ನಮ್ಮದು ಕೆಲವಾರು ಚಿತ್ರವಿಚಿತ್ರ ನಂಬಿಕೆಗಳು, ಆಚರಣೆಗಳು ಉಸಿರಾಗಿರೋ ದೇಶ. ಹುಡುಕುತ್ತಾ ಹೋದ್ರೆ ಅಂಥಾ ಸಾವಿರ ಆಚರಣೆಗಳು, ಬದುಕಿನೊಂದಿಗೆ ಹೊಸೆದುಕೊಂಡಿರೋ ಆಚರಣೆಗಳು ಸಿಕ್ಕಾವು. ಆದ್ರೆ ಆಧುನಿಕತೆಯ ಭರಾಟೆಯಲ್ಲಿರೋ ನಾವೆಲ್ಲ ಎಲ್ಲವನ್ನೂ ಮೂಢನಂಬಿಕೆಯ ಮೂಟೆಯೊಳಗೆ ತುರುಕಿ ಮತ್ಯಾವುದರತ್ತಲೋ ಕೈಚಾಚಿ ಹೊರಟು ಬಿಡ್ತೇವೆ. ನಾವು ನಮ್ಮಲ್ಲಿನ ಕೆಲ ನಂಬಿಕೆಗಳನ್ನ ಮೂಢ ನಂಬಿಕೆ ಅಂತೇವೆ. ನಮ್ಮಲ್ಲಿ ಮಾತ್ರವೇ ಇಂಥಾದ್ದೆಲ್ಲ ಇರೋದೇನೋ ಎಂಬಂತೆ ತಕಾರು ತೆಗೀತೇವೆ. ಆದ್ರೆ ಅದೆಲ್ಲವನ್ನೂ ಮೀರಿಸುವಂಥಾ ಚಿತ್ರವಿಚಿತ್ರವಾದ ನಂಬಿಕೆ, ಆಚರಣೆಗಳು ಆಧುನಿಕತೆಗೆ ಒಗ್ಗಿಕೊಂಡ ಮುಂದುವರೆದ ದೇಶಗಳಲ್ಲಿಯೂ ಇದೆ.
ಬೇರೆಲ್ಲ ಹಾಗಿರಲಿ, ಮದುವೆ ವಿಚಾರದಲ್ಲಿ ಕೆಲ ದೇಶಗಳಲ್ಲಿರೋ ರೀತಿ ರಿವಾಜುಗಳನ್ನ ನೋಡಿದ್ರೆ ಯಾರೇ ಆದ್ರೂ ಕಂಗಾಲಾಗ್ಬೇಕಾಗುತ್ತೆ. ನಮ್ಮಲ್ಲಿ ಮದುವೆ ಅನ್ನೋದೊಂದು ಮಹತ್ವದ ಘಟ್ಟ ಅಂತಲೇ ಬಿಂಬಿಸಲ್ಪಟ್ಟಿದೆ. ಏನಾಗದೇ ಹೋದ್ರೂ ಮದ್ವೆ ಮಾತ್ರ ಅಚ್ಚುಕಟ್ಟಾಗಿ, ಸರಿಯಾದ ವಯಸ್ಸಿಗೆ ಆಗಲೇ ಬೇಕನ್ನೋ ಮನಃಸ್ಥಿತಿಯೂ ಇದೆ. ಒಂದು ಪ್ರಾಯ ಕ್ರಾಸ್ ಆಗುತ್ತಲೇ ಹುಡುಗ, ಹುಡುಗಿಗೆ ಹಿರೀಕರಿಂದ ಪ್ರಶ್ನೆಗಳು ಶುರುವಾಗುತ್ವೆ. ಕೆಲವರಿಗೆ ಧಾರಾಳವಾಗಿ ಮನೆಮಂದಿಯಿಂದ ಉಗಿತದ ಅಭ್ಯಂಜನವೂ ಆಗಬಹುದು. ಅದಕ್ಕೂ ಕ್ಯಾರೇ ಅನ್ನದೆ ಮುಂದುವರೆದ್ರೆ ಈ ಸಮಾಜದ ದಿಕ್ಕಿನಿಂದ ಒಂದಷ್ಟು ರೂಮರ್ಸ್ ಹಬ್ಬಿಕ್ಕೊಳ್ಳಬಹುದು. ಅದಕ್ಕೂ ಮಂಡೆಬಿಸಿ ಮಾಡಿಕೊಳ್ಳದಿದ್ರೆ ಹಾಳುಬಿದ್ದೋಗ್ಲಿ ಅಂತ ಸುಮ್ಮನಾಗಲೂ ಬಹುದು. ಪುಣ್ಯಕ್ಕೆ ನಮ್ಮಲ್ಲಿ ಅದಕ್ಕಾಗಿ ಶಿಕ್ಷೆಯೇನೂ ಇಲ್ಲ.
ಆದ್ರೆ ಈ ಜಗತ್ತಿನ ಒಂದಷ್ಟು ದೇಶಗಳಲ್ಲಿ ಆಯಾ ವಯಸ್ಸಿಗೆ ಮದುವೆಯಾಗದಿರೋದೇ ಮಹಾ ಅಪರಾಧ. ಅದಕ್ಕಾಗಿ ಅಲ್ಲಿ ಭಯಾನಕವಾದ ಶಿಕ್ಷೆಗಳಿದ್ದಾವೆ. ಜರ್ಮನಿಯ ಬಗ್ಗೆ ಹೇಳೋದಾದ್ರೆ, ಆ ದೇಶದಲ್ಲಿ ಹುಡುಗನೊಬ್ಬ ಇಪ್ಪತೈದನೇ ವಯಸ್ಸಿನೊಳಗೆ ಮದುವೆಯಾಗಲೇ ಬೇಕು. ಒಂದು ವೇಳೆ ಆಗಲಿಲ್ಲ ಅಂತಿಟ್ಕೊಳ್ಳಿ ಆತನ ಪಾಲಿಗೆ ಜೀವದ ಸ್ನೇಹಿತರೇ ವಿಲನ್ನುಗಳಾಗಿ ಬಿಡ್ತಾರೆ. ಹೆಜ್ಜೆ ಹೆಜ್ಜೆಗೂ ಕಾಡಿಸುತ್ತಾ ಮದುವೆಯಾಗದ ಯುವಕನನ್ನು ಒಂದು ಕೋಣೆಯಲ್ಲಿ ಕೆಡವಿ ದಿನವಿಡೀ ದಾಲ್ಚಿನ್ನಿ ಪುಡಿಯನ್ನು ಮೈಮೇಲೆ ಸುರುವಿ ಉಳ್ಳಾಡಿಸ್ತಾರೆ. ಆ ಪುಡಿ ಕಣ್ಣು ಮೂಗು ಮತ್ತು ಇತರೇ ಭಾಗಗಳಿಗೆ ಹೋಗಿ ಕಿರಿಕಿರಿಯಾಗುತ್ತದಲ್ಲಾ? ಆಗ ಮದುವೆಯಾಗೋದಾಗಿ ಒಪ್ಪಿಕೊಂಡ್ರೇನೇ ಬ್ರಹ್ಮಚಾರಿ ಬಚಾವಾಗಲು ಸಾಧ್ಯ.
ಮೇಲೆ ಹೇಳಿದ್ದು ಮೊದಲ ಡೋಸೇಜಿನ ಬಗ್ಗೆ. ಹಾಗೂ ಬ್ರಹ್ಮಚಾರಿ ಯುವಕ ದಾಲ್ಚಿನ್ನು ಪೌಡರ್ಗೆ ಬಗ್ಗಲಿಲ್ಲ ಎಂದಾದರೆ ಮತ್ಚತೊಂದು ಘನಘೋರ ಕ್ರೂರ ಅಸ್ತ್ರ ಪ್ರಯೋಗವಾಗುತ್ತೆ. ಅದಕ್ಕೆ ಆ ಯುವಕ ಮೂವತ್ತನೇ ವರ್ಷ ದಾಟುವವರೆಗಿನ ಗಡಿಯೂ ಇರುತ್ತೆ. ಒಂದುವೇಳೆ ಮೂವತ್ತು ದಾಟಿದರೂ ಯಾವನಾದ್ರೂ ಮದುವೆಯಾಗದೆ ಉಳಿದ್ರೆ ಅವನನ್ನು ಮತ್ತೆ ರೂಮೊಂದರಲ್ಲಿ ಬೋರಲು ಮಲಗಿಸಿ ಮೈತುಂಬಾ ಕರಿಮೆಣಸಿನ ಪುಡಿ ಉದುರಿಸಿ ಕಾಟ ಕೊಡಲಾಗುತ್ತೆ. ಹೆಚ್ಚಿನ ಮಂದಿ ಈ ಉರಿಯಿಂದ ತಪ್ಪಿಸಿಕೊಳ್ಳಲು ಬೇರೆ ದಾರಿ ಕಾಣದೆ ಮದುವೆಯೆಂಬ ಬಾಣಲೆಗೆ ಜಿಗೀತಾರಂತೆ. ಏನೇ ಆದ್ರೂ ನಮ್ಮ ದೇಶವೇ ನೆಮ್ಮದಿ!