ಶೋಧ ನ್ಯೂಸ್ ಡೆಸ್ಕ್: ಭಾರತದಾದ್ಯಂತ ಕೀಟನಾಶಕದ ಹಾವಳಿಯಿಂದಾಗಿ ಇಡೀ ಪ್ರಕೃತಿಯೇ ಸರ್ವನಾಶವಾಗುವ ದುರ್ಗತಿ ಬಂದು ಬಿಟ್ಟಿದೆ. ಆದರೂ ಕೂಡಾ ಕೀಟನಾಶಕ ಮಾರಾಟ ಕಂಪೆನಿಗಳ ಮರ್ಜಿಗೆ ಬಿದ್ದಿರುವ ಸರ್ಕಾರಗಳು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಆದರೆ ವಿದೇಶಗಳಲ್ಲಿ ಮಾತ್ರ ಕೀಟನಾಶಕಗಳ ಪ್ರತಿಕೂಲ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಕೊಳ್ಳುತ್ತಿದೆ. ಅದರ ಭಾಗವಾಗಿಯೇ ಇದೀಗ ಯುರೋಪಿಯನ್ ಕಮಿಷನ್ ಕೀಟನಾಶಕ ಬಳಕೆಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡುವಲ್ಲಿ ಪ್ರಥಮ ಹೆಜ್ಜೆಯಿಟ್ಟಿದೆ.
ಸಾರ್ವಜನಿಕ ಉದ್ಯಾನವನಗಳಲ್ಲಿ ಕೀಟನಾಶಕ ಬಳಕೆಯನ್ನು ಸಂಪೂರ್ಣವಾಗಿ ನಿಸೇಧಿಸೋದು ಯೂರೋಪಿಯನ್ ಕಮಿಷನ್ ಉದ್ದೇಶ. ಪ್ರಕೃತಿಯನ್ನು ಹಾಳುಗೆಡವಿ, ಜೀವರಾಶಿಗೆ ತೊಂದರೆ ಕೊಡದೆ ಅದನ್ನು ಸಂರಕ್ಷಿಸಿಕೊಂಡು ಸಾಗುವ ಧ್ಯೇಯ ವಾಕ್ಯದೊಂದಿಗೆ ಯುರೋಪಿಯನ್ ಕಮಿಷನ್ ಇಂಥಾದ್ದೊಂದು ನಿರ್ಧಾರ ಕೈಗೊಂಡಿದೆ. ಜಾಗತಿಕ ಮಟ್ಟದಲ್ಲಿ ಈ ನಡೆಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಇದೊಂದು ಕ್ರಾಂತಿಕಾರಕ ಹಾಗೂ ಜಗತ್ತಿನ ಇತರೇ ದೇಶಗಳೂ ಅನುಕರಿಸಬೇಕಾಗುವಂಥಾ ಕ್ರಮವೆಂಬ ಮಾತುಗಳೂ ಕೇಳಿ ಬರುತ್ತಿವೆ.
ಜಾಗತಿಕ ಮಟ್ಟದಲ್ಲಿ ಇಂಥಾ ಪಲ್ಲಟಗಳು ನಡೆಯುತ್ತಿದ್ದರೂ ಕೂಡಾ ಭಾರತದಲ್ಲಿ ಮಾತ್ರ ಕೀಟನಾಶಕಗಳಿಗೆ ಮುಕ್ತ ಮಾರುಕಟ್ಟೆಯಿದೆ. ರೌಂಡಪ್ನಂಥಾ ಭೀಕರ ವಿಷದಿಂದ ಕ್ಯಾನ್ಸರ್ ಬರುತ್ತದೆಂಬುದು ಗೊತ್ತಿದ್ದರೂ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಅದನ್ನು ಇಲ್ಲಿಗೆ ತರಿಸಿಕೊಳ್ಳಲಾಗುತ್ತಿದೆ. ಅದನ್ನು ನಮ್ಮ ರೈತರು ಕಳೆನಾಶಕವಾಗಿ ಯಥೇಚ್ಚವಾಗಿ ಉಪಯೋಗಿಸುತ್ತಿದ್ದಾರೆ. ಅದು ಆಯಾ ಭಾಗದ ಒಂದಿಡೀ ಜೀವರಾಶಿಯನ್ನೇ ನುಂಗಿನೊಣೆಯುತ್ತಿದೆ. ಇದು ಆಹಾರದಲ್ಲಿ ಸೇರಿಕೊಂಡು ಕ್ಯಾನ್ಸರ್ ಹರಡುತ್ತದೆಂಬುದು ಗೊತ್ತಿದ್ದರೂ ಆಳೋ ಮಂದಿ ಯಾಕೋ ಮೌನವಾಗಿದ್ದಾರೆ!