ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶನದ ಹರಿಕಥೆ ಅಲ್ಲಿ ಗಿರಿಕಥೆ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಅದು ಬಿಡುಗಡೆಯಾಗಿ ದಿನ ಕಳೆಯೋದರೊಳಗೇ ಹಬ್ಬಿಕೊಂಡಿರುವ ಕ್ರೇಜ್, ಹರಿದು ಬರುತ್ತಿರುವ ಸದಭಿಪ್ರಾಯಗಳನ್ನು ಕಂಡು ಒಂದಿಡೀ ಚಿತ್ರತಂಡ ಖುಷಿಗೊಂಡಿದೆ. ಈ ಟೈಟಲ್ ಅನೌನ್ಸ್ ಆದಂದಿನಿಂದ ಈವರೆಗೂ ಸಾಕಷ್ಟು ಪಲ್ಲಟಗಳು ಸಂಭವಿಸಿವೆ. ಯಾರೂ ನಿರೀಕ್ಷಿಸದಂತೆ ಕೊರೋನಾ ಬಂದು ಹೋಗಿದೆ. ಆ ಕಾಲಘಟ್ಟದಲ್ಲಿ ಭಾರೀ ಸಂಕಷ್ಟಕ್ಕೀಡಾಗಿದ್ದ ಸಿನಿಮಾಗಳಲ್ಲಿ ಹರಿಕಥೆ ಅಲ್ಲ ಗಿರಿಕಥೆಯೂ ಸೇರಿಕೊಂಡಿದೆ. ಅದೆಲ್ಲವನ್ನೂ ಸಮರ್ಥವಾಗಿ ದಾಟಿಕೊಂಡು ಅಂದುಕೊಂಡದ್ದಕ್ಕಿಂತಲೂ ಚೆಂದಗೆ ಸಿನಿಮಾ ಮಾಡಿ ಮುಗಿಸಿರುವ ತೃಪ್ತ ಭಾವ ಚಿತ್ರತಂಡದಲ್ಲಿದೆ.
ಇತ್ತೀಚೆಗಷ್ಟೇ ಹರಿಕಥೆ ಅಲ್ಲ ಗಿರಿಕಥೆಯ ಟೀಸರ್ ಬಿಡುಗಡೆಗೊಂಡಿತ್ತು. ಅದರಲ್ಲಿ ಮಿಂಚಿದ್ದ ಒಂದಷ್ಟು ವಿಚಾರಗಳೇ ನಾನಾ ದಿಕ್ಕುಗಳಲ್ಲಿ ಕುತೂಹಲ ಹುಟ್ಟು ಹಾಕಿತ್ತು. ಇದೀಗ ಈ ಟ್ರೈಲರ್ನಲ್ಲಿ ಕಥೆಯ ಸುಳಿವು ಬಿಟ್ಟುಕೊಡದಂತೆಯೇ ಪಾತ್ರ ಪರಿಚಯ ಮಾಡಿಸುವಲ್ಲಿ ನಿರ್ದೇಶಕರು ಯಶ ಕಂಡಿದ್ದಾರೆ. ಈ ಹಿಂದೆ ಗಿರಿಕಥೆ ಎಂದರೇನು? ಇದರಲ್ಲಿ ರಿಶಭ್ ಶೆಟ್ಟಿ ಮುಂತಾದವರ ಪಾತ್ರಗಳು ಹೇಗಿವೆ ಅಂತೆಲ್ಲ ಜನ ತಲೆ ಕೆಡಿಸಿಕೊಂಡಿದ್ದರು. ಇದೀಗ ಪ್ರತೀ ಮನಸುಗಳನ್ನೂ ಆವರಿಸುವಂತೆ ಗಿರಕಿ ಹೊಡೆಯುತ್ತಾ ಗಿರಿಕಥೆಯ ಪದರುಗಳು ತೆರೆದುಕೊಂಡಿವೆ. ಇಲ್ಲಿರುವ ಅಸಲೀ ಗಿರಿಗಳನ್ನು ಕಂಡು ಪ್ರೇಕ್ಷಕರೆಲ್ಲ ಸಂತಸಗೊಂಡಿದ್ದಾರೆ.
