ಮುಂಗಾರಿನ ಹೊಸ್ತಿಲಲ್ಲಿ ಕನ್ನಡ ಚಿತ್ರರಂಗದ ಪಾಲಿಗೆ ನವ ಮನ್ವಂತರವಾಗುವಂಥಾ ಪಲ್ಲಟಗಳು ಸ್ಪಷ್ಟವಾಗಿಯೇ ಜರುಗುತ್ತಿವೆ. ಬಹುಶಃ ಇದು ಕೊರೋನಾ ಕಂಟಕದ ತರುವಾಯ ನಡೆಯುತ್ತಿರುವ ಮೊದಲ ಸಮ್ಮೋಹಕ ವಿದ್ಯಮಾನ. ಸಕಾರಾತ್ಮಕ ವಾತಾವರಣ ಹರಳುಗಟ್ಟುತ್ತಿರುವ ಈ ಸಂದರ್ಭದಲ್ಲಿ ಒಂದಷ್ಟು ಭರವಸೆಯ ಚಿತ್ರಗಳು ಬಿಡುಗಡೆಗಾಗಿ ಸಾಲುಗಟ್ಟಿ ನಿಂತಿವೆ. ವಿಕ್ರಂ ಪ್ರಭು ನಿರ್ದೇಶನದ ಚೊಚ್ಚಲ ಚಿತ್ರವಾದ ವೆಡ್ಡಿಂಗ್ ಗಿಫ್ಟ್ ಕೂಡಾ ನಿಸ್ಸಂದೇಹವಾಗಿ ಆ ಸಾಲಿನಲ್ಲಿ ನಿಲ್ಲುತ್ತದೆ. ಈಗಗಲೇ ನಾನಾ ದಿಕ್ಕಿನಿಂದ ಸುದ್ದಿಯಾಗುತ್ತಿರುವ ಈ ಚಿತ್ರ ಟೀಸರ್ ಇದೀಗ ಬಿಡುಗಡೆಗೊಂಡಿದೆ.
ಟೀಸರ್ ಮೂಲಕವೇ ಕಥೆಯ ಸುಳಿವು ನೀಡಿ, ಚಿತ್ರದ ಬಗ್ಗೆ ಅಗಾಧ ಪ್ರಮಾಣದಲ್ಲಿ ನಿರೀಕ್ಷೆ ಮೂಡಿಕೊಳ್ಳುವಂತೆ ಮಾಡೋದೊಂದು ಸಾಹಸ. ಈ ಚಿತ್ರದ ನಿರ್ದೇಶಕ ಕಂ ನಿರ್ಮಾಪಕ ವಿಕ್ರಂ ಪ್ರಭು ಅದನ್ನು ಲೀಲಾಜಾಲವಾಗಿಯೇ ಜೈಸಿಕೊಂಡಿದ್ದಾರೆ. ಈ ಸಮಾಜವನ್ನು ಕಾಡುತ್ತಿರುವ, ತಣ್ಣಗೆ ಕೊರೆಯುತ್ತಿರುವಂಥಾ ಘನಗಂಭೀರ ವಿಚಾರವೊಂದನ್ನು ವಿಕ್ರಂ ಇಲ್ಲಿ ಕಥೆಯಾಗಿಸಿದಂತಿದೆ. ಆದರೆ ಅದೆಲ್ಲವನ್ನೂ ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ಕೊಂಡೊಯ್ದಿರುವ ಅವರು ಪಕ್ಕಾ ಮನೋರಂಜನಾತ್ಮಕ ಚಿತ್ರವಾಗಿ ವೆಡ್ಡಿಂಗ್ ಗಿಫ್ಟನ್ನು ಅಣಿಗೊಳಿಸಿದ್ದಾರಂತೆ.
ನಮ್ಮದು ಪುರುಷ ಪ್ರಧಾನವಾದ ವ್ಯವಸ್ಥೆ. ಈ ದಿಸೆಯಲ್ಲಿ ಲಾಗಾಯ್ತಿನಿಂದಲೂ ಹೆಣ್ಣು ಮಕ್ಕಳ ಮೇಲೆ ಮನೆಯೊಳಗೂ ದೌರ್ಜನ್ಯಗಳು ನಡೆಯುತ್ತಾ ಬಂದಿವೆ. ಅದೀಗ ಮನೆಯ ಹೊರಗೂ ಹಬ್ಬಿಕೊಂಡಿದೆ. ಇಂಥಾ ಹೊತ್ತಿನಲ್ಲಿ ಕಾನೂನು ಕಾಯಬೇಕಾಗಿರೋದರಿಂದ ಒಂದಷ್ಟು ಬದಲಾವಣೆಗಳಾಗಿವೆ. ಹೆಣ್ಣುಮಕ್ಕಳ ಪರವಾಗಿ ಕಠಿಣ ಕಾನೂನುಗಳು ಬಂದಿವೆ. ಇದನ್ನು ಮುಂದಿಟ್ಟುಕೊಂಡೇ ಇದೀಗ ಗಂಡು ಸಂತಾನದ ನೆಮ್ಮದಿ ಕೆಡಿಸುವ ಕೆಲಸಗಳಾಗುತ್ತಿವೆ. ಕೆಲ ಹೆಣ್ಣು ಮಕ್ಕಳು ಈ ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡು ಅದೆಷ್ಟೋ ಕುಟುಂಬಗಳ ನೆಮ್ಮದಿಯನ್ನೇ ಕೆಡಿಸಿದ್ದಾರೆ. ಈ ವಿಚಾರಗಳ ಸುತ್ತಾ ಕಮರ್ಶಿಯಲ್ ಹಾದಿಯಲ್ಲಿ ವೆಡ್ಡಿಂಗ್ ಗಿಫ್ಟ್ ಕಥೆ ಚಲಿಸುತ್ತದೆಯಂತೆ.
ಈ ಚಿತ್ರದಲ್ಲಿ ನಂದೀಶ್ ನಾಣಯ್ಯ ನಾಯಕನಾಗಿ ನಟಿಸಿದ್ದರೆ, ಸೋನು ಗೌಡ ನಾಯಕಿಯಾಗಿದ್ದಾರೆ. ಸೋನು ಗೌಡ ಇತ್ತೀಚಿನ ದಿನಗಳಲ್ಲಿ ಭಿನ್ನ ಪಾತ್ರಗಳನ್ನು ಅರಸುತ್ತಿದ್ದಾರೆ. ಅದಕ್ಕೆ ತಕ್ಕುದಾದಂಥ ಪಾತ್ರವೇ ವೆಡ್ಡಿಂಗ್ ಗಿಫ್ಟ್ನಲ್ಲಿ ಸಿಕ್ಕಿದೆಯಂತೆ. ವಿಶೇಷವೆಂದರೆ ನಟಿ ಪ್ರೇಮ ಬಹುಕಾಲದ ನಂತರ ಈ ಸಿನಿಮಾ ಮೂಲಕ ಬಣ್ಣ ಹಚ್ಚಿದ್ದಾರೆ. ಡಾ ವಿಷ್ಣುವರ್ಧನ್ ಅವರಂಥಾ ಅದೆಷ್ಟೋ ನಟರ ಜೊತೆ ನಾಯಕಿಯಾಗಿ ನಟಿಸಿದ್ದವರು ಪ್ರೇಮ. ಆದರೆ ಹಲವಾರು ಕಾರಣಗಳಿಂದ ಒಂದಷಟು ಕಾಲ ಅವರು ಚಿತ್ರರಂಗದಿಂದ ದೂರ ಉಳಿದಿದ್ದರು. ಅವರನ್ನು ಮತ್ತೆ ತೆರೆ ಮೇಲೆ ಕಾಣಲು ಅಭಿಮಾನಿಗಳೆಲ್ಲ ಕಾಯುತ್ತಿದ್ದರು. ಅದು ವೆಡ್ಡಿಂಗ್ ಗಿಫ್ಟ್ ಮೂಲಕ ಸಾಕಾರಗೊಂಡಿದೆ. ಇಲ್ಲಿ ಅವರು ವಕೀಲೆಯಾಗಿ ಮತತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ.