ಕುಟುಂಬ ಸಮೇತರಾಗಿ ಕೂತು ನೋಡುವಂಥಾ ಥರ ಥರದ ಪಾತ್ರಗಳ ಮೂಲಕ ಬೆಳ್ಳಿತೆರೆಯನ್ನು ಶ್ರೀಮಂತಗೊಳಿಸಿದ್ದವರು ನಟಿ ಪ್ರೇಮಾ. ಅವರ ಹೆಸರು ಕೇಳಿದರೂ ಪುಳಕಿತರಾಗಿ, ಪ್ರೇಮಾ ನಟಿಸಿದ ಚಿತ್ರಗಳನ್ನು ನೆನಪು ಮಾಡಿಕೊಂಡು ಮದಗೊಳ್ಳುವ ಕೋಟ್ಯಂತರ ಅಭಿಮಾನಿಗಳು ಕರುನಾಡಿನಲ್ಲಿದ್ದಾರೆ. ಹಾಗೆ ಪ್ರೇಕ್ಷಕರ ಪ್ರೀತಿ ಸಂಪಾದಿಸಿಕೊಂಡು, ತಮ್ಮದೇ ಆದ ಅಭಿಮಾನಿ ವರ್ಗವೊಂದನ್ನು ಸೃಷ್ಟಿಸಿಕೊಂಡಿದ್ದವರು ಪ್ರೇಮಾ. ತೊಂಭತ್ತರ ದಶಕದಲ್ಲಿ ಮುಖ್ಯನಾಯಕಿಯಾಗಿ ಮಿಂಚಿ ಸ್ಟಾರ್ ನಟರೊಂದಿಗೆ ತೆರೆಹಂಚಿಕೊಂಡಿದ್ದ ಅವರು ದಶಕಗಳ ಕಾಲ ಆ ಅಲೆಯನ್ನು ಹಾಗೆಯೇ ಕಾಪಿಟ್ಟುಕೊಂಡಿದ್ದರು. ಆ ನಂತರದಲ್ಲಿ ಒಂದು ಸುದೀರ್ಘವಾದ ಗ್ಯಾಪ್ನ ನಂತರ ಆಗಾಗ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರೇಮಾ, ಇದೀಗ ಹೊಸಾ ಆವೇಗದೊಂದಿಗೆ, ಹೊಸಾ ಬಗೆಯ ಪಾತ್ರದೊಂದಿಗೆ ವೆಡ್ಡಿಂಗ್ ಗಿಫ್ಟ್ ಚಿತ್ರದ ಮೂಲಕ ಮತ್ತೆ ಮರಳಿದ್ದಾರೆ.
ವಿಕ್ರಂ ಪ್ರಭು ನಿರ್ಮಾಣ ಮಾಡಿ ನಿರ್ದೇಶಿಸಿರುವ ವೆಡ್ಡಿಂಗ್ ಗಿಫ್ಟ್ ಒಂದಷ್ಟು ಕಾತರ ಮೂಡಿಸಿರೋದಕ್ಕೆ ಪ್ರೇಮಾ ಪುನರಾಗಮನವೂ ಪ್ರಧಾನ ಕಾರಣ. ಪ್ರೇಮಾ ಆರಂಭ ಕಾಲದಿಂದಲೂ ಕುಟುಂಬ ಸಮೇತರಾಗಿ ಕೂತು ನೋಡುವಂಥಾ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಬಲು ತೂಕದ ಪಾತ್ರಗಳನ್ನೇ ಆವಾಹಿಸಿಕೊಳ್ಳುತ್ತಾ ಪ್ರೇಕ್ಷಕರಿಗೆ ಹತ್ತಿರಾಗಿದ್ದಾರೆ. ಹಾಗಿರುವಾಗ ರೀ ಎಂಟ್ರಿಯ ಈ ಹೊತ್ತಿನಲ್ಲಿ ಎಂತೆಂಥಾದ್ದೋ ಪಾತ್ರ ನಿರ್ವಹಿಸುವ ಮನಸ್ಥಿತಿ ಅವರಿಗಿಲ್ಲ. ಕಥೆ ಚೆನ್ನಾಗಿರಬೇಕು. ಪಾತ್ರವೂ ಅದಕ್ಕೆ ತಕ್ಕುದಾಗಿರೋದರ ಜೊತೆಗೆ ಸಾಮಾಜಿಕ ಸಂದೇಶವನ್ನೂ ಕೊಡುವಂತಿರಬೇಕೆಂಬುದು ಪ್ರೇಮಾರ ಬಯಕೆ. ಅದನ್ನು ಪೂರೈಸುವಂತೆ ಸಿಕ್ಕ ಚಿತ್ರ ವೆಡ್ಡಿಂಗ್ ಗಿಫ್ಟ್.
