ಹಿಂದೂ, ಮುಸಲ್ಮಾನ, ಕ್ರೈಸ್ತ ಎಂಬೆಲ್ಲ ದರ್ಮದ ಪರಿಧಿಯಾಚೆಗೆ ಬೆಸೆದುಕೊಂಡಿರುವ ನೆಲ ನಮ್ಮದು. ಬಹುತ್ವ ಮತ್ತು ಅದನ್ನು ಆತ್ಮದಂತೆ ಹಬ್ಬಿಕೊಂಡಿರುವ ಭ್ರಾತೃತ್ವ ಈ ಮಣ್ಣಿನ ಗುಣ. ಒಂದು ಧರ್ಮದ ಹಬ್ಬವಾದಾಗ ಬೇರೆ ಧರ್ಮಿಯರೂ ಅದರಲ್ಲಿ ಪಾಲ್ಗೊಳ್ಳುವುದು, ಸಂಭ್ರಮಿಸೋದರಲ್ಲಿಯೇ ಈ ದೇಶದ ಐಕ್ಯತೆ ಇದೆ. ಆದರೆ ಎಲ್ಲ ಧರ್ಮಗಳಲ್ಲಿಯೂ ಪಿತಗುಡುತ್ತಿರುವ ಮತೀಯವಾದಿ ಹುಳುಗಳು ಈ ಈ ಒಗ್ಗಟ್ಟನ್ನು ಒಡೆಯೋ ಕೃತ್ಯಗಳಲ್ಲಿ ತಲ್ಲೀನರಾಗಿದ್ದಾರೆ. ಅದೆಲ್ಲದಕ್ಕಿರುವ ಏಕೈಕ ಕಾರಣ ರಾಜಕೀಯ. ಮತೀಯ ಸಂಘರ್ಷಗಳನ್ನೇ ಓಟಾಗಿ ಪರಿವರ್ತಿಸಿಕೊಳ್ಳುವ ವಿಕೃತ ಸೈತಾನರು ಮನಸು ಮನಸುಗಳ ನಡುವೆ ಬೆಂಕಿ ಹಚ್ಚುತ್ತಿದ್ದಾರೆ. ಇಂಥಾ ಒಳ ಮರ್ಮ ಅರಿಯದೆ, ಮೈಲೇಜು ಸಿಕ್ಕರೆ ಸಾಕೆಂಬ ಅತೃಪ್ತ ಆತ್ಮಗಳೊಂದಷ್ಟು ಈ ಬೆಂಕಿಯ ಸುತ್ತ ಕೊಳ್ಳಿ ದೆವ್ವಗಳಂತೆ ಲಾಗಾ ಹಾಕುತ್ತಿವೆ. ಅಂಥಾ ಕೊಳ್ಳಿದೆವ್ವಗಳ ಸಾಲಿಗೆ ಸಾರಾಸಗಟಾಗಿ ಸೇರಿಕೊಳ್ಳುವಾತ ಬಿಗ್ಬಾಸ್ ಖ್ಯಾತಿಯ ಅವಿವೇಕಿ ಪ್ರಥಮ್!
ಮೊನ್ನೆ ದಿನ ಹತ್ತನೇ ತಾರೀಕಿನಂದು ಮುಸ್ಲಿಂ ಬಾಂಧವರ ಬಕ್ರೀದ್ ಹಬ್ಬವಿತ್ತು. ಈ ಸಂದರ್ಭದಲ್ಲಿ ಮುಸ್ಲಿಮೇತರರನ್ನೂ ಮನೆಗೆ ಕರೆದು ಔತಣ ಕೊಡುವ ಸಂಪ್ರದಾಯ ಇಲ್ಲಿ ಲಾಗಾಯ್ತಿನಿಂದಲೂ ಜೀವಿಸಿದೆ. ಹಿಂದೂಗಳೂ ಕೂಡಾ ಯಾವುದೇ ಕಿಸುರಿಲ್ಲದೆ ಮುಸ್ಲಿಮರಿಗೆ ಹಬ್ಬದ ಶುಭಾಶಯ ಕೋರುತ್ತಾರೆ. ಅಲ್ಲಿ ಧರ್ಮಗಳ ಬೇಲಿ ಇರುವುದಿಲ್ಲ; ಕೇವಲ ಮನುಷ್ಯತ್ವದ ಹಾಜರಿಯಿರುತ್ತದಷ್ಟೆ. ಇಂಥಾ ಶುಭಾಶಯ ವಿನಿಮಯವೂ ಮಹಾ ಅಪರಾಧವೆಂಬಂಥಾ ವಾತಾವರಣವನ್ನು ಕೆಲವರು ಸೃಷ್ಟಿಸಿದ್ದಾರೆ. ಯಾವ ಸಿದ್ಧಾಂತ, ಮಣ್ಣು ಮಸಿಗಳೂ ಇಲ್ಲದ ಪ್ರಥಮ್ನಂಥಾ ಕಮಂಗಿಗಳು ವಾಚಾಮಗೋಚರವಾಗಿ ಊಳಿಡುವ ಮೂಲಕ ಒಡೆದಾಳುವ ಮಂದಿಗೆ ಸಹಕರಿಸುತ್ತಾರೆ. ಮೊನ್ನೆ ಬಕ್ರೀದ್ ಹಬ್ಬಕ್ಕೆ ಶುಭಾಶಯ ವಿನಿಮಯವಾದಾಗ ಕ್ಯಾಮೆ ಇಲ್ಲದೆ ಕೂತಿದ್ದ ಪ್ರಥಮ್ನ ಬುಡಕ್ಕೆ ಬ್ಯಾಡಗಿ ಮೆಣಸಿನ ಕಾಯಿ ಅರೆದು ಹಚ್ಚಿದಂತಾಗಿದೆ. ಈ ಉರಿಯಿಂದಲೇ ಟ್ವಿಟ್ಟರ್ ಮೂಲಕ ಕಾರಿಕೊಂಡಿದ್ದಾನೆ. ಅದರ ಹಿಂದಿರುವ ಕೊಳಕು ಮನಸ್ಥಿತಿ ಕಂಡ ಪ್ರಜ್ಞಾವಂತರೆಲ್ಲ ಪ್ರಥಮನ ಮುಸುಡಿಗೆ ಕ್ಯಾಕರಿಸಿ ಉಗಿದಿದ್ದಾರೆ.
‘ಇವತ್ತು ಏಕಾದಶಿ. ಬೇರೆ ಹಬ್ಬಕ್ಕೆ ವಿಶ್ ಮಾಡ್ತಾರೆ. ನಮ್ಮದನ್ನ ನಮ್ಮವರೇ ಮರೀತಾರೆ. ನಮ್ಮಜ್ಜಿ ನೆನ್ನೆಯಿಂದ ಮೂರು ಸಲ ಕಾಲ್ ಮಾಡಿ, ಲೋ ಇವತ್ತು ಅನ್ನ ತಿನ್ಬೇಡ, ಬರೀ ಫಲಾಹಾರ ಅಷ್ಟೇ ಅಂತ ಹೇಳಿ ಹೇಳಿ ನೆನಪಿಸಿದ್ರು. ನಿಮ್ಗೆ ಹೇಳೋದಿಷ್ಟೇ, ನಮ್ಮವರ್ಯಾರೂ ಬರಗೆಟ್ಟವರ ಥರ ಮಟನ್ ಚಿಕನ್ ಏನೂ ತಿನ್ಬೇಡಿ. ಬಾಯಿ ಮುಚ್ಕೊಂಡು ಹಣ್ಣು ಫಲಾಹಾರ ತಿಂದು ಮನೇಲಿ ಬಿದ್ದಿರಿ’ ಎಂಬುದು ಪ್ರಥಮನ ಫಲಾಹಾರ ಪ್ರಲಾಪ. ಅಷ್ಟಕ್ಕೂ ಈ ಏಕಾದಶಿಯಂದು ಕೆಲ ಮಂದಿ ವ್ರತ ಹಿಡಿಯುತ್ತಾರೆ. ಉಪವಾಸವಿರುತ್ತಾರೆ. ಅದಕ್ಕೆ ವಿಶ್ ಮಾಡೋದಕ್ಕೆ ಅದೇನು ಹಬ್ಬವಲ್ಲ. ಎಲ್ಲರಿಗೂ ಏಕಾದಶಿ ಆಚರಿಸಿ, ಫಲಾಹಾರವನ್ನಷ್ಟೇ ಸೇವಿಸಿ ಮನೇಲಿ ಬಿದ್ದಿರಿ ಅಂತ ಆರ್ಡರ್ ಮಾಡುವುದಕ್ಕೆ ಇವನ್ಯಾವ ಸೀಮೆಯ ದೊಣ್ಣೆ ನಾಯಕನೂ ಅಲ್ಲ.
