ಗೆಲುವೆಂಬುದು ಅವರ ಪಾಲಿಗೆ ಹೂವ ಹಾದಿಯಲ್ಲ!
ಬದುಕೆಂದರೇನೇ ಹಾಗೆ; ಅದು ಯಾವ ಕ್ಷಣದಲ್ಲಿ ಅದ್ಯಾವ ಹೊರಳು ಹಾದಿತ್ತ ಪಥ ಬದಲಿಸುತ್ತದೋ ಹೇಳಲು ಬರುವುದಿಲ್ಲ. ಕೆಲವೊಮ್ಮೆ ಅದೆಷ್ಟು ತೀವ್ರವಾಗಿ ಕನಸು ಕಂಡರೂ ಗುರಿಯತ್ತ ದಾರಿ ತೆರೆದುಕೊಳ್ಳೋದಿಲ್ಲ. ಮತ್ತೆ ಕೆಲವೊಮ್ಮೆ ಬದುಕೇ ಮತ್ಯಾವುದೋ ಗಮ್ಯದತ್ತ ತಾನೇತಾನಾಗಿ ಕೈ ಹಿಡಿದು ಕರೆದೊಯ್ಯುತ್ತೆ. ಶ್ರದ್ಧೆ, ಪರಿಶ್ರಮ ಮತ್ತು ತಾಳ್ಮೆಯ ಗುಣಗಳಿದ್ದರೆ ಎಲ್ಲವನ್ನೂ ಕರುಣಿಸುತ್ತೆ. ಅಂಥಾ ಗುಣಗಳನ್ನು ಮೈಗೂಡಿಸಿಕೊಳ್ಳದೇ ಹೋಗಿದ್ದರೆ ಶೀತಲ್ ಶೆಟ್ಟಿ ಎಂಬ ಪ್ರತಿಭೆ ನಿರೂಪಕಿಯಾಗಿ ಕರುನಾಡಿಗೆ ಪರಿಚಯವಾಗಲು ಸಾಧ್ಯವಾಗುತ್ತಿರಲಿಲ್ಲ. ಅದಾದ ಬಳಿಕ ನಟಿಯಾಗಿ ನೆಲೆಗೊಳ್ಳುವ ಅವಕಾಶಗಳು ಬಂದೊದಗುತ್ತಿರಲಿಲ್ಲ. ಅದರ ಬೆನ್ನಲ್ಲಿಯೇ ನಿರ್ದೇಶಕಿಯಾಗಿ ಅವತರಿಸಿ ಅಚ್ಚರಿ ಮೂಡಿಸೋದೂ ಕೂಡಾ ಅಕ್ಷರಶಃ ಕನಸಿನ ಮಾತಾಗುತ್ತಿತ್ತು!
ಬಹುಶಃ ಶೀತಲ್ ಶೆಟ್ಟಿ ಕೂಡಾ ತಮ್ಮ ಬದುಕಿನ ದಿಕ್ಕು ಈ ಪರಿಯಾಗಿ ಹೊರಳಿಕೊಳ್ಳುತ್ತದೆ ಅಂದುಕೊಂಡಿರಲಿಕ್ಕಿಲ್ಲ. ಬದುಕು ತಂದೊಡ್ಡುವ ಆಘಾತ, ಅದು ಸೃಷ್ಟಿಸೋ ಅನಿವಾರ್ಯತೆಗಳಿಗೆಲ್ಲ ಎದೆಗುಂದಬಾರದೆಂಬ ಮಂತ್ರವೊಂದಷ್ಟೇ ಅವರ ಮನಸಲ್ಲಿತ್ತು. ಅಂಥಾದ್ದೊಂದು ಗಟ್ಟಿತನದಿಂದಲೇ ಯಾವುದಕ್ಕೂ ಅಂಜದೆ ಟಿವಿ೯ ನಿರೂಪಕಿಯಾಗಿ ತಮ್ಮ ಸ್ಫುಟವಾದ ಕನ್ನಡ ಉಚ್ಛರಣೆಯಿಂದಲೇ ಖ್ಯಾತಿ ಪಡೆದುಕೊಂಡಿದ್ದವರು ಶೀತಲ್ ಶೆಟ್ಟಿ. ಪತ್ರಕರ್ತೆಯಾಗಿ ಪರಿಚಿತರಾಗಿದ್ದ ಅವರೀಗ ನಿರ್ದೇಶಕಿಯಾಗಿ ಗುರುತು ಮೂಡಿಸುವ ಉದ್ದೇಶದಿಂದಲೇ ನಿರ್ದೇಶನಕ್ಕಿಳಿದಿದ್ದಾರೆ. ಅವರ ಕನಸಿನ ಕೂಸಿನಂಥಾ ಪ್ರಥಮ ಚಿತ್ರ ವಿಂಡೋ ಸೀಟ್ ಈ ರಾತ್ರಿಯೊಂದು ಹೊರಳಿಕೊಂಡಾಕ್ಷಣವೇ ಪ್ರೇಕ್ಷಕರೆದುರು ತೆರೆದುಕೊಳ್ಳಲಿದೆ.