ವಿಕ್ರಂ ಪ್ರಭು ಕಥೆಯ ಎಳೆಯನ್ನು ಹೇಳಿದಾಕ್ಷಣವೇ ಅದು ಪ್ರೇಮಾರನ್ನು ತಾಕಿತ್ತಂತೆ. ಅದರಲ್ಲಿರುವ ಪ್ರಯೋಗಾತ್ಮಕ ಗುಣ, ಕಥೆಯೊಳಗೇ ಅಡಕವಾಗಿರುವಂಥಾ ಸಾಮಾಜಿಕ ಕಾಳಜಿ ಮತ್ತು ತಮ್ಮ ಪಾತ್ರದ ಮಹತ್ವಗಳೆಲ್ಲವೂ ಅವರನ್ನು ಸೆಳೆದಿದ್ದವಂತೆ. ಈ ಕಾರಣದಿಂದಲೇ ಬೇರೇನೂ ಯೋಚಿಸದೆ ಪ್ರೇಮಾ ನಟಿಸಲು ಒಪ್ಪಿಕೊಂಡು ಬಿಟ್ಟಿದ್ದರಂತೆ. ಆ ನಂತರದಲ್ಲಿ ಅವರು ಈ ಕಥೆಯ ಮೇಲಿಟ್ಟಿದ್ದ ನಂಬಿಕೆ ಮುಕ್ಕಾಗದಂತೆ ಅದು ದೃಷ್ಯ ರೂಪಕ್ಕಿಳಿದಿದೆಯೆಂಬ ಖುಷಿ ಪ್ರೇಮಾರಲ್ಲಿದೆ. ಕ್ಯಾಮೆರಾ ವರ್ಕ್ ಸೇರಿದಂತೆ ಒಂದಿಡೀ ಚಿತ್ರ ರೂಪುಗೊಂಡಿದ್ದರ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ವೆಡ್ಡಿಂಗ್ ಗಿಫ್ಟ್ ಮೂಲಕ ತಾವು ಮತ್ತೊಮ್ಮೆ ಪ್ರೇಕ್ಷಕರನ್ನು ಭಿನ್ನ ಪಾತ್ರದ ಮೂಲಕ ಮುಖಾಮುಖಿಯಾಗುತ್ತಿರುವ ಖುಷಿಯೂ ಅವರಲ್ಲಿದೆ.
ಪ್ರೇಮಾ ಒಂದಷ್ಟು ವರ್ಷಗಳ ಕಾಲ ಕಾಲ ತೆರೆಮರೆಯಲ್ಲಿದ್ದರಲ್ಲಾ? ಅವರಿಗೆ ಅವಕಾಶಗಳ ತತ್ವಾರವಾಗಿದೆ ಅಂತೆಲ್ಲ ಒಂದಷ್ಟು ಮಂದಿ ಸುದ್ದಿ ಹಬ್ಬಿಸಿದ್ದರು. ಆದರೆ ಅಸಲೀ ಕಥೆ ಬೇರೆಯದ್ದೇ ಇದೆ. ಬೇರೆ ಭಾಷೆಗಳಲ್ಲಿ ಬ್ಯುಸಿಯಾಗಿದ್ದ ಪ್ರೇಮಾರ ಮುಂದೆ ಕನ್ನಡದಲ್ಲಿಯೂ ದಂಡಿ ದಂಡಿ ಅವಕಾಶಗಳು ಬರುತ್ತಿದ್ದವು. ಆದರೆ ಅದಾಗಲೇ ಸ್ಟಾರ್ ನಟಿಯಾಗಿ ಗುರುತಿಸಿಕೊಂಡು, ಘನತೆಯಿರುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರಿಗೆ ಯಾವ್ಯಾವುದೋ ಚಿತ್ರಗಳಲ್ಲಿ ನಟಿಸೋದು ಸುತಾರಾಂ ಇಷ್ಟವಿರಲಿಲ್ಲ. ಅಷ್ಟಕ್ಕೂ ಪ್ರೇಮಾ ತಮ್ಮ ಚಿತ್ರದಲ್ಲಿ ನಟಿಸಿದರೆ ಮೈಲೇಜು ಸಿಗುತ್ತದೆಂದು ಕಾದು ಕೂತಿದ್ದ ಒಂದಷ್ಟು ಮಂದಿಗೆ, ಪ್ರೇಮಾರ ಘನತೆ, ಗೌರವಕ್ಕೆ ತಕ್ಕುದಾದ ಪಾತ್ರ ಸೃಷ್ಟಿಸಬೇಕೆಂಬ ಪರಿವೆ ಇರಲಿಲ್ಲ. ಅಂಥಾದ್ದರ ಬಗ್ಗೆ ಯಾವ ಮರುಕ, ಕಂಪ್ಲೇಂಟುಗಳನ್ನೂ ಇಟ್ಟುಕೊಳ್ಳದ ಪ್ರೇಮಾರಿಗೆ ವೆಡ್ಡಿಂಗ್ ಗಿಫ್ಟ್ ಚಿತ್ರದಲ್ಲಿ ವಕೀಲೆಯಾಗೋ ಅವಕಾಶ ಕೂಡಿ ಬಂದಿದೆ. ಪ್ರೇಮಾ ನಟಿಸಲು ಒಪ್ಪಿಕೊಂಡಿರೋದೇ ಈ ಚಿತ್ರದ ಕಥೆ ಭಿನ್ನವಾಗಿದೆ ಎಂಬುದರ ಸ್ಪಷ್ಟ ಸಂಕೇತ.
ಪ್ರೇಮಾ ಈ ಚಿತ್ರದ ಮೂಲಕ ಮತ್ತೆ ಬಂದಿರೋದರಿಂದ ಕನ್ನಡದ ಪ್ರೇಕ್ಷಕರು ನಿಜಕ್ಕೂ ಥ್ರಿಲ್ ಆಗಿದ್ದಾರೆ. ೧೯೯೫ರಲ್ಲಿ ಸವ್ಯಸಾಚಿ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟಿಯಾಗಿ ಎಂಟ್ರಿ ಕೊಟ್ಟಿದ್ದವರು ಪ್ರೇಮಾ. ಈ ಚೆಂದದ ಹುಡುಗಿಯನ್ನು ಆ ನಂತರದ ದಿನಗಳಲ್ಲಿ ಕನ್ನಡದ ಚಿತ್ರಪ್ರೇಮಿಗಳೆಲ್ಲ ಆರಾಧಿಸಿದ ಪರಿಯೇ ಅದ್ಭುತ. ಕನ್ನಡದಲ್ಲಿ ಸಕ್ರಿಯರಾಗಿದ್ದುಕೊಂಡು ಮಲೆಯಾಳಂ ಸೇರಿದಂತೆ ನಾನಾ ಭಾಷೆಗಳಲ್ಲಿ ನಟಿಸುತ್ತಾ, ದಕ್ಷಿಣ ಭಾರತೀಯ ಚಿತ್ರರಂಗದಲ್ಲವರು ದೊಡ್ಡ ಹೆಸರು ಮಾಡಿದ್ದಾರೆ. ಓಂ ಚಿತ್ರದ ಅಮೋಘ ನಟನೆಗಾಗಿ ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿರುವ ಪ್ರೇಮಾ ಕನ್ನಡ ಚಿತ್ರರಂಗದ ನಿಜವಾದ ಆಸ್ತಿ. ಅವರಿಗಾಗಿ ಚೆಂದದ, ಸದಭಿರುಚಿಯ, ಸಾಮಾಜಿಕ ಸಂದೇಶದ ಪಾತ್ರಗಳು ಸೃಷ್ಟಿಯಾದರೆ ಮತ್ತೆ ಪ್ರೇಮಾ ಕನ್ನಡದಲ್ಲಿ ಮಿಂಚೋದರಲ್ಲಿ ಯಾವ ಸಂದೇಹವೂ ಇಲ್ಲ. ಅದಕ್ಕೆ ವೆಡ್ಡಿಂಗ್ ಗಿಫ್ಟ್ ಚಿತ್ರ ಶ್ರೀಕಾರ ಹಾಕಲಿ, ಅವರ ವೃತ್ತಿ ಬದುಕು ಮತ್ತೆ ಪ್ರಜ್ವಲಿಸಲೆಂದು ಹಾರೈಸೋಣ…