ಸಿನಿಮಾ ನಟ ನಟಿಯರು ಸಾಮಾಜಿಕ ಪಲ್ಲಟಗಳಿಗೆ ಪ್ರತಿಕ್ರಿಯಿಸೋದು ಅಪರೂಪ. ಒಂದು ಘಟನೆ ನಡೆದಾಗ ಅದರ ಬಗ್ಗೆ ಅಭಿಪ್ರಾಯ ಹಂಚಿಕೊಂಡರೆ ಎಲ್ಲಿ ವಿವಾದವಾಗುತ್ತೋ, ಅದೆಲ್ಲಿ ತಮ್ಮ ಫ್ಯಾನ್ ಬೇಸಿನ ಬುಡ ಅಲ್ಲಾಡಿಸುತ್ತೋ ಎಂಬಂಥಾ ಭಯ ಅನೇಕ ಸೆಲೆಬ್ರಿಟಿಗಳಲ್ಲಿದೆ. ಆದರೆ ಅದೆಲ್ಲವನ್ನೂ ಮೀರಿಕೊಂಡು ಕೆಲವೇ ಕೆಲ ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಆ ಸಾಲಿನಲ್ಲಿ ಮೊದಲಿಗಳಾಗಿ ನಿಲ್ಲುವ ಲಕ್ಷಣಗಳನ್ನು ಹೊಂದಿರುವಾಕೆ ಸ್ವರ ಭಾಸ್ಕರ್. ಈಕೆ ಜೀವಪರವಾದ ಆಶಯಗಳ ಮೂಲಕ ಆಗಾಗ ಸುದ್ದಿಯಾಗುತ್ತಾ ವಿವಾದದ ಕೇಂದ್ರಬಿಂದುವಾಗುತ್ತಿದ್ದಾರೆ. ಈ ಮೂಲಕ ಬಲಪಂಥೀಯ ವಿಚಾರಧಾರೆಗಳವರ ಕೆಂಗಣ್ಣಿಗೂ ಗುರಿಯಾಗುತ್ತಿದ್ದಾರೆ. ಇದೆಲ್ಲದರ ನಡುವೆ ಇದೀಗ ಆಕೆಯ ಮನೆಗೆ ಜೀವ ಬೆದರಿಕೆಯ ಪತ್ರವೊಂದು ರವಾನೆಯಾಗಿದೆ!
ಸ್ವರ ಭಾಸ್ಕರ್ ಇತ್ತೀಚೆಗೆ ಸಾವರ್ಕರ್ ಬಗ್ಗೆ ತನ್ನ ವಿಚಾರ ಹಂಚಿಕೊಂಡಿದ್ದರು. ಆ ಬಗ್ಗೆ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಪರ ವಿರೋಧಗಳ ಚರ್ಚೆ ನಡೆದಿತ್ತು. ಅದರ ಬೆನ್ನಲ್ಲಿಯೇ ಇದೀಗ ಮುಂಬೈನ ಪರ್ಸೋವಾ ಏರಿಯಾದಲ್ಲಿರುವ ಸ್ವರ ಮನೆಗೊಂದು ಬೆದರಿಕೆ ಪತ್ರ ತಲುಪಿಕೊಂಡಿದೆ. ಹಿಂದಿಯಲ್ಲಿ ಬರೆಯಲಾಗಿರುವ ಆ ಪತ್ರದಲ್ಲಿ ಸಾವರ್ಖರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದರೆ ಈ ದೇಶದ ಜನತೆ ಸಹಿಸುವುದಿಲ್ಲ, ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆಂಬಂಥಾ ಬೆದರಿಕೆಯ ಸಾಲುಗಳಿದ್ದಾವೆ. ಈ ಬಗ್ಗೆ ಪರ್ಸೋವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪತ್ರದ ಹಿಂದೆ ಯಾರಿದ್ದಾರೆಂಬ ವಿಚಾರ ಇನ್ನಷ್ಟೇ ಜಾಹೀರಾಗಬೇಕಿದೆ.
ಇತ್ತೀಚೆಗಷ್ಟೇ ಬಾಲಿವುಡ್ ನಟ ಸಲ್ಮಾನ್ ಖಾನ್ಗೂ ಇಂಥಾದ್ದೇ ಬೆದರಿಕೆ ಪತ್ರ ರವಾನೆಯಾಗಿತ್ತು. ಅದರಲ್ಲಿ ನಿಮಗೂ ಕೂಡಾ ಮೂಸೇವಾಲನಿಗೆ ಮಾಡಿದಂತೆಯೇ ಮಾಡಬೇಕಾಗುತ್ತದೆ ಎಂಬಂಥಾ ಬೆದರಿಕೆ ಇತ್ತು. ಇದೀಗ ಸ್ವರ ಭಾಸ್ಕರ್ ಮನೆಯಂಗಳಕ್ಕೆ ಬೆದರಿಕೆ ತಲುಪಿಕೊಂಡಿದೆ. ಸ್ವರ ಭಾಸ್ಕರ್ ಅದೆಷ್ಟೇ ಪ್ರತಿರೋಧ ವ್ಯಕ್ತವಾದರೂ ನೇರ ಮಾತುಗಳಿಗೆ, ಅಭಿಪ್ರಾಯಗಳಿಗೆ ಹೆಸರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆಕೆ ಸಿನಿಮಾಕ್ಕಿಂತಲೂ ಇಂಥಾ ವಿವಾದಗಳ ಮೂಲಕವೇ ಹೆಚ್ಚು ಚಾಲ್ತಿಯಲ್ಲಿದ್ದಾರೆ. ಇದೀಗ ಆಕೆಗೆ ಬೆದರಿಕೆ ಪತ್ರ ಬರೆದವರ್ಯಾರು? ಅದರ ಹಿಂದೆ ಯಾರಿದ್ದಾರೆಂಬ ಬಗ್ಗೆ ಪರ್ಸೋವಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.