ಹೀಗೆ ನಿರೂಪಕಿಯಾಗಿ, ನಟಿಯಾಗಿ, ನಿರ್ದೇಶಕಿಯಾಗಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಶೀತಲ್ ಶೆಟ್ಟಿ ಹುಟ್ಟೂರು ಬ್ರಹ್ಮಾವರ. ಅವರ ತಂದೆ ಶ್ರೀಧರ್ ಶೆಟ್ಟಿ ಎಲ್ಐಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವರು. ತಂದೆಯ ಕೆಲಸದ ಕಾರಣದಿಂದಲೇ ಚಿಕ್ಕ ವಯಸ್ಸಿನಲ್ಲಿ ಶಿವಮೊಗ್ಗೆಯ ಮಡಿಲಲ್ಲಿರೋ ಸಾಗರದ ಸಖ್ಯ ಶೀತಲ್ರಿಗೆ ಒಲಿದು ಬಂದಿತ್ತು. ಅವರ ಬಾಲ್ಯವೆಲ್ಲ ಗರಿಬಿಚ್ಚಿಕೊಂಡಿದ್ದು ಸಾಗರ ಸೀಮೆಯಲ್ಲಿಯೇ. ಹಾಗೆ ಚೆಂದಗಿದ್ದ ಬದುಕಿನಲ್ಲಿ ಅಪ್ಪನ ಅಕಾಲಿಕ ಅಗಲುವಿಕೆಯ ಆಘಾತ ಅವರನ್ನು ಇನ್ನಿಲ್ಲದಂತೆ ಬಾಧಿಸಿತ್ತು. ಹೀಗೆ ಪುಟ್ಟ ವಯಸ್ಸಿನಲ್ಲಿ ಅಪ್ಪನೆಂಬೋ ಆಸರೆ ಮರೆಯಾದಾಗ ಮನಸು ಅಭದ್ರತೆಯ ಸುಳಿಗೆ ಬೀಳುತ್ತೆ. ಮತ್ತೆ ಕೆಲವರು ಆದ ಆಘಾತದಿಂದಲೇ ಮತ್ತಷ್ಟು ಗಟ್ಟಿಗೊಳ್ಳುತ್ತಾ ಸಾಗುತ್ತಾರೆ. ಶೀತಲ್ ಶೆಟ್ಟಿ ಎರಡನೇ ಸಾಲಿಗೆ ಸೇರುವವರು!
ಆ ಹೊತ್ತಿಗೆಲ್ಲ ತುಂಬಾ ಪ್ರೀತಿಸೋ ಅಮ್ಮ ಹಾಗೂ ಬೆನ್ನಿಗೇ ಹುಟ್ಟಿದ್ದ ತಮ್ಮ ಮಾತ್ರ ಶೀತಲ್ರ ಜಗತ್ತು. ಚೆಂದಗೆ ಓದಿ, ಒಂದು ನೌಕರಿ ಗಿಟ್ಟಿಸಿಕೊಂಡು ಅಮ್ಮನನ್ನು ಚೆಂದಗೆ ನೋಡಿಕೊಂಡು ತಮ್ಮನನ್ನು ನೆಲೆಗಾಣಿಸಬೇಕೆಂಬುದಷ್ಟೇ ಅವರ ಮಹಾ ಕನಸಾಗಿತ್ತು. ಇದರ ಭಾಗವಾಗಿಯೇ ಶಿವಮೊಗ್ಗೆಯಲ್ಲಿಬಿಎಸ್ಸಿ ಬಯೋಟೆಕ್ನಿಕ್ ಪದವಿ ವ್ಯಾಸಂಗ ಆರಂಭಿಸಿದ್ದರು. ಆ ಪದವಿಯ ಕಡೇಯ ವರ್ಷವಿನ್ನೂ ಪೂರ್ತಿಯಾಗುವ ಮುನ್ನವೇ ಟಿವಿ9 ವಾಹಿನಿಯಲ್ಲಿ ನಿರೂಪಕಿಯಾಗೋ ಅವಕಾಶವಿದೆ ಎಂಬ ವಿಚಾರ ಶೀತಲ್ರ ಗಮನನಕ್ಕೆ ಬಂದಿತ್ತು. ಆ ಕಾಲಕ್ಕೆ ಟಿವಿ9 ಸ್ಟಾರ್ ವಾಹಿನಿ. ಆದರೆ ಅದುವರೆಗೂ ಮಾಧ್ಯಮದ ಬಗ್ಗೆಯಾಗಲಿ, ನಿರೂಪಕಿಯಾಗಿ ಮಿಂಚಬೇಕೆಂಬ ಬಯಕೆಯಾಗಲಿ ಶೀತಲ್ ಪಾಲಿಗಿರಲಿಲ್ಲ. ಅವರೊಳಗಿದ್ದ ಭಾವವೊಂದೇ; ಬದುಕಿನ ಅನಿವಾರ್ಯತೆ!
