ಜಾತಿ, ಧರ್ಮ ಅಂತೆಲ್ಲ ದೊಂದಿ ಹಿಡಿದು ಹೊರಡೋರನ್ನು ಕಂಡು ಪ್ರಜ್ಞಾವಂತರೆಲ್ಲ ನಖಶಿಖಾಂತ ಉರಿದು ಬೀಳ್ತಾರಲ್ಲಾ? ಅದೇನು ಸುಮ್ಮನೆ ಶೋಕಿಗೆ ಹುಟ್ಟಿಕೊಳ್ಳೋ ಆಕ್ರೋಶವಲ್ಲ. ಅದರ ಹಿಂದಿರೋದು ಅಪ್ಪಟ ಮನುಷ್ಯತ್ವ. ಫ್ಯಾಸಿಸ್ಟ್ ಶಕ್ತಿಗಳ ಕೈಲಿರುವ ದೊಂದಿ ಮುಂದೊಂದು ದಿನ ಮನುಷ್ಯತ್ವದ ಬುಡಕ್ಕೇ ಬೆಂಕಿಯಿಡುತ್ತೆಂಬ ಸತ್ಯದಿಂದ ಹುಟ್ಟಿದ ಆಕ್ರೋಶವದು. ಧರ್ಮದ ಅಮಲು ಅದ್ಯಾವ ಮಟ್ಟಕ್ಕೆ ಮನುಷ್ಯನನ್ನು ಕ್ರೂರಿಯಾಗಿಸುತ್ತೆ, ಅದು ಕೊನೆಗೊಮ್ಮೆ ಯಾವ ಹಂತ ತಲುಪಿಕೊಳ್ಳುತ್ತೆ ಅನ್ನೋದಕ್ಕೆ ಅಫ್ಘಾನಿಸ್ತಾನಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಹತ್ತಾರು ವರ್ಷಗಳಿಂದ ಅಬ್ಬರಿಸುತ್ತಾ ಬಂದ ತಾಲಿಬಾನಿ ಉಗ್ರರು ಇದೀಗ ಸರ್ಕಾರವನ್ನೇ ತಮ್ಮದಾಗಿಸಿಕೊಂಡಿದ್ದಾರೆ. ಬೆನ್ನಲ್ಲಿ ಬಂದೂಕು ತಗುಲಿಸಿಕೊಂಡು ನಂಬಿಕೆ ಗಿಟ್ಟಿಸಿಕೊಳ್ಳೋ ಬಣ್ಣದ ಮಾತಾಡುತ್ತಿದ್ದಾರೆ. ಆದರೆ ಈ ತಾಲಿಬಾನಿಗಳ ಆಡಳಿತ ಎಂಥಾದ್ದಿರುತ್ತದೆಂಬ ಅಂದಾಜು ಇದೀಗ ಸ್ಪಷ್ಟವಾಗಿಯೇ ಸಿಕ್ಕಿಬಿಟ್ಟಿದೆ.
ತಾಲಿಬಾನ್ ಉಗ್ರರು ಇದುವರೆಗೆ ನಡೆಸಿರೋ ಅನಾಹುತಗಳು ಒಂದೆರಡಲ್ಲ. ಜೀವ ತೆಗೆಯೋದೆಂದ್ರೆ ಆ ಪಾಪಿಗಳಿಗೆ ಸಲೀಸು. ಪುಟ್ಟ ಕಂದಮ್ಮಗಳೆಂಬ ಕರುಣೆಯೂ ಇಲ್ಲದೆ ಅವರು ನಡೆಸಿರೋ ಕ್ರೌರ್ಯವಿದೆಯಲ್ಲಾ? ಅದನ್ನು ಇಸ್ಲಾಂ ಇರಲಿ, ಜಗತ್ತಿನ ಯಾವ ಧರ್ಮಗಳೂ ಕ್ಷಮಿಸಲು ಸಾಧ್ಯವಿಲ್ಲ. ಕ್ಷಮಿಸಿದರೆ ಅದೊಂದು ಧರ್ಮವೇ ಅಲ್ಲ. ಅಂಥಾ ಧರ್ಮಾಂಧರ ಕೈಗೆ ಒಂದಿಡೀ ಸರ್ಕಾರ ಸಿಕ್ಕರೆ ಅಲ್ಲಿನ ಜನರ ಸ್ಥಿತಿ ನರಕವಾಗದೆ ಮತ್ತೇನಾಗಲು ಸಾಧ್ಯ? ತಾಲಿಬಾನಿಗಳು ಅಫ್ಘಾನ್ ಸರ್ಕಾರವನ್ನ ಕೈವಶ ಮಾಡಿಕೊಂಡ ನಂತರದಲ್ಲಿ ಜನರ ವಿಶ್ವಾಸ ಗಿಟ್ಟಿಸೋ ಮಾತುಗಳನ್ನಾಡಿದ್ರು. ಆದ್ರೆ ಅದೆಲ್ಲವೂ ಶುದ್ಧ ಸುಳ್ಳೆಂಬುದಕ್ಕೆ ಶರಿಯಾ ಕಾನೂನು ಸಾಕ್ಷಿಯಾಗಿ ಬಿಟ್ಟಿದೆ.
