ಎಂಥವರಲ್ಲೂ ನಡುಕ ಹುಟ್ಟಿಸುತ್ತೆ ಅವಳ ನಟೋರಿಟಿ!
ಇದೀಗ ಕರ್ನಾಟಕದ ತುಂಬೆಲ್ಲ ಮತ್ತೆ ಡ್ರಗ್ಸ್ ಮ್ಯಾಟರ್ ಭಾರೀ ಸದ್ದು ಮಾಡ್ತಿದೆ. ದೃಷ್ಯ ಮಾಧ್ಯಮಗಳ ಟಿಆರ್ಪಿ ಹಸಿವಿಗಂತೂ ಡ್ರಗ್ಸ್ ದಂಧೆ ಭೂರೀ ಬೋಜನವನ್ನೇ ಒದಗಿಸಿಬಿಟ್ಟಿದೆ. ಹಾದಿ ಬಿಟ್ಟ ನಟಿಗರಿಬ್ಬರಿಗೆ ಜೈಲೇ ಗಟ್ಟಿ ಎಂಬ ವಾತಾವರಣವೂ ಪ್ರಸ್ತುತ ಚಾಲ್ತಿಯಲ್ಲಿದೆ. ಇದರ ಹಿನ್ನೆಲೆಯಲ್ಲಿಯೇ ಊರು ತುಂಬಾ ಮೈಚಾಚಿಕೊಂಡಿರೋ ಡ್ರಗ್ಸ್ ಮಾಫಿಯಾ ಮತ್ತದರ ಅಪಾಯಗಳ ಬಗೆಗೂ ಒಂದಷ್ಟು ಚರ್ಚೆಗಳಾಗುತ್ತಿವೆ. ಹಾಗಂತ ಇದು ಕೇವಲ ಕರ್ನಾಟಕದಲ್ಲಿ ಮಾತ್ರವೇ ಮೈಚಾಚಿಕೊಂಡಿರೋ ಮಾಫಿಯಾವಲ್ಲ; ಅದು ಇಡೀ ದೇಶವನ್ನೇ ಆವರಿಸಿಕೊಂಡು ಯುವ ಜನಾಂಗದ ನರನಾಡಿಗಳಿಗೆ ತೂರಿಕೊಳ್ಳಲು ಹವಣಿಸ್ತಿರೋ ಭೀಕರ ವಿಷ. ಹಾಗೆ ನೋಡಿದರೆ ಅದಕ್ಕೆ ದೇಶದ ಗಡಿಯ ಹಂಗೂ ಇಲ್ಲ. ಯಾಕಂದ್ರೆ, ಅದು ಇಡೀ ವಿಶ್ವಕ್ಕೇ ಹಬ್ಬಿಕೊಂಡಿರೋ ಸಾಂಕ್ರಾಮಿಕ.
ಸಂಜನಾ ಮತ್ತು ರಾಗಿಣಿ ಎಂಬ ಚಿಲ್ರೆ ನಟಿಯರು ಡ್ರಗ್ ಕೇಸಲ್ಲಿ ತಗುಲಿಕೊಳ್ಳುತ್ತಲೇ ಜನ ಎಂಥಾ ಕಾಲ ಬಂತಪ್ಪಾ ಅಂತ ನಿಟ್ಟುಸಿರಿಡುತ್ತಿದ್ದಾರೆ. ಹೆಣ್ಣುಮಕ್ಕಳೂ ಗಾಂಜಾಕ್ಕೆ ವಶವಾಗೋದಂದ್ರೇನು ಅಂತ ಮಡಿವಂತಿಕೆಯ ಮಂದಿ ಅಸಹನೆಗೀಡಾಗಿದ್ದಾರೆ. ಈವತ್ತಿಗೆ ಈ ನಟಿಯರಿಬ್ಬರೂ ಗಾಂಜಾ ಮತ್ತೇರಿಸಿಕೊಂಡಿರೋದೇ ನಿಮ್ಮಲ್ಲಿ ಇಂಥಾ ಕಸಿವಿಸಿ ಹುಟ್ಟಿಸಿದ್ರೆ, ಈಗ ಹೇಳ ಹೊರಟಿರೋ ಸುದ್ದಿ ಕೇಳಿ ನೀವು ಬೆಚ್ಚಿಬೀಳೋದು ಗ್ಯಾರೆಂಟಿ. ಯಾಕಂದ್ರೆ ಈ ಸ್ಟೋರಿಯ ನಾಯಕಿ ಓರ್ವ ಹೆಣ್ಣು. ಆಕೆಯೇನು ಅಂತಿಂಥಾ ಹೆಣ್ಣಲ್ಲ. ಅಮೆರಿಕಾವೂ ಸೇರಿದಂತೆ ಒಂದಷ್ಟು ಮುಂದುವರೆದ ದೇಶಗಳಿಗೆ ನಶೆ ಹಂಚಿದ್ದವಳು. ಆ ಕಾಲದ ಗಾಂಜಾ ಡಾನುಗಳಿಗೇ ಸೆಡ್ಡು ಹೊಡೆದು ಅಂತಾರಾಷ್ಟ್ರೀಯ ಗಾಂಜಾ ಮಾಫಿಯಾದ ಲೇಡಿ ಡಾನ್ ಆಗಿ ಮೆರೆದಿದ್ದವಳು. ತನ್ನ ಗಂಡನನ್ನೇ ಪಾಯಿಂಟ್ ಬ್ಲಾಂಕ್ನಲ್ಲಿ ಗುಂಡಿಟ್ಟು ಕೊಂದು, ಇನ್ನೂರೈವತ್ತಕ್ಕೂ ಹೆಚ್ಚು ಕೊಲೆ ಕೇಸುಗಳನ್ನ ಹೆಗಲೇರಿಸಿಕೊಂಡವಳು…
ಆಕೆ ಗ್ರಿಸೆಲ್ಡಾ ಬ್ಲಾಂಕೋ. ಕೊಲಂಬಿಯಾ ಮೂಲದ ಗ್ರಿಸೆಲ್ಡಾ ಡ್ರಗ್ಸ್ ಮಾಫಿಯಾ ಲೋಕದಲ್ಲಿ ಗಾಡ್ಮದರ್ ಎಂದೇ ಹೆಸರುವಾಸಿಯಾಗಿದ್ದಳು. ಅಂದಹಾಗೆ, ಆಕೆ ಅಂತಾರಾಷ್ಟ್ರೀಯ ಡ್ರಗ್ಸ್ ರಾಣಿಯಾಗಿ ಮೆರೆದಿದ್ದು ಎಪ್ಪತ್ತು-ಎಂಬತ್ತರ ದಶಕದಲ್ಲಿ. ಹಂತ ಹಂತವಾಗಿ ಮಾದಕ ಲೋಕಕ್ಕೆ ಅಡಿಯಿರಿಸಿದ್ದ ಬ್ಲಾಂಕೋ ನೋಡ ನೋಡುತ್ತಲೇ ಡ್ರಗ್ ಕಾರ್ಟಲ್ ರಾಣಿಯಾಗಿ ಮೆರೆದಿದ್ದಳು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ ಮಾಫಿಯಾ ಕಿಂಗ್ಪಿನ್ ಎನಿಸಿಕೊಂಡಿದ್ದ ಪ್ಯಾಬ್ಲೋ ಎಸ್ಕೋಬಾರ್ಗೂ ಮಾರ್ಗದರ್ಶಕಿಯಾಗಿ ಗುರುತಿಸಿಕೊಂಡಿದ್ದಳು. ಈಕೆ ಪ್ರಧಾನವಾಗಿ ಕೊಕೇನ್ ಅನ್ನು ಅಮೆರಿಕಾ ಸೇರಿದಂತೆ ನಾನಾ ದೇಶಗಳಿಗೆ ಸರಬರಾಜು ಮಾಡುತ್ತಿದ್ದಳು. ಪೊಲೀಸರನ್ನು ಯಾಮಾರಿಸಿ ಕೊಕೇನ್ ಸಾಗಾಟ ಮಾಡಲು ತಾನೇ ಒಂದಷ್ಟು ಮಾದರಿಗಳನ್ನು ಆವಿಷ್ಕರಿಸಿದ್ದಳು.
