ಯಾರೇ ಆದರೂ ನಿರ್ದೇಶನದಲ್ಲಿ ಮೊದಲ ಹೆಜ್ಜೆಯಲ್ಲಿಯೇ ಅಗಾಧ ಪ್ರಮಾಣದಲ್ಲಿ ಭರವಸೆ ಮೂಡಿಸೋದು ಕಡುಗಷ್ಟದ ಕೆಲಸ. ಆದರೆ ಶೀತಲ್ ಶೆಟ್ಟಿ ಮಾತ್ರ ಲೀಲಾಜಾಲವಾಗಿಯೇ ಅದನ್ನು ಸಾಧ್ಯವಾಗಿಸಿದ್ದಾರೆ. ಅದರ ಫಲವಾಗಿಯೇ ಆರಂಭದಿಂದ ಇಲ್ಲೀವಯವರೆಗೂ ಕುತೂಹಲವನ್ನು ಕಾಪಿಟ್ಟುಕೊಂಡು ಬಂದಿರುವ ವಿಂಡೋ ಸೀಟ್ ಜುಲೈ೧ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಈ ಹೊತ್ತಿನಲ್ಲಿ ಈ ಚಿತ್ರದ ಬಗ್ಗೆ ಮತ್ತಷ್ಟು ಮೋಹಗೊಳ್ಳುವಂತೆ ಮಾಡುವಂಥಾ ಚೆಂದದ ವೀಡಿಯೋ ಸಾಂಗ್ ಒಂದು ಇದೀಗ ಲಾಂಚ್ ಆಗಿದೆ. ಮನಸಿಗೆ ತಂಗಾಳಿ ತೀಡಿದಂತಾಗಿ, ಯಾವುದೋ ಭಾವಲೋಕದಲ್ಲಿ ಕಳೆದು ಹೋಗುವಂತೆ ಮಾಡುವ ಈ ವೀಡಿಯೋ ಸಾಂಗ್ಗೀಗ ವ್ಯಾಪಕ ಮೆಚ್ಚುಗೆ ಸಿಗುತ್ತಿದೆ. ಹೆಚ್ಚೆಚ್ಚು ವೀಕ್ಷಣೆಯೂ ದಕ್ಕುತ್ತಿದೆ.
ಅತಿ ಚೆಂದದ ಹೂಗೊಂಚಲು ಈ ಕಿಟಕಿಯಾಚೆ ಕಂಡಂತಿದೆ ಎಂಬ ಸಮ್ಮೋಹಕ ಸಾಲುಗಳಿಂದ ಶುರುವಾಗುವ ಈ ಹಾಡು, ದೃಷ್ಯವೈಭವ, ಸಾಹಿತ್ಯ ಮತ್ತು ಸಂಗೀತ ಸೇರಿದಂತೆ ಎಲ್ಲ ರೀತಿಯಿಂದಲೂ ಕಾಡುವಂತಿದೆ. ಈ ಹಾಡಿಗೆ ವಿಜಯ ಪ್ರಕಾಶ್ ಧ್ವನಿಯಾಗಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನಿರ್ದೇಶನದಲ್ಲಿ ರೂಪುತಳೆದ ಈ ಹಾಡಿಗೆ ಖ್ಯಾತ ನಿರ್ದೇಶಕ ಯೋಗರಾಜ ಭಟ್ ಸಾಹಿತ್ಯ ಒದಗಿಸಿದ್ದಾರೆ. ಒಂದು ಅಸೀಮ ವ್ಯಾಮೋಹದೊಂದಿಗೆ ಈ ಸಿನಿಮಾ ನಿರ್ದೇಶನ ಮಾಡಿರುವ ಶೀತಲ್ ಶೆಟ್ಟಿ ಪ್ರತಿಯೊಂದರಲ್ಲಿಯೂ ಪರ್ಫೆಕ್ಟ್ ಆಗಿರುವಂತೆ ನೋಡಿಕೊಂಡಿದ್ದಾರೆ. ಅದರ ಭಾಗವಾಗಿಯೇ ಯೋಗರಾಜ್ ಭಟ್ ಸಾಹಿತ್ಯ ಒದಗಿಸಿದ್ದಾರೆ.
