ಈಗಾಗಲೇ ಪ್ರೇಕ್ಷಕರೆಲ್ಲರ ಚಿತ್ತವನ್ನು ತನ್ನೆಡೆಗೆ ಸೆಳೆದುಕೊಂಡಿರುವ ಚಿತ್ರ ಚೇಸ್. ಕನ್ನಡದ ಮಟ್ಟಿಗೆ ಅಪರೂಪದ ಚಿತ್ರವಾಗಿ ದಾಖಲಾಗುವಂಥಾ ಗುಣಲಕ್ಷಣಗಳನ್ನು ಒಳಗೊಂಡಿರುವ ಚೇಸ್, ಇದೇ ತಿಂಗಳ ಹದಿನೈದರಂದು ತೆರೆಗಾಣಲಿದೆ. ಕೊರೋನಾ ಕಂಟಕದಿಂದಾಗಿ ಕೊಂಚ ತಡವಾದರೂ ಕ್ಯೂರಿಯಾಸಿಟಿಯನ್ನು ಯಥಾಪ್ರಕಾರವಾಗಿ ಕಾಯ್ದಿಟ್ಟುಕೊಂಡ ಹೆಗ್ಗಳಿಕೆಯೂ ಈ ಚಿತ್ರಕ್ಕೆ ಸಲ್ಲುತ್ತದೆ. ಈವರೆಗೂ ಚೇಸ್ಯಿಂದ ಸಮ್ಮೋಹಕವಾದ ಒಂದಷ್ಟು ವಿಚಾರಗಳು ಹೊರಬೀಳುತ್ತಲೇ ಬಂದಿವೆ. ಇದೀಗ ಚಿತ್ರತಂಡ ಹಂಚಿಕೊಂಡಿರುವ ವಿಚಾರವಿದೆಯಲ್ಲಾ? ಅದು ಕನ್ನಡ ಚಿತ್ರಪ್ರೇಮಿಗಳನ್ನು ಪಟ್ಟಂಪೂರಾ ಥ್ರಿಲ್ ಆಗಿಸುವಂತಿದೆ. ಯಾಕೆಂದರೆ, ಚೇಸ್ ವಿತರಣಾ ಹಕ್ಕುಗಳನ್ನು ಭಾರತದ ಪ್ರಮುಖವಾದ ಸ್ಟ್ರೀಮಿಂಗ್ ಹಾಗೂ ಡಿಸ್ಟ್ರಿಬ್ಯೂಟಿಂಗ್ ಸಂಸ್ಥೆಯಾದ ಯುಎಫ್ಒ ದಾಖಲೆ ಮೊತ್ತಕ್ಕೆ ಖರೀದಿಸಿದೆ.
ಭಾರತೀಯ ಚಿತ್ರರಂಗದಲ್ಲಿ ಘನತೆ, ಗೌರವ ಹೊಂದಿರುವಂಥಾ ಸಂಸ್ಥೆ ಯುಎಫ್ಒ. ಮೂವಿ ಸ್ಟರೀಮಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಕಿಮ್ಮತ್ತು ಹೊಂದಿರುವ ಈ ಸಂಸ್ಥೆ, ಇತ್ತೀಚಿನ ದಿಬನಗಳಲ್ಲಿ ವಿತರಣಾ ಕ್ಷೇತ್ರಕ್ಕೂ ಹೆಜ್ಜೆಯಿಟ್ಟಿದೆ. ಕ್ವಾಲಿಟಿ ಹೊಂದಿರುವಂಥಾ ಚಿತ್ರಗಳನ್ನು ಮಾತ್ರವೇ ಆಯ್ದುಕೊಂಡು ಅದರಲ್ಲಿಯೂ ಗುಣಮಟ್ಟ ಕಾಯ್ದುಕೊಂಡಿದೆ. ಹೀಗಿರೋದರಿಂದಲೇ ಯುಎಫ್ಒ ಒಂದು ಚಿತ್ರದ ವಿತರಣಾ ಹಕ್ಕುಗಳನ್ನು ಖರೀದಿಸಿತೆಂದರೆ, ಆ ಚಿತ್ರದ ಬಗ್ಗೆ ತಾನೇ ತಾನಾಗಿ ಕುತೂಹಲ ಮೂಡಿಕೊಳ್ಳುತ್ತೆ. ಇಂಥಾ ಸಂಸ್ಥೆ ಇದೇ ಮೊದಲ ಬಾರಿ ಕರ್ನಾಟಕಕ್ಕೆ ಪಾದಾರ್ಪಣೆ ಮಾಡಿದೆ; ಚೇಸ್ನ ವಿತರಣಾ ಹಕ್ಕುಗಳನ್ನು ಖರೀದಿಸುವ ಮೂಲಕ.
ಯುಎಫ್ಒ ಅಧಿಕಾರಿಗಳು ಚೇಸ್ ಚಿತ್ರವನ್ನು ವೀಕ್ಷಿಸಿ, ಬಹುವಾಗಿ ಮೆಚ್ಚಿಕೊಂಡು ವಿತರಣಾ ಹಕ್ಕುಗಳನ್ನು ಖರೀದಿಸಿದ್ದಾರೆ. ಈ ಮೂಲಕ ಚೇಸ್ ಅನ್ನು ದೇಶಾದ್ಯಂತ ವಿತರಿಸುವ ಹಕ್ಕನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಇದರೊಂದಿಗೆ ಕೆಜಿಎಫ್ ಮತ್ತು ಚಾರ್ಲಿ ನಂತರದಲ್ಲಿ ಚೇಸ್ಗೆ ದೇಶ ಮಟ್ಟದಲ್ಲಿ ಮನ್ನಣೆ ಸಿಕ್ಕಿದಂತಾಗಿದೆ. ಈಗಾಗಲೇ ಚೇಸ್ ಬಗೆಗೊಂದು ಪಾಸಿಟಿವ್ ವಾತಾವರಣ ಚಾಲ್ತಿಯಲ್ಲಿದೆ. ಈ ಹೊತ್ತಿನಲ್ಲಿ ವಿತರಣಾ ಹಕ್ಕುಗಳು ಖರೀದಿಯಾಗಿರೋದು ಮತ್ತು ಯುಎಫ್ಒ ಕಡೆಯಿಂದಲೇ ಮೆಚ್ಚುಗೆ ಸಿಕ್ಕಿರೋದರಿಂದ ಚಿತ್ರತಂಡ ಖುಷಿಗೊಂಡಿದೆ. ನಿರ್ದೇಶಕ ವಿಲೋಕ್ ಶೆಟ್ಟಿಯವರ ಬಹು ವರ್ಷಗಳ ಶ್ರಮವೂ ಸಾರ್ಥಕವಾದಂತಾಗಿದೆ.