ಕೊಕೇನ್ ಅನ್ನು ಕಳ್ಳಸಾಗಣೆ ಮಾಡಲು ಅನುಕೂಲವಾಗುವಂಥಾ ಬ್ರಾ ಮತ್ತು ತುಂಡುಡುಗೆಯನ್ನು ಬ್ಲಾಂಕೋ ತಾನೇ ತಯಾರು ಮಾಡಿದ್ದಳು. ಆ ಕಾಲಕ್ಕೆ ಈ ವಿಧಾನವನ್ನು ಇತರೇ ಕಾರ್ಟಲ್ಗಳವರೂ ಕೂಡಾ ಕಾಪಿ ಹೊಡೆಯಲಾರಂಭಿಸಿದ್ರಂತೆ. ಹೀಗೆ ಕೊಲಂಬಿಯಾದಲ್ಲಿದ್ದುಕೊಂಡು ಕೊಕೇನ್ ಸಾಗಣೆಯಲ್ಲಿ ಚಿಗುರಿಕೊಂಡ ಬ್ಲಾಂಕೋ ನಂತರ ೧೯೭೫ರಲ್ಲಿ ನ್ಯೂಯಾರ್ಕ್ನ ಕ್ವೀನ್ಸ್ಗೆ ತೆರಳಿದಳು. ಅಲ್ಲಿಂದಾಚೆಗೆ ತೆರೆದುಕೊಂಡಿದ್ದು ಆಕೆಯ ರಕ್ಕಸ ಸಾಮ್ರಾಜ್ಯ. ದೊಡ್ಡ ಮಟ್ಟದಲ್ಲಿ ದಂಧೆ ನಡೆಸಲಾರಂಭಿಸಿದ್ದ ಆಕೆಗೆ ಅದೇ ವರ್ಷ ಆಘಾತವೆದುರಾಗಿತ್ತು. ಕೊಕೇನ್ ಸಾಗಾಣೆಯ ವೇಳೆ ಆಕೆ ತಗುಲಿಕೊಂಡಿದ್ದಳು. ಈ ಆರೋಪ ಬಂದ ಕೂದಲೇ ಆಕೆ ಮತ್ತೆ ಕೊಲಂಬಿಯಾಗೆ ತೆರಳಿ ಬಚಾವಾಗಿದ್ದಳು.
ಆ ನಂತರದಲ್ಲಿ ಮತ್ತೆ ಕೊಲಂಬೋ ತೊರೆದ ಆಕೆ ಲ್ಯಾಂಡ್ ಆಗಿದ್ದು ಮಿಯಾಮಿಯಲ್ಲಿ. ತಾನೇ ಫೀಲ್ಡಿಗಿಳಿದು ಕಾರ್ಯಾಚರಣೆ ನಡೆಸುತ್ತಿದ್ದ ಬ್ಲಾಂಕೋ ಸಮಯ ಬಂದರೆ ಯಾರ ಜೀವ ತೆಗೆಯಲೂ ಅಂಜುತ್ತಿರಲಿಲ್ಲ. ಅದೊಂದು ಸಲ ಮಿಯಾಮಿಯ ಮಾಲ್ ಒಂದರಲ್ಲಿ ವಿರೋಧಿ ಪಾಳೆಯ ಬ್ಲಾಂಕೋಗೆ ಅಮರಿಕೊಂಡಿತ್ತು. ಆಗ ಮಿಷಿನ್ ಗನ್ನಿನಿಂದ ಆಕೆ ಯದ್ವಾತದ್ವ ಗುಂಡು ಹಾರಿಸಿ ಅಮಾಯಕರನ್ನು ಬಲಿಯಾಗಿಸಿದ್ದಳು. ಹೋದಲ್ಲಿ ಬಂದಲ್ಲಿ ಅಫೇರು ಸೃಷ್ಟಿಸಿಕೊಂಡು ಒಂದಷ್ಟು ಮಂದಿಯನ್ನು ಕಟ್ಟಿಕೊಂಡಿದ್ದ ಬ್ಲಾಂಕೋಗೆ ಅವರೆಲ್ಲರೂ ಡ್ರಗ್ಸ್ ಪಾರ್ಟನರ್ಗಳಾಗಿದ್ದವರೇ. ಅದೊಂದು ಸಲ ಡ್ರಗ್ ಸಂಬಂಧಿತ ಮನಸ್ತಾಪದಿಂದ ಗಂಡನೊಬ್ಬನೊಂದಿಗೆ ಬ್ಲಾಂಕೋ ರೊಳ್ಳೆ ತೆಗೆದಿದ್ದಳಂತೆ. ಆಕೆ ಯಾವ ಪರಿ ಕೆರಳಿದ್ದಳೆಂದರೆ, ತನ್ನ ರಿವಾಲ್ವರ್ನಿಂದ ಪಾಯಿಂಟ್ ಬ್ಲಾಂಕಲ್ಲಿ ಗಂಡನನ್ನೇ ಕೊಂದು ಕೆಡವಿದ್ದಳಂತೆ. ಇದೂ ಸೇರಿ ಇನ್ನೂರೈವತ್ತಕ್ಕೂ ಹೆಚ್ಚು ಕೊಲೆ ಕೇಸುಗಳು ಬ್ಲಾಂಕೋ ಮೇಲಿದ್ದವು.
