ಈ ಖ್ಯಾತನಾಮರು ಯಾವುದಾದರೊಂದು ಕೇಸಿನಲ್ಲಿ ತಗುಲಿಕೊಂಡಾಗ ಬಚಾವಾಗಲು ನಾನಾ ಪಟ್ಟುಗಳನ್ನು ಹಾಕೋದು ಮಾಮೂಲು. ಕಡೇ ಕ್ಷಣದವರೆಗೂ ಪವರನ್ನೆಲ್ಲ ಒಗ್ಗೂಡಿಸಿಕೊಂಡು ಆ ಪ್ರಕರಣದಿಂದ ಗಾಯಬ್ ಆಗಲು ಹರಸಾಹಸ ಪಡುತ್ತಾರೆ. ಇಂಥಾದ್ದರಾಚೆಗೂ ಪಂಜಾಬಿನಲ್ಲಿ ಕಾಂಗ್ರೆಸ್ಸಿನ ಮುಂಚೂಣಿ ನಾಯಕರಾಗಿದ್ದ ಮಾಜೀ ಕ್ರಿಕೆಟಿಗನೂ ಆಗಿದ್ದ ಪ್ರಭಾವಿ ಆಸಾಮಿ ನವಜೋತ್ ಸಿಂಗ್ ಸಿಧು ಬೇರೇನೂ ಮಾಡಲಾಗದೆ ಜೈಲು ಪಾಲಾಗಿದ್ದಾರೆ. ತನ್ನೆಲ್ಲ ಪ್ರಭಾವವನ್ನು ಧಾರೆ ಎರೆದರೂ ಬಚಾವಾಗಲಾಗದ ಸಂಕಟ ಹೊತ್ತು ಜೈಲಿನಲ್ಲಿರುವ ಸಿಧುಗೀಗ ಆರೋಗ್ಯ ಸಮಸ್ಯೆ ಉಲ್ಬಣಿಸಿದೆ. ಅವರಿಗೆ ಯಕೃತ್ತಿನ ಸಮಸ್ಯೆ ತೀವ್ರವಾಗಿ ಕಾಡುತ್ತಿರೋದರಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊಂಚ ತಡವಾದರೂ ಕೂಡಾ ಮಾಡಿದ ಅಪರಾಧ ಪ್ರಕರಣದಿಂದ ಆರೋಪಿಗಳು ಪಾರಾಗಲು ಸಾಧ್ಯವೇ ಇಲ್ಲ ಎಂಬಂಥಾ ವ್ಯವಸ್ಥೆ ನಮ್ಮ ನ್ಯಾಯಾಂಗದಲ್ಲಿದೆ. ಈ ನಿಧಾನಗತಿಯ ಚಲನೆ ಅನೇಕಾರು ಸಂದರ್ಭಗಳಲ್ಲಿ ತೀವ್ರವಾದ ಟೀಕೆಗೂ ಕಾರಣವಾಗೋದಿದೆ. ಅದರ ಭಾಗವಾಗಿಯೇ ೧೯೮೮ರಲ್ಲಿ ನಡೆದಿದ್ದ ಆಕ್ಸಿಡೆಂಟ್ ಒಂದರ ಪ್ರಕರಣದಲ್ಲಿ ನವಜೋತ್ ಸಿಂಗ್ ಸಿಧುಗೆ ಇದೀಗ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. ಒಂದು ಕಡೆಯಲ್ಲಿ ಸಿಧು ರಾಜಕೀಯ ಬದುಕೇ ಡೋಲಾಯಮಾನವಾಗಿತ್ತು. ಪಂಜಾಬ್ ಕಾಂಗ್ರೆಸ್ಸಿನ ಕೈ ತಪ್ಪಿ ಹೋದ ದುಃಖದಲ್ಲಿದ್ದ ಸಿಧು ಪಾಲಿಗೆ ಇದೀಗ ಎಲ್ಲ ಒತ್ತಡಗಳೂ ಸೇರಿಕೊಂಡು ಅನಾರೋಗ್ಯ ಉಲ್ಬಣವಾದಂತಿದೆ.
ಜೈಲು ಪಾಲಾದ ಕ್ಷಣದಿಂದಲೂ ಮಂಕಾಗಿದ್ದ ಸಿಧು ಇತ್ತೀಚೆಗೆ ಅನಾರೋಗ್ಯದಿಂದ ಕಂಗಾಲಾಗಿದ್ದರು. ಇದನ್ನು ಕಂಡ ಜೈಲಾಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದಾಗ ಅವರಿಗೆ ಲಿವರ್ನಲ್ಲಿ ಸಮಸ್ಯೆ ಇರೋದು ಪತ್ತೆಯಾಗಿದೆ. ಈ ಕಾರಣದಿಂದ ಸಿಧು ಈಗ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪಂಜಾಬಿನಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಾಗಿನಿಂದಲೂ ಸಿಧು ಶೈನಪ್ ಆಗಿದ್ದರು. ಅತ್ತ ಅಮರೀಂದರ್ ಸಿಂಗ್ ಮುಖ್ಯಮಂತ್ರಿಯಾಗುತ್ತಲೇ ಸಿಧುವಿಗೂ ಮುಖ್ಯಮಂತ್ರಿಯಾಗೋ ಆಸೆ ಹಬೆಯಾಡಿತ್ತು. ಈ ಸಂಬಂಧವಾಗಿ ಕಚ್ಚಾಡುತ್ತಾ ಬಂದಿದ್ದ ಸಿಧುವಿನ ಕಾರಣದಿಂದಲೇ ಪಂಜಾಬದಲ್ಲಿ ಕಾಂಗ್ರೆಸ್ ನಾಮಾವಶೇಷವಾಗುವಂತಾಗಿತ್ತು. ಇಂಥಾದ್ದೊಂದು ನೇರ ಆರೋಪದಿಂದ ಕಂಗಾಲಾಗಿದ್ದ ಸಿಧುಗೆ ಇದೀಗ ಒಂದು ವರ್ಷ ಜೈಲು ವಾಸ ಖಾಯಂ ಆಗಿದೆ.