ಈಜಿಫ್ಟ್ನ ಅಂಚಿನಲ್ಲಿ ಹರಡಿಕೊಂಡಿರುವ ಕೆಂಪು ಸಮುದ್ರ ತನ್ನೊಡಲ ನಾನಾ ನಿಗೂಢಗಳಿಂದ, ವಿಶಿಷ್ಟವಾದ ಜೀವ ಸಂಕುಲಗಳಿಂದ ಜಗತ್ತಿನ ಗಮನ ಸೆಳೆದಿದೆ. ಭಾರೀ ಗಾತ್ರದ ಶಾರ್ಕ್ಗಳ ಸಂಖ್ಯೆಯೂ ಕೂಡಾ ಈ ಸಾಗರದಲ್ಲಿ ವಿಪರೀತವಾಗಿವೆ. ಸಾಮಾನ್ಯವಾಗಿ ಇತರೇ ಸಮುದ್ರಗಳಲ್ಲಿ ಶಾರ್ಕ್ಗಳು ಬೀಚ್ ಏರಿಯಾಗಳಿಗಿಂತಲೂ ಹೆಚ್ಚು ದೂರದ ಆಳ ಪ್ರದೇಶಗಳಲ್ಲಿ ವಾಸಿಸುತ್ತವೆ. ಆದರೆ ಕೆಂಪು ಸಮುದ್ರದ ಶಾರ್ಕ್ಗಳಿಗೆ ತೀರ ಪ್ರದೇಶಗಳೆಂದರೆ ಅದೆಂಥಾದ್ದೋ ಪ್ರೀತಿ. ಅದುವೇ ಈಜಿಫ್ಟಿನ ಸೆಹಲ ಹಶೀಶ್ ಬೀಚ್ನಲ್ಲಿ ಓಡಾಡುವ ಪ್ರವಾಸಿಗರ ಪಾಲಿಗೆ ಮರಣಕಂಟಕವಾಗಿ ಮಾರ್ಪಟ್ಟಿದೆ.
ಈಜಿಫ್ಟ್ನಲ್ಲಿರುವ ಅದೊಂದು ಪ್ರದೇಶದ ತುಂಬೆಲ್ಲ ಕೆಂಪು ಸಮುದ್ರ ಮೈಚಾಚಿಕೊಂಡಿದೆ. ವಿಹಂಗಮವಾದ ಈ ಕಡಲಂಚೊಂದಕ್ಕೆ ಸೆಹಲ್ ಹಶೀಶ್ ಅಂತ ಕರೆಯಲಾಗುತ್ತದೆ. ಪ್ರವಾಸಿಗರು ಅಡ್ಡಾಡು ಹೇಳಿ ಮಾಡಿಸಿದಂತಿರುವ ಸೆಹಲ್ ಹಶೀಶ್, ಲಾಗಾಯ್ತಿನಿಂದಲೂ ಅಂತಾರಾಷ್ಟರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಾ ಬಂದಿದೆ. ದುರಂತವೆಂದರೆ, ಈ ಕಡಲ ತೀರದಲ್ಲಿ ಶಾರ್ಕ್ ದಾಳಿಗೊಳಗಾಗಿ ಇದುವರೆಗೂ ನೂರಾರು ಪ್ರವಾಸಿಗರು ಪ್ರಾಣ ತೆತ್ತಿದ್ದಾರೆ. ಇದೀಗ ಇಬ್ಬರು ಮಹಿಳೇ ಪ್ರವಾಸಿಗರ ಮೇಲೆರಗಿದ ದೈತ್ಯ ಶಾರ್ಕ್ ಒಂದು ಪ್ರಾಣ ತೆಗೆದಿದೆ.‘ಆಸ್ಟ್ರೇಲಿಯಾದ ಈ ಮಹಿಳಾ ಪ್ರವಾಸಿಗರು ಸೆಹಲ್ ಹಶೀಶ್ನ ತೀರದಲ್ಲಿ ಮೈಮರೆತು ವಿಹರಿಸುವಾಗ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ನಡೆಯುತ್ತಲೇ ಅಲ್ಲಿನ ಪ್ರವಾಸೋದ್ಯಮ ಇಲಾಖೆ ತಾತ್ಕಾಲಿಕವಾಗಿ ಈ ಬೀಚ್ಗೆ ಪ್ರವಾಸಿಗರ ಪ್ರವೇಶ ನಿರ್ಭಂಧಿಸಿ ಆದೇಶ ಹೊರಡಿಸಿದೆ. ಈ ತೀರದಲ್ಲಿ ಶಾರ್ಕ್ಗಳಿಗೆ ಪ್ರವಾಸಿಗರು ಬಲಿಯಾಗುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವಾರು ಸಲ ಪ್ರವಾಸಿಗರ ಹೆಣ ಬಿದ್ದಿದೆ. ೨೦೧೦ರಲ್ಲಿ ಒಂದೇ ವಾರದಲ್ಲಿ ಐದಾರು ಸಲ ಶಾರ್ಕ್ಗಳ ದಾಳಿ ನಡೆದಿತ್ತು. ಇಂಥಾ ಭಯಾನಕ ವಾತಾವರಣ ಇದ್ದರೂ ಕೂಡಾ ಅದು ಈವತ್ತಿಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಂಡಿದೆಯಂತೆ!