ಗಾಂಜಾದಂಥಾ ನಶೆಗೆ ಇಂದು ಯುವ ಸಮೂಹವೇ ಒಂದು ಕಡೆಯಿಂದ ಬಲಿ ಬೀಳುತ್ತಿದೆ. ಹೇಗಾದರೂ ಮಾಡಿ ಅದನ್ನು ಮಟ್ಟ ಹಾಕುವಂತೆ ಜನಸಾಮಾನ್ಯರ ಕಡೆಯಿಂದಲೇ ಒಕ್ಕೊರಲಿನ ಕೂಗು ಕೇಳಿ ಬರುತ್ತಿದೆ. ಆದರೆ ಈ ಸಮಾಜದಲ್ಲಿ ಬಹು ಹಿಂದಿನಿಂದಲೂ ಗಾಂಜಾ ನಾನಶಾ ಸ್ವರೂಪದಲ್ಲಿ ಚಾಲ್ತಿಯಲ್ಲಿದೆ. ಒಂದರ್ಥದಲ್ಲಿ ಅದು ನಮ್ಮ ಆಧ್ಯಾತ್ಮಿಕ ವಲಯದ ಭಾಗವೂ ಆಗಿದೆ. ಸಾಧುಗಳೇ ಗಾಂಜಾ ಹೊಡೆದು ಆತ್ಮ ಪರಮಾತ್ಮನ ಬಗ್ಗೆ ಪ್ರಲಾಪಿಸೋ ಪರಂಪರೆಯೂ ನಮ್ಮಲ್ಲಿದೆ. ಕೆಲ ಸಾಧುಗಳ ಕಠೋರ ಆಧ್ಯಾತ್ಮಿಕ ಸಿದ್ಧಿಗೂ ಗಾಂಜಾವನ್ನೇ ವಾಹಕವಾಗಿಸಿಕೊಂಡಿರುವಂಥಾ ಕುರುಹುಗಳೂ ಕೂಡಾ ಸಿಗುತ್ತವೆ.
ಅದುವೇ ಹೈಟೆಕ್ ರೂಪ ಧರಿಸಿ ಇದೀಗ ನಮ್ಮವರನ್ನೇ ಬಲಿ ಪಡೆದುಕೊಳ್ಳುತ್ತಿವೆ. ಈ ಡ್ರಗ್ಸ್ನಲ್ಲೀಗ ನಾನಾ ನಮೂನೆಗಳಿದ್ದಾವೆ. ಎಂಥಾದ್ದೇ ಪರಿಸ್ಥಿತಿ ಇದ್ದರೂ ಬೇರೆಯದ್ದೇ ಲೋಕದಲ್ಲಿ ತೇಲಾಡಿಸುವ ಡ್ರಗ್ಸ್ ಯುವ ಜನರನ್ನು ಆಯಸ್ಕಾಂತದಂತೆ ಆಕರ್ಶಿಸುತ್ತಿದೆ. ಕೆಲ ಮಂದಿ ಮೋಜಿಗೆಂದು ಡ್ರಗ್ಸ್ ಸಂಪರ್ಕಕ್ಕೆ ಬಂದು ದಾಸರಾಗುತ್ತಾರೆ. ಮತ್ತೆ ಮಂದಿ ಮಾನಸಿಕ ತೊಳಲಾಟಗಳನ್ನು ಮೀರಿಕೊಳ್ಳಲಾಗದೆ ನಶೆಗೆ ವಶವಾಗಿ ಬದುಕನ್ನು ಕೈಯಾರೆ ಹಾಳುಗೆಡವಿಕೊಳ್ಳುತ್ತಾರೆ. ಅವರೆಲ್ಲರನ್ನೂ ಸಂತೃಪ್ತಗೊಳಿಸುವಂಥಾ ಸರಕುಗಳೀಗ ಎಲ್ಲೆಡೆ ಹರಿದಾಡುತ್ತಿವೆ. ಕೊಕೇನ್, ಎಲ್ಎಸ್ಡಿ, ಕೆನಾಬಿಸ್, ನಿಕೋಟಿನ್, ಕೆಫಿನ್, ಹೆರಾಯಿನ್, ಫೆಥಡಿನ್ ಸೇರಿದಂತೆ ಈ ಡ್ರಗ್ಸ್ನಲ್ಲಿ ನಾನಾ ವಿಧಗಳಿವೆ. ಅವೆಲ್ಲವೂ ಈಗ ಹೈಟೆಕ್ ಸ್ವರೂಪ ಪಡೆದುಕೊಂಡಿವೆ.
ಹಾಗಾದರೆ ಈ ಮಾದಕ ವಸ್ತುಗಳು ಮೊದಲಿಗೆ ಯಾವ ದಿಕ್ಕಿನಿಂದ ಹರಿದು ಬಂದವೆಂಬ ಪ್ರಶ್ನೆ ಕಾಡುತ್ತದೆ. ಇದಕ್ಕೆ ಉತ್ತರ ಹುಡುಕುತ್ತಾ ಹೋದರೆ ಅದರ ದಿಕ್ಕು ಅರಬ್ಬರತ್ತ ತೋರುತ್ತದೆ. ಒಂದು ಮೂಲದ ಪ್ರಕಾರ ಈ ನಶೆಯ ಘಾಟನ್ನು ಮೊದಲು ವಿಶ್ವಕ್ಕೆ ಹರಡಿದ್ದವರು ಅರಬ್ಬರು. ಇದನ್ನು ಸೇವಿಸಿದವರಿಗೆ ಯಾವ ಗಾಯ ನೋವುಗಳೂ ಅರಿವಿಗೆ ಬಾರದಿರೋದರಿಂದ ಯುದ್ಧಗಳ ಸಂದರ್ಭದಲ್ಲಿ ಸೈನಿಕರಿಗೆ ಸೇವಿಸುವಂತೆ ಪ್ರೇರೇಪಿಸಲಾಗಿತ್ತಂತೆ. ನೋಡ ನೋಡುತ್ತಾ ಅದು ಬೇರೆ ಬೇರೆ ರೂಪ ಧರಿಸಿ ದೇಶ ದೆಶಗಳನ್ನೇ ಆವರಿಸಿಕೊಂಡಿದೆ. ಇದನ್ನು ಆಡಳಿತ ಯಂತ್ರದ ಇಚ್ಛಾಶಕ್ತಿಯಿಂದಲ್ಲದೇ ಬೇರ್ಯಾವುದರ ಮೂಲಕವೂ ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎಂಬಂತೆ ಬೆಳೆದು ನಿಂತಿದೆ.