ಹಾರರ್ ಜಾನರಿನ ಚಿತ್ರವೆಂದಾಕ್ಷಣ ಸಹಜವಾಗಿಯೇ ಪ್ರೇಕ್ಷಕರು ಕಣ್ಣರಳಿಸುತ್ತಾರೆ. ಅದರಲ್ಲಿಯೂ ಹಲವಾರು ವಿಶೇಷತೆಗಳನ್ನೊಳಗೊಂಡಿರುವ, ಪ್ರಯೋಗಾತ್ಮಕ ಗುಣಗಳಿರುವ, ತಾಂತ್ರಿಕ ಶ್ರೀಮಂತಿಕೆಯಿಂದ ಮೈ ಕೈ ತುಂಬಿಕೊಂಡಿರುವ ಚಿತ್ರವೆಂದ ಮೇಲೆ ಅದರತ್ತ ಪ್ರೇಕ್ಷಕರು ಆಕರ್ಷಿತರಾಗದಿರಲು ಸಾಧ್ಯವೇ? ಆ ದಿಸೆಯಲ್ಲಿಯೇ ಸಮಸ್ತ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿರುವ ಚಿತ್ರ ಸ್ಪೂಕಿ ಕಾಲೇಜ್. ಎಫ್ಎಂ ಜಾಕಿಯಾಗಿದ್ದುಕೊಂಡು, ಭಿನ್ನ ಅಭಿರುಚಿಗಳನ್ನೊಳಗೊಂಡಿರುವ ಭರತ್ ಜೆ ನಿರ್ದೇಶನದ ಈ ಚಿತ್ರವೀಗ ಟೀಸರ್ ಮೂಲಕ ಟಾಕ್ ಕ್ರಿಯೇಟ್ ಮಾಡಿದೆ. ಹೀಗೆ ಎಲ್ಲ ವರ್ಗಗಳ ಪ್ರೆಕ್ಷಕರ ಕುತೂಹಲದ ಕಿನಾರೆಯಲ್ಲಿ ಲಂಗುರು ಹಾಕುವಂತೆ ಮಾಡಿದ ಈ ಟೀಸರ್ ಅನ್ನು ಪ್ರಕಾಶನಾಥ್ ಸ್ವಾಮೀಜಿ ಬಿಡುಗಡೆಗೊಳಿಸಿದ್ದಾರೆ.
ಹಾಗೆ ಬಿಡುಗಡೆಗೊಂಡ ಕ್ಷಣದಿಂದಲೇ ಈ ಟೀಸರ್ಗೆ ಹೆಚ್ಚೆಚ್ಚು ವೀಕ್ಷಣೆಗಳು ಸಿಗುತ್ತಿವೆ. ಸಾಮಾಜಿಕ ಜಾಲತಾಣವೂ ಸೇರಿದಂತೆ ಎಲ್ಲಡೆಯಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ರಂಗಿತರಂಗದ ನಂತರದಲ್ಲಿ ಗಟ್ಟಿ ಕಥೆ ಹೊಂದಿರುವ ಹಾರರ್ ಚಿತ್ರ ಅಂತೆಲ್ಲ ಪ್ರೇಕ್ಷಕ ವಲಯದಲ್ಲಿಯೇ ಮಾತುಗಳು ಹರಿದಾಡುತ್ತಿದೆ. ಅಷ್ಟರ ಮಟ್ಟಿಗೆ ಈ ಟೀಸರ್ ಪರಿಣಾಮಕಾರಿಯಾಗಿದೆ. ಹಾರರ್ ಸಿನಿಮಾಗಳೆಂದರೆ ಬರೀ ಭಯ ಬೀಳಿಸೋದಷ್ಟೇ ಎಂಬಂತೆ ಅನೇಕರು ಸಿನಿಮಾಗಳನ್ನು ರೂಪಿಸುತ್ತಾರೆ. ಆದರೆ ಅದರಾಚೆಗಿನ ಅಚ್ಚರಿಗಳೊಂದಿಗೆ, ಅಪರೂಪದ ಗಟ್ಟಿ ಕಥೆಯೊಂದಿಗೆ ರೂಪುಗೊಂಡಿರುವ ಚಿತ್ರ ಸ್ಪೂಕಿ ಕಾಲೇಜ್. ಅದರ ಕುರುಹುಗಳು ಟೀಸರ್ನಲ್ಲಿ ಸ್ಪಷ್ಟವಾಗಿಯೇ ಗೋಚರಿಸಿವೆ.
