ಒಂದು ಕಾಲಘಟ್ಟವನ್ನು ತಮ್ಮ ಅಬ್ಬರದ, ವಿಶಿಷ್ಟವಾದ ನಟನೆಯ ಮೂಲಕ ಕಳೆಗಟ್ಟಿಸಿದ್ದ ಖಳನಟರೆಲ್ಲ ಕನ್ನಡ ಚಿತ್ರರಂಗದಿಂದ ದೂರವಾಗಿದ್ದಾರೆ. ಹಾಗೆ ಖಳನ ಪಾತ್ರಗಳಿಗೆ ಜೀವ ತುಂಬುತ್ತಲೇ ಕನ್ನಡ ಸಿನಿಮಾಗಳಿಗೆ ಹೊಸಾ ಖದರ್ ತುಂಬಿದ್ದವರಲ್ಲಿ ವಜ್ರಮುನಿಯವರ ಹೆಸರು ಮೊದಲ ಸಾಲಿನಲ್ಲಿ ದಾಖಲಾಗುತ್ತದೆ. ದಶಕಗಳಷ್ಟು ಹಿಂದಿನ ಸಿನಿಮಾಗಳನ್ನು ಇಂದಿನ ಪೀಳಿಗೆ ನೋಡಿ, ಅದರಲ್ಲಿ ವಜ್ರಮುನಿಯವರ ಪಾತ್ರಗಳನ್ನು ಕಣ್ತುಂಬಿಕೊಂಡರೆಂದರೆ ಖಂಡಿತಾ ಈ ತಲೆಮಾರಿನ ಅದೆಂಥಾ ಅಬ್ಬರದ ಖಳನಟನೂ ಸಪ್ಪೆ ಅನ್ನಿಸಿ ಬಿಡುತ್ತಾನೆ. ಹಾಗೆ ಕಣ್ಣುಗಳಲ್ಲಿ ಕೆಂಡವುಗುಳುತ್ತಾ, ನಿಜ ಜೀವನದಲ್ಲಿ ಅಬೋಧ ಮಗುವಿನಂಥ ಮನಸ್ಥಿತಿಯನ್ನು ರೂಢಿಸಿಕೊಂಡು ಜೀವಿಸಿದ್ದವರು ವಜ್ರಮುನಿ.
ಎಂಥವರ ಅಳ್ಳೆಯನ್ನೂ ತನ್ನ ಭಾವ ಭಂಗಿ, ಅಬ್ಬರಗಳ ಮೂಲಕವೇ ಅದುರಿಸಿ ಬಿಡುವಂತೆ ನಟಿಸುತ್ತಿದ್ದ ವಜ್ರಮುನಿ ಕನ್ನಡ ಚಿತ್ರರಂಗದ ವಜ್ರದಂಥ ಪ್ರತಿಭೆ. ಖುದ್ದು ತನ್ನ ಮಕ್ಕಳೇ ಬೆಚ್ಚಿಬಿದ್ದು ಅವುಸಿಟ್ಟುಕೊಳ್ಳುವಂಥ ಪಾತ್ರಗಳನ್ನು ನಿರ್ವಹಿಸಿದ್ದ ವಜ್ರಮುನಿಯವರದ್ದು ನಿಜ ಜೀವನದಲ್ಲಿ ಅದಕ್ಕೆ ತದ್ವಿರುದ್ಧವಾದ ವ್ಯಕ್ತಿತ್ವ. ತೀರಾ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನ ಮಾತ್ರವಲ್ಲದೇ, ನಟನಾಗಿ ಮೆರೆದ ತರುವಾಯವೂ ಬದುಕಿನ ಏರಿಳಿತಗಳನ್ನು ಕಂಡ, ಒಳಗೊಳಗೇ ನೊಂದು ಬೆಂದ ಜೀವ ವಜ್ರಮುನಿಯವರದ್ದು. ಹೊರಜಗತ್ತಿನ ಪಾಲಿಗೆ ಅವರು ನಿರ್ವಹಿಸಿದ್ದಂಥಾ ಪಾತ್ರಗಳಂಥಾದ್ದೇ ಕಠೋರ ವ್ಯಕ್ತಿಯಾಗಿ ಬಿಂಬಿಸಿಕೊಂಡಿದ್ದರಲ್ಲಾ ವಜ್ರಮುನಿ? ಅವರ ಸುಕೋಮಲ ವ್ಯಕ್ತಿತ್ವ ಹತ್ತಿರದಿಂದ ಕಂಡ ಕೆಲವರಿಗಷ್ಟೇ ಪರಿಚಯವಿತ್ತಷ್ಟೆ.
