ಸಿನಿಮಾ ಕನಸೆಂಬುದು ಅದೆಲ್ಲಿಂದ, ಅದ್ಯಾರನ್ನು ಕೈ ಬೀಸಿ ಕರೆಯುತ್ತದೋ… ಕೈ ಹಿಡಿದು ಕರೆ ತರುತ್ತದೋ ಹೇಳಲು ಬರುವುದಿಲ್ಲ. ಸಿನಿಮಾ ಜಗತ್ತೆಂಬ ಮಾಯೆಗೆ ಅಂಥಾದ್ದೊಂದು ಶಕ್ತಿ ಇಲ್ಲದೇ ಹೋಗಿದ್ದಿದ್ದರೆ ಖಂಡಿತವಾಗಿಯೂ ಈ ನಾಡಿನ ಮೂಲೆ ಮೂಲೆಯಿಂದ ಪ್ರತಿಭಾನ್ವಿತರು ಮೇಲೆದ್ದು ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕೆ ತಕ್ಕುದಾಗಿ ಕಡಲ ತೀರದ ಊರಾದ ಕುಂದಪುರದಿಂದ ಈಗಾಗಲೇ ಸಾಕಷ್ಟು ಮಂದಿ ಸಿನಿಮಾ ರಂಗಕ್ಕೆ ಬಂದಿದ್ದಾರೆ. ಮಹತ್ತರವಾದ ಕೊಡುಗೆಗಳನ್ನೂ ಕೊಟ್ಟಿದ್ದಾರೆ. ಆ ಸಾಲಿನಲ್ಲಿ ಸೇರ್ಪಡೆಯಾಗೋ ಭರವಸೆ ಮೂಡಿಸಿರುವವರು ಅಭಿಷೇಕ್ ಶೆಟ್ಟಿ. ಈಗಾಗಲೇ ನಮ್ ಗಣಿ ಬಿಕಾಂ ಪಾಸ್ ಮತ್ತು ಗಜಾನನ ಆಂಡ್ ಗ್ಯಾಂಗ್ ಚಿತ್ರಗಳ ಮೂಲಕ ನಿರ್ದೇಶಕನಾಗಿ, ನಾಯಕ ನಟನಾಗಿ ಛಾಪು ಮೂಡಿಸಿರುವ ಅಭಿಷೇಕ್ ಇದೀಗ ಮತ್ತೊಂದು ಮಹಾ ಕನಸಿನ ಕಿರುಬೆರಳು ಹಿಡಿದು ಹೊರಟಿದ್ದಾರೆ.
ಮೂಲ ಕುಂದಾಪುರವಾದರೂ ಅಭಿಷೇಕ್ ಬೆಳೆದಿದ್ದು, ಓದಿದ್ದೆಲ್ಲವೂ ಬೆಂಗಳೂರಿನಲ್ಲಿಯೇ. ಆದರೆ ಊರ ಕಡೆಯ ಭಾಷೆ, ಭಾವನೆಗಳನ್ನು ಮನಸಲ್ಲಿ ಕಾಪಿಟ್ಟುಕೊಂಡು ಬಂದಿದ್ದ ಅವರಿಗೆ ಆರಂಭದಿಂದಲೂ ಸಿನಿಮಾ ಸೆಳೆತವಿತ್ತು. ಶಾಲಾ ಕಾಲೇಜು ದಿನಗಳಲ್ಲಿ ಸಹಜವಾಗಿಯೇ ಸಿನಿಮಾ ಹೀರೋ ಆಗಬೇಕೆಂಬ ಕನಸು ಕಂಡಿದ್ದವರು ಅಭಿ. ಆದರೆ ಆ ನಂತರ ಜಗತ್ತು ಪರಿಚಯವಾಗುತ್ತಾ ಹೋದಂತೆಲ್ಲ ಸಿನಿಮಾ ನಾಯಕನಾಗೋದು ಅಷ್ಟು ಸಲೀಸಿನ ಸಂಗತಿಯಲ್ಲ ಎಂಬ ವಾಸ್ತವ ಅವರಿಗೆ ಅರಿವಾಗಲಾರಂಭಿಸಿತ್ತು. ಆ ಬಳಿಕ ಅವರ ಚಿತ್ರ ಹೊರಳಿಕೊಂಡಿದ್ದು ನಿರ್ದೇಶನದತ್ತ. ಈ ವಲಯಕ್ಕೆ ಬಂದು ಚೆಂದದ ಕಥೆಗಳ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನೋರಂಜನೆ ನೀಡಬೇಕಲೆಂಬುದು ಅವರ ಕನಸಾಗಿತ್ತು.
