ಈ ನೆಲದ ಬುಡಕಟ್ಟು ಜನಾಂಗಗಳೀಗ ಅತ್ತ ಆಧುನಿಕತೆಗೆ ಸಂಪೂರ್ಣವಾಗಿ ಒಗ್ಗಿಕೊಳ್ಳಲೂ ಆಗದೆ, ಇತ್ತ ತಮ್ಮ ಪಾರಂಪರಿಕ ಬೇರುಗಳನ್ನು ಸಂಪೂರ್ಣವಾಗಿ ಕಿತ್ತಿಟ್ಟುಕೊಂಡಂತೆ ಬದುಕಲೂ ಆಗದ ಸಂದಿಗ್ಧ ಸ್ಥಿತಿಯಲ್ಲಿದೆ. ಒಂದು P ಲಕ್ಕೆ ಬುಡಕಟ್ಟು ಸಮುದಾಯದ ಹಾಡಿಗಳೊಳಗೆ ಆಧುನಿಕತೆಯ ಸಣ್ಣದೊಂದು ಕಿರಣವೂ ಹೊಳೆಯಲು ಸಾಧ್ಯವಾಗದಂಥಾ ವಾತಾವರಣವಿತ್ತು. ಆದರೀವತ್ತು ಬುಡಕಟ್ಟು ಸಮುದಾಯಗಳ ಮಕ್ಕಳಿಗೂ ಒಂದಷ್ಟು ಅಕ್ಷರ ಪರಿಚಯವಾಗುತ್ತಿದೆ. ಸದಾ ಸಂದಿಗ್ಧ ವಾತಾವರಣದಲ್ಲಿಯೇ ಬದುಕುತ್ತಾ ಬಂದಿರೋ ಇಂಥಾ ಸಮುದಾಯದಲ್ಲಿಯೂ ಉನ್ನತ ವ್ಯಾಸಂಗ, ಅದಕ್ಕೆ ತಕ್ಕುದಾದಂಥ ಸ್ಥಾನಮಾನಗಳ ಕನಸು ಗರಿಗೆದರಿಕೊಳ್ಳುತ್ತಿದೆ. ಇದೇ ಹೊತ್ತಿನಲ್ಲಿ ಕೇರಳದಲ್ಲಿನ ಬುಡಕಟ್ಟು ಸಮುದಾಯದ ಹೆಣ್ಣುಮಗಳೊಬ್ಬಳು ಉಪ ಜಿಲ್ಲಾಧೀಕಾರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಶ್ರೀಧನ್ಯಾ ವಯನಾಡಿನ ಪುದುತನ ಪಂಚಾಯ್ತಿ ವ್ಯಾಪ್ತಿಗೆ ಬವರುವ ಪ್ರದೇಶವೊಂದರ ಬಡ ಬುಡಕಟ್ಟು ಸಮುದಾಯದಿಂದ ಬಂದವರು. ತೀರಾ ಪೇಟೆ ಕಡೆ ಬಂದು ಕಾಲೇಜು ತನಕ ವ್ಯಾಸಂಗ ಮಾಡೋದೇ ಈ ಸಮುದಾಯದ ಪಾಲಿಗೆ ಬಹುದೊಡ್ಡ ಸಾಧನೆ ಎಂಬಂಥಾ ವಾತಾವರಣವಿದೆ. ಹಾಗೆ ನೋಡಿದರೆ, ಕರ್ನಾಟಕವೂ ಸೇರಿದಂತೆ ಎಲ್ಲ ಭಾಗಗಳ ಬುಡಕಟ್ಟು ಜನ ಆಂಗಗಳ ಪಾಡೂ ಕೂಡಾ ಇದಕ್ಕಿಂತ ಭಿನ್ನವೇನಲ್ಲ. ಆದರೆ ಅಂಥಾ ಕಡುಕಷ್ಟದ ಹಾದಿಯಲ್ಲಿ ಬೆಳೆದು ಬಂದ ಹೆಣ್ಣುಮಗಳೊಬ್ಬಳು ಐಎಎಸ್ ಮಾಡಿ ಉಪ ಜಿಲ್ಲಾಧಿಕಾರಿಯಾಗುತ್ತಾಳೆಂದರೆ ಅದು ಖಂಡಿತಾ ಸಾಮಾನ್ಯದ ಸಾಧನೆಯಲ್ಲ. ಬಹುಶಃ ಈಕೆ ಸಾಗಿ ಬಂದಿರೋ ಹಾದಿ ಮತ್ತು ಛಲದ ಕಥೆ ಕೇಳಿದರೆ ಯಾರೊಬ್ಬರೂ ರೋಮಾಂಚನಗೊಳ್ಳದಿರಲು ಸಾಧ್ಯವೇ ಇಲ್ಲ.