ಶರಿಯಾ ಅನ್ನೋದು ಧರ್ಮದ ಚೌಕಟ್ಟಿನಲ್ಲಿ ಬರೋ ಒಂದು ರೀತಿ ರಿವಾಜುಗಳ ಕಂತೆ. ಅದರ ತುಂಬಾ ಮಹಿಳೆಯರನ್ನು ಮನೆಯೊಳಗೇ ಬಂಧಿಸಿ ಹಿಂಸಿಸುವಂಥಾ ಧಾರಾಳವಾದ ಕಟ್ಟಳೆಗಳಿವೆ. ಅದರ ಪ್ರಕಾರವಾಗಿ ಹೇಳೋದಾದ್ರೆ, ಇನ್ನುಮುಂದೆ ಅಫ್ಘಾನಿಸ್ತಾನದ ಮಹಿಳೆಯರ ಪಾಲಿಗೆ ಸ್ವಾತಂತ್ರ್ಯ ಅನ್ನೋದು ಕನಸು. ಅಲ್ಲಿನ ಹೆಣ್ಮಗಳೊಬ್ಬಳು ಉಜ್ವಲ ಭವಿಷ್ಯದ ಕನಸು ಕಂಡಿದ್ದರೆ ಅದೆಲ್ಲವೂ ಉಗ್ರರ ಬಂದೂಕಿನ ಮುಂದೆ ನರಳಿ ನಲುಗಲಿದೆ. ಯಾಕಂದ್ರೆ, ಶರಿಯಾ ಪ್ರಕಾರ ಹೆಣ್ಮಕ್ಕಳು ಉನ್ನತ ವ್ಯಾಸಂಗ ಮಾಡುವಂತಿಲ್ಲ. ಕುರಾನ್ ಅರ್ಥ ಮಾಡಿಕೊಳ್ಳುವಷ್ಟು ಶಿಕ್ಷಣ ಸಿಕ್ಕಿದರೆ ಸಾಕೆಂಬುದು ಶರಿಯಾದ ಸಾರ.
