ಹೇಮಂತ್ ಕುಮಾರ್ ನಿರ್ದೇಶನದ ತುರ್ತು ನಿರ್ಗಮನ ಚಿತ್ರ ತೆರೆಗಾಣಲು ಕ್ಷಣಗಣನೆ ಶುರುವಾಗಿದೆ. ಈ ಹೊತ್ತಿಗಾಗಲೇ ಈ ಸಿನಿಮಾದ ಕಥೆ, ಪಾತ್ರಗಳ ಬಗ್ಗೆ ವ್ಯಾಪಕವಾಗಿ ಚರ್ಚೆಗಳು ನಡೆಯಲಾರಂಭಿಸಿವೆ. ಅಷ್ಟೊಂದು ವಿಶೇಷತೆಗಳಿಂದ ಕೂಡಿರುವ ಪಾತ್ರಗಳು ತುರ್ತು ನಿರ್ಗಮನದಲ್ಲಿದೆ ಎಂಬ ವಿಚಾರ ಈಗಾಗಲೇ ಎಲ್ಲರಿಗೂ ಮನದಟ್ಟಾಗಿದೆ. ಅದರಲ್ಲಿಯೂ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ನಟಿಸಿದ್ದಾರೆಂಬುದೇ ಹಲವರ ಕುತೂಹಲಕ್ಕೆ ಕಾರಣವಾಗಿದೆ. ಯಾಕೆಂದರೆ, ನಿರ್ದೇಶನ ಮಾಡಿರೋದು, ನಟಿಸಿರುವುದು ಕೆಲವೇ ಕೆಲ ಸಿನಿಮಾಗಳಲ್ಲಿಯೇ ಆದರೂ ರಾಜ್ ಶೆಟ್ಟಿ ಎರಡೂ ವಲಯಗಳಲ್ಲಿ ತಮ್ಮೇ ಆದೊಂದು ಛಾಪು ಮೂಡಿಸಿದ್ದಾರೆ. ಈ ಕಾರಣದಿಂದಲೇ ಅವರ ಪಾತ್ರ ತುರ್ತು ನಿರ್ಗಮನದಲ್ಲಿ ಹೇಗಿರಬಹುದೆಂಬ ಕ್ಯೂರಿಯಾಸಿಟಿ ಸಹಜವಾಗಿಯೇ ಎಲ್ಲರಲ್ಲಿದೆ.
ಒಂದಷ್ಟು ಕಾಲದವರೆಗೂ ನಿರ್ದೇಶಕರು ರಾಜ್ ಶೆಟ್ಟಿ ಪಾತ್ರವನ್ನು ಗೌಪ್ಯವಾಗಿಟ್ಟಿದ್ದರು. ಆದರೆ, ಬಿಡುಗಡೆಯ ಘಳಿಗೆ ಹತ್ತಿರಾಗುತ್ತಿರುವ ಸಂದರ್ಭದಲ್ಲಿ ಆ ಬಗೆಗಿನ ಒಂದಷ್ಟು ಮಾಹಿತಿಗಳನ್ನು ಬಿಟ್ಟು ಕೊಟ್ಟಿದ್ದಾರೆ. ರಾಜ್ರ ಒಂದಷ್ಟು ಗೆಟಪ್ಪುಗಳೂ ಹೊರಬಂದಿವೆ. ಈ ಚಿತ್ರದಲ್ಲಿನ ಪ್ರತೀ ಪಾತ್ರಗಳನ್ನೂ ಒಂದೊಂದು ತೆರನಾಗಿ ಪ್ರೇಕ್ಷಕರನ್ನು ತಾಕುವಂತೆ ಹೇಮಂತ್ ರೂಪಿಸಿದ್ದಾರೆ. ಅದರ ಮುಂದುವರೆದ ಭಾಗವಾಗಿರೋದು ರಾಜ್ ಶೆಟ್ಟಿ ಪಾತ್ರ. ಅವರಿಲ್ಲಿ ಕ್ಯಾಬ್ ಡ್ರೈವರ್ ಆಗಿ ನಟಿಸಿದ್ದಾರೆ. ಮೊದಲ ಬಾರಿ ಅವರು ಘನ ಗಂಭೀರವಾದ ಪಾತ್ರವನ್ನು ನಿಭಾಯಿಸಿದ್ದಾರೆ.
ಕಥೆಯನ್ನು, ಅದರಲ್ಲಿ ಅಡಕವಾಗಿದ್ದ ವಿಶೇಷತೆಗಳನ್ನು ಆರಂಭದಲ್ಲಿಯೇ ಮೆಚ್ಚಿಕೊಂಡಿದ್ದ ರಾಜ್ ಶೆಟ್ಟಿ ನಟಿಸಲು ಒಪ್ಪಿಕೊಂಡಿದ್ದರು. ಆದರೆ ಚಿತ್ರೀಕರಣಕ್ಕಿಳಿಯುವ ಮುನ್ನ ಒಂದು ದೊಡ್ಡ ಸಮಸ್ಯೆ ಅವರನ್ನೆದುರಾಗಿತ್ತು. ಹೇಳಿಕೇಳಿ ಅವರಿಲ್ಲಿ ಕ್ಯಾಬ್ ಡ್ರೈವರ್ ಪಾತ್ರವನ್ನು ನಿರ್ವಹಿಸಬೇಕಿತ್ತು. ಆದರೆ ರಾಜ್ ಶೆಟ್ಟರಿಗೆ ಕಾರ್ ಡ್ರೈವಿಂಗಿನ ಗಂಧ ಗಾಳಿಯೇ ಗೊತ್ತಿರಲಿಲ್ಲ. ಹಾಗಂತ ಈ ನಿರ್ಧಾರದಿಂದ ಹಿಂದೆ ಸರಿಯುವಂತೆಯೂ ಇರಲಿಲ್ಲ. ಕಡೆಗೂ ನಿರ್ದೇಶಕ ಹೇಮಂತ್ ಶೆಟ್ಟರಿಗೆ ಕಾರ್ ಡ್ರೈವಿಂಗ್ ಕಲಿಸಿದ್ದರಂತೆ. ಹಾಗೆ ಚಾಲನೆ ಕಲಿತುಕೊಂಡ ರಾಜ್ ಶೆಟ್ಟಿ ಪಳಗಿದ ಚಾಲಕರನ್ನೂ ನಾಚಿಸುವಂತೆ ಆ ಪಾತ್ರವನ್ನು ನಿರ್ವಹಸಿದ್ದಾರಂತೆ. ಹೀಗೆ ಹೊಸತನದ ಪಾತ್ರದ ಮೂಲಕ ರಾಜ್ ಶೆಟ್ಟಿ ನಾಳೆ ಬೆಳಗ್ಗಿನ ಹೊತ್ತಿಗೆಲ್ಲ ನಿಮ್ಮನ್ನು ಮುಖಾಮುಖಿಯಾಗಲಿದ್ದಾರೆ.