ಅದೇನೇ ಸೌಕರ್ಯಗಳಿದ್ದರೂ ಓದಲಾಗದೆ ಗೋತಾ ಹೊಡೆಯೋರ ಸಖ್ಯೆ ದೊಡ್ಡದಿದೆ ಇನ್ನೂ ಕೆಲ ಮಂದಿ ಮಾಮೂಲಿ ಅಡೆತಡೆಗಳನ್ನೇ ಭಯಾನಕವಾಗಿ ಕಲ್ಪಿಸಿಕೊಂಡು ಎಲ್ಲಿಯೋ ಕಳೆದು ಹೋಗಿಒ ಬಿಡುತ್ತಾರೆ. ಆದರೆ, ಶ್ರೀ ಧನ್ಯಾ ಮಾತ್ರ ಅವರೆಲ್ಲರಿಗಿಂತಲೂ ಭಿನ್ನ. ಪುದುತನ ಪಂಚಾಯ್ತಿ ವ್ಯಾಪಿಯ ಪುಟ್ಟ ಗುಡಿಸಲಿನಲ್ಲಿ ವಾಸಿಸುವ ಕೂಲಿಯಾಳುಗಳಾದ ಸುರೇಶ್ ಮತ್ತು ಕಮಲಾ ದಂಪತಿಗಳ ಮಗಳು ಶ್ರೀ ಧನ್ಯಾ. ನರೇಗಾ ಯೋಜನೆಯಡಿಯಲ್ಲಿ ಕೂಲಿ ಮಾಡಿ ದಿನದೂಡುತ್ತಿದ್ದ ಈ ದಂಪತಿ ತುಂಬಾನೇ ಕಷ್ಟಪಟ್ಟು ಮಗಳನ್ನು ಚೆಂದಗೆ ಓದಿಸುವ ಪಣ ತೊಟ್ಟಿದ್ದರು. ಈ ಹುಡುಗಿ ಕೂಡಾ ಓದಿನ ನಡುವೆ ಕೊಂಚ ಬಿಡುವು ಸಿಕ್ಕರೂ ಕೆಲಸ ಮಾಡುತ್ತಾ, ಕೆಲವೊಮ್ಮೆ ಅಪ್ಪ ಅಮ್ಮನಿಗೆ ಕೂಲಿ ಕೆಲಸದಲ್ಲಿ ಸಹಾಯ ಮಾಡುತ್ತಾ ಎಲ್ಲರೂ ಅಚ್ಚರಿಗೊಳ್ಳುವಂತೆ ವ್ಯಾಸಂಗ ಪೂರೈಸಿಕೊಳ್ಳುತ್ತಾ ಸಾಗಿದ್ದಳು.
ಶ್ರೀಧನ್ಯಾ ಶೈಕ್ಷಣಿಕವಾಗಿ ಸಾಗಿ ಬಂದ ಪ್ರತೀ ಹೆಜ್ಜೆಗಳೂ ಗಮನಾರ್ಹವೇ. ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತರ ಪದವಿ ಪೂರೈಸಿದ್ದ ಈಕೆ ಸತತವಾಗಿ ಮೂರು ಸಲ ಪ್ರಯತ್ನಿಸಿ ನಾಗರಿಕ ಸೇವಾ ಪರೀಕ್ಷೆಯನ್ನು ಪಾಸ್ ಮಾಡಿಕೊಂಡಿದ್ದರು. ಹಿಂದುಳಿದ ಸಮುದಾಯದ ಹುಡುಗಿಯ ಈ ಸಾಧನೆ ಕಂಡು ಆ ಕಾಲದಲ್ಲಿಯೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮನಸಾರೆ ಹೊಗಳಿದ್ದರು. ಈಕೆಯ ಸಾಧನೆ ಹಿಂದುಳಿದ ಸಮುದಾಯಗಳ ಮಕ್ಕಳಿಗೆ ಸ್ಫೂರ್ತಿ ಎಂಬಂಥ ಮಾತುಗಳು ಕೇರಳದ ತುಂಬೆಲ್ಲ ಧ್ವನಿಸಿದ್ದವು. ಇಂಥಾ ಸಾಧನೆಗಳೇನು ಸಲೀಸಾಗಿ ಸಂಭವಿಸಿ ಬಿಡುವಂಥಾದ್ದಲ್ಲ. ಈವತ್ತಿಗೆ ಉಪ ಜಿಲ್ಲಾಧಿಕಾರಿಯಾಗಿರೋ ಶ್ರೀಧನ್ಯಾ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಬಹುಶಃ ಅವರಿಗೇ ಮತ್ತೋರ್ವರು ಸ್ಫೂರ್ತಿಯಾಗದೇ ಇದ್ದಿದ್ದರೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ.
