ಹರಿಕಥೆ ಅಲ್ಲ ಗಿರಿಕಥೆಯಲ್ಲಿನ ಖಾಕಿ ಖದರ್ ಮಾಮೂಲಿಯಲ್ಲ!
ಈಗಾಗಲೇ ನಾನಾ ಸಿನಿಮಾಗಳಲ್ಲಿ ಥರ ಥರದ ಪಾತ್ರಗಳಲ್ಲಿ ಕಾಣಿಸಿಕೊಂಡು ಮನೆಮಾತಾಗಿರುವವರು ಪ್ರಮೋದ್ ಶೆಟ್ಟಿ. ಯಾವ ಪಾತ್ರಕ್ಕಾದರೂ ಸೈ ಎಂಬಂಥಾ ಪ್ರಮೋದ್ ಈ ವಾರ ತೆರೆಗಾಣಲಿರುವ ಬಹುನಿರೀಕ್ಷಿತ ಚಿತ್ರ ಹರಿಕಥೆ ಅಲ್ಲ ಗಿರಿಕಥೆಯಲ್ಲಿಯೂ ಮಹತ್ವದ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಈ ಮೂಲಕ ರಿಶಭ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಕಾಂಬಿನೇಷನ್ನಿನ ಯಾನ ಅನೂಚಾನವಾಗಿ ಮುಂದುವರೆದಿದೆ. ಈ ಇಬ್ಬರ ಸಮಾಗಮ ಸಂಭವಿಸಿತೆಂದರೆ ಅಲ್ಲೇನೋ ಹೊಸತನ, ಹೊಸಾ ಪ್ರಯೋಗಗಳು ಇದ್ದೇ ಇರುತ್ತವೆಂಬ ನಂಬಿಕೆ ಪ್ರೇಕ್ಷಕರ ವಲಯದಲ್ಲಿದೆ. ಅದನ್ನು ಸುಳ್ಳು ಮಾಡದ ರೀತಿಯಲ್ಲಿ ನಿರ್ದೇಶಕರಾದ ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ಈ ಚಿತ್ರವನ್ನು ರೂಪಿಸಿದ್ದಾರಂತೆ. ಆ ಕುರುಹುಗಳು ಈಗಾಲೇ ಬಿಡುಗಡೆಗೊಂಡಿರೋ ಟ್ರೈಲರ್ನಲ್ಲಿ ದಟ್ಟವಾಗಿಯೇ ಗೋಚರಿಸಿದೆ.
ಹರಿಕಥೆ ಅಲ್ಲ ಗಿರಿಕಥೆ ಎಂಬ ಟೈಟಲ್ ಅನೌನ್ಸ್ ಆದ ಘಳಿಗೆಯಿಂದಲೇ ಆ ಬಗ್ಗೆ ಅಗಾಧ ಪ್ರಮಾಣದಲ್ಲಿ ಕುತೂಹಲ ಹೊಮ್ಮಿಕೊಂಡಿತ್ತು. ಅದರಲ್ಲಿಯೂ ರಿಶಭ್ ಈ ಚಿತ್ರದ ನಾಯಕ ಎಂಬುದು ತಿಳಿಯುತ್ತಲೇ ನಿರೀಕ್ಷೆ ನೂರ್ಮಡಿಸಿತ್ತು. ಆ ನಂತರ ಪ್ರಮೋದ್ ಕೂಡಾ ಇದರ ಭಾಗವಾಗಿದ್ದಾರೆಂಬ ಸುದ್ದಿ ಹೊರ ಬಿದ್ದಾಕ್ಷಣವೇ ಅವರ ಪಾತ್ರ ಎಂಥಾದ್ದೆಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಕಡೆಗೂ ಟ್ರೈಲರ್ನಲ್ಲಿ ಅದಕ್ಕುತ್ತರ ಸಿಕ್ಕಿದೆ. ಪ್ರಮೋದ್ ಇಲ್ಲಿ ಮತ್ತೆ ಪೊಲೀಸ್ಗಿರಿ ಆರಂಭಿಸಿದ್ದಾರೆಂಬುದು ಪಕ್ಕಾ ಆಗಿದೆ. ಈ ಪಾತ್ರ ತಮಗೆ ಸಿಕ್ಕಿದ ಬಗ್ಗೆ, ಅದರ ಆಸುಪಾಸಿನಲ್ಲಿ ನಡೆದ ಘಟನಾವಳಿಗಳ ಬಗ್ಗೆ ಮತ್ತು ಆ ಕ್ಷಣದಲ್ಲಿ ಮನದಲ್ಲಿದ್ದ ತೊಳಲಾಟಗಳ ಬಗ್ಗೆ ಖುದ್ದು ಪ್ರಮೋದ್ ಶೆಟ್ಟಿಯೇ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಅದರನ್ವಯ ಹೇಳೋದಾದರೆ, ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿ ತಮಗಾಗಿ ಪೊಲೀಸ್ ಪಾತ್ರವೊಂದು ಕಾದಿದೆ ಎಂಬ ವಿಚಾರ ಗೊತ್ತಾಗುತ್ತಲೇ ಪ್ರಮೋದ್ ಹಿಂದೇಟು ಹಾಕಿದ್ದರಂತೆ. ಯಾಕೆಂದರೆ ಈಗಾಗಲೇ ಅವರು ಸಾಕಷ್ಟು ಸಲ ಪೊಲೀಸ್ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದರು. ಒಂದೇ ಥರದ ಪಾತ್ರಗಳನ್ನು ಮಾಡಿದರೆ ಪ್ರೇಕ್ಷಕರಿಗೆ ಬೋರು ಹೊಡೆಸುತ್ತದೇನೋ ಎಂಬ ಆತಂಕ ಅವರನ್ನು ಆರಂಭಿಕವಾಗಿಯೇ ಕಾಡಿತ್ತಂತೆ. ಹಾಗೆ ಪ್ರಮೋದ್ ಹಿಂದೇಟು ಹಾಕುತ್ತಲೇ ಅವರು ಈ ಚಿತ್ರದ ವಿಲನ್ಗಿರಿ ಪಾತ್ರ ಮಾಡಬಹುದಾ ಎಂಬಂಥಾ ಚರ್ಚೆಗಳು ಸಿನಿಮಾ ಟೀಮಿನಲ್ಲಿ ನಡೆದಿತ್ತು. ಆದರೆ, ಅವರು ಈ ಪೊಲೀಸ್ ಪಾತ್ರವನ್ನೇ ಮಾಡಬೇಕೆಂಬುದು ನಿರ್ದೇಶಕದ್ವಯರ ಅಚಲ ತೀರ್ಮಾನವಾಗಿತ್ತು.
ಹೇಗೋ ರಮಿಸಿ ಪ್ರಮೋದ್ರನ್ನು ಒಪ್ಪಿಸಿದ್ದ ನಿರ್ದೇಶಕರು ಈ ಪಾತ್ರ ನಿಮಗೇ ಇಷ್ಟವಾಗುವಂತೆ ಚೆನ್ನಾಗಿದೆ ಎಂಬ ಭರವಸೆ ಕೊಟ್ಟಿದ್ದರಂತೆ. ಹಾಗೆ ನಟನೆ ಶುರುಮಾಡಿದ ನಂತರ ಆ ಪಾತ್ರವನ್ನು ಪ್ರಮೋದ್ ಶೆಟ್ಟಿ ಈ ಹಿಂದೆಂದಿಗಿಂತಲೂ ಹೆಚ್ಚಾಗಿ ಎಂಜಾಯ್ ಮಾಡಿದ್ದರಂತೆ. ಆ ಪೊಲೀಸ್ಗಿರಿಯ ಪಾತ್ರ ಅದೆಷ್ಟು ಮಜವಾಗಿದೆಯೆಂದರೆ, ಪ್ರತೀ ಸೀನುಗಳಲ್ಲಿಯೂ ಪ್ರಮೋದ್ ಅದನ್ನು ಒಳಗಿಳಿಸಿಕೊಂಡು ನಟಿಸಿದ್ದಾರೆ. ಈಗಂತೂ ಆ ಪಾತ್ರ ತನ್ನ ವೃತ್ತಿ ಬದುಕಿನಲ್ಲಿಯೇ ಭಿನ್ನವಾಗಿ ದಾಖಲಾಗುತ್ತದೆಂಬ ಆಳವಾದ ನಂಬಿಕೆ ಪ್ರಮೋದ್ರೊಳಗೆ ಬೇರೂರಿಕೊಂಡಿದೆ. ಟ್ರೈಲರ್ನಲ್ಲಿ ಕಾಣಿಸಿರೋದು ಆ ಪಾತ್ರದ ಝಲಕ್ಕುಗಳು ಮಾತ್ರ. ಅದರ ಅಸಲೀ ಸ್ವಾದ ದಿನದೊಪ್ಪತ್ತಿನಲ್ಲಿಯೇ ನಿಮ್ಮೆದುರು ಅವತರಿಸಲಿದೆ!