ಎಳವೆಯಿಂದಲೇ ಓದಿನಾಚೆಗೆ ಆಸಕ್ತಿಯಿಟ್ಟುಕೊಂಡು ಕಲಾವಿದನಾಗೋ ಕನಸು ಕಂಡಿದ್ದ ವಜ್ರಮುನಿ ಕರುನಾಡು ಎಂದೂ ಮರೆಯದ ನಟನಾಗಿ ಅವತರಿಸಿದ್ದೇ ಒಂದು ಅದ್ಭುತವಾದ ಕಥೆ. ಯಾವುದೇ ಸಾಧನೆ ಹಾದಿಯಾದರೂ ಬಯಸಿದ್ದನ್ನೆಲ್ಲ ದಕ್ಕಿಸಿ ಬಿಡುವಷ್ಟು ಸರಾಗವಾಗಿರೋದಿಲ್ಲ. ಆದರೆ ಆ ಕ್ಷಣದ ನಿರಾಸೆಯೇ ಮುಂದೆಂದೋ ಗೆಲುವಾಗಿ ಟಿಸಿಲೊಡೆಯುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗೋದಿಲ್ಲ. ವಜ್ರಮುನಿಯವರ ಕಲಾಯಾನದಲ್ಲಿಯೂ ಅಂಥಾದ್ದೊಂದು ಅಚ್ಚರಿ ಆವಿರ್ಭವಿಸಿತ್ತು. ಸಿನಿಮಾ ಅಂದರೆ ಮೊದಲು ಮನಸೆಳೆಯೋದೇ ಹೀರೋಯಿಸಂ. ಸಹ ಕಲಾವಿದರಾಗಿ ಕಳೆದು ಹೋದವರಲ್ಲಿಯೂ ಅಂಥಾದ್ದೊಂದು ಆಸೆ ಒಂದು ಹಂತದಲ್ಲಿ ಹಬೆಯಾಡಿರುತ್ತೆ. ಹಾಗಿದ್ದ ಮೇಲೆ ನಟನೆಯ ಪರ್ವತದಂತಿರೋ ವಜ್ರಮುನಿಯವರಲ್ಲಿ ನಾಯಕ ನಟನಾಗೋ ಹಂಬಲವಿದ್ದುದರಲ್ಲಿ ಯಾವ ಅತಿಶಯವೂ ಇಲ್ಲ.
ನಾಯಕ ನಟನಾಗಬೇಕೆಂಬ ಆಳದ ಆಸೆಯಿಟ್ಟುಕೊಂಡಿದ್ದ ವಜ್ರಮುನಿ ಪಾಲಿಗೆ ಆರಂಭಿಕವಾಗಿ ಒಲಿದು ಬಂದಿದ್ದದ್ದು ಕಣಗಾಲ್ ಪ್ರಭಾಕರ ಶಾಸ್ತ್ರಿಗಳ ಪ್ರಚಂಡ ರಾವಣ ಎಂಬ ನಾಟಕದ ಮೂಲಕ. ಅದರಲ್ಲಿ ರಾವಣನಾಗಿ ವಜ್ರಮುನಿ ಅದ್ಯಾವ ಪರಿ ಅಬ್ಬರಿಸಿದ್ದರೆಂದರೆ ಅದಕ್ಕೆ ಮನಸೋಲದವರೇ ಇಲ್ಲ. ಅಷ್ಟಕ್ಕೂ ಆ ನಾಟಕದಲ್ಲಿನ ಅವಕಾಶ ಅವರ ಪಾಲಿಗೆ ಕೂಡಿ ಬಂದಿದ್ದೂ ಕೂಡಾ ಅಚ್ಚರಿದಾಯಕವಾಗಿಯೇ. ಪ್ರಭಾಕರ ಶಾಸ್ತ್ರಿಗಳು ಪ್ರಚಂಡ ರಾವಣನಾಗಲು ತೀವ್ರವಾಗಿ ತಲಾಶು ನಡೆಸಿ ಕಲಾವಿದರನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಅಷ್ಟೇ ಪ್ರಚಂಡ ತೀವ್ರತೆ ಹೊಂದಿದ್ದ ಕಠಿಣ ಡೈಲಾಗುಗಳಿಗೆ ಬೆದರಿ ಅದೆಷ್ಟೋ ಮಂದಿ ರಿಹರ್ಸಲ್ ಸಮಯದಲ್ಲಿಯೇ ಪೇರಿ ಕೀಳುತ್ತಿದ್ದರು. ಇದರಿಂದ ರೋಸತ್ತು ಹೋಗಿ ರಾವಣನ ಪಾತ್ರಕ್ಕಾಗಿ ಸೂಕ್ತ ಕಲಾವಿದನಿಗೆ ಅರಸುತ್ತಿದ್ದ ಶಾಸ್ತ್ರಿಗಳ ಕಣ್ಣಿಗೆ ಬಿದ್ದವರು ವಜ್ರಮುನಿ.
ಆ ನಂತರದಲ್ಲಿ ಸಮರ್ಪಿಸಿಕೊಂಡಂತೆ ಅಭ್ಯಾಸ ಮಾಡಿ ಆ ಪಾತ್ರಕ್ಕವರು ನ್ಯಾಯ ಸಲ್ಲಿಸಿದ ರೀತಿಗೆ ಎಲ್ಲರೂ ತಲೆದೂಗಿದ್ದರು. ಅದೊಂದು ನಾಟಕದಿಂದಲೇ ಭಾರೀ ಪ್ರಸಿದ್ಧಿಯನ್ನೂ ಗಳಿಸಿಕೊಂಡಿದ್ದರು. ಆಯಾ ಸಂದರ್ಭದ ಆಕ್ರೋಶ, ರೊಚ್ಚು ಕೆಚ್ಚುಗಳನ್ನೆಲ್ಲ ನರನಾಡಿಗಳಿಗೂ ಚಿಮ್ಮಿಸಿಕೊಂಡು ನಟಿಸುವ ವಜ್ರಮುನಿಯವರ ಪ್ರತಿಭೆಯನ್ನು ಮೆಚ್ಚಿಕೊಳ್ಳದವರೇ ಇರಲಿಲ್ಲ. ಆ ನಂತರದಲ್ಲಿ ಅವರು ಪುಟ್ಟಣ್ಣ ಕಣಗಾಲರ ಗರಡಿ ಸೇರಿಕೊಂಡಿದ್ದರು. ಆ ನಂತರದಲ್ಲಿ ಸಾವಿರ ಮೆಟ್ಟಿಲು ಎಂಬ ಸಿನಿಮಾದಲ್ಲಿ ನಟಿಸಿದ್ದರಾದರೂ ಅಲ್ಲಿಯೂ ನಿರಾಸೆ ಎದುರಾಗಿತ್ತು. ಯಾಕೆಂದರೆ ಆ ಚಿತ್ರ ಬಿಡುಗಡೆಯಾಗಲಿಲ್ಲ. ಆದರೂ ಅದೇ ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದ ಮಲ್ಲಮ್ಮನ ಪವಾಡ ಚಿತ್ರದಲ್ಲಿ ನಟಿಸಿದ ವಜ್ರಮುನಿ ಸಿನಿಮಾ ಪ್ರೇಮಿಗಳಲ್ಲಿ ಹೊಸಾ ಛಳುಕು ಮೂಡಿಸಿದ್ದರು. ಅಲ್ಲಿಂದ ಸರಿಸುಮಾರು ಮುನ್ನೂರು ಚಿತ್ರಗಳವರೆಗೂ ವಜ್ರಮುನಿ ಯುಗ ಅನೂಚಾನವಾಗಿ ಮುಂದುವರೆದದ್ದೊಂದು ವೈಚಿತ್ರ್ಯದ ಐತಿಹ್ಯ.
ವಜ್ರಮುನಿಯೆಂಬ ಹೆಸರಿದ್ದರೂ, ಅದಕ್ಕೆ ತಕ್ಕುದಾದ ಪಾತ್ರಗಳಿಂದ ಜನಜನಿತರಾಗಿದ್ದರೂ ಅವರದ್ದು ಮೃದು ವೈಕ್ತಿತ್ವ. ಆರಂಭದಲ್ಲವರು ನಾಯಕನಾಗೋ ಇರಾದೆಯಿಂದ ನಿರ್ದೇಶಕರ ಬಳಿ ಒಳ್ಳೆ ಪಾತ್ರ ಕೊಡುವಂತೆ ದುಂಬಾಲು ಬೀಳುತ್ತಿದ್ದರಂತೆ. ಆದರೆ ಪ್ರಚಂಡ ರಾವಣ ನಾಟಕದ ಪ್ರಭೆ ಅವರನ್ನು ಒತ್ತಾಯಪೂರ್ವಕವಾಗಿ ಖಳನ ಪಾತ್ರಗಳಿಗೂ ಅಂಟಿಸುತ್ತಾ ಬಂದಿತ್ತು. ಆ ತೀವ್ರ ಕೋಪ ತಾಪದ ಪಾತ್ರಗಳಿಗೆ ಕಷ್ಟಪಟ್ಟು ತಯಾರಾಗುತ್ತಾ, ಎಂಥವರೂ ನಿಬ್ಬೆರಗಾಗುವಂತೆ ನಟಿಸುತ್ತಿದ್ದ ವಜ್ರಮುನಿಯವರ ಯಶಸ್ವೀ ಸಿನಿಮಾಗಳ ಪಟ್ಟಿ ದೊಡ್ಡದಿದೆ. ಆ ಮೂಲಕವೇ ಅವರು ತಲೆಮಾರುಗಳಾಚೆಗೂ ಸಿನಿಮಾ ಪ್ರೇಮಿಗಳನ್ನು ಆವರಿಸಿಕೊಳ್ಳುತ್ತಿದ್ದಾರೆ. ಇಂಥಾ ಪರಿಪೂರ್ಣ ನಟ ಹುಟ್ಟುಹಬ್ಬದಂಥಾ ನೆಪಗಳಾಚೆಗೂ ಕನ್ನಡಿಗರ ಮನಸಲ್ಲಿ ಸದಾ ಹಸಿರಾಗುಳಿದಿದ್ದಾರೆ.