ಕೊರೋನಾ ಮೂರನೇ ಅಲೆಯನ್ನೂ ಕರ್ನಾಟಕದ ಮಟ್ಟಿಗೆ ಡ್ರಗ್ ಕೇಸ್ ತಡೆದು ನಿಲ್ಲಿಸಿತ್ತು. ದೃಷ್ಯ ಮಾಧ್ಯಮಗಳ ಚಿತ್ತವೆಲ್ಲ ಏಕಾಏಕಿ ಸಂಜನಾ ಹಾಗೂ ರಾಗಿಣಿಯತ್ತಲೇ ಕೀಲಿಸಿಕೊಂಡಿತ್ತು. ಅಫ್ಘಾನಿಸ್ಥಾನದ ಉಗ್ರರ ಅಟ್ಟಹಾಸವನ್ನೂ ಮೆಟ್ಟಿ ನಿಂತು ಸುದ್ದಿಕೇಂದ್ರಕ್ಕೆ ಬಂದ ಖ್ಯಾತಿ ಈ ನಟಿಯರಿಗೆ ಸಲ್ಲುತ್ತೆ. ಇರಲಿ, ಇದು ನಮ್ಮ ರಾಜ್ಯದ ವಿಚಾರ. ಆದ್ರೆ, ಈ ಡ್ರಗ್ ಡೀಲಿಂಗ್ ವಿಚಾರದಲ್ಲಿ ಮಾತ್ರ ಬಗೆದಷ್ಟೂ ಚಿತ್ರವಿಚಿತ್ರವಾದ ಸಂಗತಿಗಳು ಹೊರಬೀಳುತ್ತವೆ. ಡ್ರಗ್ ಡೀಲರ್ಗಳು ಪೊಲೀಸರನ್ನೇ ಯಾಮಾರಿಸಿ ದಂಧೆ ನಡೆಸೋದರಲ್ಲಿ ಪಂಟರುಗಳು. ನಶೆಯ ಏಟಿನಲ್ಲಿ, ಕಾಸಿನ ಮೋಹದಲ್ಲಿ ಎಂಥಾ ರಿಸ್ಕಿಗಾದರೂ ಸೈ ಅನ್ನೋ ಕಿರಾತಕರ ಲೋಕವದು. ಸದಾ ಖಾಕಿ ಪಡೆ ಪಹರೆ ಕಾಯುತ್ತಿದ್ದರೂ ಅದರಾಚೆಗೆ ನಶೆ ಹಬ್ಬಿಸೋ ಈ ಮಂದಿಯದ್ದು ನಿಜಕ್ಕೂ ಪ್ರಳಯಾಂತಕ ಬುದ್ಧಿ.
ಇಂಥಾ ಡ್ರಗ್ ಕಾರ್ಟಲ್ಗಳು ವಿಶ್ವಾದ್ಯಂತ ಆಕ್ಟೀವ್ ಆಗಿರೋದು ಹೊಸಾ ವಿಚಾರವೇನಲ್ಲ. ಯಾಕಂದ್ರೆ, ಆ ದಂಧೆಗೆ ಭಾರೀ ಇತಿಹಾಸವಿದೆ. ಮುಂದುವರೆದ ರಾಷ್ಟ್ರಗಳಲ್ಲಿಯಂತೂ ನಾವೆಲ್ಲ ಕಣ್ಣು ಬಿಡುವ ಮುನ್ನವೇ ನಶೆಯ ನರ್ತನ ಶುರುವಾಗಿ ಹೋಗಿತ್ತು. ಸಾಮಾನ್ಯವಾಗಿ ಈ ಡ್ರಗ್ ಡೀಲಿಂಗ್ ಕೂಡಾ ರೌಡಿಸಂ ಇದ್ದಂತೆಯೇ. ಅಲ್ಲಿಯೂ ನಾನಾ ಗ್ಯಾಂಗುಗಳಿರುತ್ತವೆ. ಅವುಗಳ ನಡುವೆ ಮಾರಾಮಾರಿಯಾಗುತ್ತವೆ. ಆದ್ರೆ, ಯಾವ ಡ್ರಗ್ ಡೀಲರ್ಗಳು ಕೂಡಾ ತಮ್ಮ ಎದುರಾಳಿ ಗ್ಯಾಂಗುಗಳನ್ನ ಅಷ್ಟಾಗಿ ಲೆಕ್ಕಕ್ಕಿಟ್ಟುಕೊಳ್ಳೋದಿಲ್ಲ. ಅವರೆಲ್ಲರ ನಿಜವಾದ ಶತ್ರುಗಳೆಂದರೆ ಆಯಾ ಭಾಗದ ಪೊಲೀಸರು ಮಾತ್ರ.
