ಶೀತಲ್ ಶೆಟ್ಟಿ ನಿರ್ದೇಶನದ ಚೊಚ್ಚಲ ಚಿತ್ರ ವಿಂಡೋ ಸೀಟ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಒಂದು ಕಾಲದಲ್ಲಿ ಟಿವಿ೯ ನಿರೂಪಕಿಯಾಗಿದ್ದುಕೊಂಡು ಸ್ಪಷ್ಟ ಕನ್ನಡದ ಮೂಲಕವೇ ಎಲ್ಲರ ಮನಗೆದ್ದಿದ್ದ ಶೀತಲ್, ಇದೀಗ ನಿರ್ದೇಶಕಿಯಾಗಿಯೂ ನೆಲೆ ಕಂಡುಕೊಳ್ಳುವ ಸನ್ನಾಹದಲ್ಲಿದ್ದಾರೆ. ಹಾಗೆ ನೋಡಿದರೆ ಕನ್ನಡದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ತೀರಾ ಕಡಿಮೆ ಇದೆ. ಆ ಸಾಲಿನಲ್ಲಿ ಶೀತಲ್ ಭದ್ರವಾಗಿ ನೆಲೆ ಕಂಡುಕೊಳ್ಳುವ ಮುನ್ಸೂಚನೆ ಈಗಾಗಲೇ ಸಿಕ್ಕಿ ಬಿಟ್ಟಿದೆ. ಟ್ರೈಲರ್, ಟೀಸರ್ಗಳ ಮೂಲಕ ವಿಂಡೋ ಸೀಟ್ ಒಂದು ವಿಭಿನ್ನ ಚಿತ್ರವೆಂಬ ಸುಳಿವು ಈಗಾಗಲೇ ಎಲ್ಲರಿಗೂ ಸಿಕ್ಕಿದೆ. ಅತ್ತ ಪ್ರೀಮಿಯರ್ ಶೋಗೆ ಸಿಕ್ಕಿರುವ ಭರಪೂರ ಪ್ರತಿಕ್ರಿಯೆ, ಇತ್ತ ಪ್ರೇಕ್ಷಕ ವಲಯದಲ್ಲಿ ಮಿರುಗುತ್ತಿರುವ ಗಾಢ ನಿರೀಕ್ಷೆಗಳೆಲ್ಲವೂ ಸೇರಿಕೊಂಡು ನಿರ್ದೇಶಕಿಯಾಗಿ ಶೀತಲ್ ಹಾದಿಯನ್ನು ಸುಗಮಗೊಳಿಸುವಂಥಾ ವಾತಾವರಣವಿದೆ.
ಈ ಸಿನಿಮಾ ಮೂಲಕ ಶೀತಲ್ ಶೆಟ್ಟಿ ನಿಜಕ್ಕೂ ಪ್ರೇಕ್ಷಕರಿಗೆ ಕೊರೋನಾ ಕಾಲದಲ್ಲೊಂದು ಸರ್ಪ್ರೈಸ್ ಕೊಟ್ಟಿದ್ದರು. ೨೦೨೦ರ ಸುಮಾರಿಗೆ ಆರಂಭವಾಗಿದ್ದ ಈ ಚಿತ್ರ ಸಾಕಷ್ಟು ಅಡತಡೆಗಳನ್ನು ಮೀರಿಕೊಂಡು ಚಿತ್ರೀಕರಣ ಮುಗಿಸಿಕೊಂಡಿದ್ದೇ ಒಂದು ಸಾಹಸ. ಓರ್ವ ನಿರ್ದೇಶಕಿಯಾಗಿ ಮೊದಲ ಹೆಜ್ಜೆಯಲ್ಲಿಯೇ ಬಂದೆರಗಿದ ಅಂಥಾ ಸವಾಲುಗಳನ್ನು ಶೀತಲ್ ಸಮರ್ಥವಾಗಿಯೇ ಎದುರಿಸಿದ್ದಾರೆ. ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ನಾಯಕಿಯರಾಗಿ ನಟಿಸಿದ್ದಾರೆ. ಕಥೆಯ ಭಾವಕ್ಕೆ ತಕ್ಕಂತೆ ತವರು ನೆಲ ಸಾಗರದ ಸುತ್ತಮುತ್ತ ಶೀತಲ್ ಚಿತ್ರೀಕರಣವನ್ನೂ ನಡೆಸಿದ್ದಾರೆ. ತಾಳಗುಪ್ಪದಿಂದ ತೆರೆದುಕೊಳ್ಳುವ ಈ ಮೋಹಕ ಜರ್ನಿಯ ಕಥಾನಕ ಈಗಾಗಲೇ ಎಲ್ಲರ ಮನಸುಗಳಲ್ಲಿಯೂ ತೀವ್ರ ಕುತೂಹಲವೊಂದನ್ನು ಪ್ರತಿಷ್ಟಾಪಿಸಿದೆ.