ಆ ಕಾಲಕ್ಕೆ ಅಮೆರಿಕೆಯ ಸುತ್ತಮುತ್ತ ಅನೇಕ ಡ್ರಗ್ ಕಾರ್ಟಲ್ಗಳಿದ್ದವು. ಅವುಗಳ ನಡುವೆ ಆಗಾಗ ಕದನಗಳೂ ನಡೀತಿದ್ವು. ಹಾಗೆಯೇ ಬ್ಲಾಂಕೋಗೂ ಕೂಡಾ ವೃತ್ತಿಯಲ್ಲಿ ಎದುರಾಳಿಗಳಿದ್ದರು. ತನಗೆ ಯಾರಾದ್ರೂ ಎದುರಾಗಿ ನಿಂತ್ರೆ ಸೈಕಲ್ಲಿನಲ್ಲಿ ತೆರಳಿ ಹೊಂಚು ಹಾಕಿ ಶೂಟ್ ಮಾಡಿ ಪರಾರಿಯಾಗುವಷ್ಟು ಬ್ಲಾಂಕೋ ಚಾಣಾಕ್ಷೆ. ಕಡೆಗೂ ಈಕೆ ಕೇಸೊಂದರಲ್ಲಿ ಜೈಲುಪಾಲಾದಳು. ಆದರೆ ದಂಧೆಗೇನೂ ತಡೆಯಾಗಿರಲಿಲ್ಲ. ಆಕೆ ಅದೆಷ್ಟು ನಟೋರಿಯಸ್ ಅಂದ್ರೆ, ಜೈಲೊಳಗಿಂದಲೇ ಕೊಕೇನ್ ದಂಧೆಯನ್ನ ಚಾಲ್ತಿಯಲ್ಲಿಟ್ಟಿದ್ದಳು. ಬ್ಲಾಂಕೋ ಎಂಥಾ ಪ್ರಳಯಾಂತಕಿ ಅಂದ್ರೆ, ಜೈಲಲ್ಲಿದ್ದಾಗಲೇ ಜ್ಯೂನಿಯರ್ ಕೆನಡಿಯ ಅಪಹರಣಕ್ಕೂ ಮುಂದಾಗಿದ್ದಳು. ಆದರೆ ಕೆಲ ಜೊತೆಗಾರರಿಂದಲೇ ಆ ಸಂಚು ವಿಫಲವಾಗಿತ್ತು. ಆ ಬಳಿಕ ಜೈಲಿಂದ ಹೊರ ಬಂದ ಬ್ಲಾಂಕೋ ತಾನು ಎದುರಾಳಿಗಳನ್ನು ಕೊಲ್ಲುತ್ತಿದ್ದ ರೀತಿಯಲ್ಲಿಯೇ ಕೊಲೆಯಾಗಿ ಹೋಗಿದ್ದಳು. ಆಕೆಯನ್ನು ಎದುರಾಳಿ ಗ್ಯಾಂಗಿನವನೋರ್ವ ಸೈಕಲ್ಲಿನಲ್ಲಿ ಬಂದು ಮಾಂಸದಂಗಡಿಯೊಂದರ ಮುಂದೆ ಗುಂಡಿಟ್ಟು ಕೊಂದಿದ್ದ. ಅಲ್ಲಿಗೆ ವಿಶ್ವದ ಏಕೇಕ, ಮೊದಲ ಡ್ರಗ್ಸ್ ರಾಣಿ ದುರಂತ ಅಂತ್ಯ ಕಂಡಂತಾಗಿತ್ತು.