳು. ಈಗ ಉಪ್ಪಿ ಚಿತ್ರದ ಮೂಲಕ ಆಕೆಯ ಪುನರಾಗಮನವಾಗಿದೆ. ಈ ಬಾರಿ ನಿಧಿಯ ನಸೀಬು ಬದಲಾಗಬಹುದಾ ಅನ್ನೋದೇ ಸದ್ಯದ ಕುತೂಹಲ!