ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅರವತ್ತನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಶಿವಣ್ಣನಿಗೆ ಅರವತ್ತಾಯ್ತೆಂಬುದೇ ಕನ್ನಡಿಗರೆಲ್ಲರಿಗೂ ಅಚ್ಚರಿ. ಯಾಕೆಂದರೆ, ಅವರ ಹಾವಭಾವದಲ್ಲಿ, ದೈಹಿಕವಾಗಿ ಸೇರಿದಂತೆ ಯಾವುದರಲ್ಲಿಯೂ ಆದ ವಯಸ್ಸಿನ ಸುಳಿವು ಸಿಕ್ಕುವುದೇ ಇಲ್ಲ. ಈ ಕ್ಷಣಕ್ಕೂ ಯುವಕರನ್ನೇ ನಾಚಿಸುವಂತೆ ಆಕ್ಟಿವ್ ಆಗಿರುವ ಶಿವಣ್ಣನ ಎನರ್ಜಿ ಎಲ್ಲರಿಗೂ ಸ್ಫೂರ್ತಿ. ಯಾವುದೇ ಸ್ಟಂಟ್ ಇರಲಿ, ಅದೆಂಥಾದ್ದೇ ಸ್ಟೆಪ್ಸ್ ಇರಲಿ; ಶಿವಣ್ಣ ಯಾವುದಕ್ಕೂ ಅಂಜುವವರಲ್ಲ. ಒಂದು ಕಡೆಯಿಂದ ಲೆಕ್ಕ ಹಾಕುತ್ತಾ ಬಂದರೆ ಅವರು ಏನಿಲ್ಲವೆಂದರೂ ಇನ್ನೊಂದು ಮೂರ್ನಾಲಕ್ಕು ವರ್ಷಗಳಿಗಾಗುವಷ್ಟು ಬ್ಯುಸಿಯಾಗಿದ್ದಾರೆ. ಅದರ ನಡುವೆಯೂ ಈಗ ಶಿವಣ್ಣ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದಂದೇ ಈ ಹೊಸಾ ಚಿತ್ರ ಘೋಷಣೆಯಾಗಿ, ಅದರ ಬಗೆಗಿನ ಒಂದಷ್ಟು ವಿವರಗಳು ಜಾಹೀರಾಗಲಿವೆ.
ಶಿವರಾಜ್ ಕುಮಾರ್ ಯಂಗ್ ಆಂಡ್ ಎನರ್ಜಿಟಿಕ್ ಆಗಿರುವುದು ಮಾತ್ರವಲ್ಲ; ಸದಾ ಕಾಲವೂ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಗುಣವನ್ನೂ ಹೊಂದಿದ್ದಾರೆ. ಕಥೆ ಚೆಂದಗಿದ್ದರೆ, ಹೊಸತನದ ಕನಸು ಹೊಂದಿದ್ದರೆ ಅವರು ಹೊಸಬರ ನಿರ್ದೇಶನಕ್ಕೂ ಸೈ ಅಂದು ಬಿಡುತ್ತಾರೆ. ಅಂಥಾ ಮನಸ್ಥಿತಿ ಇಲ್ಲದೇ ಹೋಗಿದ್ದರೆ ಶಿವಣ್ಣ ಹೊಸತನದ ಪಾತ್ರಗಳಿಗೆ ಒಡ್ಡಿಕೊಂಡಿಕೊಂಡು, ಓರ್ವ ನಟನಾಗಿ ಹೊಸಾ ಮಗ್ಗುಲಿಗೆ ಹೊರಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವೇನೋ… ಆ ಮನಸ್ಥಿತಿಗೆ ತಕ್ಕುದಾಗಿ ಇದೀಗ ಹೊಸಾ ನಿರ್ದೇಶಕರೊಬ್ಬರು ಶಿವಣ್ಣನ ಸಿನಿಮಾದ ಸಾರಥ್ಯ ವಹಿಸಿಕೊಂಡಿದ್ದಾರೆ. ಕೊಟ್ರೆಶ್ ಎಂಬ ನವ ಪ್ರತಿಭೆ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ನಿರ್ದೇಶನ ವಿಭಾಗದಲ್ಲಿ ಹಲವಾರು ವರ್ಷಗಳಿಂದ ತಾಲೀಮು ನಡೆಸುತ್ತಾ ಬಂದಿರುಯವವರು ಕೊಟ್ರೇಶ್. ಆತ ಬಂಗಾರ ಸನ್ನಾಫ್ ಬಂಗಾರದ ಮನುಷ್ಯ ಚಿತ್ರದಲ್ಲಿಯೂ ಅಸೋಸಿಯೇಟ್ ಆಗಿ ಕಾರ್ಯ ನಿರ್ವಹಿಸಿದ್ದರು.
ಶಿವಣ್ಣನ ಬಗ್ಗೆ ಅಭಿಮಾನ ಹೊಂದಿರುವ ಕೊಟ್ರೇಶ್ ಪಾಲಿಗೆ ತಾನು ತನ್ನಿಷ್ಟದ ನಟನ ಸಿನಿಮಾ ಮೂಲಕವೇ ಸ್ವತಂತ್ರ ನಿರ್ದೆಶಕನಾಗ ಬೇಕೆಂಬುದು ಮಹಾ ಕನಸಾಗಿತ್ತು. ಅದಕ್ಕೆ ತಕ್ಕುದಾದ ಕಥೆಯನ್ನು ಬರೆದಿಟ್ಟುಕೊಂಡು, ಅದಕ್ಕೆ ಸಿನಿಮಾ ರೂಪ ಕೊಟ್ಟಿದ್ದ ಕೊಟ್ರೇಶ್ ಹಲವಾರು ದಿನಗಳಿಂದ ಕಾದು ಕೂತಿದ್ದರಂತೆ. ಕಡೆಗೂ ಅದನ್ನು ಶಿವಣ್ಣನ ಮುಂದಿಡುವ ಕಾಲ ಕೂಡಿ ಬಂದಿದೆ. ಅವರ ಕಡೆಯಿಂದ ಮೆಚ್ಚುಗೆ ಬೆರೆತ ಒಪ್ಪಿಗೆಯೂ ದಕ್ಕಿದೆ. ಈ ಚಿತ್ರ ಎಆರ್ಕೆ ಪ್ರೊಡಕ್ಷನ್ ಮತ್ತು ರುಬಿನ್ ರಾಜ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣಗೊಳ್ಳಲಿದೆ. ಈ ಸಿನಿಮಾ ಬಗ್ಗೆ ಖುದ್ದು ಶಿವಣ್ಣನಿಗೇ ತುಂಬಾ ಹೋಪ್ ಇದೆ. ದಿನವೊಂದು ಮಗುಚಿಕೊಂಡರೆ, ಈ ಸಿನಿಮ ಬಗ್ಗೆ ಮತ್ತಷ್ಟು ವಿಚಾರಗಳು ನಿಮ್ಮನ್ನೆದುರುಗೊಳ್ಳಲಿವೆ.