ವಿಲೋಕ್ ಶೆಟ್ಟಿ ನಿರ್ದೇಶನದ ಚೇಜ಼್ ಚಿತ್ರ ಈ ವಾರ ಬಿಡುಗಡೆಗೊಳ್ಳಲಿದೆ. ವರ್ಷಾಂತರಗಳ ಕಾಲ ಒಂದಿಡೀ ತಂಡ ಬಲು ಆಸ್ಥೆಯಿಂದ ರೂಪಿಸಿರುವ ಈ ಚಿತ್ರ ಪ್ರತೀ ಕೆಲಸ ಕಾರ್ಯಗಳನ್ನೂ ಮೈಲಿಗಲ್ಲಾಗುವಂತೆ ಮಾಡುತ್ತಾ ಟೀಸರ್ ಮೂಲಕವೇ ಅಗಾಧ ಪ್ರಮಾಣದಲ್ಲಿ ಕ್ರೇಜ್ ಹುಟ್ಟು ಹಾಕಿದೆ. ಪ್ರಚಾರದ ಪಟ್ಟುಗಳಾಚೆಗೆ ತನ್ನ ಹೂರಣ, ಗಟ್ಟಿತನದಿಂದಲೇ ಪ್ರೇಕ್ಷಕರನ್ನು ಆಕರ್ಷಿಸಿಕೊಂಡಿರೋ ಈ ಸಿನಿಮಾದಲ್ಲಿ ಚಿತ್ರವಿಚಿತ್ರವಾದ ಪಾತ್ರಗಳಿವೆ. ಅವೆಲ್ಲವುಗಳಿಗೆ ಪ್ರತಿಭಾವಂತ ಕಲಾವಿದರೇ ಜೀವ ತುಂಬಿದ್ದಾರೆ. ಚೇಜ಼್ ಎಂಬ ದೊಡ್ಡ ಕ್ಯಾನ್ವಾಸಿನ ಸಿನಿಮಾದಲ್ಲಿ ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳುವಂಥಾದ್ದೊಂದು ಪಾತ್ರ ನಿರ್ವಹಿಸಿರುವವರು ಅರ್ಜುನ್ ಯೋಗಿ. ಈ ಹಿಂದೆ ಕಿರುತೆರೆಯಲ್ಲಿ ಒಂದಷ್ಟು ಖ್ಯಾತಿ ಹೊಂದಿದ್ದ ಅಕ್ಕ ಧಾರಾವಾಹಿಯ ಅರ್ಜುನ್ ಎಂಬ ಪಾತ್ರದ ಮೂಲಕವೇ ಪ್ರಸಿದ್ಧಿ ಪಡೆದುಕೊಂಡಿದ್ದ ಯೋಗೀಶ್ ತನ್ನ ಮೂಲ ನಾಮಧೇಯವನ್ನು ಮೀರಿ ಆ ಪಾತ್ರವನ್ನೇ ಐಡೆಂಟಿಟಿ ಆಗಿಸಿಕೊಂಡಿರೋದೊಂದು ಸೋಜಿಗ!
ತುಮಕೂರಿನ ಅಳಾಲಸಂದ್ರದವರಾದ ಅರ್ಜುನ್ ಯೋಗಿ ಪಾಲಿಗೆ ಸಿನಿಮಾ ಎಂಬುದು ಶಾಲಾ ಕಾಲೇಜು ದಿನಗಳಲ್ಲಿಯೇ ಮೈ ಮನಸುಗಳನ್ನು ಆವರಿಸಿಕೊಂಡಿದ್ದ ಮಹಾ ಕನಸು. ಅದರ ಬೆಂಬತ್ತಿ ರಂಗಭೂಮಿಯ ಮೂಲಕ ತನ್ನ ಪ್ರತಿಭೆಗೆ ಸಾಣೆ ಹಿಡಿದುಕೊಂಡಿದ್ದ ಅರ್ಜುನ್ ಯಾವ ಗಾಡ್ ಫಾದರ್ಗಳ ನೆರಳೂ ಇಲ್ಲದೇ ನಡೆದು ಬಮದ ಹಾದಿ ನಿಜಕ್ಕೂ ಯಾರೇ ಆದರೂ ಮೆಚ್ಚಿಕೊಳ್ಳುವಂಥಾದ್ದು. ಪುನೀತ್ ರಾಜ್ ಕುಮಾರ್ ಅಭಿನಯದ ಅಣ್ಣಾಬಾಂಡ್ ಚಿತ್ರದಲ್ಲಿ ನೂರಾರು ಕಲಾವಿದರೊಂದಿಗೆ ಕಳೆದು ಹೋದಂಥಾದ್ದೊಂದು ಪಾತ್ರವೇ ಅರ್ಜುನ್ ಪಾಲಿಗೆ ಮೊದಲ ಅನುಭವ. ಆ ನಂತರ ಅಕ್ಕ ಧಾರಾವಾಹಿಯಲ್ಲಿ ಅವಕಾಶ ಗಿಟ್ಟಿಸಿಕೊಂಡ ಅವರ ಬಣ್ಣದ ಹೆಜ್ಜೆಗಳೀಗ ಚೇಜ಼್ ಮೂಲಕ ನಿರ್ಣಾಯಕ ಘಟ್ಟ ತಲುಪಿಕೊಂಡಿದೆ.
ನಿರ್ದೇಶಕ ವಿಲೋಕ್ ಶೆಟ್ಟಿ ಚೇಜ಼್ ಚಿತ್ರದ ಪ್ರತೀ ಪಾತ್ರಗಳಿಗೂ ಬಹಳಷ್ಟು ಶ್ರಮ ವಹಿಸಿಯೇ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದರಲ್ಲೊಂದು ಮುಖ್ಯ ಪಾತ್ರಕ್ಕೆ ಬಹಳಷ್ಟು ಹುಡುಕಾಟ ನಡೆಸಿ ಕಡೆಗೂ ನಿಕ್ಕಿಯಾಗಿಸಿದ್ದು ಅರ್ಜುನ್ ಯೋಗಿಯನ್ನ. ನಿರ್ದೇಶಕರ ನಿರೀಕ್ಷೆಗೂ ಮೀರಿ ಆ ಪಾತ್ರಕ್ಕೆ ಜೀವ ತುಂಬಿದ್ದ ಅವರು ಆ ಪಾತ್ರ ತನ್ನ ಬಣ್ಣದ ಬದುಕಿನ ನಿರ್ಣಾಯಕ ಘಟ್ಟವೆಂದು ಪರಿಭಾವಿಸಿದಂತೆ ಸಮರ್ಪಿಸಿಕೊಂಡು ನಟಿಸಿದ್ದಾರೆಂಬ ಮೆಚ್ಚುಗೆ ಚಿತ್ರತಂಡದಲ್ಲಿದೆ. ಈ ಸಿನಿಮಾದ ಪಾತ್ರವೇ ಲಾಗಾಯ್ತಿನಿಂದಲೂ ಕಾಪಿಟ್ಟುಕೊಂಡು ಬಂದಿರುವ ತನ್ನ ಕನಸನ್ನು ನನಸಾಗಿಸುತ್ತೆ, ಈ ಮೂಲಕವೇ ನಟನಾಗಿ ಹೊಸಾ ಆವೇಗದೊಂದಿಗೆ ಮುಂದುವರೆಯಲು ಅನುವು ಮಾಡಿ ಕೊಡುತ್ತದೆಯೆಂಬ ತುಂಬು ನಂಬಿಕೆ ಅರ್ಜುನ್ ಅವರಲ್ಲಿದೆ.
ಅರ್ಜುನ್ ಪಾಲಿಗೆ ನಟನೆ ಎಂಬುದು ತಂದೆಯಿಂದ ಬಂದ ಬಳುವಳಿ. ನಾಟಕ ಕಲಾವಿದರಾಗಿದ್ದ ತಂದೆಯ ಕಾರಣದಿಂದ ಆ ವಾತಾವರಣದಲ್ಲಿಯೇ ಬೆಳೆದು ಬಂದಿದ್ದ ಅರ್ಜುನ್ ಶಾಲಾ ಕಾಲೇಜು ದಿನಗಳಲ್ಲಿಯೇ ಓದನ್ನೂ ಮೀರಿದ ಕಲಾಸಕ್ತಿ ಹೊಂದಿದ್ದರು. ಆ ನಂತರದಲ್ಲಿ ಒಂದಷ್ಟು ಕಾಲ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದರೂ ಬಣ್ಣದ ಸೆಳೆತವೆಂಬುದು ಅವರನ್ನು ಗಾಂಧಿನಗರಕ್ಕೆ ತಂದು ನಿಲ್ಲಿಸಿತ್ತು. ಅವರಿಗೆ ಆರಂಭಿಕವಾಗಿ ಸಣ್ಣ ಮಟ್ಟದಲ್ಲಿ ಅವಕಾಶ ಸಿಕ್ಕಿದ್ದು ಅಣ್ಣಾ ಬಾಂಡ್ ಚಿತ್ರದಲ್ಲಿ. ಆ ಪಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದರೂ ಓರ್ವ ಕಲಾವಿದನಾಗಿ ಮೊದಲ ಸಲ ಅರ್ಜುನ್ ಕ್ಯಾಮೆರಾ ಮುಂದೆ ನಿಂತಿದ್ದದ್ದು ಅಣ್ಣಾಬಾಂಡ್ ಮೂಲಕವೇ.
ಆ ನಂತರದಲ್ಲಿ ಸಣ್ಣ ಪುಟ್ಟ ವಕಾಶಗಳನ್ನು ಪಡೆದುಕೊಂಡು ಮುಂದುವರೆಯುತ್ತಿದ್ದ ಅರ್ಜುನ್ ಯೋಗಿ ಪಾಲಿಗೆ ಅಕ್ಕ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿದ್ದೊಂದು ಪವಾಡ. ಹೆಚ್ಚೇನೂ ನಿರೀಕ್ಷೆ ಇಲ್ಲದೆಯೇ ಅಕ್ಕ ಧಾರಾವಾಹಿಯ ಅರ್ಜುನ್ ಎಂಬ ಪಾತ್ರವನ್ನು ಯೋಗಿ ಒಪ್ಪಿಕೊಂಡಿದ್ದರು. ಇಡೀ ಜಗತ್ತನ್ನು ಪ್ರೀತಿ ತುಂಬಿದ ಕಣ್ಣುಗಳಿಂದ ದಿಟ್ಟಿಸುವ, ಲವಲವಿಕೆಯ ಒರತೆಯಂಥಾ ಆ ಪಾತ್ರಕ್ಕೆ ಯೋಗಿ ಯಾವ ರೀತಿ ಜೀವ ತುಂಬಿದ್ದರೆಂದರೆ, ಅವರು ಎಂಟ್ರಿ ಕೊಟ್ಟ ನಂತರ ಧಾರಾವಾಹಿಯ ಟಿಆರ್ಪಿಯಲ್ಲಿ ಏರುಗತಿ ಕಂಡಿತ್ತು. ನೋಡ ನೋಡುತ್ತಲೇ ಅವರು ಹೆಂಗಳೆಯರ ಫೇವರಿಟ್ ನಟನಾಗಿ ಹೊರ ಹೊಮ್ಮಿದ್ದರು.
ಆ ಪಾತ್ರದ ಪ್ರಭೆಯಲ್ಲಿಯೇ ಅರ್ಜುನ್ ಅವರನ್ನು ನಿರ್ಣಾಯಕವಾಗಿ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರಲಾರಂಭಿಸಿದ್ದವು. ಮುಖ್ಯ ಪಾತ್ರಗಳಲ್ಲಿಯೇ ನಟಿಸೋ ಸದವಕಾಶವೂ ಅರ್ಜುನ್ ಯೋಗಿ ಪಾಲಿಗೆ ಸಿಗಲಾರಂಭಿಸಿತ್ತು. ಹಾಗೆ ಸಿಕ್ಕ ಪ್ರತೀ ಪಾತ್ರಗಳಿಗೂ ಶ್ರದ್ಧೆಯಿಂದ ನ್ಯಾಯ ಸಲ್ಲಿಸುತ್ತಾ ಸಾಗಿ ಬಂದಿರೋ ಅವರ ಪಾಲಿಗೆ ಚೇಜ಼್ ಚಿತ್ರದಲ್ಲಿ ಹಂಬಲದ ಪಾತ್ರವೇ ಸಿಕ್ಕಿದೆಯಂತೆ. ಈ ಸಿನಿಮಾದಲ್ಲಿ ಹಲವಾರು ಆಕರ್ಷಣೆಗಳಿದ್ದಾವೆ. ಅದರಲ್ಲಿ ಅರ್ಜುನ್ ನಿರ್ವಹಿಸಿರೋ ಪಾತ್ರವೂ ಒಂದಾಗಿ ಗುರುತಿಸಿಕೊಳ್ಳುವಷ್ಟು ಶಕ್ತವಾಗಿದೆಯಂತೆ. ಟೀಸರ್ ಮತ್ತು ಟ್ರೈಲರ್ಗಳಲ್ಲಿ ಅರ್ಜುನ್ ಯೋಗಿ ಪಾತ್ರದ ಸಣ್ಣ ಝಲಕ್ ಮಾತ್ರವೇ ಹಾದು ಹೋಗಿದೆ. ಅದರ ಅಸಲೀ ಚಹರೆ ಪ್ರತೀ ಪ್ರೇಕ್ಷಕರಿಗೂ ಇಷ್ಟವಾಗುವಂತಿದೆಯಂತೆ. ಅದರ ನಿಜವಾದ ಗಮ್ಮತ್ತು ದಿನದೊಪ್ಪತ್ತಿನಲ್ಲಿಯೇ ನಿಮ್ಮ ಮುಂದೆ ತೆರೆದುಕೊಳ್ಳಲಿದೆ.
ಈ ಚಿತ್ರವನ್ನು ಮನೋಹರ್ ಸುವರ್ಣ ನಿರ್ಮಾಣ ಮಾಡಿದ್ದಾರೆ. ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅನಂತ್ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶನ, ಶ್ರೀ ಕ್ರೇಜಿಮೈಂಡ್ಸ್ ಸಂಕಲನ, ಅವಿನಾಶ್ ಎಸ್ ದಿವಾಕರ್ ಕಲಾ ನಿರ್ದೇಶನ, ಸುನೀಲ್ ಕಟಾಬು ಉಪ ನಿರ್ದೇಶನ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಶಿ ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನ, ವಿಜಯ ರಾಣಿ ಮತ್ತು ಸುಶಾಂತ್ ಪೂಜಾರಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಸುಂದರ್, ಸತೀಶ್ ಸಿದ್ಧಾರ್ಥ ಮಾಧ್ಯಮಿಕ, ಪ್ರಿಯಾ ಶಟಮರ್ಶನ್ ಮುಂತಾದವರ ಬೃಹತ್ ತಾರಾಗಣವಿದೆ.