ಹಾಗೆ ಯಾವ ಮಹತ್ವಾಕಾಂಕ್ಷೆಗಳೂ ಇಲ್ಲದೆ, ಒಂದು ಕೆಲಸ ಸಿಕ್ಕಬೇಕೆಂಬ ಒಂದೇ ಆಸೆಯಿಂದ ಟಿವಿ೯ನ ಆಂಕರಿಂಗ ಆಡಿಷನ್ನಲ್ಲಿ ಶೀತಲ್ ಪಾಲ್ಗೊಂಡಿದ್ದರು. ಈ ಹುಡುಗಿಯ ಸ್ಪಷ್ಟವಾದ ಕನ್ನಡ ಉಚ್ಛಾರ ಶಕ್ತಿಯೇ ಕೆಲಸ ಹಠಾತ್ತನೆ ಕೆಲಸ ದೊರಕಿಸಿ ಕೊಟ್ಟಿತ್ತು. ಹಾಗೆ ಅಚಾನಕ್ಕಾಗಿ ಸಿಕ್ಕ ಆ ವಕಾಶವನ್ನು ಮಾತ್ರ ಶೀತಲ್ ತುಂಬಾ ಎಚ್ಚರಿಕೆಯಿಂದ ಬಳಸಿಕೊಂಡಿದ್ದರು. ಮಾಧ್ಯಮವೊಂದರಲ್ಲಿ ನೆಲೆ ಕಂಡುಕೊಳ್ಳಲು ಬೇಕಾದ ಎಲ್ಲ ಪಟ್ಟುಗಳನ್ನೂ ಕರಗತ ಮಾಡಿಕೊಂಡಿದ್ದರು. ಅದರ ಫಲವಾಗಿಯೇ ಕೆಲವೇ ವರ್ಷಗಳಲ್ಲಿ ನಂಬರ್ ಒನ್ ನಿರೂಪಕಿಯೆಂಬ ಗರಿಮೆ ಶೀತಲ್ರ ಮುಡಿಗೇರಿಕೊಂಡಿತ್ತು. ಬಹುಶಃ ನಿರೂಪಕಿಯಾಗಿಯೇ ಮುಂದುವರೆದಿದ್ದರೆ ಈ ಕ್ಷಣದ ವರೆಗೂ ಅವರ ಪಾಲಿಗೆ ಯಾವ ಅಡ್ಡಿ ಆತಂಕಗಳೂ ಎದುರಾಗೋದಿಲ್ಲ.
