ಈಗ ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಬನಾರಸ್ನ ಮಾಯಗಂಗೆ ಹಾಡು ಮ್ಯಾಜಿಕ್ ಮಾಡಿದೆ. ಒಂದರ್ಥದಲ್ಲಿ ಈ ಹಾಡಿನೊಂದಿಗೆ ಬನಾರಸ್ ದೇಶವ್ಯಾಪಿ ತಲುಪಿಕೊಂಡಿದೆ. ಸಾಮಾನ್ಯವಾಗಿ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆದುಕೊಂಡು, ಆ ನಂತರ ಸೂಪರ್ ಹಿಟ್ಟಾದ ಸಾಕಷ್ಟು ಉದಾಹರಣೆಗಳಿದ್ದಾವೆ. ಜಯತೀರ್ಥ ನಿರ್ದೇಶನದ ಬನಾರಸ್ ಕೂಡಾ ಆ ಸಾಲಿಗೆ ಸೇರಿಕೊಳ್ಳುತ್ತದೆಂಬಂಥಾ ವಾತಾವರಣ ದಟ್ಟವಾಗಿದೆ. ವಿಶೇಷವೆಂದರೆ, ಈ ಸಿನಿಮಾ ಮೂಲಕ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.
ಹಾಗೊಂದು ವೇಳೆ ಝೈದ್ ಅವಕಾಶ ಸಿಕ್ಕಿತೆಂಬ ಕಾರಣದಿಂದ ಸೀದಾ ಎದ್ದು ಬಂದು ನಾಯಕನಾಗಿದ್ದರೆ, ಆತನ ಬಗ್ಗೆ ಈ ಪಾಟಿಯಾಗಿ ನಿರೀಕ್ಷೆ ಮೂಡಿಕೊಳ್ಳುತ್ತಿರಲಿಲ್ಲ. ಬಹುಶಃ ಹಾಡೊಂದರ ಕೆಲವೇ ಕೆಲ ಸನ್ನಿವೇಶಗಳ ಮೂಲಕ ಪಾಸಿಟಿವ್ ಟಾಕ್ ಕ್ರಿಯೇಟ್ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ನಿದೇರ್ಧಶಕ ಜಯತೀರ್ಥ ಮಾಯಗಂಗೆ ಹಾಡು ಬಿಡುಗಡೆಯ ಸಂದರ್ಭದಲ್ಲಿಯೇ ಒಂದು ಮಾತು ಹೇಳಿದ್ದರು. ಝೈದ್ ಖಾನ್ ಶಾಸಕ ಜಮೀರ್ ಅಹ್ಮದ್ ಮಗ ಅನ್ನೋದರ ಬಗ್ಗೆ ಪ್ರಚಾರ ಮಾಡಬೇಕಿಲ್ಲ, ಆತನನ್ನು ಓರ್ವ ಕಲಾವಿದನಾಗಿ ಕಂಡರೆ ಸಾಕೆಂಬುದು ಆ ಮಾತಿನ ಸಾರಾಂಶ. ಝೈದ್ ಖಾನ್ ನಾಯಕನಾಗಲು ಮಾಡಿಕೊಂಡಿರುವ ತಯಾರಿ, ಬನಾರಸ್ನ ಪಾತ್ರಕ್ಕಾಗಿ ತನ್ನನ್ನೇ ತಾನು ಅರ್ಪಿಸಿಕೊಂಡಿರುವ ಪರಿಗಳೆಲ್ಲವೂ ಆತನೋರ್ವ ಅಪ್ಪಟ ಕಲಾವಿದ ಎಂಬುದನ್ನು ಸಾರಿ ಹೇಳುವಂತಿದೆ.
ಸಾಮಾನ್ಯವಾಗಿ ಸ್ಥಿತಿವಂತರ ಮಕ್ಕಳು ಸಿನಿಮಾ ರಂಗಕ್ಕೆ ಬಂದಾಗ ಹೆಚ್ಚಿನ ಮಂದಿ ಮೂಗು ಮುರಿಯೋದಿದೆ. ಬಹುಶಃ ಹೀಗೆ ಆಗಮಿಸುವ ಒಂದಷ್ಟು ಮಂದಿ ಅದಕ್ಕೆ ತಕ್ಕುದಾಗಿರುತ್ತಾರೆ. ಆದರೆ ಝೈದ್ ಖಾನ್ ನಾಯಕನಾಗಬೇಕೆಂಬಂಥಾ ಕನಸನ್ನು ಮಾತ್ರವೇ ಕಂಡಿರಲಿಲ್ಲ; ತಾನು ಹೇಗೆ ಮುಂದುವರೆಯಬೇಕೆಂಬುದರ ಬಗ್ಗೆ ಪ್ರತೀ ಹೆಜ್ಜೆಇಗಳಿಇಗೂ ಕ್ಲಾರಿಟಿ ಹೊಂದಿದ್ದರು. ಅಷ್ಟಕ್ಕೂ ಝೈದ್ಗೆ ತಾನು ನಾಯಕನಾಗಬೇಕೆಂಬುದಷ್ಟೇ ತುರ್ತಾಗಿದ್ದಿದ್ದರೆ ಸಿನಿಮಾವೊಂದನ್ನು ನಿರ್ಮಾಣ ಮಾಡಿಸಿ ನಾಯಕನಾಗಿ ಮಿಂಚೋದು ಕಷ್ಟದ ಮಾತಾಗಿರಲಿಲ್ಲ. ಆದರೆ, ಝೈದ್ ತಮ್ಮಿಷ್ಟದ ಕೆಲ ನಟರನ್ನು ಆರಾಧಿಸುತ್ತಲೇ ಅವರು ನಡೆದು ಬಂದ ಕಡುಗಷ್ಟದ ಹಾದಿಯನ್ನು ಮನನ ಮಾಡಿಕೊಂಡಿದ್ದರು. ಅಂಥಾ ನಟರು ನಾಯಕನಾಗಿ ನೆಲೆ ಕಂಡುಕೊಳ್ಳೋದಕ್ಕೆ ಅದೆಂಥಾ ತಯಾರಿ ಮಾಡಿಕೊಳ್ಳುತ್ತಾರೆ, ಎಷ್ಟೆಲ್ಲ ಸೈಕಲ್ಲು ಹೊಡೆಯುತ್ತಾರೆಂಬುದನ್ನು ಕಂಡುಕೊಂಡಿದ್ದರು.
ಈ ಕಾರಣದಿಂದಲೇ ತನ್ನ ಹಿನ್ನೆಲೆ ಉತ್ತಮವಾಗಿದ್ದರೂ, ಓರ್ವ ನಾಯಕನಾಗಲು ಆತ ಆರಿಸಿಕೊಂಡಿದ್ದು ಪರಿಶ್ರಮದ ಹಾದಿಯನ್ನೇ. ಖ್ಯಾತ ನಟರನೇಕರ ಗರಡಿಯ ಖಾಸಾ ಸದಸ್ಯನಾಗಿದ್ದುಕೊಂಡು, ಕಾಲಕಾಲಕ್ಕೆ ಅವರಿಂದ ಮಾರ್ಗದರ್ಶನ ಪಡೆದುಕೊಳ್ಳುತ್ತಾ ಸಾಗಿ ಬಂದಿದ್ದ ಝೈದ್, ವರ್ಷಾಂತರಗಳಿಂದಲೂ ನಾಯಕನಾಗಲು ತಾಲೀಮು ನಡೆಸಿಕೊಂಡಿದ್ದರು. ನಟನೆ, ಫೈಟು, ಡ್ಯಾನ್ಸು ಸೇರಿದಂತೆ ಪ್ರತಿಯೊಂದರಲ್ಲಿಯೂ ತಾನು ಪಕ್ಕಾ ಎಂಬುದನ್ನು ಪರೀಕ್ಷಿಸಿ ನೋಡಿಕೊಂಡ ನಂತರವಷ್ಟೇ ಝೈದ್ ನಾಯಕನಾಗಲು ತಯಾರಾಗಿದ್ದರು. ಅದಕ್ಕೆ ತಕ್ಕುದಾಗಿಯೇ ಜಯತೀರ್ಥ ಸಾರಥ್ಯದಲ್ಲಿ ಬನಾರಸ್ ನಾಯಕನಾಗುವ ಅವಕಾಶ ಒದಗಿ ಬಂದಿತ್ತು.
ತಾನು ಸ್ಥಿತಿವಂತ ಕುಟುಂಬದಿಂದ ಬಂದ ಹುಡುಗನೆಂಬ ಯಾವ ಅಹಮ್ಮಿಕೆಯೂ ಇಲ್ಲದೆ ಓರ್ವ ಕಲಾವಿದನಾಗಿಯಷ್ಟೇ ವರ್ತಿಸುವ ಝೈದ್ ಗುಣವನ್ನು ಚಿತ್ರತಂಡ ಕೊಂಡಾಡುತ್ತಿದೆ. ಬಹುಶಃ ಆ ಹ್ಯಾಂಗೋವರ್ ಇದ್ದಿದ್ದರೆ ಆತ ಪರಿಪೂರ್ಣ ಕಲಾವಿದನಾಗಿ ನೋಡುಗರ ಕಣ್ಣಿಗೆ ಗೋಚರಿಸೋದು ಕಷ್ಟಸಾಧ್ಯವಾಗುತ್ತಿತ್ತೇನೋ… ನಿರ್ದೇಶಕ ಜಯತೀರ್ಥ ಬನಾರಸ್ನ ನಾಯಕನ ಪಾತ್ರ ಹೇಗೆ ಮೂಡಿ ಬರಬೇಕಂದುಕೊಂಡಿದ್ದರೋ ಥೇಟು ಹಾಗೆಯೇ ಅವತರಿಸುವಂತೆ ಮಾಡುವಲ್ಲಿ ಝೈದ್ ಗೆದ್ದಿರುವ ಲಕ್ಷಣಗಳೇ ಗೋಚರಿಸುತ್ತಿವೆ. ಈ ಹುಡುಗನ ಶ್ರದ್ಧೆಯನ್ನು ಗಮನಸಿದರೆ ಖಂಡಿತವಾಗಿಯೂ ಈತ ಪ್ಯಾನಿಂಡಿಯಾ ಮಟ್ಟದಲ್ಲಿ ನೆಲೆಕಂಡುಕೊಳ್ಳಬಹುದೆಂಬ ಭಾವವೂ ಗಟ್ಟಿಯಾಗುತ್ತದೆ. ಸದ್ಯ ಝೈದ್ ಹಾಡಿಗೆ ಸಿಕ್ಕ ಭರಪೂರ ಮೆಚ್ಚುಗೆಗಳಿಂದ ಥ್ರಿಲ್ ಆಗಿದ್ದಾರೆ. ಬನಾರಸ್ ಕಡೆಯಿಂದ ಇನ್ನಂಷ್ಟು ಥ್ರಿಲ್ಲಿಂಗ್ ಸಂಗತಿಗಳು ಪ್ರೇಕ್ಷಕರಿಗಾಗಿ ಕಾದು ಕೂತಿವೆ…