ಭಾರತದ ರಾಜಕೀಯ ವ್ಯವಸ್ಥೆ ಇನ್ನೊಂದಷ್ಟು ವರ್ಷ ಕಳೆದರೂ ಸರಿಯಾಗದಷ್ಟು ಹಡಾಲೆದ್ದು ಹೋಗಿದೆ. ಅಧಿಕಾರವೊಂದೇ ಉದ್ದೇಶ ಎಂಬಂತೆ ಮೆರೆಯುತ್ತಿರುವ ಮಂದಿ ಗ್ರಾಮ ಪಂಚಾಯ್ತಿ ಮಟ್ಟಕ್ಕೂ ಭ್ರಷ್ಟಾಚಾರ, ರಾಜಕೀಯ ಅವ್ಯವಸ್ಥೆಗಳನ್ನು ಹಬ್ಬಿಕೊಳ್ಳುವಂತೆ ಮಾಡಿದ್ದಾರೆ. ಈ ಕಾರಣದಿಂದಾಗಿಯೇ ಇದೀಗ ವಿಧಾನಸೌಧ ಮಟ್ಟದ ಅಂದಾದುಂದಿ, ಅವ್ಯವಹಾರ ಮತ್ತು ಅಸಂಬಂದ್ಧ ನಡವಳಿಕೆಗಳು ಗ್ರಾಮ ಪಂಚಾಯ್ತಿ ಮಟ್ಟದಲ್ಲಿಯೂ ಸಾಂಘವಾಗಿಯೇ ನಡೆಯುತ್ತಿದೆ. ಅಂಥಾ ಬೇಜವಾಬ್ದಾರಿ ಇಲ್ಲದೇ ಹೋಗಿದ್ದರೆ ಮಧ್ಯಪ್ರದೇಶದ ಗ್ರಾಮ,ವೊಂದರಲ್ಲಿ ಸತ್ತ ವ್ಯಕ್ತಿಯೋರ್ವ ಚುನಾವಣೆಯಲ್ಲಿ ಗೆಲ್ಲುವಂಥಾ ಚೋದ್ಯ ಸಂಭವಿಸಲು ಸಾಧ್ಯವಿರುತ್ತಿರಲಿಲ್ಲ.
ಇಂಥಾದ್ದೊಂದು ಅಚ್ಚರಿದಾಯಕ ಘಟನೆ ನಡೆದಿರುವುದು ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಹಳ್ಳಿಯೊಂದರಲ್ಲಿ. ಆ ಭಾಗದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆದಿತ್ತು. ರವೀಂದ್ರ ಠಾಕೂರ್ ಎಂಬ ವ್ಯಕ್ತಿಯೂ ಆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ. ಭಾರೀ ಉತ್ಸಾಹದಿಂದ ಪ್ರಚಾರ ಕಾರ್ಯದಲ್ಲಿಯೂ ಭಾಗಿಯಾಗಿದ್ದ. ಆ ಊರಿಗೆಲ್ಲ ಬೇಕಾಗಿದ್ದ ವ್ಯಕ್ತಿಯಾಗಿದ್ದ ಆತನತ್ತಲೇ ಆ ಗ್ರಾಮದ ಮತದಾರರ ಒಲವಿತ್ತು. ಆದರೆ ವಿಧಿಯೆಂಬುದು ಕಳೆದ ತಿಂಗಳ ೨೨ರಂದು ಆತನ ಭಾಳಲ್ಲಿ ಘೋರವಾಗಿಯೇ ಆಟವಾಡಿತ್ತು. ಆ ವ್ಯಕ್ತಿ ಹೃದಯಾಘಾತದಿಂದ ಮೃತ ಪಟ್ಟಿದ್ದ.
ಅದಾಗಿ ಒಂದಷ್ಟು ದಿನ ಕಳೆದು ಈ ತಿಂಗಳ ಒಂದನೇ ತಾರೀಕಿನಂದು ಗ್ರಾಮ ಪಂಚಾಯ್ತಿ ಚುನಾವಣೆ ನಡೆದಿದೆ. ದುರಂತವೆಂದರೆ ಸತ್ತ ವ್ಯಕ್ತಿಯ ಹೆಸರೇ ಬ್ಯಾಲೆಟ್ ಪೇಪರಿನಲ್ಲಿಯೂ ಬಂದಿದೆ. ಆತ ತಮ್ಮ ಇಷ್ಟದ ಆಸಾಮಿ ಎಂಬ ಕಾರಣದಿಂದಲೋ, ಆತ ಇನ್ನಿಲ್ಲವೆಂಬ ಸೆಂಟಿಮೆಂಟಿನಿಂದಲೋ ಜನರೆಲ್ಲ ಆತನಿಗೇ ಓಟು ಹಾಕಿದ್ದಾರೆ. ಸತ್ತು ಹತ್ತು ದಿನವಾದ ಬಳಿಕ ಆತ ಚುನಾವಣೆಯಲ್ಲಿ ಗೆದ್ದಿದ್ದಾನೆ. ಆದರೀಗ ಈ ಭಾಗದ ಅಧಿಕಾರಿಗಳ ಬೇಜವಾಬ್ದಾರಿತನ ಅವರಿಗೇ ಮುಳುವಾಗುವ ಸಾಧ್ಯತೆಗಳಿದ್ದಾವೆ!