ಶ್ರೀ ಧನ್ಯಾ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಸಂಬಂಧಿಸಿದ ಸರ್ಕಾರಿ ಕಾರ್ಯಕ್ರಮವೊಂದರ ಭಾಗವಾಗಿ ಕೆಲಸ ಮಾಡಿದ್ದರು. ಅವರ ಮನಸು ಐಎಎಸ್ನತ್ತ ಬಲವಾಗಿಯೇ ವಾಲಿಕೊಂಡಿದ್ದು ಕೂಡಾ ಆ ಹಂತದಲ್ಲಿಯೇ. ಆ ಕಾರ್ಯಕ್ರಮದಲ್ಲಿ ಮಾನಂತವಾಡಿ ಎಂಬಲ್ಲಿನ ಉಪ ಜಿಲ್ಲಾಧಿಕಾರಿಯಾಗಿದ್ದ ಶ್ರೀರಾಮ್ ಸಾಂಭಶಿವ ರಾವ್ ಎಂಬವರು ಶ್ರೀಧನ್ಯಾರ ಗಮನ ಸೆಳೆದಿದ್ದರು. ಅವರಿಗೆ ಜನರೆಲ್ಲ ಕೊಡುತ್ತಿದ್ದ ಗೌರವವೇ ಐಎಎಸ್ ಮಾಡಬೇಕೆಂಬ ಆಸೆಯನ್ನು ಚಿಗುರಿಸಿತ್ತು. ಆ ನಂತರದಲ್ಲಿ ಆ ಪದವಿಯ ಆಳ ಅಗಲ ಮತ್ತು ಸಾಧ್ಯತೆಗಳನ್ನು ಮನಗಂಡ ಶ್ರೀ ಧನ್ಯಾ ತಾನೂ ಕಷ್ಟಪಟ್ಟು ಐಎಎಸ್ ತೇರ್ಗಡೆ ಹೊಂದಿದ್ದರು.
ಇದೀಗ ಕೊಯಿಕ್ಕೋಡ್ನಲ್ಲಿ ಶ್ರೀರಾಮ್ ಸಾಂಭಶಿವ ರಾವ್ ಅವರೇ ಜಿಲ್ಲಾಧಿಕಾರಿಯಾಗಿದ್ದಾರೆ. ಅವರಿಂದಲೇ ಸ್ಫೂರ್ತಿ ಪಡೆದಿದ್ದ ಶ್ರೀ ಧನ್ಯಾ ಅಲ್ಲಿಯೇ ಉಪ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಶ್ರೀ ಧನ್ಯಾ ತಮ್ಮ ಬುಡಕಟ್ಟು ಸಮುದಾಯ ಸೇರಿದಂತೆ ಎಲ್ಲ ಹಿಂದುಳಿದವರ ಶ್ರೇಯೋಭಿವೃದ್ದೀಗೂ ಶ್ರಮಿಸಬೇಕೆಂಬ ಆಸೆ ಹೊಂದಿದ್ದಾರೆ. ಹೆಚ್ಚೇನೂ ಬೇಡ; ಶ್ರೀಧನ್ಯಾ ನಡೆದು ಬಂದ ಹಾದಿಯನ್ನೊಮ್ಮೆ ಅವಲೋಕಿಸಿದರೂ ಪ್ರತಿಯೊಬ್ಬರಲ್ಲಿಯೂ ಸಾಧಿಸೋ ಛಲ ಮೂಡಿಕೊಳ್ಳುತ್ತದೆ. ಅದೇನೇ ಕಷ್ಟವಿದ್ದರೂ ನೀಗಿಕೊಂಡು ಅವುಡುಗಚ್ಚಿ ಅದೇ ಹಾದಿಯಲ್ಲಿ ಮುಂದುವರೆಯುವ ಆತ್ಮಬಲ ಕೂಡಾ ತಂತಾನೇ ಮೂಡಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಶ್ರೀಧನ್ಯ ಸಾಧನೆ ಸಾರ್ವಕಾಲಿಕ ಸ್ಫೂರ್ತಿ. ಯಾಕೆಂದರೆ, ಬುಡಕಟ್ಟು ಜನಾಂಗದ ಮೊದಲ ಐಎಎಸ್ ಅಧಿಕಾರಿಯೆಂಬ ಹಿರಿಮೆ ಅವರ ಹೆಸರಿಗೆ ಅಂಟಿಕೊಂಡಿದೆ!