ಇವರ ತಂದೆ ಬೆಂಗಳೂರಿನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದರು. ಆ ವಾತಾವರಣದಲ್ಲಿ ಬೆಳೆದು ಸಿನಿಮಾವನ್ನೇ ಧಯಾನಿಸುತ್ತಾ ಮುಂದುವರೆದ ಅಭಿಷೇಕ್ಗೆ ನಿರ್ದೇಶಕನಾಗಲು ಭಾರೀ ತಯಾರಿ ನಡೆಸಬೇಕೆಂಬುದರ ಅರಿವಿತ್ತು. ಅದಕ್ಕಾಗಿ ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತಾ ಸಾಗಿದ್ದ ಅಭಿ, ಕಡೆಗೂ ಚಿತ್ರರಂಗಕ್ಕೆ ಎಂಟ್ರಿ ಪಡೆದುಕೊಂಡಿದ್ದರು. ಟೈಂಮಿಂಗ್, ಅರಳು ಹುರಿದಂತೆ ಮಾತಾಡುವ ಶೈಲಿ ಮತ್ತು ಆಲೋಚನಾ ಶಕ್ತಿಗಳೇ ಅವರಿಗೆ ಮುಂದಿನ ದಿನಗಳಲ್ಲಿ ಸಂಭಾಷಣೆ ಬರೆಯುವ ಅವಕಾಶ ಕೊಟ್ಟಿದ್ದವು. ಹಾಗೆ ನಾಲಕ್ಕು ಸಿನಿಮಾಗಳಿಗೆ ಸಂಭಾಷಣೆ ಬರೆದು ಸೈ ಅನ್ನಿಸಿಕೊಂಡು, ಕಿನಾರೆ ಎಂಬ ಚಿತ್ರಕ್ಕೆ ಅಸೋಸಿಯೇಟ್ ಡೈರೆಕ್ಟರ್ ಆಗಿಯೂ ಕಾರ್ಯನಿರ್ವಹಿಸಿದ್ದರು.
ಇದೆಲ್ಲ ಆದ ನಂತರ ತಾನಿನ್ನು ಸ್ವತಂತ್ರ ನಿರ್ದೇಶಕನಾಗಿ ಅಖಾಡಕ್ಕಿಳಿಯಬಹುದೆಂಬ ನಂಬಿಕೆ ಅವರ ಮನಸಲ್ಲಿ ಮೊಳೆತುಕೊಂಡಿತ್ತು. ಆ ಕ್ಷಣದಿಂದಲೇ ಮನೋರಂಜನಾತ್ಮಕ ಗುಣಗಳೇ ಪ್ರಧಾನವಾಗಿರುವ ಕಥೆಯೊಂದಕ್ಕೆ ಜೀವ ಕೊಟ್ಟು ಅದಕ್ಕೆ ಸಿನಿಮಾ ರೂಪ ಕೊಟ್ಟಿದ್ದರು. ಹಾಗೆ ಶುರುವಾದ ಚಿತ್ರ ನಮ್ ಗಣಿ ಬಿಕಾಂ ಪಾಸ್. ಈ ಕಥೆಯನ್ನು ನಾಗೇಶ್ ಕುಮಾರ್ ಯು.