ದಿಯಾ ಮೂಲಕ ಖ್ಯಾತಿ ಪಡೆದುಕೊಂಡಿರುವ ಖುಷಿ ರವಿ ಈ ಚಿತ್ರದ ನಾಯಕಿಯಾಗಿ ನಟಿಸಿದ್ದರೆ, ಪ್ರೀಮಿಯರ್ ಪದ್ಮಿನಿ ಮೂಲಕ ಒಂದಷ್ಟು ಹೆಸರು ಮಾಡಿದ್ದ ವಿವೇಕ್ ಸಿಂಹ ನಾಯಕನಾಗಿ ನಟಿಸಿದ್ದಾರೆ. ಪಕ್ಕಾ ಹೊಸತನ ಹೊಂದಿರುವ ಈ ಕಥೆಯ ತಾರಾಗಣದಲ್ಲಿಯೂ ಹೊಸಬರಿಗೇ ಹೆಚ್ಚಾಗಿ ಅವಕಾಶ ಮಡಿಕೊಡಲಾಗಿದೆ. ರಾಜ್ಯದ ತುಂಬೆಲ್ಲ ಆಡಿಷನ್ ನಡೆಸಿ ನೂರೈವತ್ತರಷ್ಟು ತಾಜಾ ಪ್ರತಿಭೆಗಳನ್ನು ತಾರಾಗಣಕ್ಕೆ ಸೇರಿಸಿಕೊಳ್ಳಲಾಗಿದೆ. ಇನ್ನುಳಿದಂತೆ ಕಾಮಿಡಿ ಕಿಲಾಡಿಗಳು ಶೋ ಮೂಲಕ ಭಾರೀ ಹೆಸರು ಮಾಡಿದ್ದ ಕಿಲಾಡಿಗಳು ನಗುವಿನ ಕಚಗುಳಿಯಿಡಲು ರೆಡಿಯಾಗಿದ್ದಾರೆ.
ಎಲ್ಲ ಸಿದ್ಧಸೂತ್ರಗಳನ್ನು ಮೀರಿಕೊಂಡು ತಯಾರಾಗಿರುವ ಚಿತ್ರ ಸ್ಪೂಕಿ ಕಾಲೇಜ್. ಕರ್ನಾಟಕದಲ್ಲಿಯೇ ಇರುವ ನೂರಾ ಮೂರು ವರ್ಷಗಳಷ್ಟು ಹಳೆಯದಾದ ಬ್ರಿಟಿಷ್ ಕಾಲದ ಬಂಗಲೆಯಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ದಾಂಡೇಲಿಯ ದಟ್ಟ ಕಾಡುಗಳ ನಡುವೆ ನೂರಾರು ಜನರ ತಂಡ ಕಟ್ಟಿಕೊಂಡು ರಾತ್ರಿ ವೇಳೆಯಲ್ಲಿ ಚಿತ್ರೀಕರಣ ನಡೆಸುವ ಸವಾಲನ್ನೂ ಚಿತ್ರತಂಡ ಎದುರಿಸಿದೆ. ಈ ಸಂದರ್ಭದಲ್ಲಿ ಹಲವಾರು ಹಾರರ್ ಅನುಭವಗಳೂ ಕೂಡಾ ದಕ್ಕಿವೆಯಂತೆ. ಹೀಗೆ ಅಂದುಕೊಂಡಂತೆಯೇ ಚಿತ್ರೀಕರಣವನ್ನು ಮುಗಿಸಿಕೊಳ್ಳಲಾಗಿದೆ. ಇದೀಗ ಪೋಸ್ಟ್ ಪ್ರಡಕ್ಷನ್ ಕಾರ್ಯಗಳು ಚಾಲೂ ಆಗಿವೆ. ತಾಂತ್ರಿಕವಾಗಿಯೂ ಶ್ರೀಮಂತವಾಗಿರುವ ಸ್ಪೂಕಿ ಕಾಲೇಜ್ನ ಸಂಕಲನದ ಜವಾಬ್ದಾರಿಯನ್ನು ಉಗ್ರಂ ಮತ್ತು ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ವಹಿಸಿಕೊಂಡಿದ್ದಾರೆ. ರಂಗಸ್ಥಳಂ ಖ್ಯಾತಿಯ ರಾಧಾಕೃಷ್ಣನ್ ಸೌಂಡ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಈ ಚಿತ್ರಕ್ಕಿದೆ. ರಂಗಿತರಂಗ ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರಗಳನ್ನು ನಿರ್ಮಿಸಿದ್ದ ಹೆಚ್.ಕೆ ಪ್ರಕಾಶ್ ಸ್ಪೂಕಿ ಕಾಲೇಜ್ ಅನ್ನು ನಿರ್ಮಾಣ ಮಾಡಿದ್ದಾರೆ.