ವಿಶ್ವದಾದ್ಯಂತ ಕೊರೋನಾ ವೈರಸ್ ಜನರನ್ನೆಲ್ಲ ಭೀತಿಗೀಡುಮಾಡಿದೆ. ಇಡೀ ಜಗತ್ತಿನ ವ್ಯಾಪಾರ ವಹಿವಾಟು ಸೇರಿದಂತೆ ಎಲ್ಲವೂ ಅಯೋಮಯ ಸ್ಥಿತಿಗೆ ಬಂದು ನಿಂತಿದೆ. ಇನ್ನೂ ಒಂದಷ್ಟು ಕಾಲ ಇದೇ ರೀತಿ ಮುಂದುವರೆದರೆ ಜಾಗತಿಕ ಅರ್ಥವ್ಯವಸ್ಥೆಯನ್ನೆಲ್ಲ ಮತ್ತೆ ಹೊಸದಾಗಿ ಕಟ್ಟಿ ನಿಲ್ಲಿಸುವ ಸವಾಲೆದುರಾಗೋದರಲ್ಲಿ ಯಾವ ಸಂಶಯವೂ ಇಲ್ಲ. ಇದೆಲ್ಲದರಿಂದಾಗಿ ಅಮೆರಿಕದಂಥಾ ಸ್ಥಿತಿವಂತ ದೇಶಗಳಲ್ಲಿಯೇ ನಿರುದ್ಯೋಗ ಪ್ರಮಾಣದಲ್ಲಿ ಏರುಗತಿ ಕಾಣಿಸಿಕೊಂಡಿದೆ. ಇದರ ಬಿಸಿ ಎಂಥಾದ್ದಿದೆಯೆಂದರೆ ಥಾಯ್ಲೆಂಡಿನ ಆನೆಗಳಿಗೂ ನಿರುದ್ಯೋಗದ ಬಾಧೆ ಶುರುವಾಗಿದೆ. ಅದುವೇ ಆ ಮೂಕ ಜೀವಿಗಳಿಗೆ ಮತ್ತೆ ತಮ್ಮ ತವರು ಸೇರಿ ಸ್ವಚ್ಛಂದವಾಗಿರುವ ಭಾಗ್ಯವನ್ನೂ ಕರುಣಿಸಿದೆ!
ಥಾಯ್ಲೆಂಡಿನಲ್ಲಿ ಆನೆಗಳನ್ನು ಪಳಗಿಸಿಕೊಂಡು ನಾನಾ ಕೆಲಸ ಕಾರ್ಯಗಳಿಗೆ, ಸರ್ಕಸ್ಸಿನಂಥಾ ಮನೋರಂಜನಾತ್ಮಕ ಚಟುವಟಿಕೆಗಳಿಗೆ ಒಗ್ಗಿಸಿಕೊಳ್ಳುತ್ತಾ ಬರಲಾಗುತ್ತಿದೆ. ಅದು ಪ್ರವಾಸೋದ್ಯಮದ ಭಾಗವಾಗಿಯೂ ಅಲ್ಲಿ ಚಾಲನೆಯಲ್ಲಿದೆ. ಆದರೆ ಏಕಾಏಕಿ ಲಾಕ್ಡೌನ್ ಶುರುವಾದ್ದರಿಂದಾಗಿ ಥಾಯ್ಲೆಂಡಿನ ಆನೆ ಮಾಲೀಕರು ಕಂಗಾಲಾಗಿದ್ದಾರೆ. ವ್ಯವಹಾರ ಚಾಲೂ ಆಗಿದ್ದಾಗ ಆನೆಗಳನ್ನು ಹೇಗೋ ಸಂಭಾಳಿಸಬಹುದು. ಕೊರೋನಾದಿಂದಾಗಿ ಎಲ್ಲವೂ ಸ್ತಬ್ಧಗೊಂಡಿರುವಾಗ ಜನರೇ ಹೊಟ್ಟೆ ಪಾಡಿಗೆ ಪರದಾಡುವಂತಾಗಿದೆ. ಹಾಗಿರುವಾಗು ಟನ್ನುಗಟ್ಟಲೆ ಆಹಾರ ಒದಗಿಸಿ ಆನೆಗಳ ಹೊಟ್ಟೆ ತುಂಬಿಸೋದು ಮಾಲೀಕರ ಪಾಲಿಗೆ ದೊಡ್ಡ ತಲೆನೋವಾಗಿ ಬಿಟ್ಟಿದೆ.