ಈ ಯೋಗರಾಜ ಭಟ್ಟರು ಪಡ್ಡೆ ಹುಡುಗರು ಹುಚ್ಚೆದ್ದು ಕುಣಿದು ಸದಾ ಗುನುಗಿಸುವಂಥಾ ಹಾಡು ಬರೆಯೋದರಲ್ಲಿ ಸಿದ್ಧಹಸ್ತರು. ಆದರೆ ಅವರು ಪಕ್ಕಾ ಮೆಲೋಡಿ ಟ್ರ್ಯಾಕಿನಲ್ಲಿಯೂ ಆಗಾಗ ಅಚ್ಚರಿ ಮೂಡಿಸುತ್ತಾರೆ. ಅಂಥಾ ಅಪರೂಪದ ಮ್ಯಾಜಿಕ್ಕೊಂದು ಈ ವೀಡಿಯೋ ಸಾಂಗಿನಲ್ಲಿ ಸಂಭವಿಸಿದೆ. ಈ ಹಾಡಿನ ಪ್ರತೀ ಫಲುಕುಗಳಿಗೂ ಮಲೆನಾಡಿನ ಘಮವಿದೆ. ತಾಳಗುಪ್ಪದ ಸುಂದರ ವಾತಾವರಣದಿಂದ ತೆರೆದುಕೊಳ್ಳು ಈ ಹಾಡು ನಿಮ್ಮನ್ನು ಸೀದಾ ಪ್ರೇಮಲೋಕಕ್ಕೆ ಕೈ ಹಿಡಿದು ಕರೆದೊಯ್ಯುತ್ತದೆ. ಅದರ ಜೊತೆ ಜೊತೆಗೇ ವಿಂಡೋ ಸೀಟ್ನ ಬಗ್ಗೆ ಮತ್ತೊಮ್ಮೆ ಮೋಹಗೊಳ್ಳುವಂತೆ ಮಾಡುತ್ತದೆ.
ಈ ಹಾಡೂ ಕೂಡಾ ಶೀತಲ್ ಶೆಟ್ಟಿ ನಿರ್ದೇಶಕಿಯಾಗಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳುತ್ತಾರೆಂಬುದನ್ನು ಸಾಕ್ಷೀಕರಿಸುವಂತಿದೆ. ಇಂಥಾ ಭರವಸೆ, ನಿರೀಕ್ಷೆಗಳ ಒಡ್ಡೋಲಗದಲ್ಲಿ ವಿಂಡೋ ಸೀಟ್ ಜಯಲೈ ೧ರಂದು ತೆರೆಗಾಣುತ್ತಿದೆ. ಈ ಚಿತ್ರವನ್ನು ಕೆಎಸ್ಕೆ ಶೋ ರೀಲ್ ಬ್ಯಾನರಿನಡಿಯಲ್ಲಿ ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ಸಂಜನಾ ಆನಂದ್, ಅಮೃತ ಅಯ್ಯಂಗಾರ್ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ರವಿಶಂಕರ್, ಮಧುಸೂಧನ್ ರಾವ್, ಲೇಖಾ ನಾಯ್ಡು, ಸೂರಜ್ ಮುಂತಾದವರ ತಾರಾಗಣ, ಅರ್ಜುನ್ ಜನ್ಯಾ ಸಂಗೀತ, ರಿತ್ವಿಕ್ ಸಂಕಲನ, ವೀರೇಶ್ ಶಿವಮೂರ್ತಿ ಸಂಭಾಷಣೆ ಈ ಚಿತ್ರಕ್ಕಿದೆ.