ಈ ಹಿಂದಿನ ಎರಡು ಕಿರುಚಿತ್ರಗಳು ಮತ್ತವುಗಳ ಭಾವ ತೀವ್ರತೆಯೇ ಶೀತಲ್ರ ನಿರ್ದೇಶನದ ಪ್ರತಿಭೆಗೆ ಕನ್ನಡಿ ಹಿಡಿದಿದ್ದವು. ಈ ಕಾರಣದಿಂದಲೇ ವಿಂಡೋ ಸೀಟಿನ ಕಥೆಯತ್ತ ಪ್ರೇಕ್ಷಕರ ಚಿತ್ತ ನೆಡುವಂತಾಗಿದೆ. ಇದು ಮರ್ಡರ್ ಮಿಸ್ಟ್ರಿಯನ್ನೊಳಗೊಂಡಿರೋ ಭಿನ್ನ ಕಥೆಯೆಂಬ ಸುಳಿವನ್ನಷ್ಟೇ ಶೀತಲ್ ಶೆಟ್ಟಿ ಇದುವರೆಗೂ ಬಿಟ್ಟು ಕೊಟ್ಟಿದ್ದಾರೆ. ಅದರೊಂದಿಗೆ ಭಾವನೆಯಗಳ ಜೀಕುವಿಕೆಯೂ ಇದ್ದೇ ಇರುತ್ತದೆ ಹಾಗೂ ಇದೊಂದು ಅಪರೂಪದ ದೃಷ್ಯಕಾವ್ಯವಾಗಿರುತ್ತದೆ ಅನ್ನೋದಕ್ಕೆ ಈ ಶೀರ್ಷಿಕೆಯೇ ಸಾಕ್ಷಿಯಾಗಿ ನಿಲ್ಲುತ್ತದೆ. ಮೊದಲ ಹೆಜ್ಜೆಯಲ್ಲಿಯೇ ಅಪರೂಪದ ಕಥೆಯೊಂದನ್ನು ದೃಷ್ಯವಾಗಿಸಿರುವ ಶೀತಲ್ ಕನ್ನಡದ ಮಟ್ಟಿಗೆ ವಿರಳವಾದ ಜಾನರ್ನೊಂದಿಗೆ ಪ್ರೇಕ್ಷಕರನ್ನು ತಾಕಲು ಅಣಿಯಾಗಿದ್ದಾರೆ.
ಸಾಮಾನ್ಯವಾಗಿ ಬಸ್ಸು ಹತ್ತಿದಾಗ ಬಹುತೇಕರ ಮೊದಲ ಆದ್ಯತೆ ವಿಂಡೋ ಸೀಟಾಗಿರುತ್ತೆ. ಯಾವ ಸೀಟಿನಲ್ಲಿ ಕೂತರೂ ಸೇರೋ ನಿಲ್ದಾಣವಾಗಲಿ, ತಲುಪೋ ಸಮಯವಾಗಲಿ ವ್ಯತ್ಯಾಸವಾಗೋದಿಲ್ಲ. ಅದು ಒಟ್ಟಾರೆ ಪ್ರಯಾಣಿಕರಿಗೆಲ್ಲ ಒಂದೇ. ಆದರೆ ವಿಂಡೋ ಸೀಟಿನ ಯಾನದ ಅನುಭೂತಿ ಮಾತ್ರ ಬೇರೆ ಬಗೆಯದ್ದು. ಇಂಥಾ ಭಾವನಾತ್ಮಕ ಅಂಶಗಳೊಂದಿಗೆ ಮರ್ಡರ್ ಮಿಸ್ಟರಿಯನ್ನು ಕಟ್ಟಿಕೊಟ್ಟಿರೋ ಈ ಚಿತ್ರ ಗಹನವಾದುದೇನನ್ನೋ ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿದೆ ಎಂಬ ಸತ್ಯ ಈಗಾಗಲೇ ಜಾಹೀರಾಗಿದೆ.
ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದರ ಫಲವಾಗಿ ಹಾಡುಗಳ ಮುಂಗಾರು ಜೋರಾಗಿಯೇ ಹನಿದಿದೆ. ಅದಕ್ಕೆ ಮೈಯೊಡ್ಡಿ ಪ್ರೇಕ್ಷಕರೆಲ್ಲರೂ ಸಂಭ್ರಮಿಸಿದ್ದಾರೆ. ಇನ್ನೂ ವಿಶೇಷವೆಂದರೆ, ನಿರೂಪ್ ಭಂಡಾರಿ ಆರಂಭದಲ್ಲಿಯೇ ಈ ಕಥೆ ಕೇಳಿ ಥ್ರಿಲ್ ಆಗಿದ್ದರಂತೆ. ಇದರಲ್ಲಿನ ಪಾತ್ರ ತನಗೆ ಬೇರೆಯದ್ದೇ ಥರದ ಆವೇಗ ತಂದುಕೊಡಲಿದೆ ಎಂಬ ಭರವಸೆಯೂ ಅವರಲ್ಲಿದೆ. ಇನ್ನುಳಿದಂತೆ ಸಂಜನಾ ಮತ್ತು ಅಮೃತಾ ಅಯ್ಯಂಗಾರ್ ಪಾತ್ರವೂ ಹೊಸಾ ಥರದವುಗಳೇ ಎಂಬ ಸುಳಿವು ಈಗಾಗಲೇ ಸ್ಪಷ್ಟವಾಗಿದೆ. ಪ್ರೇಕ್ಷಕರ ತಲೆಯಲ್ಲಿ ಸುಳಿದಾಡುತ್ತಿರುವ ಕಲ್ಪನೆ ಮತ್ತು ವಿಂಡೋ ಸೀಟ್ ಆಂತರ್ಯದಲ್ಲಿರುವ ವಾಸ್ತವಗಳು ಮುಖಾಮುಖಿಯಾಗುವ ಅಮೂರ್ಥ ಘಳಿಗೆ ಇನ್ನೇನು ಹತ್ತಿರಾಗಿದೆ. ಈ ಮೂಲಕ ನಿರ್ದೇಶಕಿಯಾಗಿ ಶೀತಲ್ ಶೆಟ್ಟಿ ಪ್ರೇಕ್ಷಕರ ಮನ ಮುಟ್ಟುವುದೂ ಪಕ್ಕಾ ಆದಂತಾಗಿದೆ.