ಆನೆಗಳನ್ನು ದಿನನಿತ್ಯ ಆಹಾರ ಹಾಕಿ ಸಲಹೋದು ಸಾಮಾನ್ಯದ ಸಂಗತಿಯಲ್ಲ. ಅದಕ್ಕೆ ಸರಿಯಾಗಿ ಆನೆಗಳನ್ನು ಬಳಸಿಕೊಂಡು ಮಾಡಲಾಗುತ್ತಿದ್ದ ಎಲ್ಲ ವಹಿವಾಟುಗಳಿಗೂ ಕೊರೋನಾ ಬ್ರೇಕು ಹಾಕಿರೋದರಿಂದಾಗಿ ಮಾಲೀಕರು ಕಂಗಾಲಾಗಿದ್ದಾರೆ. ಬೇರೆ ನಿರ್ವಾಹವಿಲ್ಲದೇ ಒಂದಷ್ಟು ದಿನ ಪ್ರಯತ್ನಿಸಿದರೂ ಅವುಗಳ ಹೊಟ್ಟೆ ತುಂಬಿಸಲಾಗದ ಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದಾಗಿ ತಿಂಗಳೊಳಗೆ ಆನೆಗಳೆಲ್ಲ ಬಡಕಲೆದ್ದಾಗ ಬೇರೆ ದಾರಿ ಕಾಣದೆ ಯಾವ ಕಾಡಿನಿಂದ ಅವುಗಳನ್ನು ಹಿಡಿದು ತರಲಾಗಿತ್ತೋ ಅದೇ ಕಾಡುಗಳಿಗೆ ವಾಪಾಸು ಬಿಟ್ಟು ಬರುವ ಆಲೋಚನೆಗೆ ಮಾಲೀಕರೆಲ್ಲ ಬಂದಿದ್ದಾರಂತೆ.
ಅದರ ಫಲವಾಗಿಯೇ ಇದೀಗ ಆನೆಗಳ ಹಿಂಡನ್ನು ಮತ್ತೆ ಕಾಡಿಗೆ ಬಿಟ್ಟು ಬರುವ ಕಾರ್ಯ ಥಾಯ್ಲೆಂಡಿನಲ್ಲಿ ಚಾಲ್ತಿಯಲ್ಲಿದೆ. ನೂರಾರು ಕಿಲೀಮೀಟರುಗಟ್ಟಲೆ ನಡೆದೇ ಕ್ರಮಿಸಿ ಅವುಗಳನ್ನು ತವರಿಗೆ ಸೇರಿಸಲಾಗುತ್ತಿದೆ. ಅದೇನೇ ಬುದ್ಧಿ ಕಲಿಸಿ, ಬೇಕಾದಂತೆ ಮೇವು ಹಾಕಿದರೂ, ಮೃಷ್ಟಾನ್ನವನ್ನೇ ಮುಂದಿಟ್ಟರೂ ಆನೆಗಳ ಪಾಲಿಗೆ ಕಾಡಿನ ಸ್ವಾತಂತ್ರ್ಯ, ಖುಷಿ ಸಿಗಲು ಸಾಧ್ಯವಿಲ್ಲ. ಆದರೆ ಮನುಷ್ಯರ ಲಾಭದಾಸೆಯಿಂದ ಎಷ್ಟೋ ಆನೆಗಳು ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ತವರಿನ ನಂಟು ಕಡಿದುಕೊಂಡು ಬದುಕುತ್ತಿದ್ದವು. ಅವುಗಳಿಗೆಲ್ಲ ಕೊರೋನಾ ವೈರಸ್ ಬಿಡುಗಡೆ ಕಲ್ಪಿಸಿದೆ. ಆ ಆನೆಗಳೆಲ್ಲ ಮತ್ತೆ ಕಾಡು ಸೇರಿ ಹಾಯಾಗಿ ಅಡ್ಡಾಡಲಾರಂಭಿಸಿವೆ.
ಇದೆಲ್ಲವನ್ನೂ ನೋಡುತ್ತಿದ್ದರೆ ಈ ಕೊರೋನಾ ಮನುಷ್ಯನ ದುರಾಸೆಯಿಂದಾದ ಅಸಮತೋಲನವನ್ನು ಕೊರೋನಾ ವೈರಸ್ ರೂಪದಲ್ಲಿ ಸರಿಪಡಿಸಿಕೊಳ್ಳುತ್ತಿದೆಯೇನೋ ಅನ್ನಿಸೋದರಲ್ಲಿ ಅಚ್ಚರಿಯೇನಿಲ್ಲ. ಈ ವೈರಸ್ನಿಂದಾಗಿ ಮನುಷ್ಯರ ಪಾಲಿಗೆ ಥರ ಥರದ ಗಂಡಾಂತರಗಳು ಬಂದೆರಗಿವೆ. ಆದರೆ ಅದೇ ಹೊತ್ತಲ್ಲಿ ಪ್ರಕೃತಿಗೆ ವರವನ್ನೂ ನೀಡಿವೆ. ಪರಿಸರವೀಗ ತಿಂಗಳೊಪ್ಪತ್ತಿನಲ್ಲಿಯೇ ಮಾಲಿನ್ಯವನ್ನೆಲ್ಲ ನೀಗಿಕೊಂಡು ನಳನಳಿಸುತ್ತಿವೆ. ಅದೆಷ್ಟೋ ಕೆರೆಕಟ್ಟೆಗಳು, ಗುರುತೇ ಇರದಂತೆ ಮಾಯವಾಗಿದ್ದ ಜಲಮೂಲಗಳು, ನದಿ ತೊರೆಗಳೆಲ್ಲ ಸ್ವಯಂಶುದ್ಧಿಯಾಗಿವೆ. ಹರುಕು ಚಾಪೆಯಂತಾಗಿದ್ದ ಓಝೋನ್ ಪದರಕ್ಕೂ ತಂತಾನೇ ತೇಪೆ ಬಿದ್ದಿದೆ. ಅದೆಲ್ಲದರ ಜೊತೆಗೆ ಮೂಕಪ್ರಾಣಿಗಳ ಮೌನ ರೋಧನೆಗೂ ಮುಕ್ತಿ ಸಿಕ್ಕಂತಾಗಿದೆ.