ಆದರೆ, ಹೊಸದೇನನ್ನೋ ಧ್ಯಾನಿಸುವ ಮನಸುಗಳು ಒಂದು ಪರಿಧಿಯಲ್ಲಿ ಹೆಚ್ಚು ವರ್ಷಗಳ ಕಾಲ ಗಿರಕಿ ಹೊಡೆಯುವುದಿಲ್ಲ. ಯಶಸ್ಸೆಂಬುದು ಅಪಾದಮಸ್ತಕ ಸುತ್ತುವರಿದಿದ್ದರೂ ಅದೊಂದು ಥರದ ಏಕತಾನತೆ ಕಾಡಲಾರಂಭಿಸುತ್ತೆ. ಶೀತಲ್ಗೂ ಅಂಥಾದ್ದೊಂದು ಭಾವ ಬಲವಾಗಿಯೇ ಕಾಡಲಾರಂಭಿಸಿತ್ತು. ಏನಾದರೊಂದು ಕ್ರಿಯಾಶೀಲ ಬದಲಾವಣೆಯನ್ನು ಮನಸು ಧ್ಯಾನಿಸುತ್ತಿರುವಾಗ ವರದಂತೆ ಒಲಿದು ಬಂದಿದ್ದದ್ದು ಉಳಿದವರು ಕಂಡಂತೆ ಚಿತ್ರದಲ್ಲಿ ನಟಿಸುವ ಅವಕಾಶ. ಅದನ್ನೂ ಕೂಡಾ ಯಾವ ನಿರೀಕ್ಷೆಗಳೂ ಇಲ್ಲದಂತೆ ಎದುರುಗೊಂಡಿದ್ದ ಅವರಿಗೆ ಕಚೇರಿಯ ಕಡೆಯಿಂದ ಹೇಳಿಕೊಳ್ಳುವಂತಾ ಬೆಂಬಲ ಸಿಗಲಿಲ್ಲ. ಆ ಕ್ಷಣವೇ ಗಟ್ಟಿ ನಿರ್ಧಾರ ಮಾಡಿ ಏಕಾಏಕಿ ವೃತ್ತಿಯನ್ನೇ ಬದಲಾವಣೆ ಮಾಡಿಕೊಂಡು ನಟಿಯಾಗಲು ಹೊರಟು ನಿಂತರು ನೋಡಿ ಶೀತಲ್? ಅದನ್ನು ಕಂಡು ಅವರ ಅಮ್ಮ ಮಾತ್ರವಲ್ಲದೇ ಬಹುತೇಕರು ಅಚ್ಚರಿ ಪಟ್ಟಿದ್ದರು.
ಕಡೆಗೂ ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡಿ ನಾಯಕನಾಗಿದ್ದ ಉಳಿದವರು ಕಂಡಂತೆ ಚಿತ್ರದಲ್ಲಿ ಶೀತಲ್ ಒಂದೊಳ್ಳೆ ಪಾತ್ರ ಮಾಡಿದ್ದರು. ಅದು ಜನರಿಗೂ ಇಷ್ಟವಾಗಿತ್ತು. ಆ ನಂತರದಲ್ಲಿಯೂ ನಟಿಯಾಗಿ ಒಂದಷ್ಟು ಅವಕಾಶಗಳು ಅವರನ್ನು ಅರಸಿ ಬಂದಿದ್ದವು. ಒಂದು ಸಿನಿಮಾದ ನಾಯಕಿಯಾಗಿಯೂ ಮಿಂಚಿದ್ದ ಶೀತಲ್ ನಟಿಯಾಗಿ ಉತ್ತುಂಗಕ್ಕೇರುತ್ತಾರೆಂಬಂಥಾ ವಾತಾವರಣವಿತ್ತು. ಆದರೆ ಆ ಹೊತ್ತಿನಲ್ಲಿಯೇ ಅವರ ಚಿತ್ರ ನಿರ್ದೇಶನದತ್ತ ವಾಲಿಕೊಂಡಿತ್ತು. ಬರೆಯುವ ಹವ್ಯಾಸವನ್ನೂ ರೂಢಿಸಿಕೊಂಡಿದ್ದ ಶೀತಲ್ಗೆ ಕಥೆಯೆಂಬುದು ಅಚ್ಚುಮೆಚ್ಚಿನ ಪ್ರಾಕಾರ. ಒಂದಷ್ಟು ಕೇಳುಗರನ್ನು ಸೃಷ್ಟಿಸಿಕೊಂಡು ಚೆಂದದ ಕಥೆ ಹೇಳಬೇಕೆಂಬುದು ಶೀತಲ್ ಕಟ್ಟಿಕೊಂಡಿದ್ದ ಕನಸು. ಅದಕ್ಕೆ ನಿರ್ದೇಶನಕ್ಕಿಂತಲೂ ಸೂಕ್ತವಾದ ಮಾಧ್ಯಮ ಇನ್ನೊಂದಿಲ್ಲ ಎಂಬುದು ಅವರಿಗಾಗಲೇ ಮನದಟ್ಟಾಗಿ ಹೋಗಿತ್ತು.
