ಬಿಗ್ ಬಾಸ್ ಶೋಗಳು ಈ ದೇಶದ ನಾನಾ ಭಾಷೆಗಳಲ್ಲಿ ಪ್ರಸಾರವಾಗುತ್ತಿವೆ. ಇದರಲ್ಲಿ ಒಮ್ಮೆ ಮುಸುಡಿ ತೋರಿಸಿದರೆ ಲಕ್ಕೆಂಬುದು ಬದಲಾಗಿ. ದಂಡಿ ದಂಡಿ ಅವಕಾಶಗಳು ಮನೆ ಮುಂದೆ ಬಂದು ಬಿದ್ದಿರುತ್ತವೆಂಬಂಥ ಭ್ರಮೆ ಅನೇಕರಲ್ಲಿದೆ. ಆದರೆ ಕನ್ನಡವೂ ಸೇರಿದಂತೆ ನಾನಾ ಬಾಷೆಗಳಲ್ಲಿ ಅದು ಕೇವಲ ಭ್ರಮೆ ಎಂಬುದು ಈಗಾಗಲೇ ಸಾಬೀತಾಗಿದೆ. ಯಾಕೆಂದರೆ ಬಿಗ್ಬಾಸ್ ಸ್ಪರ್ಧಿಗಳಲ್ಲಿ ಬಹುತೇಕರ ಬದುಕು ಆರಕ್ಕೇರದೆ ಮೂರಕ್ಕಿಳಿಯದೆ ಹೊಯ್ದಾಡುತ್ತಿದೆ. ಆದರೆ ಕೆಲವರ ವಿಚಾರದಲ್ಲಿ ಮಾತ್ರ ಅದು ಸುಳ್ಳಾಗಿ ನಿಜಕ್ಕೂ ಲಕ್ಕು ಕುದುರಿಕೊಳ್ಳುತ್ತೆ. ಬಿಗ್ ಬಾಸ್ ಸ್ಪರ್ಧಿಗಳಾಗಿ ಹಾಗೆ ಅದೃಷ್ಟ ಕುಲಾಯಿಸಿಕೊಂಡವರಲ್ಲಿ ನಟಿ, ರೂಪದರ್ಸಿ ಮತ್ತು ಕಿರುತೆರೆ ನಟಿಯಾಗಿ ಮಿಂಚಿದ್ದ ಜಾಸ್ಮಿನ್ ಭಾಸಿನ್ ಕೂಡಾ ಸೇರಿಕೊಳ್ಳುತ್ತಾಳೆ!
ರಾಜಸ್ತಾನ್ ಮೂಲದ ಜಾಸ್ಮಿನ್ ಭಾಸಿನ್ ತುಂಬಾ ಚಿಕ್ಕ ವಯಸ್ಸಿಗೆಲ್ಲ ಮಾಡೆಲ್ ಆಗಿ ಮಿಂಚಿದಾಕೆ. ಪ್ರಸಿದ್ಧ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡು ತನ್ನತನದಿಂದಲೇ ಎಲ್ಲರ ಗಮನ ಸೆಳೆದಿದ್ದವಳು ಜಾಸ್ಮಿನ್ ಭಾಸಿನ್. ಇಂಥಾ ಜಾಸ್ಮಿನ್ ಬಿಗ್ ಬಾಸ್ ಶೋ ಸ್ಪರ್ಧಿಯಾಗಿಯೂ ಒಂದಷ್ಟು ಹೆಸರು ಮಾಡಿಕೊಂಡಿದ್ದಳು. ಇಂಥಾ ನಾನಾ ಸರ್ಕಸ್ಸುಗಳನ್ನು ನಡೆಸುತ್ತಿದ್ದ ಜಾಸ್ಮಿನ್ಳ ಪ್ರಧಾನ ಕನಸಾಗಿದ್ದದ್ದು ಬಾಲಿವುಡ್ ಪ್ರವೇಶ. ಇದೀಗ ತಾನೇ ತಾನಾಗಿ ಆ ಅವಕಾಶ ಆಕೆಯನ್ನು ಅರಸಿ ಬಂದಿದೆ. ಖ್ಯಾತ ನಿರ್ದೇಶಕ ಮಹೇಶ್ ಭಟ್ ನಿರ್ದೇಶನದ ಚಿತ್ರದ ಮೂಲಕ ಈಕೆ ಶೀಘ್ರದಲ್ಲಿಯೇ ಬಾಲಿವುಡ್ಗೆ ಪ್ರವೇಶ ಮಾಡಲಿದ್ದಾಳೆಂಬಂಥಶಾ ಸುದ್ದಿಗಳೀಗ ಹರಿದಾಡಲಾರಂಭಿಸಿವೆ.
ಈ ಚಿತ್ರಕ್ಕೆ ಮಹೇಶ್ ಭಟ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಮನೀಶ್ ಚೌವ್ಹಾಣ್ ಚೊಚ್ಚಲ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದೆ. ಈ ಚಿತ್ರಕ್ಕೆ ಜಾಸ್ಮಿನ್ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಎಲ್ಲ ಮಾತುಕಥೆಗಳೂ ಮುಕ್ತಾಯವಾಗಿವೆ. ಇದೇ ಜುಲೈ ತಿಂಗಳ ಆರಂಭದಲ್ಲಿ ಆಕೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಿರುತೆರೆಯಲ್ಲಿಯೇ ತನ್ನ ನಟನಾ ಚಾತುರ್ಯವನ್ನು ಪ್ರದರ್ಶಿಸಿ ಸೈ ಅನ್ನಿಸಿಕೊಂಡಿದ್ದ ಈಕೆ ಈಗಾಗಲೇ ಒಂದಷ್ಟು ಪ್ರಾದೇಶಿಕ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾಳೆ. ತಾನು ಬಾಲಿವುಡ್ ನಟಿಯಾಗಬೇಕೆಂದು ಲಾಗಾಯ್ತಿನಿಂದಲು ಪ್ರಯತ್ನ ಪಡುತ್ತಾ ಬಂದಿದ್ದ ಜಾಸ್ಮಿನ್ ಇದೀಗ ಅದರಲ್ಲಿ ಯಶ ಕಂಡಿದ್ದಾಳೆ.