ಇದು ಗಾಂಧಿನಗರದ ಗಲ್ಲಿಗಳಲ್ಲಿ ನಿರ್ದೇಶಕನಾಗೋ ಕನಸು ಹೊತ್ತು ತಿರುಗಾಡುವ ಯುವಕನೋರ್ವನ ಕಥೆ. ಹಾಗಂತ ಅಲ್ಲಿರೋದು ಬರೀ ಆ ಕಥೆ ಮಾತ್ರವಲ್ಲ; ಅದಕ್ಕೆ ಇನ್ನೊಂದಷ್ಟು ಅನ್ವೇಷಣೆಯ ಪಾತ್ರಗಳು ಸೇರಿಕೊಳ್ಳುತ್ತವೆ. ಆ ಬಿಂದುವಿನಿಂದಲೇ ಮತ್ತೊಂದಷ್ಟು ರೋಚಕ ಕಥೆಗಳು ಗರಿಬಿಚ್ಚಿಕೊಳ್ಳುತ್ತವೆ. ಆ ಕಥಾನಕಗಳ ಸೊಗಸು ಎಂಥಾದ್ದಿರಬಹುದೆಂಬುದರ ಸುಳಿವು ತೀರಾ ಸಮ್ಮೋಹಕವಾಗಿ ಈ ಟ್ರೈಲರ್ ಮೂಲಕ ತೆರೆದುಕೊಂಡಿದೆ. ಎಶಭ್ ಶೆಟ್ಟಿ ಮಾತ್ರವಲ್ಲದೇ ಪ್ರಮೋದ್ ಶೆಟ್ಟಿ, ರಚನಾ ಇಂದರ್, ತಪಸ್ವಿನಿ ಮುಂತಾದವರ ವಿಭಿನ್ನ ಪಾತ್ರಗಳ ಜಾಡೂ ಕೂಡಾ ಪ್ರೇಕ್ಷಕರಿಗೆ ಸಿಕ್ಕಿದೆ.
ನಿಖರವಾಗಿ ಹೇಳಬೇಕೆಂದರೆ, ಈ ಟ್ರೈಲರ್ ನಿರೀಕ್ಷೆಯನ್ನೆಲ್ಲ ನೂರ್ಮಡಿಸುವಷ್ಟು ಶಕ್ತವಾಗಿದೆ. ಅಂದಹಾಗೆ, ಇದು ಹೊಸತನ, ಹೊಸಾ ಪ್ರಯೋಗಗಳು ಮತ್ತು ವಿಶಿಷ್ಟವಾದ ಪಾತ್ರಗಳನ್ನು ಒಳಗೊಂಡಿರುವ ಚಿತ್ರ. ಅದರ ಪ್ರತೀ ದೃಷ್ಯಗಳಲ್ಲಿಯೂ ಚಿತ್ರತಂಡ ನಾನಾ ಬೆರಗುಗಳನ್ನು ಅಡಕವಾಗಿಸಿದೆ. ಜನ ತಮ್ಮ ಜಂಜಾಟಗಳನ್ನೆಲ್ಲ ಮರೆತು ಯಾವುದೋ ಜಗತ್ತಿನಲ್ಲಿ ಕಳೆದು ಹೋಗಲೆಂದೇ ಸಿನಿಮಾ ನೋಡುತ್ತಾರೆ. ಹಾಗೆ ಬಂದ ಪ್ರೇಕ್ಷಕರಿಗೆಲ್ಲ ಎರಡು ಗಂಟೆಗಳ ಕಾಲ ಭರ್ಜರಿ ಮನರಂಜನೆ ನೀಡುವ ಉದ್ದೇಶದೊಂದಿಗೇ ಈ ಚಿತ್ರ ರೂಪುಗೊಂಡಿದೆ. ಅದರ ಅಸಲೀ ಸ್ವರೂಪವೇನೆಂಬುದು ವಾರದೊಪ್ಪತ್ತಿನಲ್ಲಿಯೇ ಜಾಹೀರಾಗಲಿದೆ.