ಹಾಗಿರೋದರಿಂದಲೇ ಅವರೆಲ್ಲ ಪೊಲೀಸರಿಂದ ತಪ್ಪಿಸಿಕೊಳ್ಳಲು ನಾನಾ ರೂಟುಗಳನ್ನ ಕಂಡುಕೊಂಡಿದ್ದಾರೆ. ಬ್ರೆಜಿಲ್ನ ದಂಧೆಕೋರರು ಮಾತ್ರ ಅದಕ್ಕಾಗಿ ಪೊಲೀಸರಿಗೇ ಶಾಕ್ ನೀಡುವಂಥಾದ್ದೊಂದು ಐನಾತಿ ಐಡಿಯಾ ಮಾಡಿ ಬಿಟ್ಟಿದ್ರು. ಬ್ರೆಜಿಲ್ನ ತುಂಬೆಲ್ಲ ಡ್ರಗ್ ಮಾಫಿಯಾ ಮೇಳೈಸಿ ಅದೆಷ್ಟೋ ವರ್ಷಗಳಾಗಿವೆ. ಅಲ್ಲಿನ ಕಾನೂನು ಸುವ್ಯವಸ್ಥೆಯ ಪಾಲಿಗೆ ಅದುವೇ ಬಹು ದೊಡ್ಡ ಕಂಟಕವಾಗಿಯೂ ಗುರುತಿಸಿಕೊಂಡಿದೆ. ೨೦೧೫ರಿಂದೀಚೆಗಂತೂ ಡ್ರಗ್ ದಂಧೆ ಅಲ್ಲಿ ಅವ್ಯಾಹತವಾಗಿ ಬೆಳೆದುಕೊಂಡಿತ್ತು. ಆದ್ದರಿಂದಲೇ ಅದನ್ನು ಮಟ್ಟ ಹಾಕೋ ಒತ್ತಡ ಪೊಲೀಸ್ ಇಲಾಖೆಯ ಮೇಲಿತ್ತು. ಇದರ ಮೇಲೆ ಕಣ್ಣಿಟ್ಟ ಪೊಲೀಸರು ಅದೆಷ್ಟೇ ಅಚ್ಚುಕಟ್ಟಾಗಿ ಕಾರ್ಯಾಚರಣೆ ನಡೆಸಿದರೂ ಡ್ರಗ್ ಡೀಲರ್ಗಳು ಹೇಗೋ ತಪ್ಪಿಸಿಕೊಳ್ಳುತ್ತಿದ್ದರು.
