ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶನದ ಹರಿಕಥೆ ಅಲ್ಲ ಗಿರಿಕಥೆ ತೆರೆಗಾಣಲು ಕ್ಷಣಗಣನೆ ಶುರುವಾಗಿದೆ. ಟೈಟಲ್ ಲಾಂಚ್ ಆದ ಘಳಿಗೆಯಿಂದ ಇಲ್ಲಿಯವರೆಗೂ ನಾನಾ ಥರದಲ್ಲಿ ಟಾಕ್ ಕ್ರಿಯೇಟ್ ಮಾಡುತ್ತಾ ಸಾಗಿ ಬಂದಿರುವ ಚಿತ್ರವಿದು. ಇದು ಪ್ರೇಕ್ಷಕರನ್ನು ಬಹುವಾಗಿ ಸೆಳೆದುಕೊಳ್ಳಲು ಒಂದಷ್ಟು ಕಾರಣಗಳಿದ್ದಾವೆ. ಆದರೆ ಆ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲೋದು ನಾಯಕನಾಗಿ ನಟಿಸಿರುವ ರಿಶಭ್ ಶೆಟ್ಟಿ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಅದಕ್ಕೆ ಕಾರಣವಾಗಿರೋದು ನಿರ್ದೇಶಕನಾಗಿ, ನಟನಾಗಿ ರಿಶಭ್ ಸಾಗಿ ಬಂದಿರುವ ಭಿನ್ನವಾದ ಹಾದಿ. ಈ ಕಾರಣದಿಂದಲೇ ಅವರ ಇರುವಿಕೆಯಿರುವಲ್ಲಿ ಹೊಸತನದ ಹಾಜರಿಯಿರುತ್ತದೆಂಬ ಗಾಢ ನಂಬಿಕೆ ಪ್ರೇಕ್ಷಕರಲ್ಲಿ ಬಲಗೊಂಡಿದೆ.
ನಿರ್ದೇಶಕನಾಗಿ ರಿಶಭ್ ಶೆಟ್ಟರು ತಮ್ಮದೇ ಶೈಲಿಯ ಮೂಲಕ, ಆಲೋಚನಾ ಕ್ರಮಗಳ ಮೂಲಕ ಗೆಲುವು ದಾಖಲಿಸುತ್ತಾ ಬಂದಿದ್ದಾರೆ. ಬೆಲ್ ಬಾಟಂ ನಂತರದಲ್ಲಿ ಅವರು ನಟನಾಗಿಯೂ ಹೊಸಾ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅದರ ಮುಂದುವರೆದ ಭಾಗವಾಗಿ ದಾಖಲಾಗಲಿರುವ ಚಿತ್ರ ಹರಿಕಥೆ ಅಲ್ಲ ಗಿರಿಕಥೆ. ಓರ್ವ ನಟನಾಗಿಯೂ ತಮ್ಮದೇ ಅಭಿರುಚಿಯನ್ನು ದಕ್ಕಿಸಿಕೊಂಡು ಮುಂದುವರೆಯುತ್ತಿರುವ ರಿಶಭ್ ಒಂದು ಚಿತ್ರವನ್ನು ಒಪ್ಪಿಕೊಳ್ಳಲು ಒಂದಷ್ಟು ಮಾನದಂಡಗಳನ್ನೂ ಇಟ್ಟುಕೊಂಡಿದ್ದಾರೆ. ಈ ಕಾರಣದಿಂದ ಅವರೊಂದು ಚಿತ್ರವನ್ನು ಒಪ್ಪಿಕೊಂಡರೆಂದರೆ ಅದು ಡಿಫರೆಂಟಾಗಿದೆ ಎಂದೇ ಅರ್ಥ. ಹಾಗಿದ್ದ ಮೇಲೆ ಹರಿಕಥೆ ಅಲ್ಲ ಗಿರಿಕಥೆಯೂ ಭಿನ್ನ ಧಾಟಿಯ ಸಿನಿಮಾವಾಗಿದೆ ಎಂದೇ ಅರ್ಥ.
ಈ ಕಥೆ ಹುಟ್ಟು ಪಡೆದಿದ್ದು ಮತ್ತು ಅದನ್ನು ರಿಶಭ್ ಶೆಟ್ಟಿ ಒಪ್ಪಿಕೊಂಡಿದ್ದರ ಹಿಂದೆ ಸ್ವಾರಸ್ಯಕರವಾದ ಒಂದಷ್ಟು ವಿಚಾರಗಳಿದ್ದಾವೆ. ರಿಶಭ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಕಿರಿಕ್ ಪಾರ್ಟಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು ಗೊತ್ತೇ ಇದೆ. ಆ ಚಿತ್ರದ ನಿರ್ದೇಶನ ವಿಭಾಗದಲ್ಲಿ ಗಿರಿಕೃಷ್ಣ ಕೂಡಾ ಭಾಗಿಯಾಗಿದ್ದರು. ಕಿರಿಕ್ ಪಾರ್ಟಿಯ ನಂತರದಲ್ಲಿ ಗಿರಿಕೃಷ್ಣ ಸ್ವತಂತ್ರ ನಿರ್ದೇಶಕರಾಗುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದರು. ಗಿರಿ ನಿರ್ದೇಶಕನಾಗೋ ಕನಸು ಹೊತ್ತು ಗಾಂಧಿನಗರದ ಗಲ್ಲಿಗಳಲ್ಲಿ ವರ್ಷಾಂತರಗಳ ಕಾಲ ಸೈಕಲ್ಲು ಹೊಡೆದಿದ್ದವರು. ಆ ಅನುಭವಗಳನ್ನೆಲ್ಲ ಒಗ್ಗೂಡಿಸಿಕೊಂಡು ಸ್ವಾರಸ್ಯಕರವಾದ ಕಥೆ ಹೆಣೆದಿದ್ದ ಅವರಿಗೆ ಅದರಲ್ಲೊಂದು ಪಾತ್ರವನ್ನು ರಿಶಭ್ ಅವರೇ ಮಾಡಬೇಕೆಂಬ ಇರಾದೆಯಿತ್ತು.