ಎಸ್ ಬಹುವಾಗಿ ಮೆಚ್ಚಿಕೊಂಡು ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರು. ಅಚ್ಚರಿಯೆಂದರೆ, ಅಭಿ ಕಥೆ ಹೇಳುವ ಶೈಲಿ ಮತ್ತು ರಿಹರ್ಸಲ್ನಲ್ಲಿ ನಟನೆ ಹೇಳಿಕೊಡುತ್ತಿದ್ದ ರೀತಿ ನಿರ್ಮಾಪಕರಿಗೆ ಹಿಡಿಸಿತ್ತು. ಆದ ಕಾರಣ ನೀವೇ ಲೀಡ್ ರೋಲ್ ಮಾಡಿ ಎಂಬ ಸಲಹೆಯೂ ಅವರ ಕಡೆಯಿಂದ ಬಂದಿತ್ತು. ಅದುವರೆಗೆ ನಿರ್ದೇಸಕನಾಗಿದ್ದ ಅಭಿಷೇಕ್ ನಾಯಕನಾಗಿಯೂ ಬಣ್ಣ ಹಚ್ಚಿದ್ದರು. ಕೊರೋನಾ ಕಾಲಘಟ್ಟದ ಆಸುಪಾಸಿನಲ್ಲಿ ಬಿಡುಗಡೆಇಗೊಂಡಿದ್ದ ಆ ಚಿತ್ರಕ್ಕೆ ಭಾರೀಓ ಮೆಚ್ಚುಗೆ ವ್ಯಕ್ತವಾಗಿತ್ತು. ನಮ್ ಗಣಿ ಬಿಕಾಂ ಪಾಸ್ ಹಿಟ್ ಸಿನಿಮಾಗಳ ಸಾಲಿಗೆ ಸೇರಿಕೊಂಡಿತ್ತು.
ಅದಾದ ನಂತರ ಅಭಿಷೇಕ್ ಗಜಾನನ ಆಂಡ್ ಗ್ಯಾಂಗ್ ಚಿತ್ರವನ್ನು ರೂಪಿಸಿದ್ದರು. ಅದರಲ್ಲಿಯೂ ಪಾತ್ರವೊಂದನ್ನು ನಿರ್ವಹಿಸುವ ಅವಕಾಶ ಅವರಿಗೆ ಒದಗಿ ಬಂದಿತ್ತು. ಆ ಚಿತ್ರವೂ ತಿಂಗಳ ಹಿಂದೆ ಬಿಡುಗಡೆಗೊಂಡು ಯಶ ಕಂಡಿದೆ. ಹೀಗೆ ಹಂತ ಹಂತವಾಗಿ ಹಿಟ್ ಸಿನಿಮಾಗಳನ್ನು ಕೊಡುತ್ತಾ ಬಂದಿರುವ ಅಭಿಷೇಕ್ ಶೆಟ್ಟಿ ಇದೀಗ ಮತ್ತೊಂದು ಸಿನಿಮಾ ತಯಾರಿಯಲ್ಲಿದ್ದಾರೆ. ಆ ಚಿತ್ರಕ್ಕೆ ಆರಾಮ್ ಅರವಿಂದ್ ಸ್ವಾಮಿ ಎಂಬ ನಾಮಕರಣವನ್ನೂ ಮಾಡಿದ್ದಾರೆ. ದೊಡ್ಡ ಕ್ಯಾನ್ವಾಸ್ ಹೊಂದಿರುವ ಈ ಚಿತ್ರದಲ್ಲಿ ನಿರ್ದೇಶನದ ಜೊತೆಗೆ ಅಭಿಷೇಕ್ ಅವರೇ ನಾಯಕನಾಗಿಯೂ ನಟಿಸುತ್ತಿದ್ದಾರೆ. ಈ ಚಿತ್ರದ ಬಗೆಗಿನ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳು ಇಷ್ಟರಲ್ಲಿಯೇ ಜಾಹೀರಾಗಲಿವೆ.