ಎಲ್ಲರ ಬದುಕಿಗೂ ಅನ್ವಯವಾಗುವಂಥಾ ಕಥೆಗಳು ದೃಷ್ಯರೂಪಕ್ಕಿಳಿದಾಗ ಅದರತ್ತ ಪ್ರೇಕ್ಷಕರ ದೃಷ್ಟಿ ಬಹು ಬೇಗನೆ ನೆಟ್ಟುಕೊಳ್ಳುತ್ತೆ. ಅಷ್ಟಕ್ಕೂ ಅಂಥಾ ಅಪರೂಪದ ನೈಜ ಕಥಾನಕಗಳನ್ನು ದೃಷ್ಯದ ಚೌಕಟ್ಟಿಗೆ ಒಗ್ಗಿಸಿಕೊಳ್ಳೋದು ಕಷ್ಟದ ಕೆಲಸ. ಅಂಥಾದ್ದೊಂದು ಸವಾಲನ್ನು ನವ ನಿರ್ದೇಶಕ ವಿಕ್ರಂ ಪ್ರಭು ಸಮರ್ಥವಾಗಿಯೇ ಗೆದ್ದುಕೊಂಡಿದ್ದಾರೆ. ಆ ಗೆಲುವಿನ ಚಹರೆ ಇದೀಗ ಬಿಡುಗಡೆಗೊಂಡಿರೋ ವೆಡ್ಡಿಂಗ್ ಗಿಫ್ಟ್ ಚಿತ್ರದ ಟ್ರೈಲರ್ನಲ್ಲಿ ಸ್ಪಷ್ಟವಾಗಿಯೇ ಗೋಚರಿಸುತ್ತಿದೆ. ಇದೀಗ ಸಮಾಜದ ಒಂದಷ್ಟು ಕುಟುಂಬಗಳ ನೆಮ್ಮದಿಗೆ ಎರವಾಗಿರುವ, ಅಮಾಯಕ ಗಂಡಸರ ಬದುಕನ್ನೇ ಕಿತ್ತುಕೊಳ್ಳುತ್ತಿರುವ ಸಮಸ್ಯೆಯೊಂದಕ್ಕೆ ಇಲ್ಲಿ ಪರಿಣಾಮಕಾರಿಯಾಗಿ ದೃಷ್ಯ ರೂಪ ಕೊಡಲಾಗಿದೆ. ಅದರ ಪ್ರಭಾವ ಎಂಥಾದ್ದಿದೆ ಎಂಬುದಕ್ಕೆ ಟ್ರೈಲರ್ಗೆ ಸಿಗುತ್ತಿರುವ ಭರಪೂರ ಮೆಚ್ಚುಗೆಗಳಿಗಿಂತಲೂ ಬೇರೆ ಸಾಕ್ಷಿ ಬೇಕಿಲ್ಲ!
ಇತ್ತೀಚೆಗಷ್ಟೇ ಚೆಂದದ್ದೊಂದು ಟೀಸರ್ ಮೂಲಕ ವೆಡ್ಡಿಂಗ್ ಗಿಫ್ಟ್ ಚರ್ಚೆಯ ಕೇಂದ್ರಕ್ಕೆ ಬಂದು ನಿಂತಿತ್ತು. ಅದನ್ನು ನೋಡಿದವರಿಗೆಲ್ಲ ಈ ಚಿತ್ರದಲ್ಲಿ ಗಹನವಾದುದೇನೋ ಇದೆಯೆಂಬ ವಿಚಾರ ಮನವರಿಕೆಯಾಗಿತ್ತು. ಇದೀಗ ಬಿಡುಗಡೆಗೊಂಡಿರುವ ಟ್ರೈಲರ್ ಆ ಭಾವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಅದುವೇ ಜುಲೈ ೮ರಂದು ಬಿಡುಗಡೆಯಾಗಲಿರುವ ವೆಡ್ಡಿಂಗ್ ಗಿಫ್ಟ್ ಅನ್ನು ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ನಿಲ್ಲಿಸಿದೆ. ಈ ಮೂಲಕ ನಿರ್ದೇಶಕ ವಿಕ್ರಂ ಪ್ರಭು ಒಂದು ಹಂತದ ಗೆಲುವು ದಾಖಲಿಸಿದ್ದಾರೆ. ಈ ವಿದ್ಯಮಾನವೇ ಒಂದಿಡೀ ಚಿತ್ರತಂಡದ ವರ್ಷಾಂತರಗಳ ಶ್ರಮವನ್ನು ಸಾರ್ಥಕಗೊಳಿಸಿದೆ.
ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಪುರುಷಾಧಿಪತ್ಯದ ದೌರ್ಜನ್ಯ ಕಾಲಾನುಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಈ ಹೊತ್ತಿಗೂ ಅದೆಷ್ಟೋ ಹೆಣ್ಣು ಮಕ್ಕಳು ಅನುಕ್ಷಣವೂ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಇಂಥಾ ಪಿಡುಗನ್ನು ಹೋಗಲಾಡಿಸುವ ಉದ್ದೇಶದಿಂದಲೇ ಹೆಣ್ಣು ಮಕ್ಕಳ ಪರವಾಗಿರುವ ಕಠಿಣ ಕಾನೂನುಗಳು ಚಾಲ್ತಿಯಲ್ಲಿವೆ. ಆದರೆ ಒಂದಷ್ಟು ಹೆಣ್ಣು ಮಕ್ಕಳು ಅದ್ಯಾವುದೋ ಜಿದ್ದಿಗೆ ಬಿದ್ದಂತೆ, ಸ್ವಾರ್ಥದಿಂದ ಅದನ್ನು ಅಮಾಯಕ ಗಂಡಂದಿರ ಮೇಲೆ ಪ್ರಯೋಗಿಸುತ್ತಿದ್ದಾರೆ. ಇದರಿಂದಾಗಿ ಅದೆಷ್ಟೋ ಪುರುಷರು ಮಾಡದ ತಪ್ಪಿಗೆ ರೌರವ ನರಕ ಅನುಭವಿಸುತ್ತಿದ್ದಾರೆ. ಇಂಥಾ ಸೂಕ್ಷ್ಮ ಕಥೆಯನ್ನು ವಿಕ್ರಂ ಪ್ರಭು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಕುರುಹುಗಳು ಟ್ರೈಲರ್ ತುಂಬಾ ಢಾಳಾಗಿ ಕಾಣಿಸುತ್ತಿವೆ.
ಈ ಚಿತ್ರದಲ್ಲಿ ನಟಿ ಪ್ರೇಮಾ ಲಾಯರ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಈ ಮೂಲಕ ಬಹು ವರ್ಷಗಳ ಗ್ಯಾಪಿನ ನಂತರ ಮತ್ತೆ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ಪ್ರತಿಭಾವಂತ ನಟ ಅಚ್ಯುತ್ ಕುಮಾರ್ ಕೂಡಾ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ನಿಶಾನ್ ನಾಣಯ್ಯ ಮತ್ತು ಸೋನು ಗೌಡ ನಾಯಕ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ವಿಕ್ರಂ ಪ್ರಭು ಫಿಲಂಸ್ ಲಾಂಚ್ನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಉದಯ್ ಲೀಲಾ ಛಾಯಾಗ್ರಹಣ, ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನವಿದೆ. ಪ್ರೇಮಾ, ನಿಶಾನ್, ಸೋನು ಗೌಡ, ಪವಿತ್ರ ಲೋಕೇಶ್, ಅಚ್ಯುತ್ ಕುಮಾರ್ ಮುಂತಾದವರ ತಾರಾಗಣವಿದೆ.