ಅಂಥಾದ್ದೊಂದು ನಿರ್ಧಾರ ತಳೆದ ಘಳಿಗೆಯಿಂದಲೇ ತಯಾರಿ ಆರಂಭಿಸಿದ್ದ ಶೀತಲ್ ವಿಂಡೋ ಸೀಟ್ ಕಥೆ ಬರೆದು ಮುಗಿಸಿಕೊಂಡಿದ್ದರು. ಅದಕ್ಕೆ ಸಿನಿಮಾ ರೂಪವನ್ನೂ ಕೂಡಾ ಕೊಟ್ಟಾಗಿತ್ತು. ಯಾವ ಅವಕಾಶವೇ ಆಗಿರಲಿ; ಅದನ್ನು ಸೂಕ್ತ ತಯಾರಿಯೊಂದಿಗೇ ಬರಮಾಡಿಕೊಳ್ಳಬೇಕೆಂಬುದು ಶೀತಲ್ರ ಮನಸ್ಥಿತಿ. ನಿರ್ದೇಶನವೆಂದ ಮೇಲೆ ಅದಕ್ಕೇ ಆದಂಥಾ ಪರಿಭಾಷೆಯಿದೆ. ಅದೆಲ್ಲವನ್ನೂ ಮೈಗೂಡಿಸಿಕೊಳ್ಳಬೇಕೆಂಬ ಕಾರಣದಿಂದಲೇ ಅವರು ಕಿರುಚಿತ್ರಗಳತ್ತ ಗಮನ ಹರಿಸಿದ್ದರು. ಅದು ಅವರ ಪಾಲಿಗೆ ನಿರ್ದೇಶಕಿಯಾಗುವ ತಾಲೀಮಾಗಿತ್ತು. ಸಂಗಾತಿ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದ ಶೀತಲ್ಗೆ ಎಲ್ಲ ದಿಕ್ಕಿನಿಂದಲೂ ಪ್ರಶಂಶೆಯ ಸುರಿಮಳೆಯಾಗಿತ್ತು. ಅದಾಗುತ್ತಲೇ ಇನ್ನು ಸಿನಿಮಾ ನಿರ್ದೇಶನಕ್ಕಿಳಿಯಬಹುದೆಂಬ ಭರವಸೆ ಅವರೊಳಗೆ ಮೂಡಿಕೊಂಡಿತ್ತು.
2020ರ ಸುಮಾರಿಗೆ ಒಂದು ಪ್ರತಿಭಾವಂತ ಸಿನಿಮಾ ವ್ಯಾಮೋಹಿಗಳ ತಂಡ ಕಟ್ಟಿಕೊಂಡ ಶೀತಲ್ ವಿಂಡೋ ಸೀಟ್ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದರು. ಆ ಹೊತ್ತಿನಲ್ಲಿ ಬಂದೆರಗಿದ ಕೊರೋನಾ ಎಂಬ ದುಷ್ಟ ವೈರಸ್ಸು ಒಂದಷ್ಟು ಹಿನ್ನಡೆ ಉಂಟು ಮಾಡಿದ್ದದ್ದು ನಿಜ. ಆದರೆ ಶೀತಲ್ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಚಿತ್ರೀಕರಣ ಮಾಡಿ ಮುಗಿಸಿಕೊಂಡಿದ್ದಾರೆ. ಮರ್ಡರ್ ಮಿಸ್ಟ್ರಿ ಹಾಗೂ ರೊಮ್ಯಾಂಟಿಕ್ ಥ್ರಿಲ್ಲರ್ ಗುಣಗಳನ್ನು ಹೊಂದಿರುವ ಈ ಜಾನರ್ ಕನ್ನಡದ ಮಟ್ಟಿಗೆ ತುಂಬಾನೇ ಅಪರೂಪದ್ದು. ಒಂದು ಅದ್ಭುತ ಪ್ರೇಮಕಾವ್ಯದೊಂದಿಗೆ, ಮರ್ಡರ್ ಮಿಸ್ಟ್ರಿ ಕಥೆ ಹೇಳ ಹೊರಟಿರುವ ಶೀತಲ್ ಶೆಟ್ಟಿ ಅವರಿಗೆ ಅಭೂತಪೂರ್ವವಾದ ಗೆಲುವು ದಕ್ಕುವ ಭರವಸೆಯಿದೆ. ಮುಂದಿನ ದಿನಗಳಲ್ಲಿ ನಿರ್ದೇಶಕಿಯಾಗಿ ಮುಂದುವರೆಯ ಬೇಕೆಂಬ ನಿರ್ಧಾರ ತಳೆದಿರುವ ಅವರಿಗೆ, ಈ ಚಿತ್ರದ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿಕೊಳ್ಳುವ ದರ್ದೂ ಇದೆ. ಒಟ್ಟಾರೆಯಾಗಿ ಶಿವಮೊಗ್ಗೆಯ ಈ ಹುಡುಗಿ ನಿರ್ದೇಶಕಿಯಾಗಿ ನೆಲೆ ಕಂಡುಕೊಳ್ಳಲಿ, ವಿಂಡೋಸೀಟ್ಗೆ ರೋಮಾಂಚಕ ಗೆಲುವು ದಕ್ಕಲೆಂಬುದು ಹಾರೈಕೆ!