ಒಂದು ಒಂಟಿ ಮನೆಯಲ್ಲಿ ಡ್ರಗ್ ಡೀಲರ್ಗಳು ಮಾಲಿನ ಸಮೇತ ಬೀಡು ಬಿಟ್ಟಿದ್ದಾರೆಂಬ ಸಂದೇಶ ಬಂತೆಂದಿಟ್ಕೊಳ್ಳಿ. ಪೊಲೀಸರು ತುಂಬಾ ಎಚ್ಚರದಿಂದ ದಾಳಿ ನಡೆಸಿದ್ರೂ ಕಿರಾತಕರು ಎಸ್ಕೇಪಾಗಿ ಬಿಡ್ತಿದ್ರು. ಇದ್ರ ಬಗ್ಗೆ ತಲೆ ಕೆಡಿಸಿಕೊಂಡ ಪೊಲೀಸ್ ಪಡೆ ಅದೊಂದು ದಿನ ಸರಿಯಾಗಿಯೇ ವಿಚಿತ್ರವಾದ ಮನೆಯೊಂದರ ಮೇಲೆ ದಾಳಿ ನಡೆಸಿದ್ರು. ಆ ಮನೆ ಕೊಂಪೆಯಂಥಾದ್ದು. ಅದಕ್ಕೆರಡು ಬಾಗಿಲುಗಳಿದ್ದವು. ಆದ್ರೆ ಕಿಟಕಿಗಳಿರಲಿಲ್ಲ. ಪೊಲೀಸರು ಒಂದು ಬಾಗಿಲಿಂದ ಎಂಟ್ರಿ ಕೊಡುತ್ತಲೇ ಅಲ್ಲಿಂದ ‘ಮಾಮ್… ಪೊಲೀಸ್…’ ಅನ್ನೋ ಧ್ವನಿ ಕೇಳಿ ಬರಲಾರಂಭಿಸಿತ್ತು. ಆ ಮನೆ ಬಾಗಿಲನ್ನು ಪೊಲೀಸ್ ಪಡೆ ತಲುಪಿಕೊಳ್ಳುತ್ತಲೇ ದಂಧೆಕೋರರೆಲ್ಲ ಎಸ್ಕೇಪಾಗಿದ್ರು. ಆ ಕ್ಷಣವೇ ಒಳ ನುಗ್ಗಿ ಎರಡೂ ಬಾಗಿಲನ್ನು ಪೊಲೀಸರ್ ಭದ್ರಪಡಿಸಿದ್ರು. ಆಗ ಅದರ ಮೂಲೆಯೊಂದರಲ್ಲಿ ಮುದ್ದಾದ ಗಿಣಿಯೊಂದು ಲಾಕ್ ಆಗಿತ್ತು.
ಪೊಲೀಸರನ್ನು ನೋಡುತ್ತಲೇ ಮನೆ ಬಾಗಿಲಲ್ಲಿ ಕೂತು ಮಾಮ್ ಪೊಲೀಸ್… ಅಂತ ಅಲರ್ಟ್ ಮಾಡಿದ್ದು ಇದೇ ಗಿಣಿ ಅನ್ನೋದು ಪೊಲೀಸರಿಗೆ ಕನ್ಫರ್ಮ್ ಆಗಿತ್ತು. ತಕ್ಷಣವೇ ಅದನ್ನು ಅರೆಸ್ಟ್ ಮಾಡಲಾಗಿತ್ತು. ಈ ಮೂಲಕ ಪೊಲೀಸರಿಂದ ಬಂಧಿಸಲ್ಪಟ್ಟ ಮೊದಲ ಗಿಣಿ ಎಂಬ ಖ್ಯಾತಿಯೂ ಅದಕ್ಕೆ ಸಿಕ್ಕಿತ್ತು. ಆದ್ರೆ ಅದೇನೇ ಪ್ರಯತ್ನ ಪಟ್ಟರೂ ಆ ಗಿಣಿಯಿಂದ ಒಂದೇ ಒಂದು ಮಾತಾಡಿಸಲೀ ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಪಕ್ಷಿ ಪರಿಣಿತರನ್ನ ಕರೆಸಿದರೂ ಫಲ ಕೊಡಲಿಲ್ಲ. ಕಡೆಗೂ ಕೈ ಚೆಲ್ಲಿದ ಪೊಲೀಸರು ಮಾರನೇ ದಿನ ಅದನ್ನು ಹತ್ತಿದರ ಝೂ ಒಂದಕ್ಕೆ ಬಿಟ್ಟು ಬಂದರು. ಆ ಗಿಣಿಗೆ ದಂಧೆಕೋರರು ಯಾವ ಪರಿಯಾಗಿ ಟ್ರೈನಿಂಗ್ ಕೊಟ್ಟಿದ್ದರಂದ್ರೆ, ಯಾರೇ ಆದ್ರೂ ಅದರಿಂದ ಒಂದು ಧ್ವನಿಯನ್ನೂ ತೆಗೆಸಲು ಸಾಧ್ಯವಾಗ್ಲಿಲ್ಲ.