ಅದರ ಕ್ರೌರ್ಯ ಅಷ್ಟಕ್ಕೇ ನಿಲ್ಲೋದಿಲ್ಲ. ಶರಿಯಾ ಅನ್ನೋದು ಹೆಣ್ಣು ಮಕ್ಕಳ ಸ್ವಾತಂತ್ರ್ಯವನ್ನು ಮನೆಯೊಳಗೇ ಬಂಧಿಸುವಂತಿದೆ. ಯಾವ ಕಾರಣಕ್ಕೂ ಮಹಿಳೆಯರು ಒಬ್ಬಂಟಿಯಾಗಿ ಮನೆಯಿಂದ ಹೊರ ಹೋಗುವಂತಿಲ್ಲ. ಆಕೆಯೊಂದಿಗೆ ಗಂಡೊಬ್ಬ ಇರಲೇ ಬೇಕು. ಹಾಗೊಮ್ಮೆ ಒಂಟಿಯಾಗಿ ಹೊರ ಬಂದರೆ ಆಕೆ ತಾಲಿಬಾನಿಗಳಿಂದ ರೌರವ ನರಕ ಅನುಭವಿಸ್ಬೇಕಾಗುತ್ತೆ. ಈ ಕಾನೂನು ಅದೆಷ್ಟು ಕ್ರೂರವಾಗಿದೆ ಅಂದ್ರೆ, ಮಹಿಳೆಯರಿಗೆ ಅದೆಂಥಾದ್ದೇ ಗಂಭೀರ ಅನಾರೋಗ್ಯ ಕಾಣಿಸಿಕೊಂಡ್ರೂ ಪುರುಷ ವೈದ್ಯರ ಬಳಿ ಟ್ರೀಟ್ಮೆಂಟ್ ಪಡೆಯೋ ಹಾಗಿಲ್ಲ. ಸಾವೇ ಬಂದರೂ ಅದನ್ನು ಉಲ್ಲಂಘಿಸೋಹಾಗಿಲ್ಲ. ಇದೇ ಶರಿಯಾ ಮಹಿಳೆಯರಿಗೆ ಓದು, ಉದ್ಯೋಗವನ್ನೆಲ್ಲ ಬ್ಯಾನ್ ಮಾಡಿದೆ. ಹಾಗಿದ್ದಮೇಲೆ ಆ ದೇಶದಲ್ಲಿ ಮಹಿಳಾ ವೈದ್ಯೆಯರು ಕಾರ್ಯ ನಿರ್ವಹಿಸಲು ಸಾಧ್ಯವೇ ಇಲ್ಲ. ಹಾಗಾದರೆ ಅನಾರೋಗ್ಯಪೀಡಿತ ಮಹಿಳೆಯರಿಗೆ ಸಾವಲ್ಲದೆ ಬೇರ್ಯಾವ ದಾರಿಯಿದೆ?
ಇಂಥಾ ಇನ್ನೂ ಅನೇಕ ಆಘಾತಕರ ಕಾನೂನುಗಳು ಶರಿಯಾದಲ್ಲಿವೆ. ಇನ್ನುಳಿದ ಕಾನೂನುಗಳಲ್ಲಿಯೂ ತಾಲಿಬಾನಿಗಳು ಇಂಥಾ ಅನಿಷ್ಟಗಳನ್ನೇ ತುಂಬಿ ಮೆರೆಯಲು ಮುಂದಾಗಿದ್ದಾರೆ. ಅಲ್ಲಿಗೆ ತಾಲಿಬಾನಿಗಳ ಆಡಳಿತ ಸರ್ವಾಧಿಕಾರಕ್ಕಿಂತಲೂ ಸಾವಿರ ಪಟ್ಟು ಡೇಂಜರ್ ಅನ್ನೋದ್ರಲ್ಲಿ ಯಾವ ಸಂಶಯವೂ ಉಳಿದಿಲ್ಲ. ಇತ್ತ ಉಗ್ರರು ಅಧಿಕಾರ ಹಿಡಿಯುತ್ತಲೇ ಅತ್ತ ಹೆಂಗಳೆಯರು ದೇಶ ತೊರೆಯಲು ಮುಂದಾಗಿದ್ದರ ಹಿಂದೆ ಇದೇ ಕಾರಣವಿದೆ. ತೀರಾ ವಿಮಾನದ ರೆಕ್ಕೆಗಳ ಮೇಲೆ ಕೂತು ಪ್ರಯಾಣಿಸೋ ಸಾಹಸಕ್ಕೆ ಕಾರಣವಾಗಿದ್ದು ಕೂಡಾ ಉಗ್ರರ ಅಟ್ಟಹಾಸ. ಹಾಗೆ ಹಾರಾಡೋ ವಿಮಾನದಿಂದ ಸಾವಿರಾರು ಅಡಿ ಎತ್ತರದಿಂದ ಬಿದ್ದು ಸತ್ತ ಜೀವಗಳಿವೆಯಲ್ಲ? ಉಗ್ರರ ಆಡಳಿತದಲ್ಲಿ ಬದುಕೋರಿಗಿಂತ ಅವರೇ ಪುಣ್ಯಾತ್ಮರು… ಈ ದುರಂತದ ಮುಂದೆ ಬಾಕಿ ಮಾತುಗಳೆಲ್ಲ ವ್ಯರ್ಥ.