ತಿನ್ನೋ ಅನ್ನವನ್ನೂ ದೇವರೆಂಬಂತೆ ಕಣ್ಣಿಗೊತ್ತಿಕೊಂಡು ಒಳಗಿಳಿಸೋ ಸಂಪ್ರದಾಯ ನಮ್ಮಲ್ಲಿದೆ. ನಮ್ಮ ಪಾಲಿಗೆ ಅನ್ನ ಅನ್ನೋದು ಶ್ರಮದ ಸಂಕೇತ. ಅದು ದುಡಿಮೆಯ ಫಲ. ಆದ್ದರಿಂದಲೇ ತಟ್ಟಿಯಲ್ಲಿ ಆಹಾರವನ್ನು ಒಂದಗುಳೂ ಬಿಡದಂತೆ ತಿನ್ನಬೇಕೆಂಬ ರಿವಾಜಿದೆ. ಹಾಗೆ ತಟ್ಟಿಯಲ್ಲಿ ಉಳಿಸಿದರೆ, ಆಹಾರ ಹಾಳು ಮಾಡಿದರೆ ಖಾಲಿ ಹೊಟ್ಟೆಯಲ್ಲಿ ಮಲಗಿದವರ ಶಾಪ ತಟ್ಟುತ್ತೆ ಅನ್ನೋ ನಂಬಿಕೆಯೂ ನಮ್ಮಲ್ಲಿದೆ. ಹಾಗಿರೋದರಿಂದಲೇ ರುಚಿ ಹತ್ತದಿದ್ದರೂ, ಇಷ್ಟವಾಗದಿದ್ದರೂ ಕಷ್ಟ ಪಟ್ಟಾದರೂ ಕೆಲವೊಮ್ಮೆ ತಟ್ಟಿ ಖಾಲಿ ಮಾಡಿ ಬಿಡುತ್ತೇವೆ. ಇದು ನಮ್ಮ ದೇಶಕ್ಕೆ ಓಕೆ. ಆದ್ರೆ ನೀವೇನಾದರೂ ಚೀನಾಕ್ಕೆ ಹೋಗಿ ಅಲ್ಲಿಯೂ ಈ ಸಂಪ್ರದಾಯ ಪರಿಪಾಲಿಸಿದರೆ ಬೇಸ್ತು ಬೀಳೋದು ಖಂಡಿತಾ!
ನಮಗೆಲ್ಲ ಗೊತ್ತಿರುವಂತೆ ಚೀನಾದ ಮಂದಿ ಆಹಾರಪ್ರಿಯರು. ಹುಳು ಹಪ್ಪಟೆ, ಹಾವು ಚೇಳುಗಳನ್ನೂ ಹುರಿದು ತಿನ್ನೋ ಈ ಜನರನ್ನ ನೋಡಿದರೆ ಎಂಥವರಿಗಾದರೂ ಅಚ್ಚರಿಯಾಗುತ್ತೆ. ನಾಯಿ ಮಾಂಸವನ್ನೂ ಚಪ್ಪರಿಸಿ ತಿನ್ನೋ ಜನ ಆ ದೇಶದ ಗಲ್ಲಿ ಗಲ್ಲಿಗಳಲ್ಲಿಯೂ ಕಾಣ ಸಿಗುತ್ತಾರೆ. ಅಲ್ಲೇ ಹುಟ್ಟಿದ ಕೊರೋನಾ ವೈರಸ್ಸು ಅವರನ್ನೇ ಹೆಚ್ಚಾಗಿ ಬಲಿ ತೆಗೆದುಕೊಂಡಿದ್ದರ ಹಿಂದೇಯೂ ಈ ಭಕ್ಷಣೆಯ ಮೋಹ ಕಾರಣ ಅನ್ನೋ ಆರೋಪವೂ ಕೇಳಿ ಬಂದಿತ್ತು. ಅದೆಲ್ಲ ಏನೇ ಇರಲಿ, ಆಹಾರ ತಯಾರಿಸೋದರಿಂದ ಹಿಡಿದು, ಅದನ್ನು ತಿನ್ನೋ ವರೆಗೂ ಚೀನಾ ಮಂದಿ ತುಂಬಾನೇ ಭಿನ್ನ.
