ಒಂದು ಕಡೆಯಿಂದ ಪ್ರಕೃತಿಯ ಮೇಲೆ ಒಂದು ಕಡೆಯಿಂದ ದೌರ್ಜನ್ಯ ನಡೆಯುತ್ತಿದೆ. ಇನ್ನೊಂದು ಕಡೆಯಿಂದ ಸಮಾನ ಮನಸ್ಕ ಪ್ರಕೃತಿ ಪ್ರಿಯರು ಪರಿಸರದ ಉಳಿವಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ನಟಿಯಾಗಿ ಬ್ಯುಸಿಯಾಗಿದ್ದರೂ ಕೂಡಾ ಅದರ ನಡುವಲ್ಲಿಯೇ ಸಂಯುಕ್ತಾ ಹೊರನಾಡು ಪರಿಸರ ಕಾಳಜಿಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು ಕಾರ್ಯ ನಿರ್ವಹಿಸುತ್ತಿರೋದು ‘ಕೇರ್ ಮೋರ್’ ಫೌಂಡೇಶನ್ ಮೂಲಕ. ಇದೀಗ ಈ ಸಂಸ್ಥೆ ಸೌಲಭ್ಯ ವಂಚಿತ ಮಕ್ಕಳಿಗಾಗಿ ವಿನೂತನವಾದ, ಸಾರ್ಥಕವಾದ ಅಭಿಯಾನವೊಂದಕ್ಕೆ ಚಾಲನೆ ನೀಡಿದೆ. ಇದರಲ್ಲಿ ಪ್ರತಿಯೊಬ್ಬರೂ ಭಾಗಿಯಾಗಿ ಸದರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡುವಂತೆ ಕರೆನೀಡಿದೆ.
ದೀಗ ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿವೆ. ಅದು ಪ್ರತೀ ಮಕ್ಕಳ ಪಾಲಿಗೂ ಖುಷಿಯ ಸಂಗತಿ. ಆದರೆ ಅದೆಷ್ಟೋ ಬಡ ಮಕ್ಕಳಿಗೆ ಶಾಲೆಗೆ ಬೇಕಾದ ಅಗತ್ಯ ಸಾಮಾಗ್ರಿಗಳಿಗೂ ದಿಕ್ಕಿರೋದಿಲ್ಲ. ಇಂಥಾ ಮಕ್ಕಳನ್ನು ಗಮನದಲ್ಲಿಟ್ಟುಕೊಂಡೇ ‘ಕೇರ್ ಮೋರ್’ ಫೌಂಡೇಶನ್ ಬಳಸದೇ ಉಳಿದ ಬ್ಯಾಗುಗಳನ್ನು ದಾನವಾಗಿ ನೀಡಲು ಉತ್ತೇಜನ ಕೊಡುವಂಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಮೂಲಕ ನೀವು ನಿಮ್ಮ ಮನೆಯಲ್ಲಿ ಬಳಸದೇ ಉಳಿದ ಶಾಲಾ ಬ್ಯಾಗುಗಳನ್ನು ಈ ಸಂಸ್ಥೆಗೆ ಕೊಟ್ಟರೆ ಅದರ ಮೂಲಕ ಅಗತ್ಯವಿರೋ ಮಕ್ಕಳಿಗೆ ತಲುಪಿಸೋ ಕೆಲಸ ಮಾಡುತ್ತೆ. ನಿಮಗೆ ಮನಸಿದ್ದರೆ ಹೊಸಾ ಬ್ಯಾಗುಗಳನಗನು ಖರೀದಿಸಿ ಕೊಟ್ಟರೆ ಅದಕ್ಕಿಂತಲೂ ಸಾರ್ಥಕ ಕೆಲಸ ಬೇರೊಂದಿಲ್ಲ.
ಕೇರ್ ಮೋರ್ ಎಂಬುದು ಎಲ್ಲಾ ವಲಯಗಳಲ್ಲಿರುವಂಥಾ ಯುವ ಪರಿಸರಪ್ರೇಮಿ ಮನಸುಗಳನ್ನು ಒಂದೆಡೆ ಕಲೆ ಹಾಕಿರುವ ಸಂಸ್ಥೆ. ಇದರಲ್ಲಿ ಬೆಂಗಳೂರಿನ ಸಿನಿಮಾ ಕಲಾವಿದರು, ಉದ್ಯಮಿಗಳು ಮತ್ತು ಪೂರ್ಣ ಪ್ರಮಾಣದ ಸಾಮಾಜಿಕ ಕಾರ್ಯಕರ್ತರು ಭಾಗಿಯಾಗಿದ್ದಾರೆ. ನಟಿ ಸಂಯುಕ್ತಾ ಹೊರನಾಡು ಅವರಂತೂ ಎಲ್ಲರೂ ಮೆಚ್ಚಿಕೊಳ್ಳುವಂಥಾ ಕೆಲಸ ಕಾರ್ಯಗಳನ್ನು ಈ ಸಂಸ್ಥೆಯಡಿಯಲ್ಲಿ ಮಾಡುತ್ತಾ ಬರುತ್ತಿದ್ದಾರೆ. ಅಂಥಾ ಸಂಸ್ಥೆ ಇದೀಗ ಮರುಬಳಕೆ ಮತ್ತು ಮರು ಉಪಯೋಗದ ಕಾನ್ಸೆಪ್ಟಿನಲ್ಲಿ ಮಕ್ಕಳಿಗೊಂದು ಬ್ಯಾಗ್ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರಲ್ಲಿ ನೀವುಗಳು ಭಾಗಿಯಾಗೋದರ ಜೊತೆಗೆ ನಿಮ್ಮ ಪರಿಚಿತರು, ಸಹೋದ್ಯೋಗಿಗಳು ಮತ್ತು ಕುಟುಂಬಸ್ಥರನ್ನೂ ಭಾಗಿಯಾಗುವಂತೆ ಉತ್ತೇಜಿಸುವಂತೆ ಈ ಸಂಸ್ಥೆ ಕರೆ ಕೊಟ್ಟಿದೆ.
ರಾಜ್ಯಾದ್ಯಂತ ಪರಿಸರ ಮತ್ತು ಸುಸ್ಥಿರತೆಗೆ ಸಂಬಂಧಿಸಿದಂಥಾ ಕೆಲಸ ಕಾರ್ಯಗಳನ್ನು ‘ಕೇರ್ ಮೋರ್’ ಫೌಂಡೇಶನ್ ಆಯೋಜಿಸಿಕೊಂಡು ಬರುತ್ತಿದೆ. ನಟಿ ಸಂಯುಕ್ತಾ ಹೊರನಾಡು ಈ ಎಲ್ಲಾ ಪರಿಸರ ಸಂಬಂಧಿತ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಪ್ರತೀ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಸೀಡ್ಸ್ ಬಾಲ್ಗಳನ್ನು ತಯಾರಿಸುವ ಮೂಲಕ ಅರಣ್ಯ ಸಂವರ್ಧನೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಇದೀಗ ಮಕ್ಕಳಿಗೊಂದು ಬ್ಯಾಗ್ ಎಂಬ ವಿನೂತನ ಕಾರ್ಯಕ್ರಮದಲ್ಲಿಯೂ ಅವರು ಭಾಗಿಯಾಗಿದ್ದಾರೆ.