ಈ ಬಗ್ಗೆ ಗಿರಿ ಹೇಳಿಕೊಂಡಾಗ ರಿಶಭ್ ಆರಂಭದಲ್ಲಿಯೇ ಕಥೆಯ ಮೇಲೆ ಕಣ್ಣಾಡಿಸಿದ್ದರು. ಆ ಕ್ಷಣ ಅವರೊಳಗೆ ಈ ಕಥೆ ಗೆಲ್ಲುತ್ತದೆಂಬಂಥಾ ಭರವಸೆಯೂ ಮೂಡಿಕೊಂಡಿತ್ತು. ಆದರೆ ನಟನಾಗಿ ಮುಂದುವರೆಯೋದರ ಬಗ್ಗೆ ಅವರಿಗೇ ಸ್ಪಷ್ಟ ಆಲೋಚನೆ ಇಲ್ಲದಿದ್ದದ್ದರಿಂದ ಒಂದಷ್ಟು ಕಾಲ ಸುಮ್ಮನೆ ಮುಂದುವರೆದಿದ್ದರು. ಕಡೆಗೂ ತನಗೆ ಹೆಗಲಾಗಿ ದುಡಿದಿದ್ದ ಗಿರಿಕೃಷ್ಣನಿಗೆ ಸಹಾಯವಾಗಬಹುದೇನೋ ಎಂಬ ಕಾರಣದಿಂದ ಹೀರೋಗಿರಿಯನ್ನು ಒಪ್ಪಿಕೊಂಡಿದ್ದರಂತೆ. ಆ ನಂತರದಲ್ಲಿ ಚಿತ್ರೀಕರಣ ಶುರುವಾದರೂ ಕೋವಿಡ್ ಅಡ್ಡಗಾಲಾಗಿತ್ತು. ಯಾವ ಗಿರಿಕೃಷ್ಣ ಕನಸು ಕಂಡು ಈ ಸಿನಿಮಾ ಆರಂಭಿಸಿದರೋ ಅವರೇ ಕಾಯಿಲೆಬಿದ್ದು ಹಾಸಿಗೆ ಹಿಡಿದಿದ್ದರು.
ಇನ್ನೇನು ಕೊಂಚ ಹೆಚ್ಚೂಕಮ್ಮಿಯಾಗಿದ್ದರೂ ಈ ಚಿತ್ರ ನಿಂತೇ ಹೋಗುವ ಅಪಾಯವಿತ್ತು. ಕಡೆಗೂ ಅನುರುದ್ಧ್ ಮಹೇಶ್ ಮತ್ತು ಕರಣ್ ಅನಂತ್ ಜವಾಬ್ದಾರಿಯ ನೊಗ ಹೊತ್ತು ಮುಂದುವರೆಸಿದ್ದರು. ರಿಶಭ್ ಕೇವಲ ಹೀರೋ ಆಗಿರದೆ ಎಲ್ಲ ರೀತಿಯಲ್ಲಿಯೂ ತಂಡವನ್ನು ಮುನ್ನಡೆಸಿದ್ದರು. ಮಾರ್ಗದರ್ಶನವನ್ನೂ ನೀಡಿದ್ದರು. ಅದೆಲ್ಲದರ ಫಲವಾಗಿಯೇ ಈವತ್ತಿಗೆ ಹರಿಕಥೆ ಅಲ್ಲ ಗಿರಿಕಥೆ ಪ್ರೇಕ್ಷಕರ ಮುಂದೆ ಅವತರಿಸುತ್ತಿದೆ. ಈ ಚಿತ್ರ ನಟನಾಗಿ ತನ್ನ ವೃತ್ತಿ ಬದುಕಿನಲ್ಲಿ ಭಿನ್ನವಾಗಿ ದಾಖಲಾಗುತ್ತದೆಂಬ ನಂಬಿಕೆ ರಿಶಭ್ ಶೆಟ್ಟರಲ್ಲಿದೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂಥಾ ಗುಣ ಹೊಂದಿರೋ ಈ ಚಿತ್ರ ಈ ರಾತ್ರಿ ಹೊರಳಿಕೊಂಡಾಕ್ಷಣವೇ ನಿಮ್ಮೆದುರು ಅವತರಿಸಲಿದೆ!