ಅಲ್ಲಿ ಆಹಾರವನ್ನು ಕಡ್ಡಿಗಳಲ್ಲಿ ಕೆದರಿ ತಿನ್ನೋ ರೀತಿಯೇ ವಿಚಿತ್ರ. ಅಲ್ಲಿ ಊಟ ಮಾಡುವಾಗ ತಟ್ಟೆ ಅಥವಾ ಬೌಲ್ ಅನ್ನು ಪೂರ್ತಿಯಾಗಿ ಖಾಲಿ ಮಾಡೋದಿಲ್ಲ. ಅದರಲ್ಲಿ ಒಂದಷ್ಟು ಆಹಾರದ ಅವಶೇಷಗಳನ್ನಾದರೂ ಉಳಿಸಿರುತ್ತಾರೆ. ಒಂದು ವೇಳೆ ಎಲ್ಲ ಆಹಾರವನ್ನೂ ನಮ್ಮಂತೆ ಸಪಾಟು ಮಾಡಿದರೆ ಅದು ಇನ್ನೂ ಆಹಾರದ ಅವಶ್ಯಕತೆ ಇದೆ ಅನ್ನೋದನ್ನ ಸೂಚಿಸುತ್ತಂತೆ. ಯಾರಾದ್ರೂ ಹಾಗೆ ಮಾಡಿದರೆ ಕೂಡಲೇ ತಟ್ಟೆಗೆ ಮತ್ತಷ್ಟು ಆಹಾರ ಬಡಿಸಿ ಬಿಡ್ತಾರೆ. ನಾವೇನಾದ್ರೂ ಅಲ್ಲಿಗೆ ಹೋಗಿ ನಮ್ಮ ಶೈಲಿಯಲ್ಲಿ ಹೊಟ್ಟೆ ತುಂಬಿದರೂ ಬಳಿದು ತಿಂದು ಬಿಟ್ಟರೆ ಮತ್ತೊಂದು ರೌಂಡು ಹಾಕಿದ್ದನ್ನೆಲ್ಲ ತಿನ್ನುವ ಸಂಕಷ್ಟ ಎದುರಾಗುತ್ತೆ. ತಟ್ಟೆಯಲ್ಲಿ ಆಹಾರ ಬಿಡಬಾರದೆಂಬ ನಮ್ಮ ಸಂಪ್ರದಾಯ ಚೀನಾದಲ್ಲಿ ನಮಗೇ ಕಂಟಕವಾಗೋ ಅಪಯವೂ ಇದೆ.
ಇಂಥಾ ಚಿತ್ರವಿಚಿತ್ರವಾದ ಭೋಜನದ ರೀತಿ ರಿವಾಜುಗಳು ಚೀನಾಕ್ಕೆ ಮಾತ್ರವೇ ಸೀಮಿತವಲ್ಲ. ಬೇರೊಂದಷ್ಟು ದೇಶಗಳಲ್ಲಿಯೂ ಇಂಥಾದ್ದೇ ಪದ್ದತಿಗಳಿದ್ದಾವೆ. ಕೊರಿಯಾದಲ್ಲಿಯೂ ಅಂಥಾದ್ದೊಂದು ವಿಚಿತ್ರ ಸಂಪ್ಗರದಾಯವಿದೆ. ಕೊರಿಯನ್ನರೂ ಕೂಡಾ ಚೀನೀಯರಂತೆಯೇ ಆಹಾರ ಪ್ರಿಯರು. ಅಲ್ಲಿ ಥರ ಥರದ ಸೂಪ್ಗಳು ಬಲು ಪ್ರಸಿದ್ಧಿ ಪಡೆದುಕೊಂಡಿವೆ. ಅದು ಮನೆಯಿದ್ದರೂ, ಹೋಟೆಲ್ಲುಗಳಾದರೂ ಸೂಪನ್ನ ಜನ ಸೊರ್ರನೆ ಸೊರೆದು ಸೇವಿಸ್ತಾರೆ. ಸೊರ್ ಅನ್ನೋ ಶಬ್ಧ ಹೆಚ್ಚಾದಷ್ಟೂ ಸೂಪ್ ಬಹಳಾ ಚೆನ್ನಾಗಿದೆ ಎಂದರ್ಥ. ಅದನ್ನ ಅಲ್ಲಿನ ಜನ ತಯಾರಿಸಿದವರಿಗೆ ಸಲ್ಲಿಸೋ ಗೌರವ ಅಂತಲೇ ಪರಿಗಣಿಸ್ತಾರಂತೆ. ಇನ್ನು ಈಜಿಪ್ಟಿನಲ್ಲಿ ಊಟದ ನಡುವೆ ಮೇಲುಪ್ಪು ಕೇಳುವಂತಿಲ್ಲ. ಅದು ಅಲ್ಲಿನ ಸಂಪ್ರದಾಯದಲ್ಲಿ ನಿಷಿದ್ಧ. ಒಂದು ವೇಳೆ ಅಡುಗೆ ಮಾಡುವವರು ಉಪ್ಪನ್ನೇ ಹಾಕದಿದ್ದರೂ ಅಲ್ಲಿ ಊಟದ ನಡುವೆ ಉಪ್ಪು ಕೇಳುವಂತಿಲ್ಲ. ಸಪ್ಪೆ ಆಹಾರವನ್ನೇ ತಿಂದೇಳೆದೆ ಬೇರೆ ದಾರಿಯಿಲ್ಲ.