ಪ್ರಥಮ್ನಂಥಾ ಕಮಂಗಿಗಳಿಗೆ ಒಂದು ಹೊತ್ತಿನ ಕೂಳು ಸಿಗದ ಜೀವಗಳ ತಳಮಳ ಅರ್ಥವಾಗೋದಿಲ್ಲ. ಇದೇ ಬಕ್ರೀದ್ನಂಥಾ ಸಂದರ್ಭದಲ್ಲಿ ಸಿಕ್ಕಿದ್ದೇ ಪುಣ್ಯ ಎಂಬಂತೆ ತಟ್ಟೆ ಹಿಡಿದು ನಿಂತ ಜೀವಗಳಿಗೆ ಯಾವ ಧರ್ಮ, ಇವನ ಏಕಾದಶಿಗಳ ಪರಿವೆ ಇರುವುದಿಲ್ಲ. ಅಷ್ಟಕ್ಕೂ ಬೇರೆ ಧರ್ಮಿಯರ ಹಬ್ಬಕ್ಕೆ ಹಿಂದೂ ಮಂದಿ ಶುಭ ಕೋರಿದರೆ ಪ್ರಥಮನ ಬುಡಕ್ಕೇಕೆ ಬೆಂಕಿ ಬೀಳುತ್ತದೋ ತಿಳಿಯುತ್ತಿಲ್ಲ. ಆದರೆ ಅದರ ಹಿಂದಿರೋದು ಸದಾ ಚಾಲ್ತಿಯಲ್ಲಿರಬೇಕೆಂಬ ಹುಚ್ಚು ಮಾತ್ರ. ಹೀಗೆ ಬರೆದರೆ ಒಂದು ವರ್ಗದ ಮಂದಿ ಉಘೇ ಅಂದು ಶೇರ್ ಮಾಡುತ್ತಾರೆ. ಮತ್ತೆ ಕೆಲ ಮಂದಿ ತುಪುಕ್ಕನೆ ಉಗಿಯುತ್ತಾರೆ. ಅದೇನೇ ಆದರೂ ಬಿಟ್ಟಿ ಪ್ರಚಾರ ಸಿಗುತ್ತದೆಂಬ ತೆವಲು ಪ್ರಥಮ್ನದ್ದು.
ಅಷ್ಟಕ್ಕೂ ಖಾಲಿ ತಪಲೆಗಳು ಮಾತ್ರವೇ ಒಳಗೆ ಕಸ ತುಂಬಿಕೊಂಡು ಈ ಥರದಲ್ಲಿ ಸದ್ದು ಮಾಡಲು ಆಗಾಗ ಸರ್ಕಸ್ಸು ನಡೆಸುತ್ತವೆ. ಒಂದು ವೇಳೆ ಪ್ರಥಮ ನಿಜಕ್ಕೂ ಪ್ರತಿಭಾವಂತನೇ ಆಗಿದ್ದರೆ, ಆತನಿಗೂ ಒಂದು ನಿಖರವಾದ ಗುರಿ ಇದ್ದಿದ್ದರೆ ಇಷ್ಟು ಹೊತ್ತಿಗೆಲ್ಲ ಆತ ತನ್ನನ್ನು ತಾನು ಫ್ರೂವ್ ಮಾಡಿಕೊಳ್ಳುತ್ತಿದ್ದ. ಅಂಥಾ ಅಮೋಘ ಅವಕಾಶ ಬಿಗ್ಬಾಸ್ ದೆಸೆಯಿಂದ ಆತನ ಮುಂದಿತ್ತು. ಆದರೆ ಅದರ ಪ್ರಭೆಯಲ್ಲಿ ಈ ಆಸಾಮಿ ಮಾಡಿದ್ದು ಬರೀ ಮಂಗಾಟಗಳನ್ನೇ. ನಟನಾಗಿ ಅವತರಿಸಿದ ಈತ ಕಪಿಬುದ್ಧಿಯ ಮ್ಯಾನರಿಸಂ ಅನ್ನೇ ನಟನೆ ಅಂದುಕೊಂಡ. ಈಗ ನಿರ್ದೇಶಕನಾಗಿ ಅದೇನೋ ಮಾಡುತ್ತೇನೆಂಬಂತೆ ಆಗಾಗ ಬಡಬಡಿಸುತ್ತಾನೆ. ಒಂದು ವೇಳೆ ನಿರ್ದೇಶಕನಾಗೋ ಕನಸು, ಕಸುವುಗಳಿದ್ದರೆ ಪ್ರಥಮ್ ಅದರಲ್ಲಿ ಸಾಬೀತುಪಡಿಸಿಕೊಳ್ಳಲಿ. ಅದು ಬಿಟ್ಟು ಹೀಗೆ ಮನಸುಗಳ ನಡುವೆ ಕೊಳ್ಳಿ ಇಡೋ ಕಸುಬನ್ನು ಇನ್ನಾದರೂ ಬಿಡಲಿ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ!