ಬಾಲಿವುಡ್ ನಟಿ ಕಂಗನಾ ರಾಣಾವತ್ ಮತ್ತೆ ಸುದ್ದಿಯಲ್ಲಿದ್ದಾಳೆ. ಈಕೆ ಸುದ್ದಿ ಕೇಂದ್ರಕ್ಕೆ ಬಂದಳೆಂದರೆ ಯಾವುದೋ ವಿವಾದದ ಕಿಡಿ ಹೊತ್ತಿಯೇ ತೀರುತ್ತೆ… ಹೀಗಂತ ಜನಸಾಮಾನ್ಯರೂ ನಿರ್ಧರಿಸುವಷ್ಟರ ಮಟ್ಟಿಗೆ ಕಂಗನಾ ಇತ್ತೀಚಿನ ದಿನಗಳಲ್ಲಿ ಚಾಲ್ತಿಯಲ್ಲಿದ್ದಾಳೆ. ಆರಂಭದ ಕಾಲದಲ್ಲಿ ಈಕೆ ಒಂದಷ್ಟು ಚೆಂದದ ಸಿನಿಮಾಗಳಲ್ಲಿ, ಸವಾಲಿನ ಪಾತ್ರಗಳ ಮೂಲಕ ಸೈ ಅನ್ನಿಸಿಕೊಂಡಿದ್ದು ಹೌದು. ಆದರೆ ಇತ್ತೀಚಿನ ವರ್ಷಗಳಲ್ಲಿ ತನ್ನ ಸಾಮಾಜಿಕ, ರಾಜಕೀಯ ನಿಲುವುಗಳ ಕಾರಣದಿಂದಾಗಿಯೇ ಈಕೆ ಸುದ್ದಿ ಮಾಡುತ್ತಾ ಸಾಗಿದ್ದಳು. ಇಂಥಾ ಕಂಗನಾ ಇದೀಗ ಬಹು ಕಾಲದ ನಂತರ ಮತ್ತೆ ನಟಿಯಾಗಿ ಸದ್ದು ಮಾಡಿದ್ದಾಳೆ. ವಿಶೇಷ ಅಂದ್ರೆ ಅದಕ್ಕೂ ಕೂಡಾ ರಾಜಕೀಯದ ನಂಟು ಥಳುಕು ಹಾಕಿಕೊಂಡಿದೆ.
ಕಂಗನಾ ರಾಣಾವತ್ ತಲೈವಿ ಎಂಬ ಸಿನಿಮಾ ಮೂಲಕ ವರ್ಷದಿಂದೀಚೆಗೆ ಸಿನಿಮಾ ಪ್ರೇಮಿಗಳನ್ನ ಸೆಳೆದಿದ್ದಳು. ಅದು ದಕ್ಷಿಣ ಭಾರತದ ಪ್ರಭಾವೀ ರಾಜಕೀಯ ನಾಯಕಿಯಾಗಿದ್ದ, ತಮಿಳುನಾಡು ರಾಜಕೀಯದಲ್ಲಿ ಸಿಎಂ ಆಗಿ ಮಿಂಚಿದ್ದ ಜಯಲಲಿತಾರ ಬದುಕಿನ ಕಥೆಯಾಧಾರಿತ ಚಿತ್ರ. ಖುದ್ದು ನಟಿಯಾಗಿ, ಆ ನಂತರ ರಾಜಕಾರಣುಇಯಾಗಿ ಬದಲಾಗಿದ್ದ ಜಯಲಲಿತಾರದ್ದು ನಿಜಕ್ಕೂ ರೋಚಕ ಕಥನ. ಅಂಥಾ ಕಥೆಯಲ್ಲಿ ಜಯಲಲಿತಾರ ಪಾತ್ರವನ್ನ ಕಂಗನಾ ನಿರ್ವಹಿಸುತ್ತಾಳೆಂದರೆ ಆ ಬಗ್ಗೆ ಕುತೂಹಲ ಮಡುಗಟ್ಟೋದರಲ್ಲಿ ಅಚ್ಚರಿಯೇನಿಲ್ಲ. ಹಾಗೆ ದೇಶಾದ್ಯಂತ ಸದ್ದು ಮಾಡಿದ್ದ ಈ ಸಿನಿಮಾ ಗಣೇಶ ಚತುರ್ಥಿಯ ದಿನದಂದೇ ಬಿಡುಗಡೆಯಾಗಿದೆ. ಆದರೆ, ತಲೈವಿಯಾಗಿ ಮಿಂಚೋ ಕಂಗನಾ ಕನಸು ಮಾತ್ರ ಹೆಚ್ಚೂ ಕಡಿಮೆ ಭಗ್ನಗೊಂಡಂತಾಗಿದೆ.
ತಲೈವಿ ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಆರಂಭದಲ್ಲಿದ್ದ ಕ್ರೇಜ಼್ ನೋಡಿದವರೆಲ್ಲ ಈ ಚಿತ್ರ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸುತ್ತೆ ಅಂತಲೇ ಅನ್ನಿಸಿತ್ತು. ಆದರೆ, ಪ್ರಸ್ತುತ ಪರಿಸ್ಥಿತಿ ಮತ್ತು ಒಂದಷ್ಟು ಸೂಕ್ಷ್ಮ ವಿಚಾರಗಳು ತಲೈವಿಯನ್ನು ಗಲ್ಲಾಪೆಟ್ಟಿಗೆಯಲ್ಲಿ ಗೋತಾ ಹೊಡೆಸಿ ಬಿಟ್ಟಿದೆ. ಸದ್ಯಕ್ಕೆ ಸಿನಿಮಾ ಮಂದಿರಗಳಲ್ಲಿ ಅರ್ಧ ಪರ್ಸೆಂಟ್ ಅವಕಾಶ ಸಿಕ್ಕಿರೋದು ಇದಕ್ಕೆ ಕಾರಣ ಅಂತ ಒಂದಷ್ಟು ಮಂದಿ ಹೇಳುತ್ತಿದ್ದಾರೆ. ಆದರೆ ಅದೊಂದೇ ಕಾರಣ ಅನ್ನೋದು ಅರ್ಧ ಸತ್ಯ. ಜಯಲಲಿತಾ ದಕ್ಷಿಣ ಭಾರತೀಯ ರಾಜ್ಯದ ನಾಯಕಿಯಾಗಿದ್ದವರು. ಅವರೆಷ್ಟೇ ಪ್ರಸಿದ್ಧಿ ಪಡೆದಿದ್ದರೂ ಉತ್ತರದ ಮಂದಿಗೆ ಆಕೆಯ ಬಯೋಪಿಕ್ ನೋಡೋದ್ರಲ್ಲಿ ಯಾವ ಉತ್ಸಾಹವೂ ಇಲ್ಲ. ಅಷ್ಟಕ್ಕೂ ರಾಜಕೀಯದಲ್ಲಿಯೇ ಉತ್ತರದವರ ಠೇಂಕಾರ ಮಿತಿ ಮೀರಿದೆ. ಕೇಂದ್ರದಲ್ಲಿ ದಕ್ಷಿಣದವರನ್ನು ಮೂಲೆಗುಂಪು ಮಾಡೋ ಪರಿಪಾಠವೂ ಇದೆ. ಹಾಗಿರೋವಾಗ ಹಿಂದಿಯಲ್ಲಿ ತಲೈವಿ ಬರಖತ್ತಾಗಲು ಸಾಧ್ಯವೇ?
ಹಾಗಾದ್ರೆ, ತಮಿಳುನಾಡಲ್ಲಿ ತಲೈವಿ ಸೂಪರ್ ಹಿಟ್ ಆಗಿದೆಯಾ ಅಂತ ನೋಡಿದರೆ ಅಲ್ಲಿಯೂ ಆಶಾದಾಯಕ ಬೆಳವಣಿಗೆಗಳಿಲ್ಲ. ನಿರೀಕ್ಷೆಯಂತೆ ಎಲ್ಲ ನಡೆದಿದ್ದರೆ, ತಮಿಳುನಾಡಿನಲ್ಲಿ ತಲೈವಿ ಭರ್ಜರಿ ಪ್ರದರ್ಶನ ಕಾಣ ಬೇಕಿತ್ತು. ಆದ್ರೆ ಅಲ್ಲಿಯೂ ಕೂಡಾ ಇದನ್ನು ನೋಡಲು ಪ್ರೇಕ್ಷಿಕರು ಅಷ್ಟಾಗಿ ಉತ್ಸಾಹ ತೋರುತ್ತಿಲ್ಲ. ಸಾಮಾನ್ಯವಾಗಿ ಸಿನಿಮಾಗಳ ಬಗ್ಗೆ ಅತೀವ ಮೋಹ ಹೊಂದಿರುವವರು ತಮಿಳಿಗರು. ಆದ್ರೆ ಒಂದು ಕಾಲದಲ್ಲಿ ತಮ್ಮದೇ ಆರಾಧ್ಯ ನಾಯಕಿಯಾಗಿದ್ದ ಜಯಲಲಿತಾ ಬದುಕನ್ನ ತೆರೆ ಮೇಲೆ ನೋಡಲು ಅವರಲ್ಲೇಕೋ ನಿರುತ್ಸಾಹವಿದೆ. ಈ ಕಾರಣದಿಂದಲೇ ತಮಿಳು, ತೆಲುಗು ಮತ್ತು ಹಿಂದಿಯ ಮೊದಲ ದಿನದ ಕಲೆಕ್ಷನ್ನು ಕೋಟಿಯ ಗಡಿಯನ್ನೂ ದಾಟಿಲ್ಲ.
ಈ ಸಿನಿಮಾದಲ್ಲಿ ಕಂಗನಾ ರಾಣಾವತ್ ತಲೈವಿಯಾಗ್ತಾಳೆಂಬ ಸುದ್ದಿ ಹೊರ ಬಿದ್ದಾಕ್ಷಣವೇ ಅಪಸ್ವರವೆದ್ದಿತ್ತು. ಆ ಬಳಿಕ ಫಸ್ಟ್ ಲುಕ್ ಬಿಡುಗಡೆಯಾಯ್ತು ನೋಡಿ? ಆಗಂತೂ ಗೇಲಿಯ ಮಾತುಗಳೇ ಕೇಳಿ ಬಂದಿದ್ದವು. ಕಂಗನಾ ಯಾವ ಕೋನದಿಂದಲೂ ಜಯಲಲಿತಾ ಪಾತ್ರಕ್ಕೆ ಸೂಟ್ ಆಗೋದಿಲ್ಲ ಎಂಬ ಕುಹಕವೂ ಕೇಳಿ ಬಂದಿತ್ತು. ಇದನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಕಂಗನಾ ತಲೈವಿಯಾಗಿ ಗೆಲ್ಲೋ ಶಪಥ ಮಾಡಿದ್ದಳಾದರೂ, ಆಕೆಗೆದುರಾಗಿರೋದು ಹೀನಾಯ ಸೋಲಷ್ಟೆ. ಹೀಗೆ ಬಹು ನಿರೀಕ್ಷಿತ ಚಿತ್ರ ನೆಲ ಕಚ್ಚಿದ ಸಂಕಟದಲ್ಲಿರೋ ಕಂಗನಾ ಇದೀಗ ರಾಜಕೀಯದತ್ತ ಮುಖ ಮಾಡಿದಂತಿದೆ. ಖುದ್ದು ಆಕೆಯೇ ತನ್ನ ರಾಷ್ಟ್ರೀಯವಾದಿ ವಿಚಾರಧಾರೆಗೆ ತಕ್ಕುದಾದ ರಾಜಕೀಯ ನಡೆ ಅನುಸರಿಸೋ ಇಷಾರೆ ತೋರಿಸಿದ್ದಾಳೆ. ಅಂತೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೋರ್ವ ಕ್ಯಾಂಡಿಡೇಟು ಫಿಕ್ಸಾದಂತಿದೆ!